ಶರಾವತಿ ಸಂಗಮದಲ್ಲೊಂದು ಮಾನಸ ಸರೋವರ

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ ಅಪ್ಸರಕೊಂಡದ ಬಳಿ ಸಮುದ್ರ ಸೇರುವ ಶರಾವತಿ ನದಿ, ತಾನು ಹರಿದು ಬರುವ 250 ಕಿಮೀ ಮಾರ್ಗದಲ್ಲಿ ಹಲವು ಅಪರೂಪದ ದಾಖಲೆಗಳನ್ನು ಮಾಡಿದೆ.
ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಕಟ್ಟಿದ ಆಣೆಕಟ್ಟು ರಾಜ್ಯದಲ್ಲಿ ಉತ್ಪಾದನೆಯಾಗುವ ಜಲವಿದ್ಯುತ್ತಿನಲ್ಲಿ ಶೇ.20ರಷ್ಟನ್ನು ಒದಗಿಸುತ್ತದೆ. ಇಲ್ಲಿಂದ ಹರಿದು ಬಂದ ನೀರು ವಿಶ್ವವಿಖ್ಯಾತ ಜೋಗ ಜಲಪಾತವಾಗಿದೆ. ಅಲ್ಲಿಂದ ಇಳಿದು ಇನ್ನೆರಡು ಆಣೆಕಟ್ಟುಗಳಲ್ಲಿ ವಿದ್ಯುತ್ ಉತ್ಪಾದಿಸಿ, 50 ಕಿಮೀ ಹರಿದು ಬಂದು, ಗೇರುಸೊಪ್ಪೆಯಲ್ಲಿ 240 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ, ಗೇರುಸೊಪ್ಪೆಯಿಂದ ಹೊನ್ನಾವರದವರೆಗಿನ 35 ಕಿಮೀ ಎಡ-ಬಲದಂಡೆಯ ಸಹಸ್ರಾರು ಎಕರೆ ಭೂಮಿಗೆ ನೀರುಣ್ಣಿಸುತ್ತದೆ. ಒಂದು ಕಿಮೀ ಕಡಿಮೆ ಅಗಲದ ಶರಾವತಿ ತನ್ನ ಸಂಗಮಕ್ಕೆ ಬರುತ್ತಿದ್ದಂತೆಯೆ 25 ಕಿಮೀ ಸುತ್ತಳತೆಯ ಸರೋವರವನ್ನು ಎರಡು ಸೇತುವೆಯ ಮಧ್ಯೆ ಸೃಷ್ಟಿಸಿದೆ. ಶರಾವತಿ ಸಂಗಮ 5 ಕಿಮೀ ದೂರ ಸರಿದಿದೆ.
ಸೇತುವೆಯ ಮೇಲಿಂದ ಸರೋವರವನ್ನು ಕಂಡಾಗ ಸಮುದ್ರಕ್ಕೆ ಎದುರಾದ ಕಿರು ಸಮುದ್ರದಂತೆ ಗೋಚರಿಸುತ್ತದೆ. ಸುತ್ತಲೂ ಹಸಿರು, ನೀಲಿ ಆಕಾಶದ ಮಧ್ಯೆ ಕಡು ನೀಲಿ ಸರೋವರ, ಮಾನಸ ಸರೋವರ. ಈ ಸರೋವರ ಗೋವಾ, ಕೇರಳದಲ್ಲಿದ್ದರೆ ನಿತ್ಯ ಸಾವಿರಾರು ಪ್ರವಾಸಿಗರಿಗೆ ಸಂತೋಷವನ್ನು, ನೂರಾರು ಜನರಿಗೆ ಉದ್ಯೋಗವನ್ನು ಕೊಡುತ್ತಿತ್ತೇನೋ.