ಅಡಿಕೆ ಕೃಷಿ ಮೇಲೆ ನಿಷೇಧದ ತೂಗುಕತ್ತಿ

ತಂಬಾಕು ಹಾಗೂ ರಾಸಾಯನಿಕ ವಸ್ತುಗಳ ಮಿಶ್ರಣವಾಗಿರುವ ಗುಟ್ಕಾ ನಿಷೇಧದ ವಿಚಾರ ಸುಪ್ರೀಂಕೋರ್ಟ್ನಲ್ಲಿ ಇನ್ನೂ ತೀರ್ಮಾನಗೊಂಡಿಲ್ಲ. ಅದಾಗಲೇ ಅಡಿಕೆ ಬೆಳೆಗಾರರು ಅರ್ಧ ಅಧೀರರಾಗಿದ್ದಾರೆ. ಈ ಮಧ್ಯೆ, ಅಡಿಕೆಯನ್ನೇ ನಿಷೇಧಿಸಬೇಕೆಂಬ ವರದಿಯನ್ನು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವುದು ಅಡಿಕೆ ನಂಬಿ ಬದುಕುತ್ತಿರುವ ಬೆಳೆಗಾರರ ಬದುಕಿಗೆ ಕೊಡಲಿ ಏಟು ನೀಡುವ ಆತಂಕ ಉಂಟು ಮಾಡಿದೆ. ೆ ಬೆಳೆ ನಿಷೇಧಿಸಿದರೆ ದೇಶದ 436 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ವ್ಯಾಪಿಸಿರುವ ಅಡಿಕೆ ತೋಟ ನಾಶವಾಗುತ್ತದೆ. 5.5 ಲಕ್ಷ ಮೆಟ್ರಿಕ್ ಟನ್ ಅಡಿಕೆ ಉತ್ಪಾದಿಸುವ ಬೆಳೆಗಾರರು ಪರ್ಯಾಯ ವ್ಯವಸ್ಥೆ ಇಲ್ಲದೆ ಬೀದಿ ಪಾಲಾಗುತ್ತಾರೆ. 20 ಲಕ್ಷಕ್ಕೂ ಮೀರಿದ ಪಾನ್ವಾಲಾಗಳು ನಿರ್ಗತಿಕರಾಗುತ್ತಾರೆ. ಅಡಿಕೆ ವ್ಯಾಪಾರ ನಂಬಿಕೊಂಡಿರುವ ವರ್ತಕ ವಲಯ, ಅಡಿಕೆ ಕೆಲಸ ಮಾಡುತ್ತಿರುವ ಕಾರ್ಮಿಕರು, ಅದಕ್ಕಿಂತಲೂ ಮಿಗಿಲಾಗಿ ದೇಶದ 5 ಲಕ್ಷ ಕುಟುಂಬಗಳ ಅನ್ನದ ಬಟ್ಟಲಿಗೆ ನಿಷೇಧದ ಕತ್ತರಿ ಹೊಡೆತ ನೀಡುತ್ತದೆ.
ಪಾರಂಪಾರಿಕ ಕೃಷಿ ನಾಶ:
ತಲೆಮಾರುಗಳಿಂದ ನಂಬಿಕೊಂಡು ಬಂದಿದ್ದ ಪಾರಂಪರಿಕ ಕೃಷಿಯೊಂದು ನಾಶವಾಗುತ್ತದೆ. ಅಡಿಕೆ ವ್ಯವಹಾರ ಮತ್ತು ಅದರ ಮೌಲ್ಯವರ್ಧನೆಯ ಮೊತ್ತ ಸೇರಿಸಿದಾಗ ವಾರ್ಷಿಕ 50 ಸಾವಿರ ಕೋ.ರೂ.ಗಳ ವ್ಯವಹಾರವನ್ನು ಅಡಿಕೆ ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಈ ವ್ಯವಹಾರದ ಪಾಲು ತೆರಿಗೆಯ ರೂಪದಲ್ಲಿ ತಪ್ಪುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಮ್ಮಿಂದೊಮ್ಮೆಗೆ ಅಡಿಕೆ ನಿಷೇಧಕ್ಕೆ ಹೊರಟಲ್ಲಿ ಬದಲಿ ಬೆಳೆಯಿಂದ ಜೀವನ ಸಾಗಿಸಲಾರದೆ ಅಡಿಕೆ ಬೆಳೆಗಾರ ಕುಟುಂಬಗಳು ಸಾಮೂಹಿಕ ಆತ್ಮಹತ್ಯೆಗೆ ತಮ್ಮನ್ನು ಒಡ್ಡಿಕೊಳ್ಳುವ ಅಪಾಯ ಎದುರಾಗಲಿದೆ. ಅಡಿಕೆ ಮಾರಾಟ ವ್ಯವಸ್ಥೆಯಲ್ಲಿ ಲಕ್ಷಗಟ್ಟಲೆ ಚಿಲ್ಲರೆ ವ್ಯಾಪಾರಸ್ಥರು ನಿರುದ್ಯೋಗಿಗಳಾಗಲಿದ್ದಾರೆ.ೆಯಲ್ಲಿ ಔಷಧಿಯ ಗುಣವಿದೆ:ೆುಡಿಸಿನಲ್ ಸೀಕ್ರೆಟ್ಸ್ ಆ್ ಯುವರ್ ಪುಡ್' ಎಂಬ ಪುಸ್ತಕದಲ್ಲಿ ಪ್ರಖ್ಯಾತ ಆಂಗ್ಲ ವೈದ್ಯರು ಉಲ್ಲೇಖಿಸಿದಂತೆ ಅಡಿಕೆ ಮಲಬದ್ದತೆ, ಹೃದಯ ಸಂಬಂಧಿ ಖಾಯಿಲೆ, ಮೂತ್ರಪಿಂಡದಲ್ಲಿನ ಕಲ್ಲು, ಜಾಂಡೀಸ್ ಮೊದಲಾದ ಖಾಯಿಲೆಗಳ ತಡೆಗೆ ಉಪಯುಕ್ತ. ಹೊಟ್ಟೆಯಲ್ಲಿನ ಹುಳದ ಭಾದೆ ನಿವಾರಣೆ, ಚರ್ಮರೋಗಕ್ಕೆ ಪರಿಹಾರ, ರಕ್ತದ ಒತ್ತಡದ ಹತೋಟಿಗೆ ಸಹಕಾರಿ. ಭಾರತೀಯ ವಿದ್ವಾಂಸ ವಾಗ್ಬಟನ ಪ್ರಕಾರ ಅಡಿಕೆಯಲ್ಲಿ ನಾನಾ ಔಷಧೀಯ ಗುಣಗಳಿವೆ. ಅಡಿಕೆಯ ಮಹತ್ವದ ಕುರಿತು ಪ್ರಾಚೀನ ಗ್ರಂಥಗಳಲ್ಲೂ ಸಾಕಷ್ಟು ಉಲ್ಲೇಖವಿದೆ. ಅಡಿಕೆಯಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್, ಕೊಬ್ಬು, ಕ್ಯಾಲ್ಸಿಯಂ, ಪಾಸ್ಫರಸ್, ಕಬ್ಬಿಣಾಂಶ, ಕ್ಯಾಲೊರಿ ಇದೆ.
ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅಡಿಕೆ ಹೊಂದಿದೆ. ಋಗ್ವೇದದಲ್ಲಿ, 9ನೇ ಶತಮಾನದ ಅಜಂತಾ ವರ್ಣಚಿತ್ರಗಳಲ್ಲಿ ಅಡಿಕೆಯ ಕುರಿತು ಉಲ್ಲೇಖವಿದೆ. 12ನೇ ಶತಮಾನದ ಹೊಯ್ಸಳರ ಕಾಲದಲ್ಲಿ ಅಡಿಕೆ ಬೆಳೆ ಉತ್ತೇಜನಕ್ಕೆ ಅವಕಾಶ ನೀಡಲಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಅಡಿಕೆ ಬೆಳೆಯ ಕುರಿತು ಅಧ್ಯಯನ ನಡೆಸಲು 1928ರಲ್ಲೇ ಶಿವಮೊಗ್ಗ ಜಿಲ್ಲೆಯ ಮಾರ್ತರೂರಿನಲ್ಲಿ ಅಡಿಕೆ ಸಂಶೋಧನಾ ಕೇಂದ್ರ ತೆರೆದಿದ್ದರು. ಈಗ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಡಿಕೆ ಸಂಶೋಧನಾ ಕೇಂದ್ರಗಳಿವೆ.
ಕರ್ನಾಟಕಕ್ಕೆ ಪ್ರಬಲ ಹೊಡೆತ:
ವಿಶ್ವದಲ್ಲಿ 7.3 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ವಾರ್ಷಿಕ 8.7ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತದೆ. ಭಾರತದಲ್ಲಿ 4.4 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ 6.3 ಲಕ್ಷ ಟನ್ ಅಡಿಕೆ ಬೆಳೆಯುತ್ತದೆ. ಕರ್ನಾಟಕದಲ್ಲಿ 2.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2.79 ಲಕ್ಷ ಟನ್ ಅಡಿಕೆ ಬೆಳೆಯುತ್ತದೆ. ಅಡಿಕೆ ಬೆಳೆ ವಿಸ್ತೀರ್ಣದ ಕುರಿತು ರಾಷ್ಟ್ರದಲ್ಲಿ ಕರ್ನಾಟಕದ ಪಾಲು ಶೇ. 47, ಕೇರಳದ ಪಾಲು ಶೇ. 24. ಕರ್ನಾಟಕದ ದ.ಕ., ಉಡುಪಿ, ಉ.ಕ., ಚಿತ್ರದುರ್ಗ, ತುಮಕೂರು, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಡಿಕೆ ಬೆಳೆಸಲಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಅಂಡಮಾನ್, ಆಂಧ್ರ, ಅಸ್ಸಾಂ, ಗೋವಾ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತಮಿಳುನಾಡು, ತ್ರಿಪುರಾ ಮತ್ತು ಪಶ್ಚಿಮ ಬಂಗಾಲಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ.
ಅಡಿಕೆ ಬೆಳೆಯಲ್ಲಿ 211 ಸಾವಿರ ಹೆಕ್ಟೇರ್ ಅಡಿಕೆ ತೋಟವಿರುವ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. 2.79 ಲಕ್ಷ ಟನ್ ಅಡಿಕೆ ಉತ್ಪಾದನೆ ಮಾಡುವ ಮೂಲಕ ಅಗ್ರಸ್ಥಾನದಲ್ಲಿದೆ. ರಾಜ್ಯದ ಆದಾಯಕ್ಕೆ ಅತಿ ಹೆಚ್ಚಿನ ಕೊಡುಗೆ ಅಡಿಕೆಯಿಂದ ಸಿಗುತ್ತದೆ. ಇದರೊಂದಿಗೆ ಕರ್ನಾಟಕದ ದ.ಕ., ಮತ್ತು ಉ.ಕ. ಹಾಗೂ ಶಿವಮೊಗ್ಗ ಜಿಲ್ಲೆಗಳ ಸಂಪೂರ್ಣ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಗಿರಿಶೃಂಗಗಳು ಮತ್ತು ತಪ್ಪಲು ಪ್ರದೇಶದ ಒಂದು ಭಾಗವೇ ಅಡಿಕೆ ಬೆಳೆ ನಿಷೇಧದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ದುರ್ಬಲಗೊಳ್ಳಲಿದೆ. ಇದರ ಪರಿಣಾಮ ರಾಜ್ಯದ ಒಟ್ಟು ಆರ್ಥಿಕತೆಯ ಮೇಲೆ ಬೀಳಲಿ. ಕೇರಳ ರಾಜ್ಯ ಅಡಿಕೆ ಕೃಷಿಯಲ್ಲಿ 96.30 ಟನ್ ಉತ್ಪಾದಿಸುವ ಮೂಲಕ 2ನೇ ಸ್ಥಾನದಲ್ಲಿದೆ. ಅಸ್ಸಾಂನಲ್ಲಿ 75.06 ಸಾವಿರ ಹೆಕ್ಟೇರ್ ಅಡಿಕೆ ತೋಟವಿದ್ದು, 72.58 ಸಾವಿರ ಟನ್ ಅಡಿಕೆ ಉತ್ಪಾದಿಸಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.
ಅಡಿಕೆಯಿಂದ ಆದಾಯ:
ಸರಕಾರಕ್ಕೆ ಅಡಿಕೆಯಿಂದ ಸೆಸ್, ವ್ಯಾಟ್, ಕಮಿಷನ್, ಕೇಂದ್ರೀಯ ಸೀಮಾ ಸುಂಕ, ಆಮದಿನ ಮೇಲೆ ಕಸ್ಟಮ್ಸ್ ಸುಂಕ ದೊರೆತರೆ, ರಾಜ್ಯ ಸರಕಾರಕ್ಕೆ ಎಪಿಎಂಸಿಯಿಂದ 5ಶೇ. ತೆರಿಗೆ ಮತ್ತು ಕಮಿಷನ್ ಮತ್ತು ಸೆಸ್ ಹಾಗೂ ವ್ಯಾಟ್ನಲ್ಲಿ ಪಾಲು ದೊರೆಯುತ್ತದೆ. ಕರ್ನಾಟಕದ ಶಿವಮೊಗ್ಗ, ಶಿರಸಿ ಮತ್ತು ಕ್ಯಾಂಪ್ಕೋ ಸಂಸ್ಥೆಯ ಮಾರುಕಟ್ಟೆಯಿಂದ ಒಟ್ಟಾರೆ 56 ಕೋ.ರೂ.ಗಳಿಗಿಂತಲೂ ಹೆಚ್ಚು ತೆರಿಗೆ ರಾಜ್ಯ ಸರಕಾರಕ್ಕೆ ಸಿಗುತ್ತದೆ. ಕೇಂದ್ರ ಸರಕಾರಕ್ಕೆ 1,700ರಿಂದ 2,000 ಕೋ.ರೂ.ಗಳಷ್ಟು ತೆರಿಗೆ ಸಿಗುತ್ತದೆ. ಇದರಲ್ಲಿ ಕರ್ನಾಟಕ ರಾಜ್ಯದ ಪಾಲು 150ರಿಂದ 200 ಕೋ.ರೂ. ಅಡಿಕೆ ಬಳಸುವ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಬಿಹಾರ ಮೊದಲಾದ ಕಡೆಗಳಿಂದ ಅಧಿಕ ಪ್ರಮಾಣದ ಅಡಿಕೆ ವ್ಯವಹಾರದ ತೆರಿಗೆ ಸರಕಾರಗಳಿಗೆ ಬರುತ್ತಿದೆ.
ತುರ್ತಾಗಿ ಆಗಬೇಕಿದೆ:
ಅಡಿಕೆ ಬೆಳೆಗಾರರನ್ನು ನಿಷೇಧದ ದವಡೆಯಿಂದ ಪಾರು ಮಾಡಲು ಅಡಿಕೆಯ ಇತಿಹಾಸ, ಔಷಧೀಯ ಗುಣಗಳು, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಕುರಿತು ದಾಖಲೆಗಳನ್ನು ಸಂಗ್ರಹಿಸಿ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಬೇಕು. ಅಡಿಕೆ ಬೆಳೆ ಅವಲಂಬಿತರ ಕುರಿತು ಖಚಿತ ಮಾಹಿತಿ ಸಂಗ್ರಹಿಸುವುದು. ಅಡಿಕೆ ಬೆಳೆಯುವ ಪ್ರದೇಶದಲ್ಲಿ ಬೇರೆ ಬೆಳೆ ಬೆಳೆಸಲಾಗದ ಕುರಿತು ಮನವರಿಕೆ ಮಾಡಲು ಕೃಷಿ ಮತ್ತು ತೋಟಗಾರಿಕಾ ತಜ್ಞರ ವರದಿಯನ್ನು ನ್ಯಾಯಾಲಯಕ್ಕೆ ನೀಡುವುದು. ದೇಶದಲ್ಲಿ ಅಡಿಕೆ ಬೆಳೆಯಲ್ಲಿ ತೊಡಗಿಸಿಕೊಂಡಿರುವ ಶೇ.85ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರ ಭವಿಷ್ಯದ ಕುರಿತು ತಿಳಿಯ ಪಡಿಸುವುದು. ಅಡಿಕೆ ಅವಲಂಬಿಸಿರುವ ಬಡ ಕಾರ್ಮಿಕರ ಸ್ಥಿತಿಗತಿ, ಬ್ಯಾಂಕ್, ಶಿಕ್ಷಣ, ಆರೋಗ್ಯ, ಸಾರಿಗೆ ಮುಂತಾದ ವ್ಯವಸ್ಥೆಗಳ ಮೇಲಿನ ಹೊಡೆತಗಳ ಕುರಿತು ಮಾಹಿತಿ ನೀಡುವುದು. ಅಡಿಕೆ ಬೆಳೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಟ್ಟ ಉತ್ತೇಜನಗಳ ಕುರಿತು ಸವಿವರ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡುವುದು ಮೊದಲಾದ ಕೆಲಸಗಳನ್ನು ಅಡಿಕೆ ಬೆಳೆಗಾರರ ಪರ ಸಂಘಟನೆಗಳು ಮತ್ತು ಸಂಸ್ಥೆಗಳು ತುರ್ತಾಗಿ ಮಾಡಬೇಕಾಗಿದೆ.