ಹಣದ ಹೂವು ಸ್ಟಾರ್ಚ್ ಜಿಂಜರ್

ವಾಣಿಜ್ಯ ಲಾಭ ತರುವ ಅಲಂಕಾರಿಕ ಹೂಗಳಲ್ಲಿ ಸ್ಟಾರ್ಚ್ ಜಿಂಜರ್ ಕೂಡ ಒಂದು. ಜಿಂಜರ್ ಮೂಲತಃ ಇಂಡೋನೇಷ್ಯಾದ ಮಳೆಕಾಡಿನ ಸ್ವಾಭಾವಿಕ ಸಸ್ಯ. ಮಲಯ ಮತ್ತು ಥೈಲಾಂಡ್ ದೇಶಗಳಲ್ಲಿ ಇದರ ಎಲೆಯಿಂದ ತಯಾರಿಸಿದ ಸಲಾಡ್ ಜನಪ್ರಿಯವಾಗಿದೆ. ಎಲೆಗಳಿಗೆ ವೈರಾಣುನಾಶಕ ಶಕ್ತಿಯಿರುವುದೇ ಇದಕ್ಕೆ ಕಾರಣ.
ಹಲವು ಬಣ್ಣಗಳಿರುವ ಈ ಹೂವಿನ ಕೆಂಪು ಮತ್ತು ಬಿಳಿಯ ಎರಡು ಜಾತಿಗಳು ನಮ್ಮ ದೇಶಕ್ಕೆ ಬಂದಿವೆ. ಮೇಲ್ನೋಟಕ್ಕೆ ಇದು ತಾವರೆ ಹೂವಿನಂತೆ ಕಾಣಿಸುತ್ತದೆ. ಸುವಾಸನೆಯಿಲ್ಲವಾದರೂ ಅದರ ನಿಧಾನವಾದ ಅರಳುವ ಪ್ರಕ್ರಿಯೆಯಿಂದಾಗಿ ಸುಮಾರು ಒಂದು ತಿಂಗಳ ವರೆಗೂ ಸ್ವಲ್ಪ ಸ್ವಲ್ಪವೇ ಅರಳುತ್ತ ಅರಳಿದ ಮೇಲೂ ಕೆಲವು ದಿನ ಉಳಿಯುತ್ತದೆ. ಜಿಂಜರ್ನಲ್ಲಿ ಅನೇಕ ಎಸಳುಗಳಿದ್ದು ನಡುವೆ ಪುಟ್ಟ ಎಸಳುಗಳ ಗುಚ್ಛವಿರುವುದು ಹೂವಿಗೆ ಶೋಭೆ ನೀಡಿದೆ.ಂಜಿಬರೇಸಿ ಕುಟುಂಬಕ್ಕೆ ಸೇರಿದ ಅದರ ಸಸ್ಯಶಾಸೀಯ ಹೆಸರು ನಿಕೋಲೈಯ ಇಲೇಟರ್. ಆರ್ಥಿಕವಾಗಿ ಲಾಭ ತರುವ ಹೂವೆಂದು ಗುರುತಿಸಲ್ಪಟ್ಟಿದ್ದರೂ ಇಲ್ಲಿ ರೈತರು ಇದನ್ನು ವ್ಯಾಪಕವಾಗಿ ಬೆಳೆಯಲು ಮುಂದಾಗಿಲ್ಲ. ವಿದೇಶಗಳಲ್ಲಿ ಅದರಿಂದ ತಯಾರಿಸುವ ಕೇಶವರ್ಧಕ ಶಾಂಪೂಗಳು ಮಾರಾಟವಾಗುತ್ತಿವೆ.
ಸ್ಟಾರ್ಚ್ ಜಿಂಜರ್ನ ಸಸಿ ಸುಮಾರಾಗಿ ಶುಂಠಿಯ ಗಿಡದ ರಚನೆ ಹೊಂದಿದ್ದರೂ ಎಲೆಗಳು ಅಗಲವಾಗಿವೆ. ಗೆಡ್ಡೆ ನೆಟ್ಟು ವಂಶಾಭಿವದ್ಧಿ ಮಾಡುವುದು ವಾಡಿಕೆ. ಬಿಸಿಲು, ನೆರಳು ಎರಡನ್ನು ಕೂಡ ಸಮಾನವಾಗಿ ಬಯಸುವ ಗಿಡವಿದು. ಉಳಿದ ಹೂ ಗಿಡಗಳ ನಡುವೆ ಬೆಳೆದರೆ ಇಂಥ ಅನುಕೂಲ ಸಿಗುತ್ತದೆ. ಇದರ ಒಂದು ಗೆಡ್ಡೆಯಿಂದ ವಂಶಾಭಿವದ್ಧಿಯಾಗುತ್ತದೆ. ಸುತ್ತಲೂ ಗಿಡಗಳು ಹುಟ್ಟುತ್ತ ಬಳಗ ಬೆಳೆಯುತ್ತದೆ. ಇದಕ್ಕೆ ಕೀಟಬಾಧೆಗಳಿಲ್ಲ. ರಾಸಾಯನಿಕ ಗೊಬ್ಬರ ಬೇಡ. ಆದರೆ ಸೆಗಣಿ ಗೊಬ್ಬರ, ಎರೆಗೊಬ್ಬರ ಹಾಕಿದರೆ ಉತ್ತಮ. ಬೇಸಗೆಯಲ್ಲಿ ಇದಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಈ ಗಿಡದಲ್ಲಿ ಮೊದಲ ಹೂ ಸಿಗಲು ಸುಮಾರು 2ವರ್ಷ ಕಾಯಬೇಕು.ಆದರೆ ಗಿಡ ಕೆಲವು ವರ್ಷ ಬದುಕಿ ನಿರಂತರ ಹೂ ಕೊಡುತ್ತ ಹೋಗುತ್ತದೆ. ಗ್ರೀನ್ಹೌಸಿನ ಹಂಗಿಲ್ಲದೆ ಇತರ ಗಿಡಗಳ ಜತೆಗೇ ಬದುಕಿ ಆದಾಯ ತರುತ್ತದೆ.
ಹೂ ಅರಳುವ ಪ್ರಕ್ರಿಯೆ ಮುಗಿಯುತ್ತ ಬಂದಾಗ ನೀಳವಾಗಿ ತೊಟ್ಟು ಇರುವಂತೆ ಕೊಯ್ಯಬೇಕು. ತೊಟ್ಟಿನ ಬುಡಕ್ಕೆ ಮೇಣ ಸವರಿದರೆ ಹೂ ಬೇಗನೆ ಒಣಗುವುದಿಲ್ಲ. ಹೂವನ್ನು ನೀರಿನಲ್ಲಿಟ್ಟರೆ ಒಂದು ತಿಂಗಳಿನ ಕಾಲ ಹೊಸದರಂತೆ ಉಳಿಸಬಹುದು. ವಿದೇಶಗಳಿಗೂ ಇದು ರವಾನೆಯಾಗುತ್ತದೆ. ಬೆಂಗಳೂರಿನ ಹೂ ಮಾರುಕಟ್ಟೆಯಲ್ಲಿ ಈ ಹೂವಿಗೆ ಸುಮಾರು 15 ರೂ.ಗಳ ವರೆಗೆ ಧಾರಣೆ ಇದೆ. ಮಾರುಕಟ್ಟೆಯ ವಿವರ ತಿಳಿದುಕೊಂಡು ರೈತರು ಇದರ ಕಷಿಯತ್ತ ಗಮನಹರಿಸಿದರೆ ಉತ್ತಮ ಆದಾಯ ಸಿಗಬಹುದು.