ಗೋಮಾಳ ಉಳಿಸಿ ಚಳುವಳಿಗೆ ಈಗ 25 ವರ್ಷ

1985 ರಿಂದ 91ರವರೆಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದ ಸಿ ಎಂಡ್ ಡಿ ಭೂಮಿ, ಗ್ರಾಮ ಸಾಮೂಹಿಕ ಭೂಮಿ ಉಳಿಸಿ ಚಳುವಳಿಗೆ ಈಗ ಬೆಳ್ಳಿಹಬ್ಬದ ವರ್ಷ. ಆ ಚಳುವಳಿಯ ಒಂದು ಹಂತದಲ್ಲಿ 1987-88ರಲ್ಲಿ ತಾಲೂಕಿನ ತುಮರಿ ಗ್ರಾಪಂ ವ್ಯಾಪ್ತಿಯ ಕಳಸವಳ್ಳಿಯ ಗ್ರಾಮ ಗೋಮಾಳದಲ್ಲಿ ಕೈಗಾರಿಕಾ ನೆಡುತೋಪು ನಿರ್ಮಾಣಕ್ಕೆ ತೀವ್ರ ವಿರೋಧವನ್ನು ನಾಗರಿಕರು ವ್ಯಕ್ತಪಡಿಸಿದ್ದರು. ಏಕಜಾತಿಯ ಅಕೇಶಿಯಾ ಗಿಡ ನೆಡುವ ಎಂಪಿಎಂ ಕಾರ್ಯಾಚರಣೆಗೆ ಸಾವಿರಾರು ಜನ ಭಾರೀ ವಿರೋಧ ಮಾಡಿದರು.
ಸತ್ಯಾಗ್ರಹ ನಡೆಸಿ, ಕಚೇರಿಗಳಿಗೆ ಮುತ್ತಿಗೆ ಹಾಕಲಾಗಿತ್ತು. ನೂರಾರು ರೈತರು, ಕಾರ್ಯಕರ್ತರ ಬಂಧನವಾಗಿತ್ತು. ವಿಧಾನಸಭೆಯಲ್ಲಿ ಈ ಬಗ್ಗೆ ಗದ್ದಲ ನಡೆದು ಜನಹಿತ ಮರೆತ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಸ್ಥಳಕ್ಕೆ ವಿವಿಧ ಪಕ್ಷಗಳ ಮುಖಂಡರು ಆಗಮಿಸಿ ಹೋರಾಟಕ್ಕೆ ಬೆಂಬಲ ಘೋಷಿಸಿದ್ದರು. ಇದೇ ಹೋರಾಟದಿಂದ ತುಮರಿಯ 50ಕ್ಕೂ ಹೆಚ್ಚು ರೈತರು ನ್ಯಾಯಾಲಯಕ್ಕೆ ವರ್ಷ ಕಾಲ ಓಡಾಟ ನಡೆಸಿದ್ದರು.ಂದು ಕೇವಲ ಏಕಜಾತಿಯ ಗಿಡ ನೆಡುವುದಕ್ಕೆ ವಿರೋಧ ವ್ಯಕ್ತವಾಗಿರಲಿಲ್ಲ. ಒಂದು ವಿರೋಧದ ಜೊತೆ ಚಳುವಳಿಯ ನೆನಪಿನಲ್ಲಿ ಕಳಸವಳ್ಳಿ ಗ್ರಾಮ ವನ ನಿರ್ಮಾಣಕ್ಕೂ ಮುಂದಾಗಲಾಗಿತ್ತು. ಇತ್ತ ವನ ಸೃಷ್ಟಿ ನಡೆದಿದ್ದರೆ ಅತ್ತ ನ್ಯಾಯಾಲಯದ ಹೋರಾಟದಲ್ಲೂ ಗ್ರಾಮಾಂತರ ಭಾಗದ ಜನರ ಅಳಲಿಗೆ ಪೂರಕವಾದ ತೀರ್ಪು ಸಿಕ್ಕಿತ್ತು.
ಎಂಪಿಎಂನ ನೆಡುತೋಪು ಒಂದು ಬಾರಿ ಕಟಾವು ಆದ ನಂತರ ಮತ್ತೆ ಆ ಕಂಪನಿಗೆ ಜಾಗವನ್ನು ಅರಣ್ಯ ಇಲಾಖೆ ಒದಗಿಸುವ ಹಕ್ಕನ್ನು ನ್ಯಾಯಾಲಯ ಕಡಿತಗೊಳಿಸಿತ್ತು.ವರ್ಷಗಳ ನಂತರವೂ ಪರಿಸ್ಥಿತಿ ತೀರಾ ಭಿನ್ನವಾಗಿಲ್ಲ. ಅಂದು ಉದ್ಯಮದ ಕಚ್ಚಾವಸ್ತುವಿಗಾಗಿ ಅಕೇಶಿಯಾ ನೆಡುತೋಪಿನ ನಿರ್ಮಾಣಕ್ಕೆ ಮುಂದಾಗಿದ್ದರೆ ಇಂದು ವಿವಿಧ ಉದ್ಯಮದ ಸ್ಥಾಪನೆಯ ನೆಪದಲ್ಲಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಇರಾದೆಯನ್ನು ಸರ್ಕಾರ ವ್ಯಕ್ತಪಡಿಸುತ್ತಿದೆ. ಪಶ್ಚಿಮ ಘಟ್ಟ ಉಳಿಸಿ ಆಂದೋಲನ ಮತ್ತೆ ಅಗತ್ಯವಾಗುತ್ತಿದೆ.
ಗೋಮಾಳ ಉಳಿಸಿ, ಗ್ರಾಮ ಸಾಮೂಹಿಕ ಭೂಮಿಗಳನ್ನು ಕೈಗಾರಿಕೆಗೆ ನೀಡಬೇಡಿ, ಏಕ ಜಾತಿ ನೆಡುತೋಪು ಬೇಡ ಮುಂತಾದ ಅಂದಿನ ಬೇಡಿಕೆಗಳು ಮಲೆನಾಡಿನ ಜನತೆಯ ಇಂದಿನ ಹಕ್ಕೊತ್ತಾಯಗಳೂ ಆಗಿವೆ. ನೆಡುತೋಪೇ ಲೇಸು:ಂದು ಎಂಪಿಎಂ ಅಕೇಶಿಯಾ ನೆಡುತೋಪನ್ನು ವಿರೋಧಿಸಿದವರೂ ಇಂದು ಕೊನೆಪಕ್ಷ ಅಂತಹ ನೆಡುತೋಪಿದ್ದರೆ ಈಗಿನ ಎಗ್ಗಿಲ್ಲದ ಅರಣ್ಯ ಒತ್ತುವರಿ ಸ್ಥಗಿತಗೊಳ್ಳುತ್ತಿತ್ತೇನೋ ಎಂಬ ಭಾವವನ್ನು ವ್ಯಕ್ತಪಡಿಸುತ್ತಾರೆ.
ಶುಂಠಿ, ಮೆಕ್ಕೆಜೋಳಗಳನ್ನು ಬೆಳೆಯಲು ನಡೆದಿರುವ ಅರಣ್ಯ ನಾಶ ಹಾಗೂ ಅರಣ್ಯ ಒತ್ತುವರಿ ಒಂದು ಕೃಷಿ ಬಂಡವಾಳಶಾಹಿ ವರ್ಗವನ್ನೇ ಸೃಷ್ಟಿಸಿದೆ ಎಂಬ ಸತ್ಯದ ಅರಿವು ಕೂಡ ಪರಿಸರದ ಹೋರಾಟಗಾರರಲ್ಲಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಎಂಬುದರ ವ್ಯಾಖ್ಯೆ ಬದಲಾಗಬೇಕು. ಚಳವಳಿ ಕುರಿತ ಹೋರಾಟಗಳು ರಾಜಕೀಯ ಆಶ್ರಯಗಳನ್ನು ಮೀರಿ ಅಸಲಿ ಪ್ರೇಮವನ್ನು ಬಿಂಬಿಸಬೇಕು. ಈ ಎಲ್ಲಾ ಆಶಯಗಳ ಹಿನ್ನೆಲೆಯಲ್ಲಿ ಸಿಗಂದೂರು ಕ್ಷೇತ್ರದ ಬಳಿ ಕಳಸವಳ್ಳಿಯ ಶರಾವತಿಯ ಪರ್ಯಾಯ ದ್ವೀಪದಲ್ಲಿ ಹೋರಾಟ ವನದಲ್ಲಿ ಶನಿವಾರ 1987-88ರ ಗ್ರಾಮ ಸಾಮೂಹಿಕ ಭೂಮಿ ಉಳಿಸಿ ಹೋರಾಟದ ನೆನಪಿನಲ್ಲಿ ಒಂದು ವಿಶಿಷ್ಟ ಹಸಿರು ಕಾರ್ಯಕ್ರಮ ನಡೆಯಿತು.