ಸಿರಿವಂತೆ ರಥೋತ್ಸವಕ್ಕಿದೆ 118 ವರ್ಷಗಳ ಇತಿಹಾಸ

ಶಿವಮೊಗ್ಗ ಜಿಲ್ಲೆ ಸಾಗರದಿಂದ ಐದು ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದಲ್ಲಿದೆ ಸಿರಿವಂತೆ. ಇಲ್ಲಿನ ಶ್ರೀ ತ್ರಿಪುರಾಂತಕೇಶ್ವರ ದೇವಸ್ಥಾನ ಸುತ್ತಲಿನ ಸೀಮೆಗಳಲ್ಲಿ ಪ್ರಸಿದ್ಧಿ ಪಡೆದಿದೆ. ಲ್ಲಿ ನಡೆಯುವ ಮಹಾರಥೋತ್ಸವಕ್ಕೆ 118 ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವೈಶಾಖ ಬಹುಳ ತೃತೀಯ ದಿನವಾದ ಶನಿವಾರ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು. ದೇವಾಲಯ ಪುನರ್ ನಿರ್ಮಾಣಗೊಂಡು ಲೋಕಾರ್ಪಣೆಯಾಗಿರುವುದು ಈ ಬಾರಿಯ ರಥೋತ್ಸವಕ್ಕೆ ಹೊನ್ನ ಕಳಶವಿಟ್ಟಂತಿತ್ತು. ಹೊಸನಗರ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಮೇ 12ರಂದು ತ್ರಿಪುರಾಂತಕ ದೇವರ ನೂತನ ಬಿಂಬ ಪ್ರತಿಷ್ಠೆ ಮಾಡಿ ದೇವಾಲಯವನ್ನು ಲೋಕಾರ್ಪಣೆ ಮಾಡಿದ್ದಾರೆ. ದೇವಾಲಯ ಲೋಕಾರ್ಪಣೆ ನಿಮಿತ್ತ ವಾರ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸಾಗರ ಪ್ರಾಂತ್ಯದ ಐಸೀಮೆ, ಇಕ್ಕೇರಿ ಸೀಮೆಗಳಂತೆ ಸಿರಿವಂತೆ ಸೀಮೆ ಕೂಡ ಒಂದು. ಸಿರಿವಂತೆಯ ಶ್ರೀ ತ್ರಿಪುರಾಂತಕೇಶ್ವರ ದೇವಾಲಯ ಸೀಮೆಯ ದೇವಸ್ಥಾನವಾಗಿದೆ. ಸಿರಿವಂತೆ ಸೀಮೆ ವ್ಯಾಪ್ತಿಯಲ್ಲಿ ಸೆಟ್ಟಿಸರ, ಖಂಡಿಕಾ, ಹುಳೇಗಾರು, ಕುಗ್ವೆ, ಕೈತೋಟ, ಸಸರವಳ್ಳಿ, ಸಾಲೆಕೊಪ್ಪ, ಕೋಗೋಡು ಸೇರಿದಂತೆ 20-25 ಹಳ್ಳಿಗಳಿವೆ. ಸೀಮೆಯ ಪ್ರತಿ ಮನೆಯವರು ಮಹಾರಥೋತ್ಸವಕ್ಕಾಗಿ ಎರಡೂವರೆ ಕೆ.ಜಿ.ರಾಶಿ ಇಡಿ ಅಡಿಕೆಯನ್ನು ವರಾಡವಾಗಿ ದೇವಾಲಯಕ್ಕೆ ಸಲ್ಲಿಸುತ್ತಾರೆ. ತ್ರಿಪುರಾಂತಕೇಶ್ವರ ದೇವರ ರಥ ಕಟ್ಟುವ ಕೆಲಸವನ್ನು ಹಲಸಿನಘಟ್ಟದ ಒಕ್ಕಲಿಗರು ನಿರ್ವಹಿಸುತ್ತಾರೆ. ಧಾರ್ಮಿಕ ಕಾರ್ಯಗಳ ಯಜಮಾನಿಕೆ, ಬಾಸಿಂಗ ಕಟ್ಟುವ ಜವಾಬ್ದಾರಿ, ಉಗ್ರಾಣದ ಮೇಲ್ವಿಚಾರಣೆ ಪ್ರತಿಯೊಂದೂ ಸೀಮೆಯ ಒಂದೊಂದು ಮನೆತನದವರಿಗೆ ಸೇರಿದ್ದು. ಕೊನೆಯ ಆರು ದಿನ ನಡೆಯುವ ಅನ್ನಸಂತರ್ಪಣೆಯನ್ನು ಆರು ಕುಟುಂಬಗಳ ಜನರು ವಹಿಸಿಕೊಳ್ಳುತ್ತಾರೆ.
ಸ್ವಾರಸ್ಯವೆಂದರೆ ರಥ ಎಳೆಯುವ ಸಂದರ್ಭದಲ್ಲಿ ರಥದ ಎಡಗಡೆಯ ಚಕ್ರದ ಜವಾಬ್ದಾರಿ ಸಿರಿವಂತೆ ಊರಿನ ಗ್ರಾಮಸ್ಥರದು. ಬಲಗಡೆ ಗಾಲಿ ಹಲಸಿನಘಟ್ಟದ ನಾಗರಿಕರ ಸುಪರ್ದಿಗೆ ಸೇರಿದ್ದು. ಎರಡು ಗ್ರಾಮಗಳ ಜನರು ರಥೋತ್ಸವವನ್ನು ಸಾಂಗವಾಗಿ ನಡೆಸಿಕೊಡುತ್ತಾರೆ. ಸಿರಿವಂತೆ ರಥೋತ್ಸವಕ್ಕೆ ಇನ್ನೊಂದು ವೈಶಿಷ್ಟತೆ ಇದೆ. ಇಲ್ಲಿ ಮಹಾಸಂಕಲ್ಪ ನಡೆದು ಕಾರ್ಯಕ್ರಮಗಳೆಲ್ಲ ಸಂಪನ್ನಗೊಳ್ಳುವವರೆಗೆ ಇಡೀ ಸೀಮೆಯ ಯಾವುದೇ ಮನೆಯಲ್ಲಿ ಗಣಪತಿ ಪೂಜೆ ಮಾಡಿ ನಡೆಸುವ ಶುಭ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಮದುವೆ, ಚೌಲ, ಉಪನಯನಗಳೆಲ್ಲ ರಥೋತ್ಸವದ ನಂತರವೇ ಆಗಬೇಕು.
12ನೇ ಶತಮಾನದ್ದು:
ಶ್ರೀ ತ್ರಿಪುರಾಂತಕೇಶ್ವರ ದೇವಾಲಯ 12ನೇ ಶತಮಾನದಲ್ಲಿ ಅಂದಿನ ಆಳರಸರಿಂದ ನಿರ್ಮಾಣವಾಗಿತ್ತು ಎಂಬ ಐತಿಹ್ಯವಿದೆ. 300 ವರ್ಷಗಳ ಕಾಲ ವೈಭವದಿಂದ ಪೂಜೆ, ಪುನಸ್ಕಾರ ನಡೆದು ನಂತರ ಹಾಳು ಬಿದ್ದಿತ್ತು. 1896ರವರೆಗೆ ಸಿರಿವಂತೆಗೆ ಸೀಮೆ ದೇವಸ್ಥಾನವೇ ಇರಲಿಲ್ಲ. 1894-95ರಲ್ಲಿ ಸೀಮೆಯ ಹಿರಿಯರು ಹಾಗೂ ವಿದ್ವಾಂಸರು ಚಿಂತನೆ ನಡೆಸಿ ದೇವರು ಹಾಗೂ ಪವಿತ್ರ ಸ್ಥಳದ ಪರಿಶೋಧನೆಗೆ ಇಳಿದಾಗ ಪವಾಡಸದೃಶ ರೀತಿಯಲ್ಲಿ ದಟ್ಟ ಪೊದೆಯೊಂದರ ಮಧ್ಯದಲ್ಲಿ ಶಿವಲಿಂಗವೊಂದು ಗೋಚರಿಸಿತಂತೆ. ಈ ಶಿವಲಿಂಗವನ್ನು ತ್ರಿಪುರಾಂತಕೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಪೂಜೆ ಆರಂಭಿಸಲಾಯಿತು.ರಲ್ಲಿ ರಚನೆಯಾದ ಸೇವಾ ಸಮಿತಿಯ ಅವಧಿ ಮೂರು ವರ್ಷಗಳಾಗಿವೆ. ಪ್ರತಿ ವರ್ಷ ಮೂರನೇ ಒಂದು ಭಾಗದ ನಿರ್ದೇಶಕರು ಬದಲಾಗುವ ಹಾಗೂ ಆ ಮೂಲಕ ಹಳೆ ಸಮಿತಿಯೇ ಮುಂದುವರೆಯುವ ತಾಂತ್ರಿಕತೆಯನ್ನು ಈ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ವಿಧಾನ ಪರಿಷತ್, ರಾಜ್ಯಸಭೆಗಳ ಮಾದರಿಯಿದು. ಮದುವೆ ಇನ್ನಿತರ ಕಾರ್ಯಕ್ರಮಗಳಿಗೂ ಈ ದೇವಾಲಯದಲ್ಲಿ ಅವಕಾಶವಿದೆ. ಯಕ್ಷಗಾನ ಪ್ರೇಮಿಗಳು ನಿರಂತರವಾಗಿ ಯಕ್ಷಗಾನ ಜಾಗರಗಳನ್ನು ಇಲ್ಲಿ ಆಡುತ್ತಿದ್ದರು. ಯಕ್ಷಗಾನದ ವೇಷವಿಲ್ಲದೆ ಪ್ರಸ್ತುತಪಡಿಸುವ ಯಕ್ಷಗಾನ ಪ್ರಸಂಗಗಳ ವಿಶಿಷ್ಟ ಪ್ರಯೋಗವೇ ಜಾಗರ. ವಿಶಾಲವಾದ ಜಾಗ ಹೊಂದಿರುವ ಸಿರಿವಂತೆ ದೇವಾಲಯ ಭಕ್ತರನ್ನು ಕೈಬೀಸಿ ಕರೆಯುತ್ತಿದೆ.
55 ಲಕ್ಷ ರೂ. ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣ:
ತ್ರಿಪುರಾಂತಕೇಶ್ವರ ದೇವಾಲಯ ಶಿಥಿಲಗೊಂಡಿದ್ದರಿಂದ ದೇವಾಲಯದ ಪುನರ್ ನಿರ್ಮಾಣ ಮಾಡಲು ಸಮಿತಿ ನಿರ್ಧರಿಸಿತು. ಯೋಜನಾ ವೆಚ್ಚದ 55 ಲಕ್ಷ ರೂ.ಗಳಲ್ಲಿ ರಾಜ್ಯ ಸರ್ಕಾರ 25 ಲಕ್ಷ ರೂ.ಗಳನ್ನು ಮಂಜೂರು ಮಾಡಿತು. ಶಿಲೆಯ ಕಟ್ಟಡ, ಗರ್ಭಗುಡಿಯ ಮುಚ್ಚಿಗೆಗೆ ಕಲ್ಲುಚಪ್ಪಡಿ, ಮೇಲ್ಮನೆಗೆ ತಾಮ್ರದ ಹೊದಿಕೆ, ಒಳಭಾಗದ ಗೋಡೆಗಳಿಗೆ ಗ್ರಾನೈಟ್, ಶಿಲಾಮಯ ವಾಸ್ತು ಚೌಕಟ್ಟು, ಎಲ್ಲ ಪರಿವಾರ ದೇವರ ಬಿಂಬ ನವೀಕರಣಕ್ಕೆ ಅಗತ್ಯವಿದ್ದ 30 ಲಕ್ಷ ರೂ.ಗಳನ್ನು ಸೀಮೆಯ ಜನ ದೇಣಿಗೆಯಾಗಿ ನೀಡಿದರು.
ಸೇವಾ ಸಮಿತಿ ಮುಖ್ಯ ದೇವರ ಬಿಂಬಕ್ಕೆ ಯಾವುದೇ ಪ್ರಾಯೋಜಕರ ನೆರವು ಪಡೆಯಲಿಲ್ಲ. ದೇವಾಲಯ ಪುನರ್ ನಿರ್ಮಾಣ ಕಾಮಗಾರಿಗೆ ನಿರ್ದಿಷ್ಟ ದಾನಿಗಳ ಸಹಾಯ ಪಡೆಯಲಾಗಿದ್ದರೆ, ಶಿವಲಿಂಗದ ಬಿಂಬಕ್ಕೆ ಜನಸಾಮಾನ್ಯರಿಂದಲೇ ದೇಣಿಗೆ ಒಟ್ಟು ಮಾಡಲಾಯಿತು. ಸೀಮೆಯ ಪ್ರತಿ ಊರಲ್ಲಿ ರಥಯಾತ್ರೆ ನಡೆಸಿ ಕಡು ಬಡವರಿಂದ ಚಿಲ್ಲರೆ ಹಣವನ್ನೂ ಕಾಣಿಕೆಯಾಗಿ ಪಡೆಯಲಾಯಿತು. ಸಂಗ್ರಹವಾದ ಸುಮಾರು 1.1 ಲಕ್ಷ ರೂ.ನ್ನು ದೇವಾಲಯದ ನಿರ್ಮಾಣಕ್ಕೆ ಬಳಸಲಾಯಿತು. ದೇವಾಲಯ ಲೋಕಾರ್ಪಣೆ ಸಂದರ್ಭದಲ್ಲೂ ಅಗ್ರ ತಾಂಬೂಲ ಸಿಕ್ಕಿದ್ದು ಜನಸಾಮಾನ್ಯನಿಗೇ. ಸಿರಿವಂತೆಯ ಹಿರಿಯ ನಾಗರಿಕ, ಕೂಲಿ ಕಾರ್ಮಿಕ ಕಡೇಮನೆ ಗಣಪತಿಯವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದ್ದು ದೇವಾಲಯ ಶ್ರೀ ಸಾಮಾನ್ಯನಿಗೂ ಮುಕ್ತವಾಗಿದೆ ಎಂಬುದಕ್ಕೆ ಸಾಕ್ಷಿ.

ಬಾಲಗಾಯಿ ಆಚರಣೆ ಸಿರಿವಂತೆ ಸೀಮೆಯ ವೈಶಿಷ್ಟ್ಯ:
ತ್ರಿಪುರಾಂತಕೇಶ್ವರ ದೇವಾಲಯದ ಎದುರು ರಾಷ್ಟ್ರೀಯ ಹೆದ್ದಾರಿ ಆಚೆ ಅನತಿ ದೂರದಲ್ಲಿ ಕೋಟೆ ದುರ್ಗಾಂಬಾ ದೇವಿಯ ಪುರಾತನ ದೇವಸ್ಥಾನವಿದೆ. ಸಿರಿವಂತೆ ಸಂಸ್ಥಾನದ ಕುರುಹಾಗಿ ಉಳಿದಿರುವ ಕೋಟೆಯ ಅವಶೇಷಗಳ ನಡುವೆ ಇರುವ ಕೋಟೆ ದುರ್ಗಾಂಬಾ ಕೂಡ ಶಕ್ತಿಶಾಲಿ ದೇವರು. 18 ವರ್ಷಗಳ ಹಿಂದೆ ಇಲ್ಲಿನ ದೇವಾಲಯದ ಜೀರ್ಣೋದ್ಧಾರ ಕೂಡ ಆಗಿದೆ.ಾರ್ತಿಕ ಮಾಸದಲ್ಲಿ ನಡೆಯುವ ಬಾಲಗಾಯಿ ವಿಧಾನ ವಿಶಿಷ್ಟವಾದುದು. ಅಂದು ಈ ಸೀಮೆಯ ಪ್ರತಿ ಮನೆಯವರು ತಮ್ಮ ಕೊಟ್ಟಿಗೆಯಲ್ಲಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಬಾಲಕ್ಕೆ ಒಂದರಂತೆ ತೆಂಗಿನಕಾಯಿಯನ್ನು ಕೋಟೆ ದುರ್ಗಾಂಬೆಗೆ ಒಡೆಸಬೇಕು. ಬರೀ ಸಿರಿವಂತೆ ಸೀಮೆಯವರಷ್ಟೇ ಅಲ್ಲ, ತಡಗಡಲೆಯಿಂದ ಕುಗ್ವೆಯವರೆಗಿನ ಜನ ಸೀಮಾತೀತರಾಗಿ ಇಲ್ಲಿ ಕಾಯಿ ಒಡೆಸುತ್ತಾರೆ. ಇಲ್ಲಿ ಒಡೆಯಲಾಗುವ ಎರಡರಿಂದ ಐದು ಸಾವಿರ ಕಾಯಿಗಳನ್ನು ನೋಡುವುದೇ ಚೆಂದ.


ಜಿ.ಕೆ.ಭಟ್ಟ ದಂಪತಿಗೆ ಉಗ್ರರಥ ಶಾಂತಿ

ಸಾಹಿತ್ಯ, ಪತ್ರಿಕೋದ್ಯಮ, ತಾಳಮದ್ದಲೆ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದಜಿ.ಕೆ.ಭಟ್ಟ ಕಶಿಗೆ(ಕಾಶ್ಯಪಪರ್ಣಕುಟಿ& ಉತ್ತರ ಕನ್ನಡ ಜಿಲ್ಲೆ
) ಷಷ್ಯಬ್ದಿ ಸಮಾರಂಭ ಮೇ.19ರಂದು ನಡೆಯಲಿದ್ದು ಆ ಸಂದರ್ಭದಲ್ಲಿ ಭಟ್ಟ ದಂಪತಿಯ ಉಗ್ರರಥಶಾಂತಿ ಅವರ ಸ್ವಗೃಹದಲ್ಲಿ ನಡೆಯಲಿದೆ.
ಹೊರಜಗತ್ತಿನ ಸಂಪರ್ಕ, ಸಂಚಾರ ದುರ್ಬರವಾದ ಸಂದರ್ಭದಲ್ಲಿ ಹೊಸಕಾಲದ ವಿಚಾರಧಾರೆಯನ್ನು ತಮ್ಮಲ್ಲಿಯೇ ಸೃಜಿಸಿಕೊಂಡದ್ದು ಅವರ ಹೆಚ್ಚುಗಾರಿಕೆ. ತಾಳಮದ್ದಲೆ ಪ್ರಾಕಾರದಲ್ಲಿ ಪ್ರಸಿದ್ಧ ಅರ್ಥಧಾರಿಯಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಸರು ಮಾಡಿದವರು. ಪ್ರಸಿದ್ಧ ಪ್ರಸಂಗಕರ್ತ ಬೆಳಸಲಿಗೆ ಗಣಪತಿ ಹೆಗಡೆ, ಅನಂತ ಹೆಗಡೆ ಕೊಳಗಿ ಮುಂತಾದವರ ಆತ್ಮೀಯ ಸಂಪರ್ಕ ಹೊಂದಿದ್ದ ಜಿ.ಕೆ.ಭಟ್ಟ ಸ್ವಸಾಮರ್ಥ್ಯದಿಂದ ಮೇಲೆ ಬಂದ ಪ್ರತಿಭಾವಂತರು.
ಸಿದ್ದಾಪುರದಿಂದ ಪ್ರಕಾಶಿತವಾಗುತ್ತಿದ್ದ ಮುನ್ನಡೆ ವಾರಪತ್ರಿಕೆಗೆ 10 ವರ್ಷ, ನಂತರದಲ್ಲಿ ಅದೇ ಪತ್ರಿಕೆ ದಿನಪತ್ರಿಕೆಯಾಗಿ ಶಿರಸಿಯಿಂದ ಪ್ರಕಟಗೊಳ್ಳುವಾಗ12 ವರ್ಷ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ನಂತರದಲ್ಲಿ ಸಂಯುಕ್ತ ಕರ್ನಾಟಕದಲ್ಲಿ ಅಂಕಣಕಾರರಾಗಿದ್ದರು. ಎಡಪಂಥೀಯ ಚಿಂತನೆಗಳ ಕುರಿತು ಹೆಚ್ಚು ಪ್ರಭಾವಿತರಾಗಿದ್ದೂ, ಆ ವಿಚಾರಧಾರೆಗಳನ್ನು ಸನಾತನ, ಸಾಂಸ್ಕೃತಿಕ ವಿಚಾರಗಳ ಜೊತೆ ಜೋಡಿಸಿ ಹೊಸಚಿಂತನ ಕ್ರಮ ಪ್ರತಿಪಾದಿಸಿದರು. ಕಾಶ್ಯಪ ಪರ್ಣಕುಟಿ ಎಂದೇ ಪರಿಚಿತರಾದ ಜಿ.ಕೆ.ಭಟ್ಟ ದಂಪತಿಗೆ ಈಗ ಷಷ್ಯಬ್ದಿ ಸಮಾರಂಭ.

ಮೇ 16ರಂದು ಕೋಡ್ಸರದಲ್ಲಿ ತಾಳಮದ್ದಲೆ

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಕೋಡ್ಸರದಲ್ಲಿ ಮೇ 16ರ ಮಧ್ಯಾಹ್ನ 3ರಿಂದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಶ್ರೀವ್ಯಾಸನ್ಯಾಸ ಸಂಸ್ಥೆ ಸೋಮಸಾಗರ, ಕೋಡ್ಸರ ಜೈಶ್ರೀರಾಮ ಸಾಂಸ್ಕೃತಿಕ ಸಂಘದ ಸಹಕಾರದಲ್ಲಿ ಕೋಡ್ಸರದ ಶ್ರೀಮಹಾಲಕ್ಷ್ಮೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಭೀಷ್ಮ ಪರ್ವ’ ತಾಳಮದ್ದಲೆ ನಡೆಯಲಿದೆ. ನೆಬ್ಬೂರು ನಾರಾಯಣ ಭಾಗವತ್, ಶಂಕರ ಭಾಗವತ್, ಶ್ರೀಪತಿ ಹೆಗಡೆ, ವ್ನಿೇಶ್ವರ ಕೆಸರಕೊಪ್ಪ ಹಿಮ್ಮೇಳದಲ್ಲಿ, ವಿ.ಅನಂತ್ ಶರ್ಮಾ, ಎಂ.ವಿ. ಹೆಗಡೆ, ವಿ.ಉಮಾಕಾಂತ ಭಟ್ಟ ಅರ್ಥಧಾರಿಗಳಾಗಿ ಭಾಗವಹಿಸುವರು.ದಕ್ಕೂ ಮೊದಲು ವೆಂಕಟಾಚಲ ಭಟ್ಟ ಕೆರೆಮನೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಅನಂತ್ ಶರ್ಮಾ ಭುವನಗಿರಿ ಅವರಿಗೆ ಕೆರೆಮನೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಂ.ಹೆಗಡೆ ಅಧ್ಯಕ್ಷತೆ ವಹಿಸುವರು. ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ಆರ್.ಆರ್. ಹೆಗಡೆ ಸಂಕದಮನೆ, ಪರಮೇಶ್ವರ ನಾಯ್ಕ ಹಳ್ಳಿಬಯಲು ಪಾಲ್ಗೊಳ್ಳಲಿದ್ದಾರೆ.
ರಾತ್ರಿ 8ಕ್ಕೆ ಕುಶಲಕರ್ಮಿ ಶ್ರೀರಾಮ ನಾಯ್ಕರನ್ನು ಗೌರವಿಸಲಾಗುತ್ತಿದ್ದು, ಶ್ರೀರಾಮ ಸಂಘದ 14ನೇ ಕಲಾ ಕಾಣಿಕೆಯಾಗಿ ‘ರಾಜಾ ರುದ್ರಕೋಪ’ ಯಕ್ಷಗಾನ ಪ್ರದರ್ಶನ ಜರುಗಲಿದೆ. ಭಾಗವತರಾಗಿ ರಾಘವೇಂದ್ರ ಆಚಾರ್ಯ, ಶಂಕರ ಭಾಗವತ್, ಮದ್ದಲೆಯಲ್ಲಿ ಸುನೀಲ ಭಂಡಾರಿ, ಶ್ರೀಪತಿ ಕಂಚಿಮನೆ, ಚಂಡೆಯಲ್ಲಿ ವ್ನಿೇಶ್ವರ ಕೆಸರಕೊಪ್ಪ, ಸ್ತ್ರೀ ವೇಷದಲ್ಲಿ ಶಂಕರ ಭಟ್ಟ ನೀಲ್ಕೋಡ, ಹಾಸ್ಯದಲ್ಲಿ ವೆಂಕಟ್ರಮಣ ಮಾದ್ನಕಳ್, ಸುಬ್ರಹ್ಮಣ್ಯ ಚಿಟ್ಟಾಣಿ, ನರೇಂದ್ರ ಅತ್ತಿಮುರ್ಡು, ಲಕ್ಷ್ಮೆನಾರಾಯಣ ಶಿರಗುಣಿ, ಸಂತೋಷ ಹುಣಸೆಮಕ್ಕಿ, ಈಶ್ವರ ಭಟ್ಟ ಇತರರು ಪಾಲ್ಗೊಳ್ಳುವರು. ನೀವೂ ತಪ್ಪದೆ ಬನ್ನಿ.