ಅಕ್ಕ ಸಮ್ಮೇಳನಕ್ಕೆ ಗಡಿಕೈನ ವಿನಯ ಹೆಗಡೆ

ಬೆಳಕಿನ ಚಿತ್ತಾರದಿಂದ ಪ್ರಸಿದ್ಧಿ ಪಡೆದ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಗಡಿಕೈನ ವಿನಯ ಹೆಗಡೆ ಅಮೆರಿಕದಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿ ಬೆಳಕಿನ ಚಿತ್ತಾರ ಕಲಾ ಪ್ರದರ್ಶನ ನೀಡಲು ತೆರಳಲಿದ್ದಾರೆ. ಹಾಲಿವುಡ್ನ ಪ್ರಸಿದ್ಧ ಸಂಸ್ಥೆ ಡ್ರೀಮ್ ವರ್ಕ್ಸ್ಕೂಡಾ ಹೆಗಡೆಯವರ ಎರಡು ಪ್ರದರ್ಶನ ಆಯೋಜಿಸಿದೆ. ಡ್ರೀಮ್ ವರ್ಕ್ಸ್ ಸಂಸ್ಥೆ ಹಾಲಿವುಡ್ನ ಬೃಹತ್ ಸಿನೇಮಾ ತಯಾರಿಸುವ ಸಂಸ್ಥೆಯಾಗಿದೆ. ಅಮೆರಿಕದಲ್ಲಿ ವಿನಯ ಹೆಗಡೆಯವರು ಒಂದು ತಿಂಗಳಿಗೂ ಹೆಚ್ಚು ಕಾಲ ಇರಲಿದ್ದು, ಹಲವು ಪ್ರದರ್ಶನ ನೀಡಲಿದ್ದಾರೆ.

ಶರಾವತಿ ಸಂಗಮದಲ್ಲೊಂದು ಮಾನಸ ಸರೋವರ

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ ಅಪ್ಸರಕೊಂಡದ ಬಳಿ ಸಮುದ್ರ ಸೇರುವ ಶರಾವತಿ ನದಿ, ತಾನು ಹರಿದು ಬರುವ 250 ಕಿಮೀ ಮಾರ್ಗದಲ್ಲಿ ಹಲವು ಅಪರೂಪದ ದಾಖಲೆಗಳನ್ನು ಮಾಡಿದೆ.
ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಕಟ್ಟಿದ ಆಣೆಕಟ್ಟು ರಾಜ್ಯದಲ್ಲಿ ಉತ್ಪಾದನೆಯಾಗುವ ಜಲವಿದ್ಯುತ್ತಿನಲ್ಲಿ ಶೇ.20ರಷ್ಟನ್ನು ಒದಗಿಸುತ್ತದೆ. ಇಲ್ಲಿಂದ ಹರಿದು ಬಂದ ನೀರು ವಿಶ್ವವಿಖ್ಯಾತ ಜೋಗ ಜಲಪಾತವಾಗಿದೆ. ಅಲ್ಲಿಂದ ಇಳಿದು ಇನ್ನೆರಡು ಆಣೆಕಟ್ಟುಗಳಲ್ಲಿ ವಿದ್ಯುತ್ ಉತ್ಪಾದಿಸಿ, 50 ಕಿಮೀ ಹರಿದು ಬಂದು, ಗೇರುಸೊಪ್ಪೆಯಲ್ಲಿ 240 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ, ಗೇರುಸೊಪ್ಪೆಯಿಂದ ಹೊನ್ನಾವರದವರೆಗಿನ 35 ಕಿಮೀ ಎಡ-ಬಲದಂಡೆಯ ಸಹಸ್ರಾರು ಎಕರೆ ಭೂಮಿಗೆ ನೀರುಣ್ಣಿಸುತ್ತದೆ. ಒಂದು ಕಿಮೀ ಕಡಿಮೆ ಅಗಲದ ಶರಾವತಿ ತನ್ನ ಸಂಗಮಕ್ಕೆ ಬರುತ್ತಿದ್ದಂತೆಯೆ 25 ಕಿಮೀ ಸುತ್ತಳತೆಯ ಸರೋವರವನ್ನು ಎರಡು ಸೇತುವೆಯ ಮಧ್ಯೆ ಸೃಷ್ಟಿಸಿದೆ. ಶರಾವತಿ ಸಂಗಮ 5 ಕಿಮೀ ದೂರ ಸರಿದಿದೆ.
ಸೇತುವೆಯ ಮೇಲಿಂದ ಸರೋವರವನ್ನು ಕಂಡಾಗ ಸಮುದ್ರಕ್ಕೆ ಎದುರಾದ ಕಿರು ಸಮುದ್ರದಂತೆ ಗೋಚರಿಸುತ್ತದೆ. ಸುತ್ತಲೂ ಹಸಿರು, ನೀಲಿ ಆಕಾಶದ ಮಧ್ಯೆ ಕಡು ನೀಲಿ ಸರೋವರ, ಮಾನಸ ಸರೋವರ. ಈ ಸರೋವರ ಗೋವಾ, ಕೇರಳದಲ್ಲಿದ್ದರೆ ನಿತ್ಯ ಸಾವಿರಾರು ಪ್ರವಾಸಿಗರಿಗೆ ಸಂತೋಷವನ್ನು, ನೂರಾರು ಜನರಿಗೆ ಉದ್ಯೋಗವನ್ನು ಕೊಡುತ್ತಿತ್ತೇನೋ.

ನೋಡು ಪತಂಗ

ಉತ್ತರ ಕನ್ನಡ ಜಿಲ್ಲೆ ಕುಮಟಾ ಸಮೀಪದ ದೇವಿಮನೆ ಘಟ್ಟದಲ್ಲಿ ರಸ್ತೆಯಂಚಿನ ಮರವೊಂದರಲ್ಲಿ ಕಂಡುಬಂದ ಒಂದಡಿಗೂ ಹೆಚ್ಚು ಅಗಲ, 7 ಇಂಚು ಉದ್ದದ ಪತಂಗ.

ಗೋಮಾಳ ಉಳಿಸಿ ಚಳುವಳಿಗೆ ಈಗ 25 ವರ್ಷ

1985 ರಿಂದ 91ರವರೆಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದ ಸಿ ಎಂಡ್ ಡಿ ಭೂಮಿ, ಗ್ರಾಮ ಸಾಮೂಹಿಕ ಭೂಮಿ ಉಳಿಸಿ ಚಳುವಳಿಗೆ ಈಗ ಬೆಳ್ಳಿಹಬ್ಬದ ವರ್ಷ. ಆ ಚಳುವಳಿಯ ಒಂದು ಹಂತದಲ್ಲಿ 1987-88ರಲ್ಲಿ ತಾಲೂಕಿನ ತುಮರಿ ಗ್ರಾಪಂ ವ್ಯಾಪ್ತಿಯ ಕಳಸವಳ್ಳಿಯ ಗ್ರಾಮ ಗೋಮಾಳದಲ್ಲಿ ಕೈಗಾರಿಕಾ ನೆಡುತೋಪು ನಿರ್ಮಾಣಕ್ಕೆ ತೀವ್ರ ವಿರೋಧವನ್ನು ನಾಗರಿಕರು ವ್ಯಕ್ತಪಡಿಸಿದ್ದರು. ಏಕಜಾತಿಯ ಅಕೇಶಿಯಾ ಗಿಡ ನೆಡುವ ಎಂಪಿಎಂ ಕಾರ್ಯಾಚರಣೆಗೆ ಸಾವಿರಾರು ಜನ ಭಾರೀ ವಿರೋಧ ಮಾಡಿದರು.
ಸತ್ಯಾಗ್ರಹ ನಡೆಸಿ, ಕಚೇರಿಗಳಿಗೆ ಮುತ್ತಿಗೆ ಹಾಕಲಾಗಿತ್ತು. ನೂರಾರು ರೈತರು, ಕಾರ್ಯಕರ್ತರ ಬಂಧನವಾಗಿತ್ತು. ವಿಧಾನಸಭೆಯಲ್ಲಿ ಈ ಬಗ್ಗೆ ಗದ್ದಲ ನಡೆದು ಜನಹಿತ ಮರೆತ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಸ್ಥಳಕ್ಕೆ ವಿವಿಧ ಪಕ್ಷಗಳ ಮುಖಂಡರು ಆಗಮಿಸಿ ಹೋರಾಟಕ್ಕೆ ಬೆಂಬಲ ಘೋಷಿಸಿದ್ದರು. ಇದೇ ಹೋರಾಟದಿಂದ ತುಮರಿಯ 50ಕ್ಕೂ ಹೆಚ್ಚು ರೈತರು ನ್ಯಾಯಾಲಯಕ್ಕೆ ವರ್ಷ ಕಾಲ ಓಡಾಟ ನಡೆಸಿದ್ದರು.ಂದು ಕೇವಲ ಏಕಜಾತಿಯ ಗಿಡ ನೆಡುವುದಕ್ಕೆ ವಿರೋಧ ವ್ಯಕ್ತವಾಗಿರಲಿಲ್ಲ. ಒಂದು ವಿರೋಧದ ಜೊತೆ ಚಳುವಳಿಯ ನೆನಪಿನಲ್ಲಿ ಕಳಸವಳ್ಳಿ ಗ್ರಾಮ ವನ ನಿರ್ಮಾಣಕ್ಕೂ ಮುಂದಾಗಲಾಗಿತ್ತು. ಇತ್ತ ವನ ಸೃಷ್ಟಿ ನಡೆದಿದ್ದರೆ ಅತ್ತ ನ್ಯಾಯಾಲಯದ ಹೋರಾಟದಲ್ಲೂ ಗ್ರಾಮಾಂತರ ಭಾಗದ ಜನರ ಅಳಲಿಗೆ ಪೂರಕವಾದ ತೀರ್ಪು ಸಿಕ್ಕಿತ್ತು.
ಎಂಪಿಎಂನ ನೆಡುತೋಪು ಒಂದು ಬಾರಿ ಕಟಾವು ಆದ ನಂತರ ಮತ್ತೆ ಆ ಕಂಪನಿಗೆ ಜಾಗವನ್ನು ಅರಣ್ಯ ಇಲಾಖೆ ಒದಗಿಸುವ ಹಕ್ಕನ್ನು ನ್ಯಾಯಾಲಯ ಕಡಿತಗೊಳಿಸಿತ್ತು.ವರ್ಷಗಳ ನಂತರವೂ ಪರಿಸ್ಥಿತಿ ತೀರಾ ಭಿನ್ನವಾಗಿಲ್ಲ. ಅಂದು ಉದ್ಯಮದ ಕಚ್ಚಾವಸ್ತುವಿಗಾಗಿ ಅಕೇಶಿಯಾ ನೆಡುತೋಪಿನ ನಿರ್ಮಾಣಕ್ಕೆ ಮುಂದಾಗಿದ್ದರೆ ಇಂದು ವಿವಿಧ ಉದ್ಯಮದ ಸ್ಥಾಪನೆಯ ನೆಪದಲ್ಲಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಇರಾದೆಯನ್ನು ಸರ್ಕಾರ ವ್ಯಕ್ತಪಡಿಸುತ್ತಿದೆ. ಪಶ್ಚಿಮ ಘಟ್ಟ ಉಳಿಸಿ ಆಂದೋಲನ ಮತ್ತೆ ಅಗತ್ಯವಾಗುತ್ತಿದೆ.
ಗೋಮಾಳ ಉಳಿಸಿ, ಗ್ರಾಮ ಸಾಮೂಹಿಕ ಭೂಮಿಗಳನ್ನು ಕೈಗಾರಿಕೆಗೆ ನೀಡಬೇಡಿ, ಏಕ ಜಾತಿ ನೆಡುತೋಪು ಬೇಡ ಮುಂತಾದ ಅಂದಿನ ಬೇಡಿಕೆಗಳು ಮಲೆನಾಡಿನ ಜನತೆಯ ಇಂದಿನ ಹಕ್ಕೊತ್ತಾಯಗಳೂ ಆಗಿವೆ. ನೆಡುತೋಪೇ ಲೇಸು:ಂದು ಎಂಪಿಎಂ ಅಕೇಶಿಯಾ ನೆಡುತೋಪನ್ನು ವಿರೋಧಿಸಿದವರೂ ಇಂದು ಕೊನೆಪಕ್ಷ ಅಂತಹ ನೆಡುತೋಪಿದ್ದರೆ ಈಗಿನ ಎಗ್ಗಿಲ್ಲದ ಅರಣ್ಯ ಒತ್ತುವರಿ ಸ್ಥಗಿತಗೊಳ್ಳುತ್ತಿತ್ತೇನೋ ಎಂಬ ಭಾವವನ್ನು ವ್ಯಕ್ತಪಡಿಸುತ್ತಾರೆ.
ಶುಂಠಿ, ಮೆಕ್ಕೆಜೋಳಗಳನ್ನು ಬೆಳೆಯಲು ನಡೆದಿರುವ ಅರಣ್ಯ ನಾಶ ಹಾಗೂ ಅರಣ್ಯ ಒತ್ತುವರಿ ಒಂದು ಕೃಷಿ ಬಂಡವಾಳಶಾಹಿ ವರ್ಗವನ್ನೇ ಸೃಷ್ಟಿಸಿದೆ ಎಂಬ ಸತ್ಯದ ಅರಿವು ಕೂಡ ಪರಿಸರದ ಹೋರಾಟಗಾರರಲ್ಲಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಎಂಬುದರ ವ್ಯಾಖ್ಯೆ ಬದಲಾಗಬೇಕು. ಚಳವಳಿ ಕುರಿತ ಹೋರಾಟಗಳು ರಾಜಕೀಯ ಆಶ್ರಯಗಳನ್ನು ಮೀರಿ ಅಸಲಿ ಪ್ರೇಮವನ್ನು ಬಿಂಬಿಸಬೇಕು. ಈ ಎಲ್ಲಾ ಆಶಯಗಳ ಹಿನ್ನೆಲೆಯಲ್ಲಿ ಸಿಗಂದೂರು ಕ್ಷೇತ್ರದ ಬಳಿ ಕಳಸವಳ್ಳಿಯ ಶರಾವತಿಯ ಪರ್ಯಾಯ ದ್ವೀಪದಲ್ಲಿ ಹೋರಾಟ ವನದಲ್ಲಿ ಶನಿವಾರ 1987-88ರ ಗ್ರಾಮ ಸಾಮೂಹಿಕ ಭೂಮಿ ಉಳಿಸಿ ಹೋರಾಟದ ನೆನಪಿನಲ್ಲಿ ಒಂದು ವಿಶಿಷ್ಟ ಹಸಿರು ಕಾರ್ಯಕ್ರಮ ನಡೆಯಿತು.ಮುರ್ಡೇಶ್ವರ-ಪರಿಚಯ ಪುಸ್ತಕ ಪ್ರಕಟ

ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಪ್ರಸಿದ್ಧ ಕ್ಷೇತ್ರ ಮುರ್ಡೇಶ್ವರವನ್ನು ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಚಯಿಸುವ 64 ಪುಟಗಳ ಕಿರು ಪುಸ್ತಕವನ್ನು ಬೆಂಗಳೂರಿನ ಹೇಮಂತ ಸಾಹಿತ್ಯ ಪ್ರಕಾಶನ ಪ್ರಕಟಿಸಿದೆ.
ಹೇಮಂತ ಸಾಹಿತ್ಯದ ಸುವರ್ಣ ವರ್ಷದ ನೆನಪಿನಲ್ಲಿ ಕನ್ನಡ ನಾಡುನುಡಿಯ ಪರಂಪರೆಯ ಮಕ್ಕಳ ಸಾಹಿತ್ಯ ಸರಣಿಯಲ್ಲಿ ಈ ಕೃತಿ ಪ್ರಕಟವಾಗಿದೆ. ಸಾಹಿತಿ ಶಾ.ಮಂ. ಕೃಷ್ಣರಾಯರ ಸಂಪಾದಕತ್ವದಲ್ಲಿ 100 ಪುಸ್ತಕಗಳು ಪ್ರಕಟವಾಗಿದೆ. ಮುರ್ಡೇಶ್ವರ ಕೃತಿಯನ್ನು ಪತ್ರಕರ್ತ ಜಿ.ಯು.ಭಟ್ ಬರೆದಿದ್ದಾರೆ. 15 ಕಪ್ಪು, ಬಿಳುಪು ಛಾಯಾಚಿತ್ರಗಳನ್ನು ಹೊಂದಿದ್ದು, ಹಿಂದಿನ ಮತ್ತು ಇಂದಿನ ಮುರ್ಡೇಶ್ವರದ ಪರಿಚಯವಿದೆ. ಮುರ್ಡೇಶ್ವರದ ಖ್ಯಾತಿಗೆ ಕಾರಣರಾದ ಆರ್.ಎನ್.ಶೆಟ್ಟಿ ಅವರನ್ನು ಪರಿಚಯಿಸುವ 10 ಪುಟಗಳ ಬರಹವಿದ್ದು 64 ಪುಟಗಳ ಈ ಪುಸ್ತಕ ಮುರ್ಡೇಶ್ವರವನ್ನು ಸಮಗ್ರವಾಗಿ ಪರಿಚಯಿಸುತ್ತದೆ.

ವರದಪುರದಲ್ಲಿ ಹರಿಶ್ಚಂದ್ರ ಕಾವ್ಯ ಗಮಕ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವರದಪುರದ ಶ್ರೀಧರಾಶ್ರಮದಲ್ಲಿ ಶ್ರೀಧರ ಸೇವಾ ಮಹಾಮಂಡಲ ಹಾಗೂ ಮಲೆನಾಡು ಗಮಕ ಕಲಾ ಸಂಘದ ಆಶ್ರಯದಲ್ಲಿ ರಾಘವಾಂಕ ವಿರಚಿತ ಹರಿಶ್ಚಂದ್ರ ಕಾವ್ಯದ ಗಮಕ ಕಾರ್ಯಕ್ರಮವನ್ನು ಆ.3ರಿಂದ 9ರವರೆಗೆ ಹಮ್ಮಿಕೊಳ್ಳಲಾಗಿದೆ.
ಪ್ರತಿ ದಿನ ಮಧ್ಯಾಹ್ನ 3.45ರಿಂದ ಗಮಕ ನಡೆಯಲಿದೆ. ಭಾನುವಾರ ಎಲ್ಐಸಿಯ ಅಭಿವೃದ್ಧಿ ಅಧಿಕಾರಿ ಎಂ.ಎಲ್. ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಮಹಾಮಂಡಲದ ಅಧ್ಯಕ್ಷ ಎಂ.ಟಿ. ಪರಮೇಶ್ವರ ಪಾಲ್ಗೊಂಡಿದ್ದರು. ವಸಿಷ್ಠ-ವಿಶ್ವಾಮಿತ್ರ ವಿವಾದ ಕಥಾಭಾಗವನ್ನು ಸುಕನ್ಯಾ ಜಿ. ಭಟ್ ವಾಚಿಸಿ, ಅರುಣ ಬೆಂಕಟವಳ್ಳಿ ವ್ಯಾಖ್ಯಾನಿಸಿದರು. 4ರಂದು ವಿಶ್ವಾಮಿತ್ರಾಶ್ರಮ ಪ್ರವೇಶ ಭಾಗವನ್ನು ಕ್ಯಾಸನೂರು ವಿನಾಯಕ ವಾಚಿಸಿದರೆ ಬಿ.ಜಿ. ಮಂಜಪ್ಪ ವ್ಯಾಖ್ಯಾನಿಸಿದರು. 5ರಂದು ಕೆರೆಕೊಪ್ಪ ನರಹರಿ ಶರ್ಮಾ ರಾಜ್ಯ ಸಮರ್ಪಣ ಭಾಗವನ್ನು ವಾಚಿಸಿದರೆ, ಹೊಸಕೊಪ್ಪ ಶಂಕರನಾರಾಯಣ ವ್ಯಾಖ್ಯಾನಿಸಿದರು. ರಂದು ಪತ್ನಿ-ಪುತ್ರ ವಿಕ್ರಯ ಭಾಗವನ್ನು ವಸುಧಾ ಶರ್ಮ ವಾಚಿಸಿ, ಕೆ.ಎಂ. ರವೀಂದ್ರ ವ್ಯಾಖ್ಯಾನಿಸಿದರು. 7ರಂದು ಸೀತಾ ಬಾಪಟ್ ಅವರು ರೋಹಿತಾಶ್ವನ ಮರಣ ಎಂಬ ಭಾಗವನ್ನು ವಾಚಿಸಿದರೆ ಬೆಳೆಯೂರು ದೇವೇಂದ್ರ ವ್ಯಾಖ್ಯಾನಿಸಲಿದ್ದಾರೆ.
8ರಂದು ಹರಿಹರದ ಪದ್ಮಜಾ ಶೇಷಗಿರಿರಾವ್ ಚಂದ್ರಮತಿಗೆ ಆಪತ್ತು ಕಥಾಭಾಗವನ್ನು ವಾಚಿಸಿ, ಕೆ.ಆರ್. ಕೃಷ್ಣಯ್ಯ ವ್ಯಾಖ್ಯಾನಿಸಲಿದ್ದಾರೆ. 9ರಂದು ಶೆಡ್ತಿಕೆರೆಯ ಸಮುದ್ಯತಾ ವೆಂಕಟರಾಮು ವಿಶ್ವೇಶ್ವರ ಸಾಕ್ಷಾತ್ಕಾರ ಭಾಗವನ್ನು ವಾಚಿಸಿ, ನಿಸರಾಣಿ ರಾಮಚಂದ್ರ ವ್ಯಾಖ್ಯಾನಿಸಲಿದ್ದಾರೆ. 9ರಂದು ನಡೆಯುವ ಸಮಾರೋಪದಲ್ಲಿ ನ್ಯಾಯವಾದಿ ಕೆ.ಎನ್.ಶ್ರೀಧರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನೀವೂ ಪಾಲ್ಗೊಳ್ಳಿ.

ಕೊಡ್ತಗಣಿ-ಮುಸೇಗಾರನಲ್ಲಿ ತಿಂಗಳಿಂದ ಕತ್ತಲು

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕೊಡ್ತಗಣಿ ಹಾಗೂ ಮುಸೇಗಾರಗಳಲ್ಲಿ ಕಳೆದ ಒಂದು ತಿಂಗಳಿಂದ ವಿದ್ಯುತ್ ಸರಬರಾಜಿಲ್ಲದೇ ಜನ ತೊಂದರೆ ಅನುಭವಿಸುತ್ತಿದ್ದಾರೆ. ಜು.12 ರಂದು ನಾಲ್ಕು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದ್ದು ಒಂದು ಕಂಬ ಸಂಪೂರ್ಣ ಪುಡಿಪುಡಿಯಾಗಿದೆ. ಈ ಕುರಿತು ಹೆಸ್ಕಾಂ ಕಚೇರಿಗೆ ಹಾಗೂ ಹುಬ್ಬಳ್ಳಿಯ ಮುಖ್ಯ ಕಚೇರಿಗೆ ಮಾಹಿತಿ ನೀಡಿ ಕಂಬ ಬದಲಿಸಿಕೊಡುವಂತೆ ವಿನಂತಿಸಲಾಗಿದ್ದರೂ ಈವರೆಗೂ ಸರಿಪಡಿಸುವ ಕೆಲಸವಾಗಿಲ್ಲ. ಕಂಬ ದಾಸ್ತಾನಿಲ್ಲ ಎಂಬ ಉತ್ತರ ದೊರೆಯುತ್ತಿದೆ. ಇದರಿಂದಾಗಿ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು ದಿನನಿತ್ಯದ ಕೆಲಸ ಕಾರ್ಯಗಳಿಗೆ, ಬೆಳಕಿಗೆ ವಿದ್ಯುತ್ ಅವಲಂಬಿಸಿರುವ ಸಾರ್ವಜನಿಕರ ಗೋಳು ಹೇಳತೀರದಾಗಿದೆ. ವಿದ್ಯಾರ್ಥಿಗಳಿಗೂ ಓದಲು ತೊಂದರೆ ಆಗುತ್ತಿದೆ. ಆದರೆ, ಸಾರ್ವಜನಿಕರ ಈ ಗೋಳು ವಿದ್ಯುತ್ ಮಂಡಳಿಗೆ ಕೇಳಿಸದಾಗಿದೆ.