ಇಟಗಿಯ ರಾಮೇಶ್ವರ ರಥೋತ್ಸವಕ್ಕೆ ಬನ್ನಿ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಇಟಗಿಯಲ್ಲಿ ಶ್ರೀ ರಾಮೇಶ್ವರ ದೇವರ ರಥೋತ್ಸವದ ಧಾರ್ಮಿಕ ವಿಧಿ-ವಿಧಾನಗಳು ಆರಂಭಗೊಂಡಿದ್ದು, ಮಾ.10ರಂದು ಮಹಾರಥೋತ್ಸವ ನಡೆಯಲಿದೆ. ಮಾ.13ರಂದು ಶತರುದ್ರ ಚಂಡಿಹವನ ನಡೆಯುವುದು. ಶ್ರೀ ರಾಮೇಶ್ವರ ದೇವಸ್ಥಾನದ ವತಿಯಿಂದ ಶಿವ-ಪಾರ್ವತಿ ಕಲ್ಯಾಣೋತ್ಸವ ಮತ್ತು ಹವನವಾಹಿನಿ ಸಮಾರೋಪ ಮಾ.16ರಂದು ಆಯೋಜಿಸಲಾಗಿದೆ. ತಿಹಾಸಿಕ ಪ್ರಸಿದ್ಧಿಯ ಶ್ರೀ ರಾಮೇಶ್ವರ ದೇವಾಲಯವು ಘಟ್ಟದ ಮೇಲಿನ ಗೋಕರ್ಣವೆಂದೇ ಹೆಸರಾಗಿದೆ. ಲೋಕಕಲ್ಯಾಣಾರ್ಥ ಕಳೆದ ಯುಗಾದಿಯಿಂದ ಪ್ರತಿ ಹುಣ್ಣಿಮೆಯಂದು ಹವನ ಮಾಡುತ್ತಿದ್ದು ಈಗಾಗಲೇ 14 ಹವನಗಳು ಮುಗಿದಿದ್ದು ಹೋಳಿ ಹುಣ್ಣಿಮೆಯಂದು ಮುಕ್ತಾಯಗೊಳ್ಳಲಿದೆ. ಮಾ.16ರಂದು ಮುಂಜಾನೆ 7ರಿಂದ ಗೌರಿ-ಗಾಯತ್ರಿ, ಶಿವ-ಗಾಯತ್ರಿ ಹವನವಾಹಿನಿಯ ಸಮಾರೋಪದ ಜೊತೆಗೆ ಶಿವ-ಪಾರ್ವತಿಯರ ಕಲ್ಯಾಣವನ್ನು ಹಮ್ಮಿಕೊಳ್ಳಲಾಗಿದೆ. ಮುಂಜಾನೆ 7ಕ್ಕೆ ಹವನ ಆರಂಭಗೊಳ್ಳುವುದು. 9ರಿಂದ ವಿಉಮಾಕಾಂತ ಭಟ್ಟ ಮೇಲುಕೋಟೆಯವರಿಂದ ಗೌರಿ-ಗಾಯತ್ರಿ ಕುರಿತು ಉಪನ್ಯಾಸ ನಡೆಯುವದು. 10.30ಕ್ಕೆ ಹವನದ ಪೂರ್ಣಾಹುತಿ, 11ರಿಂದ ವೈದಿಕ ಸನ್ಮಾನ ನಡೆಯುವದು. ಶ್ರೀ ಕ್ಷೇತ್ರ ಹೊರನಾಡುವಿನ ಧರ್ಮಕರ್ತ ಡಾ ಭೀಮೇಶ್ವರ ಜೋಶಿ ಅಧ್ಯಕ್ಷತೆ ವಹಿಸಲಿದ್ದು, ಅಭ್ಯಾಗತರಾಗಿ ಸಾಮಾಜಿಕ ಕಾರ್ಯಕರ್ತ ಸುಬ್ರಾಯ ಭಟ್ಟ ಗಡಿಹಿತ್ಲು, ಶಿವರಾಮ ಡಿ.ಭಟ್ಟ ಹಿರಿಕೈ ಉಪಸ್ಥಿತರಿರುವರು. ಮಧ್ಯಾಹ್ನ 12ರಿಂದ ಡಾ ಭೀಮೇಶ್ವರ ಜೋಶಿಯವರಿಂದ ದಾನಿಗಳಿಗೆ ಗೌರವ ಸಮರ್ಪಣೆ ನಡೆಯಲಿದ್ದು ವಕೀಲರಾದ ಜೆ.ಪಿ.ಎನ್. ಹೆಗಡೆ ಹರಗಿ ಉಪಸ್ಥಿತರಿರುವರು. 2.30ರಿಂದ ಶಂಭುಶಿಷ್ಯ ಯಕ್ಷಗಾನ ಪ್ರತಿಷ್ಠಾನದವರಿಂದ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ನಡೆಯುವದು. ಸಂಜೆ 5ರಿಂದ ಸಮಾರೋಪ ನಡೆಯಲಿದ್ದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷರಾಗಿ, ಡಾ ಶಶಿಭೂಷಣ ಹೆಗಡೆ, ಎಸ್.ಬಿ. ಗೌಡರ್, ವಿ.ಎನ್. ನಾಯ್ಕ, ಅಭ್ಯಾಗತರಾಗಿ ಆರ್.ಎಮ್. ಹೆಗಡೆ ಬಾಳೇಸರ, ಡಾ ರವಿ ಹೆಗಡೆ ಹೂವಿನಮನೆ, ಆನಂದ ಐ.ನಾಯ್ಕ ಹೊಸೂರು, ಮಹೇಂದ್ರ ಕೆ.ಸ್ವಾಮಿ, ವಸಂತ ಹೆಗಡೆ ಉಪಸ್ಥಿತರಿರುವರು. ನೆಬ್ಬೂರು ನಾರಾಯಣ ಭಾಗ್ವತ, ವಿಉಮಾಕಾಂತ ಭಟ್ರನ್ನು ಸನ್ಮಾನಿಸಲಾಗುವದು. ಸಂಜೆ 6ರಿಂದ ಶಿವ-ಪಾರ್ವತಿ ಕಲ್ಯಾಣೋತ್ಸವ ನಡೆಯುವದು. ರಾತ್ರಿ 9ಕ್ಕೆ ಸಾರ್ವಜನಿಕ ಪ್ರಸಾದ ಭೋಜನ ಹಮ್ಮಿಕೊಳ್ಳಲಾಗಿದೆ.
ಮಂಜಗುಣಿ ಶ್ರೀನಿವಾಸ ಭಟ್ಟರ ನೇತೃತ್ವ, ಶ್ರೀಧರ ಭಟ್ಟ ಐನಕೈ, ಶೇಷಗಿರಿ ಭಟ್ಟ ಗುಂಜಗೋಡ, ಶ್ರೀ ದೇವಾಲಯದ ಅರ್ಚಕರ ಸಹಕಾರದಿಂದ ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಚಂದ್ರಗುತ್ತಿಯಲ್ಲೂ ಜಾತ್ರೆ:
ಹಲವು ಕಾರಣಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದ್ದ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬಾ ಜಾತ್ರೆ ಮಾರ್ಚ್ 10, 11 ಮತ್ತು 12ರಂದು ನಡೆಯಲಿದೆ. ನಿಷೇಧಕ್ಕೊಳಗಾಗಿದ್ದ ಜಾತ್ರೆ ಈ ಬಾರಿ ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ ಬೆತ್ತಲೆ ಸೇವೆ ಹೊರತುಪಡಿಸಿ ಇತರ ಧಾರ್ಮಿಕ ಆಚರಣೆಗಳಿಗೆ ಸಡಿಲಿಕೆ ನೀಡಿರುವುದರಿಂದ ನಡೆಯುತ್ತಿದೆ. 3 ಕಿ.ಮೀ. ದೂರದಲ್ಲಿರುವ ವರದಾ ನದಿಯಲ್ಲಿ ಸ್ನಾನ ಮಾಡಿ ಕಾಲು ನಡುಗೆಯಲ್ಲಿ ದೇವಿಯ ಗುಡಿಗೆ ಬಂದು ಸೇವೆ ಸಲ್ಲಿಸುವ, ಉರುಳುಸೇವೆ, ಉದ್ದಂಡ ಮತ್ತು ದೀಡ್ ನಮಸ್ಕಾರ, ಮೀಸಲುಬುತ್ತಿ ಸೇವೆ, ಕಿವಿ ಚುಚ್ಚುವುದು, ಕೇಶಮುಂಡನೆ, ಪಡ್ಲಿಗೆ ಪೂಜೆ ಮೊದಲಾದ ಆಚರಣೆಗಳು ನಡೆಯುತ್ತವೆ.

ಕರುನಾಡಿನ ಪ್ರಸಿದ್ಧ ಮಾರಿ ಜಾತ್ರೆ ನೋಡಲು ಶಿರಸಿಗೆ ಬನ್ನಿ

ಕರುನಾಡಿನ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಮಾ.11ರಿಂದ ಆರಂಭಗೊಳ್ಳಲಿದೆ. ಮಾ.11ರಿಂದ ಜಾತ್ರೆಯ ಕಲ್ಯಾಣ ಪ್ರತಿಷ್ಠೆ, 12ಕ್ಕೆ ರಥೋತ್ಸವ ನಡೆಯಲಿದೆ. ಜ.22ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚುವುದರಿಂದ ಆರಂಭಗೊಂಡ ಕಾರ್ಯಕ್ರಮಗಳು ಪೂರ್ವ ದಿಕ್ಕಿಗೆ ಮೊದಲ ಹೊರಬೀಡು, ಉತ್ತರ ದಿಕ್ಕಿಗೆ ಎರಡನೇ ಹೊರಬೀಡು, ಪೂರ್ವ ದಿಕ್ಕಿಗೆ ಮೂರನೇ ಹೊರಬೀಡು, ಉತ್ತರ ದಿಕ್ಕಿಗೆ ನಾಲ್ಕನೇ ಹೊರಬೀಡು ಮುಗಿದು ರಥದ ಮರಕ್ಕೆ ಕಚ್ಚು ಹಾಕುವ ಕಾರ್ಯ ಕೂಡ ನಡೆದಿದೆ. ಮಾ.4ರಂದು ದೇವಿಯ ರಥೋತ್ಸವಕ್ಕೆ ಬಳಸುವ ರಥಕ್ಕೆ ಮರ ತರುವ ಕಾರ್ಯ ನಡೆದಿದೆ. ಅಂಕೆಯ ಹೊರಬೀಡು ಅದೇ ದಿನ ರಾತ್ರಿ ನಡೆದಿದೆ.
ಮಾ.5ರ ಬೆಳಗ್ಗೆ 10ರಿಂದ 11:13ರೊಳಗೆ ಅಂಕೆ ಹಾಕುವದು ಹಾಗೂ ಶ್ರೀದೇವಿಯ ವಿಗ್ರಹ ವಿಸರ್ಜನೆ ನಡೆದಿದೆ. ಭೂತರಾಜನಲ್ಲೇ ವಿಶೇಷ ಪೂಜೆಗಳು ಸಲ್ಲಿಕೆಯಾಗಿವೆ. ದೇವಾಲಯವನ್ನು ಮಾ.30ರ ಯುಗಾದಿ ದಿನದಂದು ಪುನಃ ತೆರೆಯಲಾಗುತ್ತದೆ. ಮಾ.19ರ ಬೆಳಿಗ್ಗೆ 10:30ರ ವೇಳೆ ಗದ್ದುಗೆಯಿಂದ ದೇವಿ ಏಳುತ್ತಾಳೆ. ಜಯ ಸಂವತ್ಸರದ ಚೈತ್ರ ಶುದ್ಧ ಪ್ರತಿಪದೆ ಮಾ.31ರ ಯುಗಾದಿಗೆ ದೇವಿ ಪುನಃ ಪ್ರತಿಷ್ಠಾಪನೆಗೊಂಡು ದೇವಾಲಯದಲ್ಲಿ ಪೂಜೆ ಸ್ವೀಕರಿಸಲಿದ್ದಾಳೆ.
ವಿಶೇಷ ಬಸ್ ವ್ಯವಸ್ಥೆ:
ಾತ್ರೆ ಹಿನ್ನೆಲೆಯಲ್ಲಿ ನಾಡಿನ ವಿವಿಧೆಡೆಯಿಂದ ನೂರಾರು ಹೆಚ್ಚುವರಿ ಬಸ್ಸುಗಳು ಶಿರಸಿ ಕಡೆ ಮುಖ ಮಾಡಿ ಓಡಲಿವೆ. ಜಾತ್ರೆಗಾಗಿ ಹೊಸ ಬಸ್ ನಿಲ್ದಾಣದಿಂದ ಸಂಪೂರ್ಣ ಸಂಚಾರ ವ್ಯವಸ್ಥೆ ಆರಂಭಗೊಂಡಿದೆ. ಹಳೆ ಬಸ್ ನಿಲ್ದಾಣ ಖಾಲಿ ಆಗಿದ್ದು, ಸಂಸ್ಥೆಯೇ ಟೆಂಡರ್ ಕರೆದು ಅಂಗಡಿಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಚಕ್ರದಲ್ಲಿ ದೋಷ ಅರ್ಧಕ್ಕೇ ನಿಂತಿತು ರಥ

ಶಿವರಾತ್ರಿ ನಿಮಿತ್ತ ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ನಡೆದ ಮಹಾರಥೋತ್ಸವದ ಸಂದರ್ಭದಲ್ಲಿ ರಥದ ಚಕ್ರದಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ರಥ ಮುಂದಕ್ಕೆ ಚಲಿಸದೇ ಅರ್ಧಧಾರಿಯಲ್ಲೇ ನಿಂತಿತು. ರಥಕ್ಕೆ ಕಟ್ಟಲಾಗಿದ್ದ ಅತಿ ಉದ್ದದ ಹಗ್ಗವನ್ನು ಭಕ್ತಾದಿಗಳು ಏಕಪ್ರಕಾರ ಎಳೆಯಲು ಆರಂಭಿಸಿದಾಗ ಬಲಬದಿಯ ಚಕ್ರದಲ್ಲಿ ಕಟಕಟ ಸಪ್ಪಳ ಬರುತ್ತಿರುವುದನ್ನು ಗಮನಿಸಿದ ಸೇವಾಕರ್ತೃ ಹಾಲಕ್ಕಿ ಒಕ್ಕಲಿಗ ಈ ಬಗ್ಗೆ ಎಚ್ಚರಿಸಿದರು. ಆದಾಗ್ಯೂ ಭಕ್ತಾದಿಗಳು ರಥವನ್ನು ಎಳೆಯುತ್ತಲೇ ಮುಂದುವರಿದಿದ್ದರಿಂದ ಚಕ್ರದ ಮೇಲೆ ಒತ್ತಡ ಹೆಚ್ಚಾಗಿ ರಥ ಥಟ್ಟನೆ ನಿಂತಿತು. ಮುಂದೆ ಎಳೆಯಲು ಪ್ರಯತ್ನಿಸಿದರೂ ಸಾಗದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು.
ರಥೋತ್ಸವ ವಿಜೃಂಭಣೆಯಿಂದ ಆರಂಭಗೊಂಡರೂ, ರಥ ಚಕ್ರದಲ್ಲಿನ ದೋಷದಿಂದಾಗಿ ಬೀದಿಯ ಮಧ್ಯಭಾಗದಲ್ಲಿ ನಿಂತಿತು. ರಥ ಸಾಗದಿದ್ದರೂ ಪಲ್ಲಕ್ಕಿ ಉತ್ಸವ ನಡೆಸಿ ಧಾರ್ಮಿಕ ಆಚರಣೆಗಳನ್ನು ಸಂಪನ್ನಗೊಳಿಸಲಾಯಿತು. ಈ ವೇಳೆ ಗುಂಪೊಂದರ ಕೆಲವರು ದೇವಾಲಯದ ಆಡಳಿತ ಮಂಡಳಿ ಸದಸ್ಯರನ್ನು ತರಾಟೆಗೆ ಮುಂದಾದಾಗ ಕೆಲಕಾಲ ಗೊಂದಲದ ವಾತಾವರಣ
ನಿರ್ಮಾಣಗೊಂಡಿತ್ತು. ಆಗ ಕೆಲ ಸಮಯ ನಡೆದ ವಾಗ್ವಾದ, ಗೊಂದಲಗಳನ್ನು ಪೊಲೀಸರು ಮಧ್ಯಪ್ರವೇಶಿಸಿ ತಿಳಿಗೊಳಿಸಿದರು. ಈ ಆಕಸ್ಮಿಕಕ್ಕೆ ಶಾಸೀಯ ವಿಧಿ-ವಿಧಾನಗಳಿಂದ ಶಾಂತಿ ಮಾಡಲು ಯೋಚಿಸಲಾಗಿದೆ. ಅವನ್ನು ಮಾಡಿ ಜಗತ್ತಿನ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಹಿಂದೆಯೂ ಒಮ್ಮೆ ಮಹಾರಥೋತ್ಸವ ಸಂದರ್ಭದಲ್ಲಿ ರಥವು ಚಕ್ರದಲ್ಲಿನ ದೋಷದಿಂದಾಗಿ ರಥಬೀದಿಯಲ್ಲಿಯೇ ನಿಂತಿತ್ತು. ಅದೇ ಪುನರಾವರ್ತನೆ ಗೊಂಡಿದೆ ಎನ್ನಲಾಗುತ್ತಿದೆ. ಆಗ ಕೆಲ ತಿಂಗಳುಗಳ ನಂತರ ರಥೋತ್ಸವವನ್ನು ನಡೆಸಲಾಗಿತ್ತು.

ಕರುಳು ಸೇರಿಸಿ ಹೊಲಿಗೆ ಹಾಕಿದ ವೈದ್ಯ ಮಹಾಶಯ

ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದ ಮುತ್ತಮ್ಮ ಕಡುಬಡವಳು. ತುತ್ತು ಅನ್ನಕ್ಕೂ ಪರದಾಡಬೇಕಾದ ಪರಿಸ್ಥಿತಿ ಅವರದು. ತಮ್ಮ ಸಂಸಾರಕ್ಕೆ ಇನ್ನೋರ್ವ ಸದಸ್ಯ ಸೇರಿಕೊಳ್ಳಲಿದ್ದಾನೆ ಎಂಬ ಕನಸು ಹೊತ್ತು ಡಿ. 2, 2013ರಂದು ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದ ಮುತ್ತಮ್ಮ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಅಡಿಯಿಟ್ಟಿದ್ದಳು. ಡಿ.15ರಂದು ಹೆರಿಗೆಯಾಯಿತು. ಸೀಜಿರಿಯನ್ ಮೂಲಕ ಹೆರಿಗೆ ಮಾಡಿಸುವಾಗ ಆಸ್ಪತ್ರೆಯ ವೈದ್ಯರು ಕರುಳು ಸೇರಿಸಿ ಹೊಲಿಗೆ ಹಾಕಿದ್ದಾರೆ.
ಶಸ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ ನಂತರದ ಕೆಲವೇ ದಿನಗಳಲ್ಲಿ ಆಕೆಯ ಬಳಿಯಿದ್ದ ಮಗುವನ್ನೂ ದೂರ ಮಾಡಿದ್ದಾರೆ. ಜೊತೆಗೆ ಚಿತ್ರದುರ್ಗದಿಂದ ದಾವಣಗೆರೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. 23 ವರ್ಷದ ಮುತ್ತಮ್ಮ ಅಂದಿನಿಂದ ಇಂದಿನವರೆಗೆ ಆಸ್ಪತ್ರೆಯಲ್ಲಿಯೇ ಇದ್ದಾರೆ. ಹೆರಿಗೆ ನಂತರ ಔಷಧಕ್ಕಾಗಿ ಇದ್ದಬದ್ದದ್ದನ್ನೂ ಕಳೆದುಕೊಂಡಿದ್ದಾರೆ. ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಆಸ್ಪತ್ರೆ ವೈದ್ಯರು, ಅಧೀಕ್ಷರು ಎಲ್ಲರ ಬಳಿ ನೆರವಿಗಾಗಿ ಅಂಗಲಾಚಿ ರೋಸಿ ಹೋಗಿದ್ದಾರೆ. ಇದರಿಂದಾಗಿ ಅವರು ನರಕಯಾತನೆ ಅನುಭವಿಸುತ್ತಿದ್ದಾರೆ. ಪ್ರತಿ ಕ್ಷಣವೂ ಮಾನಸಿಕ, ದೈಹಿಕ ಹಿಂಸೆ ಅನುಭವಿಸುತ್ತಿರುವ ಮುತ್ತಮ್ಮ ತೀವ್ರ ಘಾಸಿಗೊಗಳಗಾಗಿದ್ದಾರೆ. ಹೆರಿಗೆಗೂ ಮುನ್ನ 45 ಕೆಜಿ ಇದ್ದ ಆಕೆ ಜೀವಂತ ಶವದಂತಾಗಿದ್ದು, ಹಾಲಿ ದಾವಣಗೆರೆ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೈಪ್ ಮೂಲಕವೇ ಒಂದಿಷ್ಟು ಆಹಾರ, ನೀರು ಸೇವಿಸುತ್ತಾ ತನ್ನ ಹಸುಗೂಸು, ಕುಟುಂಬ ಸದಸ್ಯರನ್ನು ಸೇರುವ ಆಸೆಯಲ್ಲಿ ಜೀವ ಬಿಗಿ ಹಿಡಿದುಕೊಂಡಿದ್ದಾಳೆ.

ಕಾರವಾರ ಆಕಾಶವಾಣಿ ಕೇಂದ್ರಕ್ಕೀಗ 20 ವರ್ಷ

ಆಧುನಿಕತೆಯ ಭರಾಟೆಯಲ್ಲಿ ಆಕಾಶವಾಣಿಯ ಶಬ್ದ ಆಲಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಕಾರವಾರದ ಆಕಾಶವಾಣಿ ಕೇಂದ್ರ ತನ್ನ ಸೇವೆಯ ಎರಡು ದಶಕಗಳನ್ನು ಪೂರೈಸಿದೆ. 102.3 ಮೆಗಾಹರ್ಡ್ಸ್ ತರಂಗಾಂತರಗಳ ಮೇಲೆ ಕೇಳಲ್ಪಡುವ ಆಕಾಶವಾಣಿ ಸಾರ್ವಜನಿಕರ ಸೇವೆಗೆ ತನ್ನನ್ನು ಅರ್ಪಿಸಿಕೊಂಡಿದೆ.
ಪ್ರಾರಂಭದ ಅವಧಿಯಲ್ಲಿ ಕಾರವಾರದಲ್ಲಿ ಆಕಾಶವಾಣಿ ಕೇಂದ್ರ ಪ್ರಾರಂಭವಾದ ಸಂಗತಿ ಜನರನ್ನು ರೋಮಾಂಚನಗೊಳಿಸಿತ್ತು. 1994 ೆಬ್ರವರಿ 13ರಂದು ಮೂರು ಕಿಲೋವ್ಯಾಟ್ ಟ್ರಾನ್ಸ್ಮೀಟರ್ 300 ಅಡಿ ಎತ್ತರದ ಮೇಲಿಂದ ತನ್ನ ತರಂಗಗಳನ್ನು ಬಿತ್ತರಿಸಲು ಆರಂಭ ಮಾಡಿತು. ಎ್ಎಮ್ ಹೊಸ ತಂತ್ರಜ್ಞಾನವನ್ನು ಹೊತ್ತು ಈ ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಕಾಯ್ದಿಡುವ, ಪ್ರಸರಿಸುವ ರಾಜ್ಯದ ಇತರ ಆಕಾಶವಾಣಿಯ ಕೇಂದ್ರಗಳಿಂದಲೂ ಪ್ರಸಾರ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿತು.ಬಾನುಲಿಯಿಂದ ಪ್ರಸಾರವಾಗುವ ಕೃಷಿಗೆ ಸಂಬಂಧಪಟ್ಟ ಹೊಸ ಹೊಸ ಕಾರ್ಯಕ್ರಮ, ಅಡಿಕೆ, ಭತ್ತ, ತೆಂಗು ಮುಂತಾದವುಗಳ ಪಾಲನೆ ಪೋಷಣೆಯ ಬಗ್ಗೆ ಕೃಷಿ ವಿಜ್ಞಾನಿಗಳ ಸಂದರ್ಶನಗಳನ್ನು ವಿಸತವಾಗಿ ಬಿತ್ತರಿಸಿದೆ. ರೈತರ ಅನುಭವ ಕಥಾನಕಗಳನ್ನು ವರದಿ ಮಾಡಿದೆ. ಪ್ರಗತಿಪರ ರೈತರ ಯಶೋಗಾಥೆಗಳನ್ನು ಬಿತ್ತರಿಸಿದೆ. ಆಕಾಶವಾಣಿ ಹಬ್ಬದ ನಿಮಿತ್ತ 2012-13ರಲ್ಲಿ ಜಿಲ್ಲೆಯ ಹಲವು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರ ಪ್ರತಿಭೆಯನ್ನು ಬಿತ್ತರಿಸಿವೆ. ಗೌರೀಶ ಕಾಯ್ಕಿಣಿ, ಸುಕ್ರಿ ಬೊಮ್ಮ ಗೌಡ, ಜೋಗಿ ಬೀರಣ್ಣ ನಾಯಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ವಿಷ್ಣು ನಾಯ್ಕ, ಧರಣೇಂದ್ರ ಕುರುಕುರಿ, ಬಿ.ಎ. ಸನದಿ, ಜಯಂತ ಕಾಯ್ಕಿಣಿ ಹಾಗೂ ಮುಂತಾದವರ ಸಂದರ್ಶನಗಳನ್ನು ಆಕಾಶವಾಣಿ ಜನರಿಗೆ ತಲುಪಿಸಿದೆ. ಜಿಲ್ಲೆಯ ಹಲವಾರು ಪ್ರತಿಭೆಗಳಿಗೆ ಆಕಾಶವಾಣಿ ಅವಕಾಶ ಮಾಡಿಕೊಟ್ಟಿದೆ.
ಪ್ರಸ್ತುತ ಆಧುನಿಕ ಯುಗದಲ್ಲಿ ಟಿವಿ, ಇಂಟರ್ನೆಟ್ಗಳ ಮಧ್ಯದಲ್ಲಿ ಕಾರವಾರ ಆಕಾಶವಾಣಿಯಿಂದ ಪ್ರಸಾರವಾಗುವ ವಿವಿಧ ಕಾರ್ಯಕ್ರಮಗಳನ್ನು ಆಲಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದಂತಹ ಚೇತನ ನಾಯಕ, ಜಿ.ಕೆ. ರವೀಂದ್ರಕುಮಾರ, ಬಸು ಬೇವಿನಗಿಡದ, ದಿವಾಕರ ಹೆಗಡೆ, ಜಂಪಣ್ಣ ಹಾಗೂ ಇನ್ನಿತರ ಕವಿಗಳು ಆಕಾಶವಾಣಿ ಕೇಂದ್ರಕ್ಕೆ ಬಂದು ತೆರಳಿದ್ದಾರೆ.