ಚಕ್ರದಲ್ಲಿ ದೋಷ ಅರ್ಧಕ್ಕೇ ನಿಂತಿತು ರಥ

ಶಿವರಾತ್ರಿ ನಿಮಿತ್ತ ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ನಡೆದ ಮಹಾರಥೋತ್ಸವದ ಸಂದರ್ಭದಲ್ಲಿ ರಥದ ಚಕ್ರದಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ರಥ ಮುಂದಕ್ಕೆ ಚಲಿಸದೇ ಅರ್ಧಧಾರಿಯಲ್ಲೇ ನಿಂತಿತು. ರಥಕ್ಕೆ ಕಟ್ಟಲಾಗಿದ್ದ ಅತಿ ಉದ್ದದ ಹಗ್ಗವನ್ನು ಭಕ್ತಾದಿಗಳು ಏಕಪ್ರಕಾರ ಎಳೆಯಲು ಆರಂಭಿಸಿದಾಗ ಬಲಬದಿಯ ಚಕ್ರದಲ್ಲಿ ಕಟಕಟ ಸಪ್ಪಳ ಬರುತ್ತಿರುವುದನ್ನು ಗಮನಿಸಿದ ಸೇವಾಕರ್ತೃ ಹಾಲಕ್ಕಿ ಒಕ್ಕಲಿಗ ಈ ಬಗ್ಗೆ ಎಚ್ಚರಿಸಿದರು. ಆದಾಗ್ಯೂ ಭಕ್ತಾದಿಗಳು ರಥವನ್ನು ಎಳೆಯುತ್ತಲೇ ಮುಂದುವರಿದಿದ್ದರಿಂದ ಚಕ್ರದ ಮೇಲೆ ಒತ್ತಡ ಹೆಚ್ಚಾಗಿ ರಥ ಥಟ್ಟನೆ ನಿಂತಿತು. ಮುಂದೆ ಎಳೆಯಲು ಪ್ರಯತ್ನಿಸಿದರೂ ಸಾಗದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು.
ರಥೋತ್ಸವ ವಿಜೃಂಭಣೆಯಿಂದ ಆರಂಭಗೊಂಡರೂ, ರಥ ಚಕ್ರದಲ್ಲಿನ ದೋಷದಿಂದಾಗಿ ಬೀದಿಯ ಮಧ್ಯಭಾಗದಲ್ಲಿ ನಿಂತಿತು. ರಥ ಸಾಗದಿದ್ದರೂ ಪಲ್ಲಕ್ಕಿ ಉತ್ಸವ ನಡೆಸಿ ಧಾರ್ಮಿಕ ಆಚರಣೆಗಳನ್ನು ಸಂಪನ್ನಗೊಳಿಸಲಾಯಿತು. ಈ ವೇಳೆ ಗುಂಪೊಂದರ ಕೆಲವರು ದೇವಾಲಯದ ಆಡಳಿತ ಮಂಡಳಿ ಸದಸ್ಯರನ್ನು ತರಾಟೆಗೆ ಮುಂದಾದಾಗ ಕೆಲಕಾಲ ಗೊಂದಲದ ವಾತಾವರಣ
ನಿರ್ಮಾಣಗೊಂಡಿತ್ತು. ಆಗ ಕೆಲ ಸಮಯ ನಡೆದ ವಾಗ್ವಾದ, ಗೊಂದಲಗಳನ್ನು ಪೊಲೀಸರು ಮಧ್ಯಪ್ರವೇಶಿಸಿ ತಿಳಿಗೊಳಿಸಿದರು. ಈ ಆಕಸ್ಮಿಕಕ್ಕೆ ಶಾಸೀಯ ವಿಧಿ-ವಿಧಾನಗಳಿಂದ ಶಾಂತಿ ಮಾಡಲು ಯೋಚಿಸಲಾಗಿದೆ. ಅವನ್ನು ಮಾಡಿ ಜಗತ್ತಿನ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಹಿಂದೆಯೂ ಒಮ್ಮೆ ಮಹಾರಥೋತ್ಸವ ಸಂದರ್ಭದಲ್ಲಿ ರಥವು ಚಕ್ರದಲ್ಲಿನ ದೋಷದಿಂದಾಗಿ ರಥಬೀದಿಯಲ್ಲಿಯೇ ನಿಂತಿತ್ತು. ಅದೇ ಪುನರಾವರ್ತನೆ ಗೊಂಡಿದೆ ಎನ್ನಲಾಗುತ್ತಿದೆ. ಆಗ ಕೆಲ ತಿಂಗಳುಗಳ ನಂತರ ರಥೋತ್ಸವವನ್ನು ನಡೆಸಲಾಗಿತ್ತು.