ಕರುಳು ಸೇರಿಸಿ ಹೊಲಿಗೆ ಹಾಕಿದ ವೈದ್ಯ ಮಹಾಶಯ

ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದ ಮುತ್ತಮ್ಮ ಕಡುಬಡವಳು. ತುತ್ತು ಅನ್ನಕ್ಕೂ ಪರದಾಡಬೇಕಾದ ಪರಿಸ್ಥಿತಿ ಅವರದು. ತಮ್ಮ ಸಂಸಾರಕ್ಕೆ ಇನ್ನೋರ್ವ ಸದಸ್ಯ ಸೇರಿಕೊಳ್ಳಲಿದ್ದಾನೆ ಎಂಬ ಕನಸು ಹೊತ್ತು ಡಿ. 2, 2013ರಂದು ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದ ಮುತ್ತಮ್ಮ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಅಡಿಯಿಟ್ಟಿದ್ದಳು. ಡಿ.15ರಂದು ಹೆರಿಗೆಯಾಯಿತು. ಸೀಜಿರಿಯನ್ ಮೂಲಕ ಹೆರಿಗೆ ಮಾಡಿಸುವಾಗ ಆಸ್ಪತ್ರೆಯ ವೈದ್ಯರು ಕರುಳು ಸೇರಿಸಿ ಹೊಲಿಗೆ ಹಾಕಿದ್ದಾರೆ.
ಶಸ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ ನಂತರದ ಕೆಲವೇ ದಿನಗಳಲ್ಲಿ ಆಕೆಯ ಬಳಿಯಿದ್ದ ಮಗುವನ್ನೂ ದೂರ ಮಾಡಿದ್ದಾರೆ. ಜೊತೆಗೆ ಚಿತ್ರದುರ್ಗದಿಂದ ದಾವಣಗೆರೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. 23 ವರ್ಷದ ಮುತ್ತಮ್ಮ ಅಂದಿನಿಂದ ಇಂದಿನವರೆಗೆ ಆಸ್ಪತ್ರೆಯಲ್ಲಿಯೇ ಇದ್ದಾರೆ. ಹೆರಿಗೆ ನಂತರ ಔಷಧಕ್ಕಾಗಿ ಇದ್ದಬದ್ದದ್ದನ್ನೂ ಕಳೆದುಕೊಂಡಿದ್ದಾರೆ. ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಆಸ್ಪತ್ರೆ ವೈದ್ಯರು, ಅಧೀಕ್ಷರು ಎಲ್ಲರ ಬಳಿ ನೆರವಿಗಾಗಿ ಅಂಗಲಾಚಿ ರೋಸಿ ಹೋಗಿದ್ದಾರೆ. ಇದರಿಂದಾಗಿ ಅವರು ನರಕಯಾತನೆ ಅನುಭವಿಸುತ್ತಿದ್ದಾರೆ. ಪ್ರತಿ ಕ್ಷಣವೂ ಮಾನಸಿಕ, ದೈಹಿಕ ಹಿಂಸೆ ಅನುಭವಿಸುತ್ತಿರುವ ಮುತ್ತಮ್ಮ ತೀವ್ರ ಘಾಸಿಗೊಗಳಗಾಗಿದ್ದಾರೆ. ಹೆರಿಗೆಗೂ ಮುನ್ನ 45 ಕೆಜಿ ಇದ್ದ ಆಕೆ ಜೀವಂತ ಶವದಂತಾಗಿದ್ದು, ಹಾಲಿ ದಾವಣಗೆರೆ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೈಪ್ ಮೂಲಕವೇ ಒಂದಿಷ್ಟು ಆಹಾರ, ನೀರು ಸೇವಿಸುತ್ತಾ ತನ್ನ ಹಸುಗೂಸು, ಕುಟುಂಬ ಸದಸ್ಯರನ್ನು ಸೇರುವ ಆಸೆಯಲ್ಲಿ ಜೀವ ಬಿಗಿ ಹಿಡಿದುಕೊಂಡಿದ್ದಾಳೆ.