ಮುರುಡೇಶ್ವರನ ತೇರ ಎಳೆಯೋಣ ಬನ್ನಿ

ಜ.20, ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಮುರುಡೇಶ್ವರ ಮಹಾರಥೋತ್ಸವ.ರಾವಣನ ತಾಯಿ ಸಮುದ್ರದಂಚಿನಲ್ಲಿ ಪರಶಿವನ ಲಿಂಗವನ್ನು ಮಾಡಿ ಪೂಜಿಸಲು ತಯಾರಿ ನಡೆಸಿರುವಾಗ ಸಮುದ್ರ ರಾಜನ ಅಲೆಯ ಆರ್ಭಟಕ್ಕೆ ಲಿಂಗ ಕೊಚ್ಚಿ ಹೋಗಿ ಆಕೆಯ ಪೂಜೆಗೆ ಭಂಗವಾಗುತ್ತದೆ. ಅಲ್ಲಿಗೆ ಆಗಮಿಸಿದ ರಾವಣ ತಾಯಿಗೆ ಕೈಲಾಸವಾಸಿ ಶಿವನ ಆತ್ಮಲಿಂಗವನ್ನು ತರುವುದಾಗಿ ಆಶ್ವಾಸನೆ ಕೊಡುತ್ತಾನೆ. ಅದಕ್ಕಾಗಿ ಘೋರ ತಪಸ್ಸು ಆಚರಿಸಿ ದೇವತೆಗಳನ್ನು ಚಿಂತೆಗೀಡು ಮಾಡುತ್ತಾನೆ. ಪರಶಿವನ ಆತ್ಮಲಿಂಗ ಲಂಕೆಯನ್ನು ಸೇರುವುದಾಗಿ ದೇವರುಗಳು ಭಯಗೊಂಡರು. ಇದಕ್ಕಾಗಿ ನಾರದರ ಸಹಕಾರ ಕೋರಿದ ದೇವತೆಗಳು ನಾರದರನ್ನು ಕಳುಹಿಸಿದರು. ಘೋರ ತಪಸ್ಸಿಗೂ ಶಿವನ ಕೈಲಾಸವನ್ನೇ ಲಂಕೆಗೆ ಹೊತ್ತೊಯ್ಯುವ ರಾವಣನ ಪ್ರಯತ್ನಕ್ಕೆ ಶಿವ ಅಡ್ಡ ಬಂದ. ಆಗ ಪ್ರತ್ಯಕ್ಷನಾದ ಶಿವ ವರವನ್ನು ಬೇಡುವಂತೆ ಕೋರಿಕೊಂಡ. ಆಗ ನಾರದರು ಮಾಯೆಯನ್ನು ಮುಂದಿಟ್ಟುಕೊಂಡು ರಾವಣನನ್ನು ದಾರಿ ತಪ್ಪಿಸಲು ಹೊರಟರು. ಪಾರ್ವತಿಯನ್ನು ಕರೆದುಕೊಂಡು ಹೊರಟ ರಾವಣನನ್ನು ದಾರಿ ತಪ್ಪಿಸಿ ಮಯಾಸುರನ ಅರಮನೆಗೆ ಕಳುಹಿಸಿ ಅಲ್ಲಿ ಮಂಡೋದರಿಯೊಂದಿಗೆ ವಿವಾಹ ನೆರವೇರುವಂತೆ ಮಾಡಿದರು. ಮಡದಿಯೊಂದಿಗೆ ಬಂದ ರಾವಣನನ್ನು ನೋಡಿ ಕೋಪಗೊಂಡ ತಾಯಿಯ ಮಾತು ರಾವಣನನ್ನು ಎಚ್ಚರಿಸಿತು. ಆಗ ತನ್ನ ತಪಸ್ಸಿನ ಕುರಿತು ಅರಿವಾದ ರಾವಣ ಮತ್ತೆ ತಪಸ್ಸು ಆಚರಿಸುತ್ತಾನೆ. ತನ್ನ ತಪಸ್ಸಿಗೆ ಶಿವನು ಒಲಿಯದಿದ್ದಾಗ ತನ್ನ ಒಂದೊಂದೇ ಶಿರಚ್ಛೇದನ ಮಾಡಿಕೊಳ್ಳಲು ಮುಂದಾಗುತ್ತಾನೆ. ಆಗ ಪ್ರತ್ಯಕ್ಷನಾದ ಶಿವನು ರಾವಣನು ಬೇಡಿದಂತೆ ತನ್ನ ಆತ್ಮಲಿಂಗವನ್ನು ನೀಡುತ್ತಾನೆ. ಅಲ್ಲದೆ, ಎಲ್ಲಿ ಆತ್ಮಲಿಂಗವನ್ನು ನೆಲಕ್ಕೆ ಇಡುತ್ತಿಯೋ ಅಲ್ಲಿಯೇ ನಾನು ನೆಲೆಸುತ್ತೇನೆ ಎಂದು ಅಭಯ ನೀಡುತ್ತಾನೆ.
ಅಲ್ಲಿಂದ ಇನ್ನೊಂದು ಅಧ್ಯಾಯ ಆರಂಭವಾಗುತ್ತದೆ. ದೇವಾನು ದೇವತೆಗಳು ಚಿಂತೆಗೀಡಾಗುತ್ತಾರೆ. ಆಗ ನಾರದರು ಗಣಪತಿಯ ಮೊರೆ ಹೋಗುತ್ತಾರೆ. ರಾವಣನು ಗೋಕರ್ಣವನ್ನು ಸಮೀಪಿಸುತ್ತಿದ್ದಂತೆ ಕತ್ತಲಾವರಿಸುತ್ತದೆ. ಆಗ ರಾವಣನಿಗೆ ಸಂಧ್ಯಾವಂದನೆ ಮಾಡಬೇಕು. ಆದರೆ ಕೈಯಲ್ಲಿರುವ ಆತ್ಮಲಿಂಗ ಇಡುವಂತಿಲ್ಲ. ಆಗ ಅಲ್ಲಿ ರಾವಣನಿಗೆ ವಟು ರೂಪಿ ಗಣಪನು ಕಾಣಿಸಿಕೊಳ್ಳುತ್ತಾನೆ. ಆಗ ಅವನ ಹತ್ತಿರ ಆತ್ಮಲಿಂಗವನ್ನು ಸಂಧ್ಯಾವಂದನೆ ಮಾಡುವಷ್ಟು ಸಮಯ ನೋಡಿಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಆಗ ವಟುವು ನಾನು ನಿನ್ನ ಹೆಸರನ್ನು ಮೂರು ಬಾರಿ ಕೂಗುತ್ತೇನೆ. ಅಷ್ಟರೊಳಗೆ ನೀನು ಬರಬೇಕು. ಇಲ್ಲದಿದ್ದಲ್ಲಿ ಇದನ್ನು ಇಲ್ಲಿಯೇ ಇಟ್ಟು ತೆರಳುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ರಾವಣನು ಒಪ್ಪಿ ಸಂಧ್ಯಾವಂದನೆ ಮಾಡಲು ತೆರಳುತ್ತಾನೆ. ಆಗ ವಟುವು ಸಂಧ್ಯಾವಂದನೆಯನ್ನು ಮುಗಿಸಿ ವಾಪಸ್ ಬರುವಷ್ಟರಲ್ಲಿ ಆತ್ಮಲಿಂಗ ಭೂ ಸ್ಪರ್ಶ ಮಾಡಿ ಅದು ಅಲ್ಲಿಯೇ ಗಟ್ಟಿಯಾಗಿ ನೆಲೆಯೂರಿತ್ತು. ಇದರಿಂದ ಕೋಪಗೊಂಡ ರಾವಣ ಗಣಪತಿಯ ತಲೆಯ ಮೇಲೆ ಬಲವಾಗಿ ಗುದ್ದಿ ಆತ್ಮಲಿಂಗವನ್ನು ಭೂಮಿಯಿಂದ ಮೇಲೆತ್ತಲು ಪ್ರಯತ್ನಿಸುತ್ತಾನೆ. ಆಗ ಕೈಗೆ ಬಂದ ಆತ್ಮ ಲಿಂಗವನ್ನು ಮುರುಡು ಮುರುಡಾಗಿರುವ ಚೂರೊಂದು ಕಂದುಕಗಿರಿಯ ಮೇಲೆ ಬೀಳುತ್ತದೆ. ಅದುವೇ ಇಂದು ಪ್ರಸಿದ್ಧ ಮುರ್ಡೇಶ್ವರವಾಗಿ ಪ್ರಸಿದ್ಧವಾಗಿದೆ.