ಗದ್ದೆಗಳಿಗೆ ಕಾಲಿಟ್ಟವು ಯಂತ್ರಗಳು

ಮಲೆನಾಡಿನ ಎಲ್ಲೆಡೆ ಜೋಳ, ಭತ್ತ ಕಟಾವು ಕಾರ್ಯ ಭರದಿಂದ ಸಾಗಿದೆ. ಆದರೆ ಈ ಹಿಂದೆ ಭತ್ತ ಕೊಯ್ಲು ಬಂತೆಂದರೆ ರೈತರ ಮುಖದಲ್ಲಿ ಇರುತ್ತಿದ್ದ ಹರ್ಷ ಮಾಯವಾಗುತ್ತಿದೆ. ಭತ್ತ ಕಟಾವಿಗೆ ಬಂತೆಂದರೆ ಕೃಷಿ ಕಾರ್ಮಿಕರು ಸಾಲು ಸಾಲಾಗಿ ಬರುತ್ತಿದ್ದರು. ಇಲ್ಲವೆ ವಾಹನದಲ್ಲಿ ಬರುತ್ತಿದ್ದರು. ಆದರೀಗ ಅದು ಮರೆಯಾಗುತ್ತಿದೆ. ಕೃಷಿ ಕಾರ್ಮಿಕರ ಕೊರತೆಯಿಂದ ಯಂತ್ರಗಳಿಗೆ ರೈತರು ಲಗ್ಗೆ ಇಡುತ್ತಿರುದೇ ಇದಕ್ಕೆ ಕಾರಣವಾಗಿದೆ.
ಹಿಂದೆ ಒಂದು ದಿನಕ್ಕೆ 100 ರೂ.ಗೆ ಕೂಲಿ ಕಾರ್ಮಿಕು ಸಿಗುತ್ತಿದ್ದರು. ಆದರೆ ಈಗ 300-400 ರೂ. ನೀಡಿದರೂ ಕಾರ್ಮಿಕರು ಸಿಗುತ್ತಿಲ್ಲ. ಹಾಗಾಗಿ, ಭತ್ತ ಕಟಾವಿಗೆ ಇದೀಗ ಬಹುತೇಕ ರೈತರು ಯಂತ್ರದ ಮೊರೆ ಹೋಗಿದ್ದಾರೆ.
ಕಾರ್ಮಿಕರ ಮೂಲಕ ಒಂದು ಎಕರೆ ಭತ್ತ ಕೊಯ್ಲಿಗೆ ಕನಿಷ್ಠ 3000 ರೂ. ಖರ್ಚಾಗುತ್ತದೆ. ಆದರೆ ಯಂತ್ರದಲ್ಲಿ 1400 ರೂ.ಗೆ ಒಂದು ಗಂಟೆಗೆ ಒಂದು ಎಕರೆ ಕೊಯ್ಲು ಪೂರ್ಣವಾಗುತ್ತದೆ. ಆದರೆ, ಯಂತ್ರದಿಂದ ಭತ್ತ ಕಟಾವು ಮಾಡಿದರೆ ಜಾನುವಾರು ಮೇವಿಗೆ ಕೊರತೆಯಾಗುತ್ತದೆ ಎಂಬುದು ರೈತರ ಅಳಲು.