ದೀಗೊಪ್ಪದಲ್ಲಿ ಜಾನುವಾರುಗಳಿಗೆ ಕಾಲು-ಬಾಯಿ ರೋಗ

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಯಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದೀಗೊಪ್ಪದಲ್ಲಿ ಜಾನುವಾರುಗಳಿಗೆ ಕಾಲು-ಬಾಯಿ ರೋಗ ಕಾಣಿಸಿಕೊಂಡಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ.ರಿನಲ್ಲಿ ಇರುವ ಸುಮಾರು 50ರಷ್ಟು ಜಾನುವಾರುಗಳ ಪೈಕಿ 15ರಷ್ಟು ದನಗಳು ರೋಗದಿಂದ ಬಳಲುತ್ತಿದ್ದು, ಪ್ರತಿನಿತ್ಯ ಪಶು ವೈದ್ಯರು ಬಂದು ಚಿಕಿತ್ಸೆ ನೀಡುತ್ತಿದ್ದಾರೆ. ಈಗ 10 ದಿನಗಳ ಹಿಂದೆ ಒಂದು ಆಕಳಿಗೆ ರೋಗ ಕಾಣಿಸಿಕೊಂಡಿತ್ತು. ಅಂದೇ ಪಶು ವೈದ್ಯರಿಗೆ ರೋಗ ಬಂದ ಬಗ್ಗೆ ಮಾಹಿತಿ ನೀಡಿದ್ದು, ತಕ್ಷಣ ಆಗಮಿಸಿದ ಪಶುವೈದ್ಯರು ಊರಿನ ಎಲ್ಲ ದನಗಳಿಗೆ ರೋಗ ನಿರೋಧಕ ಚುಚ್ಚುಮದ್ದನ್ನೂ ನೀಡಿದ್ದಾರೆ. ಆದರೆ ದಿನದಿಂದ ದಿನಕ್ಕೆ ರೋಗ ವ್ಯಾಪಿಸತೊಡಗಿದ್ದು, ಈಗ ರೋಗದಿಂದ ಬಳಲುತ್ತಿರುವ ಜಾನುವಾರುಗಳ ಸಂಖ್ಯೆ 15ಕ್ಕೇರಿದೆ. ಆರಂಭದಲ್ಲಿ ರೋಗ ಕಾಣಿಸಿಕೊಂಡ ಜಾನುವಾರುಗಳು ಚೇತರಿಸಿಕೊಂಡಿದ್ದು, ಬೇರೆ ದನಗಳಿಗೆ ರೋಗ ವ್ಯಾಪ್ತಿಸುತ್ತಿರುವುದು ಆತಂಕ ಹೆಚ್ಚಲು ಕಾರಣವಾಗಿದೆ.
ರೋಗಕ್ಕೆ ತುತ್ತಾದ ಜಾನುವಾರುಗಳ ಬಾಯಿಯಲ್ಲಿ ಹುಣ್ಣಾಗುವುದರಿಂದ ಆಹಾರ ಸೇವಿಸುವುದನ್ನು ನಿಲ್ಲಿಸಿ ಬಿಡುತ್ತವೆ. ಇದರಿಂದಾಗಿ ಅವು ನಿತ್ರಾಣವಾಗಿ ಮಲಗಿದರೆ ಏಳಲಾಗದೇ ತೊಂದರೆ ಪಡುತ್ತವೆ. ಕೆಲವು ಹಾಲು ಕರೆಯುವ ದನಗಳು ರೋಗಕ್ಕೆ ತುತ್ತಾಗಿದ್ದು, ಮನುಷ್ಯರಿಗೆ ಇರಲಿ ಕರುಗಳಿಗೂ ಹಾಲು ಇಲ್ಲದಂತಾಗಿದೆ. ಹಾಲು ಮಾರಾಟ ಮಾಡಿ ಜೀವನ ಮಾಡುವವರಿಗೆ ಜೀವನ ನಡೆಸುವುದು ಹೇಗೆಂಬ ಚಿಂತೆ ಕಾಡುತ್ತಿದೆ. ಕೆಲ ಎತ್ತುಗಳೂ ಸಹ ರೋಗದಿಂದ ಬಳಲುತ್ತಿದ್ದು, ಕೃಷಿ ಕೆಲಸಕ್ಕೆ ಸಮಸ್ಯೆಯಾಗಿದೆ.