ಬನವಾಸಿ ತಾಲೂಕಾಗಲಿ

ಜ. 18 ಹಾಗೂ ಜ. 19ರಂದು ಬನವಾಸಿಯಲ್ಲಿ ಕದಂಬೋತ್ಸವ.1. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿ ಸುತ್ತಲಿನಲ್ಲಿ ಒಂದು ತಾಲೂಕಿಗೆ ಬೇಕಾದಷ್ಟು ಜನ ಸಂಖ್ಯೆ, ಪ್ರದೇಶ ವಿಸ್ತಾರದ ಕೊರತೆ ಇರಬಹುದು. ಆದರೆ, ಕದಂಬರ ರಾಜಧಾನಿ ನಾಡಿಗೆ ಸ್ವಾಭಿಮಾನಿ ಸಂಕೇತವಾಗಿದ್ದರಿಂದ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳೂ ಇರುವುದರಿಂದ ಇದನ್ನು ತಾಲೂಕಾಗಿ ಘೋಷಣೆ ಮಾಡಬೇಕು ಎಂಬ ಬೇಡಿಕೆ ಕಳೆದ ಆರೆಂಟು ಮುಖ್ಯಮಂತ್ರಿಗಳಿಗೆ ನೀಡಿಯಾಗಿದೆ. ಬನವಾಸಿ ತಾಲೂಕು ಮಾನ್ಯತೆಗೆ ಅರ್ಹವಾಸ ಸ್ಥಳ.
2. ಬನವಾಸಿಯ ಅಭಿವೃದ್ಧಿಗಾಗಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಅಂದಿನ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿ ಆಗಿದೆ. ಆದರೆ, ಈ ಘೋಷಣೆ ಮುಗಿದು ಮೂರು ಮುಖ್ಯಮಂತ್ರಿಗಳು ಆದರೂ ಇನ್ನೂ ಈಡೇರಿಲ್ಲ.
3. ಬನವಾಸಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಆಗುತ್ತಿದೆ. ಇದಕ್ಕಾಗಿ ಗ್ರಿಡ್ ಮಂಜೂರಾತಿ ಆಗಬೇಕು. ಇಲ್ಲಿನ ರಸ್ತೆ ಅಗಲೀಕರಣ, ಸಂಪರ್ಕ ರಸ್ತೆಗಳು ಮೇಲ್ದರ್ಜೆಗೆ ಏರಬೇಕು. ಇದರಿಂದ ಉಳಿದ ಐದಾರು ಜಿಲ್ಲೆಗಳಿಗೂ ಸಂಪರ್ಕಕೊಂಡಿ ಬೆಸೆದು ಪ್ರವಾಸೋದ್ಯಮಕ್ಕೂ ನೆರವಾಗಲಿದೆ.
4. ಶೈಕ್ಷಣಿಕ ಪ್ರಗತಿಗೆ ಪದವಿ ಕಾಲೇಜು ಬೇಕು. ಅದಿ ಕವಿ ಪಂಪ ಹಾಡಿ ಹೊಗಳಿದ ನಾಡಾಗಿದ್ದರಿಂದ ಇಲ್ಲೊಂದು ಪಂಪ ವಿಶ್ವ ವಿದ್ಯಾಲಯದ ಮಂಜೂರಾತಿ ಮಾಡಬೇಕು.
5. ವರದಾ ನದಿ ಬನವಾಸಿ ಪ್ರದೇಶದಲ್ಲಿ ಸುಮಾರು 10 ಕಿ.ಮಿ. ಹರಿದಿದ್ದು ಇದರ ಸಂಪೂರ್ಣ ಹೂಳೆತ್ತಿದರೆ ಕನಿಷ್ಠ 5 ಸಾವಿರ ಎಕರೆ ಜಮೀನಿಗೆ ನೆರವಾಗಲಿದೆ. ವರ್ಷಕ್ಕೆ ಎರಡು ಬೆಳೆ ಬೆಳೆದು ಕೃಷಿಕರು ಗುಳೆ ಹೋಗುವುದು ತಪ್ಪುತ್ತದೆ.
6. ಬನವಾಸಿಗರಿಗೊಂದು ಯಾತ್ರಿ ನಿವಾಸ ಬೇಕು. ಪ್ರವಾಸಿಗಳಿಗೆ ಅನುಕೂಲ ಆಗಲು ಹಾಳು ಬೀಳುತ್ತಿರುವ ಪಂಪ ವನವನ್ನು ಚೆಂದದ ಪಾರ್ಕ ಮಾಡಬೇಕು. ಶಾಶ್ವತ ಕುಡಿಯುವ ನೀರು ಯೋಜನೆ ರೂಪಿಸಬೇಕು. ನೀರು ಶುದ್ಧೀಕರಣ ಘಟಕ ಬೇಕು, ಅಪರೂಪದ ಪ್ರಾಚ್ಯ ವಸ್ತುಗಳ ರಕ್ಷಣೆ ಆಗಬೇಕು.
7. ಎಪಿಎಂಸಿ ಮಾದರಿಯಲ್ಲಿ ಕೃಷಿ, ತರಕಾರಿ ಮಾರುಕಟ್ಟೆ ಬೇಕು.
8. ಇಲ್ಲಿರುವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು. ಹಾವೇರಿ, ಶಿವಮೊಗ್ಗ ಜಿಲ್ಲೆಯ ಸಾವಿರಾರು ರೋಗಿಗಳಿಗೆ ನೆರವಾಗುವ ಆಸ್ಪತ್ರೆ ನಿರ್ಮಾಣ ಮಾಡಬೇಕು. ಕನಿಷ್ಠ ಇಬ್ಬರು ಪ್ರಸೂತಿ ತಜ್ಞರು, ತಜ್ಞ ವೈದ್ಯರು ಬೇಕು. ಕನಿಷ್ಠ 50 ಹಾಸಿಗೆಗಳ ಆಸ್ಪತ್ರೆ ಆಗಬೇಕು.
9. ಜಿಲ್ಲೆಯ ದೊಡ್ಡ ಗುಡ್ನಾಪುರ ಕೆರೆ ಅಭಿವೃದ್ಧಿಗೊಳಿಸಿ ಕೃಷಿಗೆ, ಜನ ಜಾನುವಾರಿಗೆ ನೀರಾವರಿ ವ್ಯವಸ್ಥೆ ಆಗಬೇಕು. ಬನವಾಸಿ ಸುತ್ತಲಿನ ಪ್ರಕೃತಿ, ಐತಿಹಾಸಿಕ ಮಹತ್ವದ ಸ್ಥಳಗಳ ಪರಿಚಯ ಪ್ರವಾಸಿಗರಿಗೆ ಆಗುವಂತಾಗಬೇಕು. ಗುಡ್ನಾಪುರದಲ್ಲಿ ಬಂಗಾರೇಶ್ವರ ದೇವರು ಪ್ರಸಿದ್ಧ ಇದೆ. ಪಕ್ಕದಲ್ಲೇ ಇರುವ ರಾಣಿ ನಿವಾಸದ ಪ್ರಾಚ್ಯ ವಸ್ತುಗಳನ್ನು, ಇಟ್ಟಿಗೆಗಳನ್ನು ರಕ್ಷಿಸಬೇಕು.
10. ಗುಡ್ನಾಪುರದಲ್ಲಿ ಕಲ್ಯಾಣ ಮಂಟಪ ಬೇಕು. ಇಲ್ಲಿ ಮಂಗಳ ಕಾರ್ಯಗಳು ಸಾಕಷ್ಟು ನಡೆಸಲು ನೆರವಾಗುತ್ತದೆ.