ಇಟಗಿಯ ರಾಮೇಶ್ವರ ರಥೋತ್ಸವಕ್ಕೆ ಬನ್ನಿ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಇಟಗಿಯಲ್ಲಿ ಶ್ರೀ ರಾಮೇಶ್ವರ ದೇವರ ರಥೋತ್ಸವದ ಧಾರ್ಮಿಕ ವಿಧಿ-ವಿಧಾನಗಳು ಆರಂಭಗೊಂಡಿದ್ದು, ಮಾ.10ರಂದು ಮಹಾರಥೋತ್ಸವ ನಡೆಯಲಿದೆ. ಮಾ.13ರಂದು ಶತರುದ್ರ ಚಂಡಿಹವನ ನಡೆಯುವುದು. ಶ್ರೀ ರಾಮೇಶ್ವರ ದೇವಸ್ಥಾನದ ವತಿಯಿಂದ ಶಿವ-ಪಾರ್ವತಿ ಕಲ್ಯಾಣೋತ್ಸವ ಮತ್ತು ಹವನವಾಹಿನಿ ಸಮಾರೋಪ ಮಾ.16ರಂದು ಆಯೋಜಿಸಲಾಗಿದೆ. ತಿಹಾಸಿಕ ಪ್ರಸಿದ್ಧಿಯ ಶ್ರೀ ರಾಮೇಶ್ವರ ದೇವಾಲಯವು ಘಟ್ಟದ ಮೇಲಿನ ಗೋಕರ್ಣವೆಂದೇ ಹೆಸರಾಗಿದೆ. ಲೋಕಕಲ್ಯಾಣಾರ್ಥ ಕಳೆದ ಯುಗಾದಿಯಿಂದ ಪ್ರತಿ ಹುಣ್ಣಿಮೆಯಂದು ಹವನ ಮಾಡುತ್ತಿದ್ದು ಈಗಾಗಲೇ 14 ಹವನಗಳು ಮುಗಿದಿದ್ದು ಹೋಳಿ ಹುಣ್ಣಿಮೆಯಂದು ಮುಕ್ತಾಯಗೊಳ್ಳಲಿದೆ. ಮಾ.16ರಂದು ಮುಂಜಾನೆ 7ರಿಂದ ಗೌರಿ-ಗಾಯತ್ರಿ, ಶಿವ-ಗಾಯತ್ರಿ ಹವನವಾಹಿನಿಯ ಸಮಾರೋಪದ ಜೊತೆಗೆ ಶಿವ-ಪಾರ್ವತಿಯರ ಕಲ್ಯಾಣವನ್ನು ಹಮ್ಮಿಕೊಳ್ಳಲಾಗಿದೆ. ಮುಂಜಾನೆ 7ಕ್ಕೆ ಹವನ ಆರಂಭಗೊಳ್ಳುವುದು. 9ರಿಂದ ವಿಉಮಾಕಾಂತ ಭಟ್ಟ ಮೇಲುಕೋಟೆಯವರಿಂದ ಗೌರಿ-ಗಾಯತ್ರಿ ಕುರಿತು ಉಪನ್ಯಾಸ ನಡೆಯುವದು. 10.30ಕ್ಕೆ ಹವನದ ಪೂರ್ಣಾಹುತಿ, 11ರಿಂದ ವೈದಿಕ ಸನ್ಮಾನ ನಡೆಯುವದು. ಶ್ರೀ ಕ್ಷೇತ್ರ ಹೊರನಾಡುವಿನ ಧರ್ಮಕರ್ತ ಡಾ ಭೀಮೇಶ್ವರ ಜೋಶಿ ಅಧ್ಯಕ್ಷತೆ ವಹಿಸಲಿದ್ದು, ಅಭ್ಯಾಗತರಾಗಿ ಸಾಮಾಜಿಕ ಕಾರ್ಯಕರ್ತ ಸುಬ್ರಾಯ ಭಟ್ಟ ಗಡಿಹಿತ್ಲು, ಶಿವರಾಮ ಡಿ.ಭಟ್ಟ ಹಿರಿಕೈ ಉಪಸ್ಥಿತರಿರುವರು. ಮಧ್ಯಾಹ್ನ 12ರಿಂದ ಡಾ ಭೀಮೇಶ್ವರ ಜೋಶಿಯವರಿಂದ ದಾನಿಗಳಿಗೆ ಗೌರವ ಸಮರ್ಪಣೆ ನಡೆಯಲಿದ್ದು ವಕೀಲರಾದ ಜೆ.ಪಿ.ಎನ್. ಹೆಗಡೆ ಹರಗಿ ಉಪಸ್ಥಿತರಿರುವರು. 2.30ರಿಂದ ಶಂಭುಶಿಷ್ಯ ಯಕ್ಷಗಾನ ಪ್ರತಿಷ್ಠಾನದವರಿಂದ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ನಡೆಯುವದು. ಸಂಜೆ 5ರಿಂದ ಸಮಾರೋಪ ನಡೆಯಲಿದ್ದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷರಾಗಿ, ಡಾ ಶಶಿಭೂಷಣ ಹೆಗಡೆ, ಎಸ್.ಬಿ. ಗೌಡರ್, ವಿ.ಎನ್. ನಾಯ್ಕ, ಅಭ್ಯಾಗತರಾಗಿ ಆರ್.ಎಮ್. ಹೆಗಡೆ ಬಾಳೇಸರ, ಡಾ ರವಿ ಹೆಗಡೆ ಹೂವಿನಮನೆ, ಆನಂದ ಐ.ನಾಯ್ಕ ಹೊಸೂರು, ಮಹೇಂದ್ರ ಕೆ.ಸ್ವಾಮಿ, ವಸಂತ ಹೆಗಡೆ ಉಪಸ್ಥಿತರಿರುವರು. ನೆಬ್ಬೂರು ನಾರಾಯಣ ಭಾಗ್ವತ, ವಿಉಮಾಕಾಂತ ಭಟ್ರನ್ನು ಸನ್ಮಾನಿಸಲಾಗುವದು. ಸಂಜೆ 6ರಿಂದ ಶಿವ-ಪಾರ್ವತಿ ಕಲ್ಯಾಣೋತ್ಸವ ನಡೆಯುವದು. ರಾತ್ರಿ 9ಕ್ಕೆ ಸಾರ್ವಜನಿಕ ಪ್ರಸಾದ ಭೋಜನ ಹಮ್ಮಿಕೊಳ್ಳಲಾಗಿದೆ.
ಮಂಜಗುಣಿ ಶ್ರೀನಿವಾಸ ಭಟ್ಟರ ನೇತೃತ್ವ, ಶ್ರೀಧರ ಭಟ್ಟ ಐನಕೈ, ಶೇಷಗಿರಿ ಭಟ್ಟ ಗುಂಜಗೋಡ, ಶ್ರೀ ದೇವಾಲಯದ ಅರ್ಚಕರ ಸಹಕಾರದಿಂದ ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಚಂದ್ರಗುತ್ತಿಯಲ್ಲೂ ಜಾತ್ರೆ:
ಹಲವು ಕಾರಣಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದ್ದ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬಾ ಜಾತ್ರೆ ಮಾರ್ಚ್ 10, 11 ಮತ್ತು 12ರಂದು ನಡೆಯಲಿದೆ. ನಿಷೇಧಕ್ಕೊಳಗಾಗಿದ್ದ ಜಾತ್ರೆ ಈ ಬಾರಿ ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ ಬೆತ್ತಲೆ ಸೇವೆ ಹೊರತುಪಡಿಸಿ ಇತರ ಧಾರ್ಮಿಕ ಆಚರಣೆಗಳಿಗೆ ಸಡಿಲಿಕೆ ನೀಡಿರುವುದರಿಂದ ನಡೆಯುತ್ತಿದೆ. 3 ಕಿ.ಮೀ. ದೂರದಲ್ಲಿರುವ ವರದಾ ನದಿಯಲ್ಲಿ ಸ್ನಾನ ಮಾಡಿ ಕಾಲು ನಡುಗೆಯಲ್ಲಿ ದೇವಿಯ ಗುಡಿಗೆ ಬಂದು ಸೇವೆ ಸಲ್ಲಿಸುವ, ಉರುಳುಸೇವೆ, ಉದ್ದಂಡ ಮತ್ತು ದೀಡ್ ನಮಸ್ಕಾರ, ಮೀಸಲುಬುತ್ತಿ ಸೇವೆ, ಕಿವಿ ಚುಚ್ಚುವುದು, ಕೇಶಮುಂಡನೆ, ಪಡ್ಲಿಗೆ ಪೂಜೆ ಮೊದಲಾದ ಆಚರಣೆಗಳು ನಡೆಯುತ್ತವೆ.