ಬಿಸಳನೂರಲ್ಲಿ ಯುಗಾದಿಗೆ ಮಾಡುತ್ತಾರೆ ರಾಗಿ ಶ್ಯಾವಿಗೆ ಸವಿ

ಹೊಸ ವಸಂತದ ಚಿಲುಮೆಯನ್ನು ಹೊತ್ತು ತರುವ ಯುಗಾದಿ ಸಂಭ್ರಮಕ್ಕೆ ಶ್ಯಾವಿಗೆ ಸವಿ ಅಗತ್ಯ. ಅದರಲ್ಲೂ ಯುಗಾದಿಯ ಸಡಗರಕ್ಕೆಂದೇ ಸಿದ್ಧಗೊಳ್ಳುವ ಶ್ಯಾವಿಗೆ ಬಗ್ಗೆ ಪುರಾಣಗಳಲ್ಲೂ ಉಲ್ಲೇಖವಿದ್ದು, ಇದೊಂದು ಸಾಂಪ್ರದಾಯಿಕ ಭೋಜನ ಪದ್ದತಿಯಾಗಿದೆ. ಇಂದಿನ ಆಧುನಿಕತೆಯ ಮಧ್ಯದಲ್ಲೂ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬಿಳಸನೂರಿನಲ್ಲಿ ಯುಗಾದಿ ಹಬ್ಬದಂದು ಗ್ರಾಮಸ್ಥರೆಲ್ಲಾ ಒಟ್ಟಾಗಿ ರಾಗಿ ಶ್ಯಾವಿಗೆ ಮಾಡಿಕೊಂಡು ಊಟ ಮಾಡುವುದು ಮಾಸದ ಗ್ರಾಮೀಣ ಸೊಗಡಿಗೆ ಸಾಕ್ಷಿಯಾಗಿದೆ.
ಹಿಂದೆ ಯುಗಾದಿ ಹಬ್ಬ ಸಮೀಪಿಸುತ್ತಿದ್ದಂತೆ ಓಣಿಯ ಹೆಣ್ಣುಮಕ್ಕಳೆಲ್ಲಾ ಒಟ್ಟಾಗಿ, ಶ್ಯಾವಿಗೆ ಮಣೆ, ಕೋಲುಗಳನ್ನು ಸ್ವಚ್ಛಗೊಳಿಸಿಕೊಂಡು ಗೋದಿ ಹಿಟ್ಟಿನ ಕಣಕ ಮಾಡಿಕೊಂಡು, ಗೌಡರ ಮನೆಯ ವಿಶಾಲ ಕಟ್ಟೆ ಸೇರಿದಂತೆ ಗ್ರಾಮದ ನಾಲ್ಕ್ತ್ರೈದು ಕಡೆ ಶ್ಯಾವಿಗೆ ಉದ್ದುತಿದ್ದರು. ಸಾಲಾಗಿ ಹಾಕಿದ ದೊಡ್ಡ ಮಣೆಗಳ ಮೇಲೆ ಕುದುರೆ ಸವಾರರಂತೆ ಕುಳಿತು ಶ್ಯಾವಿಗೆ ಉದ್ದುವಾಗ ಹೊಮ್ಮುವ ಬಳೆಗಳ ಸೊಗಸಾದ ನಾದ, ಅಜ್ಜಿಯರ ಹಾಡು, ಕಥೆ, ಮಹಿಳೆಯರ ಪೋಲಿ ಮಾತು, ಅವರಿವರ ಕುರಿತು ಅಂತೆ-ಕಂತೆಗಳ ಸಂತೆಯೊಂದಿಗೆ ದಾರದಂತೆ ತೆಳ್ಳನೆಯ ಬಿಳಿ ಶ್ಯಾವಿಗೆ ನೇಯಲಾಗುತ್ತಿತ್ತು. ಉದ್ದನೆಯ ಕೋಲಿನ ಮೇಲೆ ನೇಯ್ದ ಶ್ಯಾವಿಗೆಯನ್ನು, ಸಮೀಪದ ಕಣದಲ್ಲಿ ಒಣಗಿಸುವುದು ಮಕ್ಕಳ ಜವಾಬ್ದಾರಿ. ಹಕ್ಕಿ-ಪಕ್ಷಿ, ದನ-ಕರು, ಗಾಳಿ-ಧೂಳಿಂದ ರಕ್ಷಿಸಲು ಕೋಲು, ದಬ್ಬಿ, ಹಿಡಿದ ಮಕ್ಕಳ ಗುಂಪಿಗೂ ಇದೊಂದು ಸಂಭ್ರಮದ ಕಾಯಕವಾಗುತ್ತಿತ್ತು. ದರೆ, ಮಷೀನ್ ಶ್ಯಾವಿಗೆ ಬಂದ ಮೇಲೆ ಕಷ್ಟದ ಉದ್ದು ಶ್ಯಾವಿಗೆ ತಯಾರಿಕೆ ಕೈ ಬಿಡಲಾಗಿದೆ. ಮೊದಲು ದಾವಣಗೆರೆಗೆ ತೆರಳಿ ಶ್ಯಾವಿಗೆ ತರಬೇಕಿತ್ತು. ಈಗಂತೂ ಎಲ್ಲಾ ಕಿರಾಣಿ ಸ್ಟೋರ್ಗಳಲ್ಲೂ ರೆಡಿಮೇಡ್ ಶ್ವಾವಿಗೆ ಸುಲಭವಾಗಿ ಲಭ್ಯವಿದ್ದು, ಶ್ಯಾವಿಗೆ ಮಣೆ-ಕೋಲು ಕಣ್ಮರೆಯಾಗಿವೆ. ಜೊತೆಗೆ, ಸಮಯದ ಕೊರತೆ, ಒತ್ತಡದ ಜೀವನ ಪದ್ಧತಿಯಿಂದ ವಾರಗಟ್ಟಲೆ ಸಮಯ ಬೇಡುತ್ತಿದ್ದ ಉದ್ದು ಶ್ಯಾವಿಗೆಗೆ ಬ್ರೇಕ್ ಬಿದ್ದರೂ, ಒಂದೇ ದಿನದಲ್ಲಿ ತಯಾರಿಸಬಹುದಾದ ಒತ್ತು ಶ್ಯಾವಿಗೆ ತಯಾರಿ ಮಾತ್ರ ಹಾಗೇ ಉಳಿದು ಬಂದಿದೆ.
ಶ್ಯಾವಿಗೆ ತಿನ್ನಲು ರುಚಿ:
ದೊಡ್ಡ ಒತ್ತು ಮಣೆಯಲ್ಲಿ ನೇಯುವ ರಾಗಿ ಹಿಟ್ಟಿನ ಈ ಶ್ಯಾವಿಗೆಯನ್ನು ಬೇವು-ಬೆಲ್ಲ (ಬೆಲ್ಲದ ಹಾಲು) ಬೆರೆಸಿಕೊಂಡು ತಿನ್ನುವುದು ಬಾಯಿಗೆ ಬಲು ರುಚಿ, ದೇಹಕ್ಕೂ ತಂಪು, ಜೀರ್ಣ ಕ್ರಿಯೆಗಂತೂ ಸಿದ್ಧ ಔಷಧ. ಹಬ್ಬಕ್ಕೆ ಮೂರ್ನಾಲ್ಕು ದಿನವಿದ್ದಾಗ ರಾಗಿ ತಂದು ಸ್ವಚ್ಛಗೊಳಿಸಿ, ಅರ್ಧ ದಿನ ನೆನೆಸಿ, ಅರ್ಧ ದಿನ ನೆರಳಲ್ಲಿ ಒಣಗಿಸಿ, ಗಿರಿಣಿಯಲ್ಲಿ ಹಿಟ್ಟು ಮಾಡಿಸಿದಾಗ ಅದಕ್ಕೆ ಗ್ರಾಮ್ಯ ಭಾಷೆಯಲ್ಲಿ ವಡ್ಡರಾಗಿ ಹಿಟ್ಟು ಎನ್ನಲಾಗುತ್ತದೆ. ಹಬ್ಬದ ದಿನದಂದು ದೊಡ್ಡ ಪಾತ್ರೆಯ ಕುದಿಯುವ ನೀರಿನ ಮೇಲೆ ಹಿಟ್ಟು ಸುರುವಿ, ಮುಚ್ಚಳ ಮುಚ್ಚಿ ಕುದಿ ನೀರು ಹಾಗೂ ಆವಿಯಲ್ಲಿ ಬೇಯಿಸಲಾಗುತ್ತದೆ. ನಂತರ ಹೊರತೆಗೆದು ದೊಡ್ಡ ಮುಟ್ಟಿಗೆ ಗಾತ್ರದ ಉಂಡೆ ಮಾಡಿ, ಅವುಗಳನ್ನು ಮತ್ತೆ ನೀರಿನಲ್ಲಿ ಹದವಾಗಿ ಬೇಯಿಸಿ, ಅವುಗಳಿಗೆ ಸಿದ್ದಪ್ಪ ಎಂದು ಕರೆಯಲಾಗುತ್ತದೆ. ಸಿದ್ದಪ್ಪಗಳನ್ನು (ಉಂಡೆ) ಮರದ ಮಧ್ಯ ಭಾಗದಲ್ಲಿದ್ದ ಅಚ್ಚಿನಲ್ಲಿ ತುಂಬಿ ಮೇಲಿರುವ ಮರದ ಹಿಡಿಕೆಯನ್ನು ಬಿಗಿಯಾಗಿ ಕೆಳಗೆ ಒತ್ತಿದಾಗ, ಬಿಸಿ ಬಿಸಿ ಶ್ಯಾವಿಗೆಯು ಎಳೆ ಎಳೆಯಾಗಿ ತಳದಲ್ಲಿ ಬೀಳುತ್ತವೆ.
ವಿಶಿಷ್ಠ ರಾಗಿಯ ಒತ್ತು ಶ್ಯಾವಿಗೆಯನ್ನು, ದೂರದೂರಿನ ಮಗಳ ಮನೆಗೆ, ಬಂಧುಗಳ ಮನೆಗೂ ಒಯ್ದು ಕೊಡಲಾಗುತ್ತದೆ. ಯಾವುದೇ ಜಾತಿ-ಅಂತಸ್ತು ಬೇಧವಿಲ್ಲದೆ ಗ್ರಾಮಸ್ಥರೆಲ್ಲಾ ಒಟ್ಟಾಗಿ ತಯಾರಿಸಿಕೊಳ್ಳುವ ಸಮೂಹಿಕ ಒತ್ತು ಶ್ಯಾವಿಗೆ ಸಾಮರಸ್ಯದ ಸಂಕೇತವಾಗಿದೆ.