ಮುರುಡೇಶ್ವರನ ತೇರ ಎಳೆಯೋಣ ಬನ್ನಿ

ಜ.20, ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಮುರುಡೇಶ್ವರ ಮಹಾರಥೋತ್ಸವ.ರಾವಣನ ತಾಯಿ ಸಮುದ್ರದಂಚಿನಲ್ಲಿ ಪರಶಿವನ ಲಿಂಗವನ್ನು ಮಾಡಿ ಪೂಜಿಸಲು ತಯಾರಿ ನಡೆಸಿರುವಾಗ ಸಮುದ್ರ ರಾಜನ ಅಲೆಯ ಆರ್ಭಟಕ್ಕೆ ಲಿಂಗ ಕೊಚ್ಚಿ ಹೋಗಿ ಆಕೆಯ ಪೂಜೆಗೆ ಭಂಗವಾಗುತ್ತದೆ. ಅಲ್ಲಿಗೆ ಆಗಮಿಸಿದ ರಾವಣ ತಾಯಿಗೆ ಕೈಲಾಸವಾಸಿ ಶಿವನ ಆತ್ಮಲಿಂಗವನ್ನು ತರುವುದಾಗಿ ಆಶ್ವಾಸನೆ ಕೊಡುತ್ತಾನೆ. ಅದಕ್ಕಾಗಿ ಘೋರ ತಪಸ್ಸು ಆಚರಿಸಿ ದೇವತೆಗಳನ್ನು ಚಿಂತೆಗೀಡು ಮಾಡುತ್ತಾನೆ. ಪರಶಿವನ ಆತ್ಮಲಿಂಗ ಲಂಕೆಯನ್ನು ಸೇರುವುದಾಗಿ ದೇವರುಗಳು ಭಯಗೊಂಡರು. ಇದಕ್ಕಾಗಿ ನಾರದರ ಸಹಕಾರ ಕೋರಿದ ದೇವತೆಗಳು ನಾರದರನ್ನು ಕಳುಹಿಸಿದರು. ಘೋರ ತಪಸ್ಸಿಗೂ ಶಿವನ ಕೈಲಾಸವನ್ನೇ ಲಂಕೆಗೆ ಹೊತ್ತೊಯ್ಯುವ ರಾವಣನ ಪ್ರಯತ್ನಕ್ಕೆ ಶಿವ ಅಡ್ಡ ಬಂದ. ಆಗ ಪ್ರತ್ಯಕ್ಷನಾದ ಶಿವ ವರವನ್ನು ಬೇಡುವಂತೆ ಕೋರಿಕೊಂಡ. ಆಗ ನಾರದರು ಮಾಯೆಯನ್ನು ಮುಂದಿಟ್ಟುಕೊಂಡು ರಾವಣನನ್ನು ದಾರಿ ತಪ್ಪಿಸಲು ಹೊರಟರು. ಪಾರ್ವತಿಯನ್ನು ಕರೆದುಕೊಂಡು ಹೊರಟ ರಾವಣನನ್ನು ದಾರಿ ತಪ್ಪಿಸಿ ಮಯಾಸುರನ ಅರಮನೆಗೆ ಕಳುಹಿಸಿ ಅಲ್ಲಿ ಮಂಡೋದರಿಯೊಂದಿಗೆ ವಿವಾಹ ನೆರವೇರುವಂತೆ ಮಾಡಿದರು. ಮಡದಿಯೊಂದಿಗೆ ಬಂದ ರಾವಣನನ್ನು ನೋಡಿ ಕೋಪಗೊಂಡ ತಾಯಿಯ ಮಾತು ರಾವಣನನ್ನು ಎಚ್ಚರಿಸಿತು. ಆಗ ತನ್ನ ತಪಸ್ಸಿನ ಕುರಿತು ಅರಿವಾದ ರಾವಣ ಮತ್ತೆ ತಪಸ್ಸು ಆಚರಿಸುತ್ತಾನೆ. ತನ್ನ ತಪಸ್ಸಿಗೆ ಶಿವನು ಒಲಿಯದಿದ್ದಾಗ ತನ್ನ ಒಂದೊಂದೇ ಶಿರಚ್ಛೇದನ ಮಾಡಿಕೊಳ್ಳಲು ಮುಂದಾಗುತ್ತಾನೆ. ಆಗ ಪ್ರತ್ಯಕ್ಷನಾದ ಶಿವನು ರಾವಣನು ಬೇಡಿದಂತೆ ತನ್ನ ಆತ್ಮಲಿಂಗವನ್ನು ನೀಡುತ್ತಾನೆ. ಅಲ್ಲದೆ, ಎಲ್ಲಿ ಆತ್ಮಲಿಂಗವನ್ನು ನೆಲಕ್ಕೆ ಇಡುತ್ತಿಯೋ ಅಲ್ಲಿಯೇ ನಾನು ನೆಲೆಸುತ್ತೇನೆ ಎಂದು ಅಭಯ ನೀಡುತ್ತಾನೆ.
ಅಲ್ಲಿಂದ ಇನ್ನೊಂದು ಅಧ್ಯಾಯ ಆರಂಭವಾಗುತ್ತದೆ. ದೇವಾನು ದೇವತೆಗಳು ಚಿಂತೆಗೀಡಾಗುತ್ತಾರೆ. ಆಗ ನಾರದರು ಗಣಪತಿಯ ಮೊರೆ ಹೋಗುತ್ತಾರೆ. ರಾವಣನು ಗೋಕರ್ಣವನ್ನು ಸಮೀಪಿಸುತ್ತಿದ್ದಂತೆ ಕತ್ತಲಾವರಿಸುತ್ತದೆ. ಆಗ ರಾವಣನಿಗೆ ಸಂಧ್ಯಾವಂದನೆ ಮಾಡಬೇಕು. ಆದರೆ ಕೈಯಲ್ಲಿರುವ ಆತ್ಮಲಿಂಗ ಇಡುವಂತಿಲ್ಲ. ಆಗ ಅಲ್ಲಿ ರಾವಣನಿಗೆ ವಟು ರೂಪಿ ಗಣಪನು ಕಾಣಿಸಿಕೊಳ್ಳುತ್ತಾನೆ. ಆಗ ಅವನ ಹತ್ತಿರ ಆತ್ಮಲಿಂಗವನ್ನು ಸಂಧ್ಯಾವಂದನೆ ಮಾಡುವಷ್ಟು ಸಮಯ ನೋಡಿಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಆಗ ವಟುವು ನಾನು ನಿನ್ನ ಹೆಸರನ್ನು ಮೂರು ಬಾರಿ ಕೂಗುತ್ತೇನೆ. ಅಷ್ಟರೊಳಗೆ ನೀನು ಬರಬೇಕು. ಇಲ್ಲದಿದ್ದಲ್ಲಿ ಇದನ್ನು ಇಲ್ಲಿಯೇ ಇಟ್ಟು ತೆರಳುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ರಾವಣನು ಒಪ್ಪಿ ಸಂಧ್ಯಾವಂದನೆ ಮಾಡಲು ತೆರಳುತ್ತಾನೆ. ಆಗ ವಟುವು ಸಂಧ್ಯಾವಂದನೆಯನ್ನು ಮುಗಿಸಿ ವಾಪಸ್ ಬರುವಷ್ಟರಲ್ಲಿ ಆತ್ಮಲಿಂಗ ಭೂ ಸ್ಪರ್ಶ ಮಾಡಿ ಅದು ಅಲ್ಲಿಯೇ ಗಟ್ಟಿಯಾಗಿ ನೆಲೆಯೂರಿತ್ತು. ಇದರಿಂದ ಕೋಪಗೊಂಡ ರಾವಣ ಗಣಪತಿಯ ತಲೆಯ ಮೇಲೆ ಬಲವಾಗಿ ಗುದ್ದಿ ಆತ್ಮಲಿಂಗವನ್ನು ಭೂಮಿಯಿಂದ ಮೇಲೆತ್ತಲು ಪ್ರಯತ್ನಿಸುತ್ತಾನೆ. ಆಗ ಕೈಗೆ ಬಂದ ಆತ್ಮ ಲಿಂಗವನ್ನು ಮುರುಡು ಮುರುಡಾಗಿರುವ ಚೂರೊಂದು ಕಂದುಕಗಿರಿಯ ಮೇಲೆ ಬೀಳುತ್ತದೆ. ಅದುವೇ ಇಂದು ಪ್ರಸಿದ್ಧ ಮುರ್ಡೇಶ್ವರವಾಗಿ ಪ್ರಸಿದ್ಧವಾಗಿದೆ.

ಮುರ್ಡೇಶ್ವರ ಜಾತ್ರೆಗೆ ಬನ್ನಿ

ಉತ್ತರ ಕನ್ನಡದ ಜಿಲ್ಲೆಯ ಪಂಚ ಶಿವಕ್ಷೇತ್ರಗಳಲ್ಲೊಂದಾದ ಮ್ಹಾತೋಬಾರ ಶ್ರೀ ಮುರ್ಡೇಶ್ವರ ದೇವರ ಮಹಾ ರಥೋತ್ಸವ ಜ.20ರಂದು ನಡೆಯಲಿದೆ. ಮಹಾ ರಥೋತ್ಸವದ ನಿಮಿತ್ತ ಮಕರ ಸಂಕ್ರಮಣದ ದಿನದಂದು ಮೃತ್ತಿಕಾಹರಣ, ಧ್ವಜಾರೋಹಣ, ಬೀಜವಾಪನ, ಭೇರಿತಾಡನ, ಐನಬಲಿ, ಶಿಬಿಕಾ ಯಂತ್ರೋತ್ಸವದೊಂದಿಗೆ ಜಾತ್ರಾ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ರಥೋತ್ಸವದ ಪ್ರಯುಕ್ತ ಪ್ರತಿ ದಿನ ರಾತ್ರಿ ಮಹಾ ಪೂಜೆ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಅತ್ಯಾಕರ್ಷಕ ಸ್ವರ್ಣ ರಥವನ್ನು ಎಳೆಯಲಾಗುತ್ತಿದೆ. ದಿನಾಲೂ ವಿವಿಧ ಉತ್ಸವಗಳು ನಡೆದಿದ್ದು, ಜ.20ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಮುರುಡೇಶ್ವರ ದೇವರ ಮಹಾ ರಥೋತ್ಸವ ಜರುಗಲಿದೆ.
ಮಹಾರಥೋತ್ಸವದ ಪ್ರಯುಕ್ತ ಮುರುಡೇಶ್ವರದ ದೇವಸ್ಥಾನಲ್ಲಿ ಭಕ್ತರಿಗೆ ಪೂಜೆ, ಪುನಸ್ಕಾರಗಳನ್ನು ಸಲ್ಲಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಜ.22ರಂದು ಚೂರ್ಣೋತ್ಸವ, ಅವಭೃತ ಸ್ನಾನ, ಧ್ವಜಾವರೋಹಣ, ಅಂಕುರಾರೋಪಣ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ನೀವೂ ಬನ್ನಿ, ಮುರುಡೇಶ್ವರ ದೇವರ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳಿ.

ಬನವಾಸಿ ತಾಲೂಕಾಗಲಿ

ಜ. 18 ಹಾಗೂ ಜ. 19ರಂದು ಬನವಾಸಿಯಲ್ಲಿ ಕದಂಬೋತ್ಸವ.1. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿ ಸುತ್ತಲಿನಲ್ಲಿ ಒಂದು ತಾಲೂಕಿಗೆ ಬೇಕಾದಷ್ಟು ಜನ ಸಂಖ್ಯೆ, ಪ್ರದೇಶ ವಿಸ್ತಾರದ ಕೊರತೆ ಇರಬಹುದು. ಆದರೆ, ಕದಂಬರ ರಾಜಧಾನಿ ನಾಡಿಗೆ ಸ್ವಾಭಿಮಾನಿ ಸಂಕೇತವಾಗಿದ್ದರಿಂದ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳೂ ಇರುವುದರಿಂದ ಇದನ್ನು ತಾಲೂಕಾಗಿ ಘೋಷಣೆ ಮಾಡಬೇಕು ಎಂಬ ಬೇಡಿಕೆ ಕಳೆದ ಆರೆಂಟು ಮುಖ್ಯಮಂತ್ರಿಗಳಿಗೆ ನೀಡಿಯಾಗಿದೆ. ಬನವಾಸಿ ತಾಲೂಕು ಮಾನ್ಯತೆಗೆ ಅರ್ಹವಾಸ ಸ್ಥಳ.
2. ಬನವಾಸಿಯ ಅಭಿವೃದ್ಧಿಗಾಗಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಅಂದಿನ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿ ಆಗಿದೆ. ಆದರೆ, ಈ ಘೋಷಣೆ ಮುಗಿದು ಮೂರು ಮುಖ್ಯಮಂತ್ರಿಗಳು ಆದರೂ ಇನ್ನೂ ಈಡೇರಿಲ್ಲ.
3. ಬನವಾಸಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಆಗುತ್ತಿದೆ. ಇದಕ್ಕಾಗಿ ಗ್ರಿಡ್ ಮಂಜೂರಾತಿ ಆಗಬೇಕು. ಇಲ್ಲಿನ ರಸ್ತೆ ಅಗಲೀಕರಣ, ಸಂಪರ್ಕ ರಸ್ತೆಗಳು ಮೇಲ್ದರ್ಜೆಗೆ ಏರಬೇಕು. ಇದರಿಂದ ಉಳಿದ ಐದಾರು ಜಿಲ್ಲೆಗಳಿಗೂ ಸಂಪರ್ಕಕೊಂಡಿ ಬೆಸೆದು ಪ್ರವಾಸೋದ್ಯಮಕ್ಕೂ ನೆರವಾಗಲಿದೆ.
4. ಶೈಕ್ಷಣಿಕ ಪ್ರಗತಿಗೆ ಪದವಿ ಕಾಲೇಜು ಬೇಕು. ಅದಿ ಕವಿ ಪಂಪ ಹಾಡಿ ಹೊಗಳಿದ ನಾಡಾಗಿದ್ದರಿಂದ ಇಲ್ಲೊಂದು ಪಂಪ ವಿಶ್ವ ವಿದ್ಯಾಲಯದ ಮಂಜೂರಾತಿ ಮಾಡಬೇಕು.
5. ವರದಾ ನದಿ ಬನವಾಸಿ ಪ್ರದೇಶದಲ್ಲಿ ಸುಮಾರು 10 ಕಿ.ಮಿ. ಹರಿದಿದ್ದು ಇದರ ಸಂಪೂರ್ಣ ಹೂಳೆತ್ತಿದರೆ ಕನಿಷ್ಠ 5 ಸಾವಿರ ಎಕರೆ ಜಮೀನಿಗೆ ನೆರವಾಗಲಿದೆ. ವರ್ಷಕ್ಕೆ ಎರಡು ಬೆಳೆ ಬೆಳೆದು ಕೃಷಿಕರು ಗುಳೆ ಹೋಗುವುದು ತಪ್ಪುತ್ತದೆ.
6. ಬನವಾಸಿಗರಿಗೊಂದು ಯಾತ್ರಿ ನಿವಾಸ ಬೇಕು. ಪ್ರವಾಸಿಗಳಿಗೆ ಅನುಕೂಲ ಆಗಲು ಹಾಳು ಬೀಳುತ್ತಿರುವ ಪಂಪ ವನವನ್ನು ಚೆಂದದ ಪಾರ್ಕ ಮಾಡಬೇಕು. ಶಾಶ್ವತ ಕುಡಿಯುವ ನೀರು ಯೋಜನೆ ರೂಪಿಸಬೇಕು. ನೀರು ಶುದ್ಧೀಕರಣ ಘಟಕ ಬೇಕು, ಅಪರೂಪದ ಪ್ರಾಚ್ಯ ವಸ್ತುಗಳ ರಕ್ಷಣೆ ಆಗಬೇಕು.
7. ಎಪಿಎಂಸಿ ಮಾದರಿಯಲ್ಲಿ ಕೃಷಿ, ತರಕಾರಿ ಮಾರುಕಟ್ಟೆ ಬೇಕು.
8. ಇಲ್ಲಿರುವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು. ಹಾವೇರಿ, ಶಿವಮೊಗ್ಗ ಜಿಲ್ಲೆಯ ಸಾವಿರಾರು ರೋಗಿಗಳಿಗೆ ನೆರವಾಗುವ ಆಸ್ಪತ್ರೆ ನಿರ್ಮಾಣ ಮಾಡಬೇಕು. ಕನಿಷ್ಠ ಇಬ್ಬರು ಪ್ರಸೂತಿ ತಜ್ಞರು, ತಜ್ಞ ವೈದ್ಯರು ಬೇಕು. ಕನಿಷ್ಠ 50 ಹಾಸಿಗೆಗಳ ಆಸ್ಪತ್ರೆ ಆಗಬೇಕು.
9. ಜಿಲ್ಲೆಯ ದೊಡ್ಡ ಗುಡ್ನಾಪುರ ಕೆರೆ ಅಭಿವೃದ್ಧಿಗೊಳಿಸಿ ಕೃಷಿಗೆ, ಜನ ಜಾನುವಾರಿಗೆ ನೀರಾವರಿ ವ್ಯವಸ್ಥೆ ಆಗಬೇಕು. ಬನವಾಸಿ ಸುತ್ತಲಿನ ಪ್ರಕೃತಿ, ಐತಿಹಾಸಿಕ ಮಹತ್ವದ ಸ್ಥಳಗಳ ಪರಿಚಯ ಪ್ರವಾಸಿಗರಿಗೆ ಆಗುವಂತಾಗಬೇಕು. ಗುಡ್ನಾಪುರದಲ್ಲಿ ಬಂಗಾರೇಶ್ವರ ದೇವರು ಪ್ರಸಿದ್ಧ ಇದೆ. ಪಕ್ಕದಲ್ಲೇ ಇರುವ ರಾಣಿ ನಿವಾಸದ ಪ್ರಾಚ್ಯ ವಸ್ತುಗಳನ್ನು, ಇಟ್ಟಿಗೆಗಳನ್ನು ರಕ್ಷಿಸಬೇಕು.
10. ಗುಡ್ನಾಪುರದಲ್ಲಿ ಕಲ್ಯಾಣ ಮಂಟಪ ಬೇಕು. ಇಲ್ಲಿ ಮಂಗಳ ಕಾರ್ಯಗಳು ಸಾಕಷ್ಟು ನಡೆಸಲು ನೆರವಾಗುತ್ತದೆ.

ಒಂದಿಷ್ಟು ಮಾತುಕತೆ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ವಾಜಗದ್ದೆ ಶ್ರೀ ದುರ್ಗಾ ವಿನಾಯಕ ಕೃಷಿಕ ಯುವಕ ಸಂಘದ ವಾಚನಾಲಯ ವಿಭಾಗವು ತಾಲೂಕಿನ ಬರಹಗಾರರ ಪ್ರಕಟಿತ ಕನ್ನಡ ಕೃತಿ ಸಂಚಯನ ಯೋಜನೆ ಅಂಗವಾಗಿ ತಾಯ್ನುಡಿನ ಬರಹ-ಒಂದಿಷ್ಟು ಮಾತುಕತೆ ಕಾರ್ಯಕ್ರಮವನ್ನು ಜ.15ರಂದು ಸಂಜೆ 4.30ಕ್ಕೆ ವಾಜಗದ್ದೆಯ ದುರ್ಗಾ ವಿನಾಯಕ ಸಭಾಭವನದಲ್ಲಿ ಆಯೋಜಿಸಿದೆ.
ಹಿರಿಯ ಬರಹಗಾರರಾದ ಭಾಗೀರಥಿ ಹೆಗಡೆ ಶಿರಸಿ ಉದ್ಘಾಟಿಸಲಿದ್ದು, ವಿಶ್ವೇಶ್ವರ ಹೆಗಡೆ ಅತ್ತಿಮುರುಡು ಅಧ್ಯಕ್ಷತೆ ವಹಿಸುವರು.ಡಾವಿಠ್ಠಲ ಭಂಡಾರಿ, ತಮ್ಮಣ್ಣ ಬೀಗಾರ, ರೇಖಾ ಹೆಗಡೆ, ರುಪಾ ಹೆಗಡೆ, ಸುಜಾತಾ ಹೆಗಡೆ, ಶೈಲಜಾ ಹೆಗಡೆ ಭಾಗವಹಿಸುವರು. ಸಂಜೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸರಸರನೆ ಮರ ಏರುವ ಮಹಿಳೆಯರು

ಮಹಿಳೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾಳೆ. ಈಗ ಮರ ಏರಲೂ ಸಲೀಸಾಗಿ ಕಲಿತಿದ್ದಾಳೆ. ಆರಾಮವಾಗಿ ಮರ ಏರಿ ಸೀಯಾಳ, ತೆಂಗಿನ ಕಾಯಿ ಕೆಳಗಿಸಿಳಿಸಿ ಕೊಡುತ್ತಾರೆ. ಬೆಂಗಳೂರಿನ ತೆಂಗು ಅಭಿವೃದ್ಧಿ ಮಂಡಳಿ ನೆರವಿನಲ್ಲಿ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಆವಾರದಲ್ಲಿ ಇತ್ತೀಚೆಗೆ ನಡೆದ ತೆಂಗಿನ ಮರ ಹತ್ತುವ ಹಾಗೂ ಸಸ್ಯ ಸಂರಕ್ಷಣೆ ತರಬೇತಿಯಲ್ಲಿ ಆರು ಮಹಿಳೆಯರಿಗೆ ಮರ ಏರುವ ಕಲೆ ಸಿದ್ಧಿಸಿದೆ. ತರಬೇತಿಯಲ್ಲಿ 14 ಜನರು ಆಸಕ್ತಿಯಿಂದ ಪಾಲ್ಗೊಂಡಿದ್ದರು.
ಮೊದಲ ದಿನವೇ ಅರ್ಧ ಮರ ಏರಿದ ಮಹಿಳೆಯರು ಎರಡನೇ ದಿನ ತೆಂಗಿನ ಮರವನ್ನು ಸರಾಗವಾಗಿ ಏರಿ ತೆಂಗಿನಕಾಯಿ ಕೊಯ್ದು ಬೆರಗು ಮೂಡಿಸಿದರು. ಇತ್ತೀಚಿನ ದಿನಗಳಲ್ಲಿ ಕೂಲಿಗಳ ಕೊರತೆಯಿಂದ ಸಕಾಲದಲ್ಲಿ ತೆಂಗಿನಕಾಯಿ ಕೊಯ್ಯಲು ಸಾಧ್ಯವಾಗದೆ ರೈತರು ಬೆಳೆ ಬೆಳೆಯಲು ಹಿಂಜರಿಯುವುದನ್ನು ಗಮನಿಸಿದ ಮಂಡಳಿ, ರೈತರಿಗೆ ತೆಂಗಿನ ಮರ ಹತ್ತುವ ಕಾರ್ಯಕ್ರಮ ನಡೆಸಿತು. ಮಂಡ್ಯದ ಮಹಾದೇವ ಸ್ವಾಮಿ ತರಬೇತಿ ನೀಡಲು ಆಗಮಿಸಿದ್ದು, ಎಲ್ಲರಿಗೂ ಸಮರ್ಪಕವಾಗಿ ತೆಂಗಿನಮರ ಹತ್ತುವ ಚಾಕಚಕ್ಯತೆ ಕಲಿಸಿದರು. ತರಬೇತಿಯ ಕೊನೆಯ ದಿನ ತೆಂಗಿನ ಮರ ಹತ್ತುವ ಸ್ಪರ್ಧೆಯೂ ನಡೆಯಿತು. ಮರ ಏರುವ ಕಲೆಯ ಜೊತೆಗೆ ತೆಂಗಿನ ಉತ್ಪಾದನೆ, ತಾಂತ್ರಿಕತೆ, ರೋಗ ನಿಯಂತ್ರಣ ಕುರಿತೂ ತರಬೇತಿ ನೀಡಲಾಯಿತು. ಮಹಿಳೆಯರು ಸ್ವಯಂ ಆಸಕ್ತಿಯಿಂದ ಬಂದು ತರಬೇತಿಯಲ್ಲಿ ಭಾಗವಹಿಸಿದ್ದರು. ಪುರುಷರಿಗೆ ಕಡಿಮೆ ಇಲ್ಲದಂತೆ ಸರಾಗವಾಗಿ ಮರ ಏರಿ ಕಾಯಿ ಕೊಯ್ದರು. ಕುಸುಮಾ ಬಾಲಚಂದ್ರ ಹೆಗಡೆ, ನೇತ್ರಾವತಿ ಹೆಗಡೆ, ಮಂಗಲಾ ನಾಯ್ಕ, ಮಾಲತಿ ಹೆಗಡೆ, ಸೀಮಾ ಜೋಗಳೇಕರ, ಜಯಶ್ರೀ ಹೆಗಡೆ ಮರ ಹತ್ತಿ ಸಾಧನೆ ಮೆರೆದರು.
ಹಳೆ ಮಾದರಿಯಲ್ಲಿ ಮರ ಏರಿದರೆ ಒಂದು ತಾಸಿನಲ್ಲಿ 10 ಮರ ಏರಬಹುದು. ಯಂತ್ರದ ಮೂಲಕ ಇದೇ ಹೊತ್ತಿನಲ್ಲಿ 20 ಮರ ಏರಬಹುದು ಎನ್ನುವುದು ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ ಹೇಮಂತ ಹೆಗಡೆ ಅನಿಸಿಕೆ. ತರಬೇತಿ ಪಡೆದವರಿಗೆ 2500 ರೂ. ಮೌಲ್ಯದ ಯಂತ್ರವನ್ನು ಉಚಿತವಾಗಿ ನೀಡಲಾಯಿತು. ಜೊತೆಗೆ ಒಂದು ವರ್ಷದ ವಿಮೆ ಸಹ ನೀಡಲಾಯಿತು.


ಮಸಾಲೆಗಳ ರಾಜ, ಏಲಕ್ಕಿ

ಏಲಕ್ಕಿಯನ್ನು ಮಸಾಲೆಗಳ ರಾಜ ಎಂದು ಕರೆಯಬಹುದು. ಏಲಕ್ಕಿ ಇಲ್ಲದ ಪಕ್ವಾನ್ನವನ್ನು ಊಹಿಸಿ ಕೊಳ್ಳುವುದು ಕಷ್ಟ. ಭಾರತದಿಂದ ರ್ತಾಗುವ ಸಾಂಬಾರ ಪದಾರ್ಥಗಳಲ್ಲಿ ಏಲಕ್ಕಿಗೆ ಪ್ರಮುಖ ಸ್ಥಾನವಿದೆ. ಹಿಂದೆ ಕೊಲಂಬಸ್ ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡು ಹಿಡಿಯಲು ಹೊರಟ ವಿವಿಧ ಕಾರಣಗಳಲ್ಲಿ ಏಲಕ್ಕಿಯ ಆಕರ್ಷಣೆಯೂ ಒಂದು ಎನ್ನುತ್ತವೆ ಇತಿಹಾಸದ ಪುಟಗಳು. ಇಳಿಜಾರಿನಿಂದ ಕೂಡಿದ ಘಟ್ಟ ಪ್ರದೇಶ, ಗಟ್ಟಿ ಮಣ್ಣು ತೇವಾಂಶದಿಂದ ಕೂಡಿದ ಉಷ್ಣ ವಾತಾವರಣ ಮತ್ತು ಅಧಿಕ ಮಳೆ ಏಲಕ್ಕಿ ಬೆಳೆಗೆ ಅವಶ್ಯ. ಕಾಫಿ, ಚಹ ಗಿಡದಂತೆ ನೆರಳು ಅತ್ಯವಶ್ಯ. ಇದರಲ್ಲಿ ದೊಡ್ಡ ಏಲಕ್ಕಿ, ಸಣ್ಣ ಏಲಕ್ಕಿ ಎಂಬ 2 ಪ್ರಭೇದಗಳಿವೆ. ಕನ್ನಡದಲ್ಲಿನ ಏಲಕ್ಕಿ, ಹಿಂದಿಯಲ್ಲಿ ಚೋಟಾ, ಸಂಸ್ಕೃತದಲ್ಲಿ ಎಲಾ, ಇಂಗ್ಲೀಷ್ನಲ್ಲಿ ಕಾರ್ಡಮಂ ಎಂದು ಕರೆಯಲ್ಪಡುತ್ತದೆ.ದು ಬಹುವಾರ್ಷಿಕ ಘನಮೂಲಿಕೆ:ಲಕ್ಕಿ ಗಿಡ 6ರಿಂದ 12 ಅಡಿ ಎತ್ತರ ಬೆಳೆಯುವ ಬಹುವಾರ್ಷಿಕ ಘನಮೂಲಿಕೆ. ಇದರ ಕಾಂಡ ಭೂಮಿಯ ಒಳಗೆ ಹುದುಗಿರುತ್ತದೆ. ಹೂವಿನ ಗೊಂಚಲು ನೆಲದ ಮೇಲೆ ಹಾಸಿಕೊಂಡು ಬೆಳೆಯುತ್ತದೆ. ಏಲಕ್ಕಿ ಕಾಯಿಗಳು ಹಸಿರಾಗಿದ್ದು, ತ್ರಿಕೋನಾಕೃತಿಯಲ್ಲಿರುತ್ತವೆ. ಪ್ರತಿ ಕೋಣೆಯಲ್ಲಿ 8,10 ಬೀಜಗಳಿರುತ್ತವೆ. ದರವ್ಯಾಧಿಗಳನ್ನು ಶಮನಗೊಳಿಸುವ ಸಾಮರ್ಥ್ಯ ಏಲಕ್ಕಿಗಿದೆ. ದಂತ ರೋಗಗಳು ಮತ್ತು ಉಸಿರಿನ ದುರ್ವಾಸನೆಗೆ ಏಲಕ್ಕಿ ಒಂದು ಉತ್ತಮ ಪರಿಹಾರ. ಪೇಯಗಳು, ಬಿಸ್ಕತ್, ಚಾಕೊಲೇಟ್ ಮತ್ತು ಟೂತ್ ಪೇಸ್ಟ್ಗಳ ತಯಾರಿಕೆಯಲ್ಲಿ ಏಲಕ್ಕಿ ಎಣ್ಣೆಯನ್ನು ಬಳಸಲಾಗುತ್ತದೆ. ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಏಲಕ್ಕಿಯನ್ನು ಬೆಳೆಯಲಾಗುತ್ತದೆ. ಹೆಚ್ಚು ಮಳೆ ಬೀಳುವ ಎತ್ತರವಾದ ಪ್ರದೇಶಗಳಲ್ಲಿ ಏಲಕ್ಕಿಯನ್ನು ಬೆಳೆಸಲಾಗುತ್ತದೆ. ಪಶ್ಚಿಮ ಘಟ್ಟಗಳು ಏಲಕ್ಕಿ ಬೆಳೆಯ ತವರು.ಲಕ್ಕಿಯ ಬಳಕೆ ಒಂದೊಂದು ದೇಶದಲ್ಲಿ ಒಂದೊಂದು ತರ. ಭಾರತದಲ್ಲಿ ಏಲಕ್ಕಿಯನ್ನು ಬಳಸುವುದು ಮುಖ್ಯವಾಗಿ ಸಿಹಿತಿಂಡಿಗಳು, ಪೇಯಗಳು ಮತ್ತು ತಾಂಬೂಲದಲ್ಲಿ.
ಅರಬರು ಏಲಕ್ಕಿಯನ್ನು ಕಾಫಿಗೆ ಬೆರೆಸಿ ಸೇವಿಸುತ್ತಾರೆ. ಅಮೆರಿಕನ್ನರು ಏಲಕ್ಕಿಯನ್ನು ಬೇಯಿಸಿದ ಆಹಾರ ಪದಾರ್ಥಗಳೊಂದಿಗೆ ಸೇವಿಸಿದರೆ, ರಷ್ಯನ್ನರು ಕೇಕ್, ಬ್ರೆಡ್, ಚಾಕೋಲೇಟ್, ಬಿಸ್ಕತ್ಗಳಲ್ಲಿ ಬಳಸುತ್ತಾರೆ. ಏಲಕ್ಕಿ ಬೆರೆಸಿದ ಪಾನಕ ಬಿಸಿಲಿನ ಆಯಾಸವನ್ನು ಪರಿಹರಿಸುತ್ತದೆ.ಲಕ್ಕಿಯ ಬೀಜ, ಬಾಳೆ ಹಣ್ಣನ್ನು ಬೆಣ್ಣೆಯೊಡನೆ ನಿತ್ಯ ಸೇವಿಸಿದರೆ ಮೂಲವ್ಯಾಧಿ ನಿವಾರಣೆಯಾಗುತ್ತದೆ ಎನ್ನುತ್ತದೆ ಆಯುರ್ವೇದ. ಏಲಕ್ಕಿ ಬೀಜ ಮತ್ತು ಗಸಗಸೆಯನ್ನು ಮೊಸರಿನಲ್ಲಿ ರಾತ್ರಿ ನೆನೆಸಿಟ್ಟು, ಬೆಳಗಿನ ಜಾವ ಸೇವಿಸಿದರೆ ಉರಿಮೂತ್ರ ರೋಗ ನಿವಾರಣೆಯಾಗುತ್ತದೆ. ಏಲಕ್ಕಿಯ ಬೀಜ ಮತ್ತು ಜೀರಿಗೆ ಅರೆದು ಮಜ್ಜಿಗೆಯಲ್ಲಿ ರಾತ್ರಿ ನೆನೆ ಇಟ್ಟು ಮುಂಜಾನೆ ಸೇವಿಸಿದರೆ ಉಷ್ಣ ರೋಗ ನಿವಾರಣೆಯಾಗುತ್ತದೆ.


ಶಾರ್ಟ್ಕಟ್ ಬೆಲ್ಲ ಲಾಭಕರ

ದಶಕದ ಹಿಂದೆ ಆಲೆಮನೆಗಳಲ್ಲಿ ತಯಾರಾಗುತ್ತಿದ್ದ ಆರೋಗ್ಯಕರ ಬೆಲ್ಲ ಈಗ ಸಿಗುತ್ತಿಲ್ಲ, ಅದರ ವಾಸನೆ, ಬಣ್ಣ, ರುಚಿ, ಮೃದುತ್ವ ಹಾಗೂ ಬಹು ಕಾಲದವರೆಗಿನ ಬಾಳಿಕೆ ಈಗ ನೆನಪು ಮಾತ್ರ. ಏಕೆಂದರೆ ಈಗ ಆಲೆಮನೆಗಳಲ್ಲಿ ತಯಾರಾಗುತ್ತಿರುವುದು ಕಲಬೆರಕೆ ಬೆಲ್ಲ. ಬೆಲ್ಲದ ತಯಾರಿಕೆಯಲ್ಲಿ ಕಬ್ಬಿನ ಹಾಲಿಗಿಂತ ಹೆಚ್ಚಾಗಿ ಸಕ್ಕರೆಯನ್ನು ಬೆರೆಸಲಾಗುತ್ತಿದೆ. ಆದಾಯದ ಬೆನ್ನು ಹತ್ತಿದ ರೈತ ಇಲ್ಲಿ ಶಾರ್ಟ್ಕಟ್ಗೆ ಮೊರೆ ಹೋಗಿದ್ದಾನೆ.ಲಬೆರಕೆ ಹೇಗೆ : ರಡು ಟನ್ ಕಬ್ಬಿಗೆ ಸುಮಾರು 2 ಸಾವಿರ ಲೀ.ಕಬ್ಬಿನ ಹಾಲು ಉತ್ಪಾದನೆಯಾಗುತ್ತದೆ. ಇದರಿಂದ ತಯಾರಿಸಿದರೆ 210 ಕೆಜಿ ಶುದ್ಧ ಬೆಲ್ಲ ಉತ್ಪಾದನೆಯಾಗುತ್ತದೆ. ಆದರೆ ಕಲಬೆರಕೆ ಬೆಲ್ಲ ತಯಾರಿಸುವಾಗ ಉತ್ಪಾದಕ ಒಂದು ಟನ್ ಕಬ್ಬು ಮಾತ್ರ ಬಳಸುತ್ತಾನೆ. ಅದರಿಂದ ಬಂದ ಒಂದು ಸಾವಿರ ಲೀ. ಹಾಲು ಕಾಯಿಸಿ ಪಾಕದ ಹಂತಕ್ಕೆ ಬಂದಾಗ 50 ಕೆಜಿ ಸಕ್ಕರೆ ಬೆರೆಸುತ್ತಾನೆ. ಅದು ಕುದಿಯುತ್ತಿರುವ ಕಬ್ಬಿನ ಹಾಲಿನೊಂದಿಗೆ ಬೆರೆತು ಬೆಲ್ಲವಾಗಿ ಮಾರ್ಪಡುತ್ತದೆ. ಇಲ್ಲಿಯೂ ಸಹ ಎರಡು ಸಾವಿರ ಲೀ ಕಬ್ಬಿನ ಹಾಲು ಬಳಸಿ ತೆಗೆದಷ್ಟೇ ಬೆಲ್ಲ ತಯಾರಾಗುತ್ತದೆ. ಶುದ್ಧ ಬೆಲ್ಲ ತಯಾರಿಕೆಗಿಂತ ಕಲಬೆರಕೆ ಬೆಲ್ಲದಲ್ಲಿ ಖರ್ಚು ಕಡಿಮೆ ಇರುವುದರಿಂದ ಇಲ್ಲಿ ಲಾಭ ಜಾಸ್ತಿ.
ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಒಂದು ಕೆಜಿಗೆ ರೂ 38 ರವರೆಗಿದೆ. ಆದರೆ ಒಂದು ಕೆಜಿಗೆ ಬೆಲ್ಲಕ್ಕೆ38 ರಿಂದ 40 ರೂ.ವರೆಗಿದೆ. ಸಕ್ಕರೆಗಿಂತ ಬೆಲ್ಲದ ಬೆಲೆ ಹೆಚ್ಚಿರುವುದರಿಂದ ಈ ಶಾರ್ಟ್ಕಟ್ ರೈತರಿಗೆ ಲಾಭಕರ.ಲಬೆರಕೆ ಬೆಲ್ಲ ಉತ್ಪಾದಕ ದಿನಕ್ಕೆ 6 ಗಂಗಾಳ ಬೆಲ್ಲ ತಯಾರಿಸಿ ಪ್ರತಿ ಗಂಗಾಳಕ್ಕೆ 750 ರೂ.ನಂತೆ 5ರಿಂದ 6 ಸಾವಿರ ರೂ. ಲಾಭ ಗಳಿಸುತ್ತಾನೆ. ಎಷ್ಟೋ ಬಾರಿ ಇಂಥ ಬೆಲ್ಲ ತಯಾರಿಕೆಗೆ ಬಳಸುವ ಸಕ್ಕರೆಯನ್ನು ಸಗಟು ದರದಲ್ಲಿ ಖರೀದಿಸುವುದರಿಂದ 30ರೂ. ಕೆಜಿಯಂತೆ ಖರೀದಿಸಿ ಹೆಚ್ಚಿನ ಲಾಭವನ್ನೂ ಮಾಡಿಕೊಳ್ಳಬಹುದು. ಕೆಲವು ಸಾರಿ 500 ಲೀಟರ್ ಹಾಲು ಬಳಸಿ ಎರಡು ಚೀಲ ಸಕ್ಕರೆ ಬಳಸಿ ಬೆಲ್ಲ ತಯಾರಿಸುತ್ತಾರೆ.