ಇತಿಹಾಸದ ಪುಟಗಳತ್ತ ಐತಿಹಾಸಿಕ ಕೋಟೆ

ೆನ್ನಮ್ಮ ಕಿತ್ತೂರಿನ ಐತಿಹಾಸಿಕ ಕೋಟೆಗೆ ಪ್ರಾಚ್ಯವಸ್ತು ಇಲಾಖೆ ವತಿಯಿಂದ ವಸ್ತು ಸಂಗ್ರಹಾಲಯ ಹಾಗೂ ಉದ್ಯಾನವನ ನಿರ್ಮಾಣ ಮಾಡಿ ಇವುಗಳ ನಿರ್ವಹಣೆಗೆ ಸಿಬ್ಬಂದಿ ನೇಮಿಸಲಾಗಿತ್ತು. ಆದರೆ ಈಗ ಸಿಬ್ಬಂದಿ ಕೊರತೆಯಿಂದ ಉದ್ಯಾನವನ ಹಾಗೂ ಕೋಟೆಯಲ್ಲಿ ಸ್ವಚ್ಛತೆ ಇಲ್ಲದೇ ಗಿಡಗಂಟಿಗಳ ಸಾಮ್ರಾಜ್ಯವಾಗಿ ಪರಿಣಮಿಸಿದೆ.ಕೋಟೆಯಲ್ಲಿ ಸ್ವಚ್ಛತೆ, ಉದ್ಯಾನವನ ನಿರ್ವಹಣೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ 10 ಜನ ಸಿಬ್ಬಂದಿ, ಕಾವಲುಗಾರರನ್ನಾಗಿ 4 ಜನ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ. ವಸ್ತು ಸಂಗ್ರಹಾಲಯದ ನಿರ್ವಹಣೆಗಾಗಿ 1 ಸಹಾಯಕ ಕ್ಯುರೇಟರ್, 4 ಜನರನ್ನು ಪ್ರಾಚ್ಯವಸ್ತು ಇಲಾಖೆ ವತಿಯಿಂದ ನಿಯೋಜಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೇಮಿಸಿದ 10 ಸಿಬ್ಬಂದಿಗಳ ಟೆಂಡರ್ ಅವಧಿ ಮುಗಿದ ಕಾರಣ ಕಳೆದ ಮೂರು ತಿಂಗಳುಗಳಿಂದ ಸಿಬ್ಬಂದಿಗಳೇ ಇಲ್ಲ. ಈಗ ಉಳಿದಿರುವ ಸಂಗ್ರಾಲಯದ 4 ಜನ ಸಿಬ್ಬಂದಿಗೆ ಇಡೀ ಕೋಟೆ ನಿರ್ವಹಣೆ ಮಾಡುವುದು ಸಾಧ್ಯವಾಗುತ್ತಿಲ್ಲ. ಪರಿಣಾಮ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಉದ್ಯಾನವನ ನೀರಿಲ್ಲದೇ ಒಣಗುತ್ತಿದೆ. ಹುಲ್ಲು ಹಾಸಿನಲ್ಲಿ ಕಸ ಗಿಡಗಂಟಿಗಳು ಬೆಳೆದು ಉದ್ಯಾನವನ ಹುಡುಕುವಂತಾಗಿದೆ.ೋಟೆಯ ಈಗಿನ ಸ್ಥಿತಿಗತಿ ನೋಡಿದರೆ ಪ್ರತಿಯೊಬ್ಬ ಇತಿಹಾಸ ಪ್ರೇಮಿಯೂ ಮರಗುವಂತಾಗಿದೆ. ಕೋಟೆಯ ಸುತ್ತಮುತ್ತಲಿರುವ ದುರಸ್ತಿಗೊಳಿಸಲಾಗಿರುವ ರಕ್ಷಣಾ ಗೋಡೆಯ ಮೇಲೆ ಗಿಡಗಂಟಿಗಳು ಬೆಳೆದು, ಅಳಿದುಳಿದ ಗೋಡೆ ಸಹ ಹಾಳಾಗುತ್ತಿದೆ. ಕೆಲವೊಂದು ಭಾಗವು ಬಿದ್ದು ಹೋಗಿದೆ. ಕೋಟೆಯ ಒಳಗಡೆಯಂತೂ ಎಲ್ಲಿಬೇಕೆಂದರಲ್ಲಿ ಪಾರ್ಥೇನಿಯಂ ಕಸ, ಗಿಡ ಗಂಟಿಗಳು ಬೆಳೆದಿವೆ. ದನಕರುಗಳು ಒಳಗಡೆ ನುಗ್ಗಿ ಕೋಟೆಯ ಸೌಂದರ್ಯವನ್ನು ಹಾಳು ಮಾಡುತ್ತಿವೆ.
ಪ್ರವಾಸಿಗರಿಗಾಗಿ ಓಡಾಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪುಟ್ಪಾತ್ ನಿರ್ಮಿಸಿದ್ದು, ಅದರ ಮೇಲೂ ಕಸ ಬೆಳೆದು ಪುಟ್ಪಾತ್ ಕಾಣದಂತಾಗಿದೆ. ಮರಗಳನ್ನು ಕಡಿದು ವರ್ಷಗಳೆ ಕಳೆದರೂ, ಮರದ ತುಂಡುಗಳ ರಾಶಿ ಬೇಕಾಬಿಟ್ಟಿಯಾಗಿ ಬಿದ್ದಿದ್ದರೂ ಅವುಗಳ ವಿಲೇವಾರಿ ಸಹ ಆಗಿಲ್ಲ. ನೀರಿನ ಸೌಲಭ್ಯವಿಲ್ಲ. ಕೋಟೆಯ ಮುಖ್ಯದ್ವಾರದ ರಸ್ತೆಗಳನ್ನು ಖಾಸಗಿ ವಾಹನಗಳು ಆಕ್ರಮಿಸಿಕೊಂಡು ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಾರೆ. ಬರುವ ಪ್ರವಾಸಿಗರಿಗೆ ಹಾಗೂ ಅವರ ವಾಹನಗಳಿಗೆ ತೊಂದರೆ ಉಂಟಾಗುತ್ತಿದೆ.
ಕತ್ತಲಲ್ಲಿ ಕಿತ್ತೂರು ಕೋಟೆ:
ೋಟೆಯ ಒಳಗಡೆ ಯಾವುದೇ ತರಹದ ವಿದ್ಯುತ್ ದ್ವೀಪಗಳಿಲ್ಲ. ಸಂಜೆಯಾಯಿತೆಂದರೆ ಕತ್ತಲು ಆವರಿಸುತ್ತದೆ. ಕೋಟೆಯನ್ನು ನೋಡಲು ಬರುವ ಪ್ರವಾಸಿಗರು ಮತ್ತು ಸಾರ್ವಜನಿಕರು ಸಂಜೆಯಾದರೆ ಕತ್ತಲಲ್ಲೇ ವಿಹರಿಸಬೇಕು. ಪ್ರಾಧಿಕಾರದಿಂದ ವತಿಯಿಂದ ಇಲ್ಲಿ ಲಕ್ಷಾಂತರ ರೂ. ವ್ಯಯಿಸಿ 12 ಸೋಲಾರ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಈಗ ಅವುಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇವನ್ನು ನಿರ್ವಹಣೆ ಮಾಡುವ ಗೋಜಿಗೂ ಪ್ರಾಚ್ಯವಸ್ತು ಇಲಾಖೆಯವರು ಹೋಗಿಲ್ಲ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಿತ್ತೂರು ಕೋಟೆಯೀಗ ಇತಿಹಾಸದ ಪುಟಗಳನ್ನು ಸೇರುವತ್ತ ಮುಖಮಾಡುತ್ತಿದೆ.