ನೀರುಣಿಸುವ ಸುಲ್ತಾನ

ಬಿಸಿಲಿನ ಧಗೆಯಿಂದ ಜನರೆಂಬೋ ಜನರೇ ದಾಹದಿಂದ ದಣಿದು ಹೋಗುತ್ತಿದ್ದಾರೆ. ಅಂಥದರಲ್ಲಿ ಪ್ರಾಣಿ-ಪಕ್ಷಿಗಳ ಸ್ಥಿತಿ ಬಣ್ಣಿಸಲು ಸಾಧ್ಯವೇ? ಆದರೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಆರೋಗ್ಯ ಇಲಾಖೆ ಚಾಲಕರೊಬ್ಬರು ಪಕ್ಷಿಗಳಿಗೆ ನೀರುಣಿಸುವ ಕೆಲಸ ನಡೆಸುತ್ತ ಸ್ಥಳೀಯರ ಗಮನ ಸೆಳೆದಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಬರುವ ಹಕ್ಕಿಗಳಿಗೆ ಹನಿ ನೀರುಣಿಸುವ ಕಾರು ಚಾಲಕ ಸುಲ್ತಾನ ಅವರ ಪಕ್ಷಿಗಳ ಕಾಳಜಿ ನಿಜಕ್ಕೂ ಪ್ರಶಂಸನಾರ್ಹ.
ನೀರು ಸಿಕ್ಕುವುದರಿಂದ ಜಿಲ್ಲಾಡಳಿತ ಭವನದಲ್ಲಿ ಹಕ್ಕಿಗಳ ಕಲರವ ದಿನವಿಡೀ ಕಾಣಸಿಕ್ಕುವಂತಾಗಿದೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಪಕ್ಷಿಗಳ ಚಿಲಿಪಿಲಿ ಸದ್ದು ಮನಕ್ಕೆ ಮುದ ನೀಡುತ್ತಲಿದೆ. ಇದಕ್ಕೆ ಕಾರಣವೇ ಸುಲ್ತಾನ.
ಸುಲ್ತಾನ ಪ್ರತಿದಿನವೂ ಜಿಲ್ಲಾಡಳಿತ ಭವನದ ಸುತ್ತಲಿರುವ ಗಿಡಗಳ ಬುಡದಲ್ಲಿ ಇರಿಸಲಾದ ಮಣ್ಣಿನ ಮಗಿಗಳಿಗೆ ನೀರು ಹಾಕುತ್ತಾರೆ.
2012ರಲ್ಲಿ ಜಿಪಂ ಸಿಇಒ ಆಗಿದ್ದ ರಾಜಾರಾಂ ಅವರು ಪಕ್ಷಿಗಳಿಗಾಗಿ ನೀರುಣಿಸುವ ಕಾರ್ಯಕ್ಕೆ ನಾಂದಿ ಹಾಡಿದವರು. ಈಗ ಬೇಸಿಗೆ ಬಿಸಿಲಿನ ಧಗೆಯಷ್ಟೇ ಇದೆ. ಆಗ ಭೀಕರ ಬರ ಹಾಗೂ ಬಿಸಿಲ ಬೇಗೆಯಿಂದ ಜಾನುವಾರುಗಳಷ್ಟೇ ಜನರೂ ತತ್ತರಿಸಿದ್ದರು. ಜಿಲ್ಲೆಯ ಎಲ್ಲೆಡೆ ನೀರಿನ ಸರಬರಾಜಿನತ್ತ ಗಮನ ಹರಿಸುತ್ತಿದ್ದ ರಾಜಾರಾಂ ಅವರು, ಒಂದು ದಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೀರಿಗಾಗಿ ತಡಕಾಡುತ್ತಿದ್ದ ಪಕ್ಷಿಗಳ ಕಿತ್ತಾಟ ಕಂಡು ಅವರಣದಲ್ಲಿ ಬೆಳೆದ ಗಿಡಮರಗಳಿಗೆ ಮಣ್ಣಿನ ಮಡಕೆಗಳನ್ನು ಕಟ್ಟಿ ಅದರಲ್ಲಿ ನೀರು ಹಾಕಿ ಪಕ್ಷಗಳಿಗೆ ನೀರು ಒದಗಿಸುತ್ತಿದ್ದರು.
ಈ ಜವಾಬ್ದಾರಿಯನ್ನು ಆರೋಗ್ಯ ಇಲಾಖೆ ಚಾಲಕ ಸುಲ್ತಾನ ಮಹಮ್ಮದ್ ಅವರು ಅಂದಿನಿಂದ ಜಿಲ್ಲಾಧಿಕಾರಿ ಕಚೇರಿ ಆವರಣದ ಗಿಡಮರಗಳಲ್ಲಿ ತೂಗು ಬಿಟ್ಟ ಮಡಕೆಗಳಿಗೆ ನೀರು ಹಾಕುವ ಕಾಯಕ ಮುಂದುವರಿಸಿಕೊಂಡು ಬಂದಿದ್ದಾರೆ. ಈ ವರ್ಷ ಸುಲ್ತಾನ ಸುಮಾರು 100 ಹೊಸ ಮಣ್ಣಿನ ಮಗಿಗಳನ್ನು ತಂದು ಅದಕ್ಕೆ ಬಣ್ಣದ ಚಿತ್ತಾರ ಬಿಡಿಸಿ ಗಿಡಮರಗಳಿಗೆ ತೂಗು ಬಿಟ್ಟಿದ್ದಾರೆ. ಅವುಗಳಿಗೆಲ್ಲ ದಿನವೂ ನೀರನ್ನು ತುಂಬಿಸಿ ಪಕ್ಷಿಗಳ ದಾಹವನ್ನು ತೀರಿಸುತ್ತಿದ್ದಾರೆ. ಈಗಿರುವ ಮಗಿಗಳು ಸಾಲವು ಎನ್ನಿಸಿದೆ. ಇನ್ನೂ 50 ಮಗಿಗಳು ಮುಂದಿನ ವಾರ ಬರುತ್ತವೆ ಎನ್ನುತ್ತಾರೆ ಸುಲ್ತಾನ.
ಒಂದು ಮಣ್ಣಿನ ಮಗಿಗೆ 20 ರೂ., ವೆಚ್ಚವಾಗುತ್ತದೆ. 150 ರೂ.ಗೆ ಕಾಲು ಕಿಲೋ ತಂತಿ ತಂದು ಎಲ್ಲ ಮಣ್ಣಿನ ಮಗಿಗಳನ್ನು ಗಿಡ-ಮರಗಳಿಗೆ ತೂಗು ಹಾಕಿದ್ದೇನೆ. ಸತತ ಮೂರು ವರ್ಷಗಳಿಂದ ಇದು ನನ್ನದೇ ಕೆಲಸ ಎಂದು ತಿಳಿದು ಮಾಡುತ್ತಿದ್ದೇನೆ ಎನ್ನುತ್ತಾರೆ.