ಬರುತ್ತಿದೆ ಬೈಕ್ ಆ್ಯಂಬುಲೆನ್ಸ್

ನಗರಗಳಲ್ಲಿ ಇಂದು ಎಲ್ಲಿ ನೋಡಿದರೂ ಸಂಚಾರ ದಟ್ಟಣೆ. ನಿರಂತರ ವಾಹನಗಳ ಒತ್ತಡ. ಇಂತಹ ಸಂದರ್ಭ ನಗರದ ಯಾವುದೋ ಪ್ರದೇಶದಲ್ಲಿ 108ಕ್ಕೆ ಕರೆ ಮಾಡಿ, ತುರ್ತು ಚಿಕಿತ್ಸೆಗೆ ಬರುವಂತೆ ಹೇಳಿದರೆ, ಸಂಚಾರ ದಟ್ಟಣೆಯ ಮಧ್ಯೆ ಆ್ಯಂಬುಲೆನ್ಸ್ ತರುವುದೇ ದೊಡ್ಡ ಸಾಹಸ. ಆ್ಯಂಬುಲೆನ್ಸ್ಗಳು ಚತುಷ್ಚಕ್ರ ವಾಹನವಾದ್ದರಿಂದ ‘ಬ್ಲಾಕ್’ ಇದ್ದರೂ ಸುಲಭವಾಗಿ ಹೋಗಲು ಸಾಧ್ಯವಾಗುವುದಿಲ್ಲ. ಎಷ್ಟು ಸೈರನ್ ಹೊಡೆದರೂ ಬ್ಲಾಕ್ ನಿಭಾಯಿಸುವುದು ತುಸು ಕಷ್ಟವೇ. ಇಂತಹ ಸಂದರ್ಭ ತುರ್ತಾಗಿ ರೋಗಿಯ ಆರೈಕೆ ಮತ್ತು ಚಿಕಿತ್ಸೆಗೆ ವೈದ್ಯರ ತಂಡ ಕಳುಹಿಸುವುದು ಅನಿವಾರ್ಯ. ಇದಕ್ಕಾಗಿಯೇ ಬರುತ್ತಿದೆ ಬೈಕ್ ಆ್ಯಂಬುಲೆನ್ಸ್.
ಪೂರಕ ರಸ್ತೆ ಇಲ್ಲದ ಕಡೆ ಸಹಕಾರಿ:
ಹಳ್ಳಿಯ ಯಾವುದೋ ಮೂಲೆಯಲ್ಲಿ ತೀವ್ರ ಅಸ್ವಸ್ಥರಾಗಿ ತುರ್ತು ಚಿಕಿತ್ಸೆಗೆ ಆ್ಯಂಬುಲೆನ್ಸ್ಗೆ ಕರೆ ಮಾಡಿದರೆ ದ್ವಿಚಕ್ರ ವಾಹನ ಹೊರತುಪಡಿಸಿ, ಇತರ ವಾಹನಗಳಿಗೆ ಆ ಮನೆಯ ಹತ್ತಿರದವರೆಗೆ ಹೋಗಲು ಪೂರಕ ರಸ್ತೆಗಳಿರುವುದಿಲ್ಲ. ಈ ಸಂದರ್ಭ ಆ್ಯಂಬುಲೆನ್ಸ್ ಬರುವ ರಸ್ತೆವರೆಗೆ ರೋಗಿಯನ್ನು ಎತ್ತಿಕೊಂಡು ಅಥವಾ ಬೇರೆ ರೀತಿಯಲ್ಲಿ ಕರೆತರಬೇಕಾಗುತ್ತದೆ. ಈ ಕಷ್ಟ ಹೋಗಲಾಡಿಸಲು ಹಾಗೂ ತತ್ಕ್ಷಣಕ್ಕೆ ರೋಗಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಲು ಬರುತ್ತಿದೆ ಬೈಕ್ ಆ್ಯಂಬುಲೆನ್ಸ್.
ಹೊರದೇಶದಲ್ಲಿ ಪ್ರಸ್ತುತ ಭಾರೀ ಉಪಯೋಗವಾಗುತ್ತಿರುವ ಬೈಕ್ ಆ್ಯಂಬುಲೆನ್ಸ್ಗೆ ಭಾರತದಲ್ಲೂ ಬೇಡಿಕೆ ಇದೆ. ಪ್ರಸ್ತುತ ಕೆಲವು ರಾಜ್ಯಗಳು ಈ ಸಂಬಂಧ ಮಾತುಕತೆ ನಡೆಸುತ್ತಿವೆ. ಖಾಸಗಿ ವಲಯದಲ್ಲಿಯೂ ಕೆಲವೆಡೆ ಇದರ ಬಳಕೆಯಾಗುತ್ತಿದೆ. ಈಗ ಕರ್ನಾಟಕದಲ್ಲಿ ಇದನ್ನು ಮಾದರಿ ರೂಪದಲ್ಲಿ ಜಾರಿಗೆ ತರಲು ಆರೋಗ್ಯ ಇಲಾಖೆ ಮನಸ್ಸು ಮಾಡಿದೆ. ಈ ಸಂಬಂಧ ಅಂತಿಮ ಸಿದ್ಧತೆ ಕೂಡ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಜನವರಿಯಿಂದ ಆರಂಭ:
ಬೆಂಗಳೂರಿನ ಒಂದು ವಾರ್ಡ್ನಲ್ಲಿ ಬೈಕ್ ಆ್ಯಂಬುಲೆನ್ಸ್ ಯೋಜನೆಯನ್ನು ಪ್ರಾರಂಭಿಕವಾಗಿ ಜಾರಿಗೆ ತರಲಾಗುತ್ತದೆ. ಪೈಲೆಟ್ ಪ್ರಾಜೆಕ್ಟ್ನಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಈ ಬೈಕ್ ಆ್ಯಂಬುಲೆನ್ಸ್ ಅನ್ನು ಜನವರಿ ವೇಳೆಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. ಪ್ರಾರಂಭಿಕವಾಗಿ ಒಂದು ವಾರ್ಡ್ನಲ್ಲಿ ಇದನ್ನು ಸೇವೆಗೆ ಬಳಸಿಕೊಂಡು, ಅದಕ್ಕೆ ಜನರ ಪ್ರತಿಕ್ರಿಯೆ ಹಾಗೂ ಸ್ಪಂದನೆ ಗಮನಿಸಿಕೊಂಡು ಮುಂದೆ ರಾಜ್ಯಾದ್ಯಂತ ವಿಸ್ತರಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.ನಿದು ಬೈಕ್ ಆ್ಯಂಬುಲೆನ್ಸ್?:್ಯಂಬುಲೆನ್ಸ್ ತಲುಪಲು ಸಾಧ್ಯವಾಗದ ಸ್ಥಳಗಳಿಗೆ ಬೈಕ್ ಆ್ಯಂಬುಲೆನ್ಸ್ ಸಹಾಯವಾಗಲಿದೆ. ಇದರಲ್ಲಿ ಇಬ್ಬರು ನುರಿತ ವೈದ್ಯರು ಇರಲಿದ್ದಾರೆ. ಅವರು ಉತ್ತಮ ಬೈಕ್ ಸವಾರರು ಕೂಡ ಆಗಿರುತ್ತಾರೆ. ತುರ್ತು ಚಿಕಿತ್ಸೆಗೆ ಬೇಕಾದ ಪರಿಕರಗಳು ಬೈಕ್ನಲ್ಲಿರುತ್ತದೆ. ತತ್ಕ್ಷಣಕ್ಕೆ ರೋಗಿಯ ಅಗತ್ಯಕ್ಕೆ ಬೇಕಾದ ಎಲ್ಲ ಔಷಧಗಳು ಕೂಡ ಅಲ್ಲಿರುತ್ತದೆ. ಸಾಧ್ಯವಾದರೆ ಬೈಕ್ನಲ್ಲೇ ಅಥವಾ ಆ್ಯಂಬುಲೆನ್ಸ್ ಮೂಲಕ ರೋಗಿಯನ್ನು ಆಸ್ಪತ್ರೆಗೆ ಮುಟ್ಟಿಸುವ ಕಾರ್ಯವೂ ಬೈಕ್ ಆ್ಯಂಬುಲೆನ್ಸ್ನವರ ಮೂಲಕ ನಡೆಯುತ್ತದೆ.
ಬೈಕ್ ಆ್ಯಂಬುಲೆನ್ಸ್ ಯೋಜನೆ ಕರ್ನಾಟಕಕ್ಕೆ ಹೊಸದು. ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ತರುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತದೆ. ಸಂಚಾರ ದಟ್ಟಣೆ ಹಾಗೂ ಒತ್ತಡದ ಪ್ರದೇಶದಲ್ಲಿರುವ ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಲು ಇದು ಜಾರಿಗೆ ಬರಲಿದೆ.