ಸೋದೆ-ಸ್ವರ್ಣವಲ್ಲಿ ಇತಿಹಾಸಕ್ಕೆ ಹೊಸ ಬೆಳಕು

ಧಾರವಾಡದ ಹಿರಿಯ ಇತಿಹಾಸ ಸಂಶೋಧಕ ಡಾ ಶ್ರೀನಿವಾಸ ರಿತ್ತಿ ಅವರು ಉತ್ತರ ಕನ್ನಡ ಜಿಲ್ಲೆಯ ಸ್ವರ್ಣವಲ್ಲಿಗೆ ಸಂಬಂಧಿಸಿದ ತಾಮ್ರ ಶಾಸನವೊಂದನ್ನು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗೆ ಹಸ್ತಾಂತರಿಸಿದ್ದಾರೆ.
ವಿಜಯನಗರ ಅರಸ ಎರಡನೇ ಹರಿಹರನ ಕಾಲಕ್ಕೆ ಸೇರಿದ ತಾಮ್ರ ಶಾಸನ ಇದು. ಸ್ವರ್ಣವಲ್ಲಿ ಮಠಕ್ಕೆ ಸಂಬಂಧಿಸಿದೆ. ಹರಿಹರನ ದಂಡನಾಯಕ ಈಚಪ್ಪ ಒಡೆಯ ಎಂಬುವನು ಗುತ್ತಿ, ಇಡಗುಂದಿ ಪ್ರದೇಶ ಒಳಗೊಂಡ ಗೋವಾ ಪ್ರಾಂತ ಆಳುತ್ತಿದ್ದ. ಅವನು ಅರಸನ ಅಪ್ಪಣೆಯ ಮೇರೆಗೆ ಶಾಲಿವಾಹನ ಶಕೆ 1326 ಸ್ವಭಾನು ಸಂವತ್ಸರ ಾಲ್ಗುಣ ಶುದ್ಧ ಪ್ರತಿಪದೆ (ಜ.31, 1405)ಯಂದು ಗೋಕರ್ಣದ ಆದಿತ್ಯೇಶ್ವರ ದೇವಾಲಯದ ಭಿಕ್ಷಾ ಸ್ವಾಸ್ಥ್ಯಕ್ಕಾಗಿ ಸರ್ವಜ್ಞ ಸರಸ್ವತಿ ಶ್ರೀಗಳಿಗೆ ಇಡಗುಂದಿ, ನಾಡಿನೊಳಗೊಣ ತಟಗಾರ ಎಂಬ ಗ್ರಾಮವನ್ನು ಉಂಬಳಿಯಾಗಿ ನೀಡಿದ್ದನು ಎಂದು ಉಲ್ಲೇಖವಿದೆ. ಯತಿಗಳ ಮುಂದಿನ ಸರಸ್ವತಿ ಎಂಬ ಅಭಿದಾನ ಹಾಗೂ ಗೋಕರ್ಣದ ಉಲ್ಲೇಖ ನೋಡಿದರೆ ಇವರು ಸ್ವರ್ಣವಲ್ಲಿ ಪರಂಪರೆಗೆ ಸೇರಿದವರು ಎಂಬುದು ಸ್ಪಷ್ಟ.
ಮಠದ ಇತಿಹಾಸದಲ್ಲೂ ಸರ್ವಜ್ಞ ಸರಸ್ವತಿ ಅಥವಾ ಸರ್ವಜ್ಞೇಂದ್ರ ಸರಸ್ವತಿ ಹೆಸರಿನ ಯತಿಗಳು ಆಗಿ ಹೋಗಿದ್ದಾರೆ. ಅಂದಿನ ಇಡಗುಂದಿ ಇಂದಿನ ಇಡಗುಂಜಿ, ಉಂಬಳಿಯ ತಟಗಾರ ಗ್ರಾಮ ಇಂದಿನ ಯಲ್ಲಾಪುರ ತಾಲೂಕಿನಲ್ಲಿದೆ. ಆದರೆ, ಗೋಕರ್ಣದ ಆದಿತ್ಯೇಶ್ವರ ದೇವಾಲಯವು ಯಾವುದು ಎಂಬುದು ಮಾತ್ರ ಗೊತ್ತಿಲ್ಲ.
ಸೋದೆ ವಾದಿರಾಜ ಮಠದ ಸಮೀಪದ ತಪೋವನದ ನದಿಯ ಬಂಡೆಯ ಮೇಲೆ ಶಿಲಾಲೇಖ ಇದೆ. ಶ್ರೀವೇದನಿಧಿ ತೀರ್ಥರು ಶಾಲಿವಾಹನ ಶಕೆ 1555 ಶ್ರೀಮುಖ ಸಂವತ್ಸರ ವೈಶಾಖ ಶುದ್ಧ 15ರಂದು ಈ ಬಂಡೆಯ ಮೇಲೆ ಪ್ರತಿಮೆ ಮಾಡಿಸಿದರು ಎಂದು ಹೇಳಿದೆ. ಇದು ವಿಷ್ಣುವಿನ ಪ್ರತಿಮೆ. ಅದರ ಬದಿಗೆ ಎರಡು ಪಾದಗಳು. ಪಾದಗಳ ಕೆಳಗೆ ಶ್ರೀವಾದಿರಾಜ ಎಂದಿದೆ. ಇದು ವಾದಿರಾಜರ ಪಾದುಕೆಗಳನ್ನು ಪ್ರಧಿನಿಧಿಸುತ್ತದೆ ಎಂಬುದು ಸ್ಪಷ್ಟ. ಈ ಪಾದುಕೆ ಇನ್ನೊಂದು ಬದಿಗೆ ಆರು ಶಿವಲಿಂಗಗಳೂ ಇವೆ. ವಾದಿರಾಜರು ಶೈವ ಮತವನ್ನೂ ಗೌರವಿಸುತ್ತಿದ್ದರು.

ಶಿರಸಿಯ ಜೈನಮಠದ ಕೂಷ್ಮಾಂಡು ದೇವಿಗೆ ಬಂಗಾರದ ಮುಖ ಕವಚ

ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸ್ವಾದಿ ದಿಗಂಬರ ಜೈನ ಮಠದಲ್ಲಿ ಅಭಿನವ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶರನ್ನವರಾತ್ರಿ ಉತ್ಸವ ಆರಂಭಗೊಂಡಿದೆ. ಈ ಬಾರಿ ತಮಿಳುನಾಡಿನಿಂದ ತರಿಸಲಾದ ಅಂಬಾರಿ ಮಂಟಪ ಹಾಗೂ ರಾಜಸ್ಥಾನದ ಜೈಪುರದಿಂದ ತರಿಸಲಾದ ಆಕರ್ಷಕ ಕಮಲ ಮಂಟಪ ವಿಶೇಷವಾಗಿ ಕಂಗೊಳಿಸುತ್ತಿದೆ.
ವರ್ಷಗಳ ಹಿಂದಿನ ದಸರಾ ವೈಭವ ಮರಳಿಸಲು ಸಕಲ ತಯಾರಿ ನಡೆದಿದೆ. ಗುರುವಾರ ಬೆಳಗ್ಗೆ 1008 ಆದಿನಾಥ ತೀರ್ಥಂಕರ, 1008 ನೇಮಿನಾಥ ತೀರ್ಥಂಕರ, 1008 ಪಾರ್ಶ್ವನಾಥ ತೀರ್ಥಂಕರಿಗೆ ಹಾಗೂ ಕೂಷ್ಮಾಂಡಿನಿ ಅಮ್ಮನಿಗೆ ವಿಶೇಷ ಪೂಜೆ, ಅಭಿಷೇಕ, ಲಘುಸಿದ್ಧ ಚಕ್ರಾರಾಧನೆ, ಅಲಂಕಾರ ಕಾರ್ಯಕ್ರಮಗಳು ನಡೆದವು. ಗುರುವಾರ ತಮಿಳುನಾಡಿನ ಪಂಡಿತ ಜಯಪಾಲ್ ಹಾಗೂ ಅಜಿತಪಾಲ್ ಅವರು ಕೂಷ್ಮಾಂಡು ದೇವಿಗೆ ಬಂಗಾರ ಮುಖ ಕವಚ ಅರ್ಪಿಸಿದರು. ಶುಕ್ರವಾರ ಭಕ್ತಾಮರ ವಿಧಾನ ಹಾಗೂ ಇತರ ಕಾರ್ಯಕ್ರಮಗಳು ನಡೆದವು. ದಶಮಿಯಂದು 2 ಆನೆಗಳು, 5 ಕುದುರೆಗಳು ಬರಲಿವೆ. ಆನೆಯ ಮೇಲೆ ಅಂಬಾರಿ-ಮಂಟಪ ವಿಶೇಷವಾಗಿರಲಿದೆ. ಕಮಲ ಮಂಟಪದಲ್ಲಿ ತೀರ್ಥಂಕರರ ಪ್ರತಿಮೆ ಇಟ್ಟು ಪೂಜಿಸಿ ದಶಮಿಯಂದು ಮೆರವಣಿಗೆ ಮಾಡಲಾಗುತ್ತದೆ. 

ಉಡುಪಿ ನೆನಪಿಸುತ್ತಿದೆ ಸೋಂದಾದ ಮಹಾದ್ವಾರ

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಶ್ರೀಕ್ಷೇತ್ರ ಸೋಂದಾ ವಾದಿರಾಜಮಠದ ತಿರುವಿನ ಕಮಾಟಗೇರಿಯಲ್ಲಿ ಭವ್ಯ ಮಹಾದ್ವಾರ ತಲೆ ಎತ್ತಿ ನಿಂತಿದೆ. ಶ್ರೀ ರಮಾತ್ರಿವಿಕ್ರಮ ದೇವರ ಮತ್ತು ಶ್ರೀವಾದಿರಾಜ ಮಠಕ್ಕೆ ಸಮರ್ಪಣೆಗೊಳ್ಳಲು ಸಜ್ಜಾಗಿ ನಿಂತಿದೆ.
ಸೋಂದಾ ಶ್ರೀ ವಾದಿರಾಜ ಮಠದ ಶಿಷ್ಯವೃಂದದ ದೈವಜ್ಞ ಬ್ರಾಹ್ಮಣರಿಂದ ಈ ಮಹಾದ್ವಾರ ಅತ್ಯಾಕರ್ಷಕವಾಗಿ ನಿರ್ಮಾಣಗೊಂಡಿದೆ. ಎರಡು ರಸ್ತೆಯನ್ನು ಒಳಗೊಂಡಿರುವ ಮಹಾದ್ವಾರದ ಅಗಲ ಸುಮಾರು 35 ಅಡಿ. ಎರಡೂವರೆ ಅಡಿ ಚಚ್ಚೌಕದ ಆರು ಕಂಬಗಳು ಆಕರ್ಷಕವಾಗಿದ್ದು, ಎತ್ತರ ಅರವತ್ತು ಅಡಿ ಇದೆ. ತುದಿಯಲ್ಲಿ ಐದು ಕಳಸಗಳು ಗೋಚರಿಸುತ್ತಿವೆ. ಮಹಾದ್ವಾರದ ಮೇಲ್ಭಾಗದ ಎರಡು ಪಾರ್ಶ್ವದಲ್ಲಿ ಹಂಸಾರೂಢ ಶ್ರೀ ವಾದಿರಾಜರ ಲಾಂಛನಗಳನ್ನು ಹೊಂದಿದೆ. ಉಡುಪಿ ಅಷ್ಟಮಠಗಳ ಕೇಂದ್ರಬಿಂದುವಿನಲ್ಲಿರುವ ಕಡಗೋಲ ಶ್ರೀಕೃಷ್ಣನ ಮೂರ್ತಿ ಸಹ ಆಕರ್ಷಕವಾಗಿ ಮೂಡಿ ಬಂದಿದ್ದು, ಭಕ್ತರಿಗೆ ಉಡುಪಿಯನ್ನು ನೆನಪಿಸುತ್ತದೆ. ನಲವತ್ತು ಲಕ್ಷ ರೂ.ಗಳ ವೆಚ್ಚದಲ್ಲಿ ಶಿವಮೊಗ್ಗದ ಹೆಸರುವಾಸಿ ಶಿಲ್ಪಿ ಕಾಶೀನಾಥ ನಿರ್ಮಿಸಿದ್ದಾರೆ.


ನಿಸರ್ಗ ಜ್ಞಾನ ಹಂಚಲು ಕಾನ್ಮನೆ ಅಣಿ

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಕಳವೆಯಲ್ಲಿ ಗ್ರಾಮ ಅರಣ್ಯ ಸಮಿತಿ ನೇತೃತ್ವದಲ್ಲಿ ನಿರ್ಮಾಣ ಮಾಡಲಾದ ಕಾನ್ಮನೆ ನಿಸರ್ಗ ಅಧ್ಯಯನ ಕೇಂದ್ರ ಈಗ ಜ್ಞಾನ ದಾಸೋಹ ನಡೆಸಲು ಅಣಿಯಾಗುತ್ತಿದೆ.ಜನ ಕೂಡ್ರಬಹುದಾದ ಸಭಾಂಗಣ, ಮೂರು ಅತಿಥಿ ಕೋಣೆಗಳು, ಅಡುಗೆ ಮನೆ, ಊಟದ ಮನೆ, ಆರಾಮಾಗಿ ಕುಳಿತು ಕತೆ ಹೇಳಬಹುದಾದ ಪೌಳಿಮನೆ ಎಲ್ಲ ಕಾರ್ಯಗಳೂ ಪೂರ್ಣಗೊಂಡಿವೆ. ಉದ್ಘಾಟನೆ ಬಳಿಕ ನವ ಕಳೆ ಪಡೆದುಕೊಂಡಿದೆ.ಲ್ಲವನ್ನೂ ಪರಿಸರ ಸ್ನೇಹಿಯಾಗಿ ರೂಪಿಸುವ ಪ್ರಯತ್ನ ನಡೆಯಿತಾದರೂ ನಿರ್ವಹಣೆ ಕಾರಣದಿಂದ ಕೆಲವು ಬದಲಾವಣೆ ಮಾಡಲಾಗಿದೆ ಎನ್ನುತ್ತಾರೆ ಕಾನ್ಮನೆ ಕಾರ್ಯಾಧ್ಯಕ್ಷ ಶಿವಾನಂದ ಕಳವೆ. ಕಾನ್ಮನೆಯಲ್ಲಿ ಮೂಲಿಕಾ ಶಿಬಿರ, ನೆಲ ಜಲ ಸಂರಕ್ಷಣೆ, ದೇಸಿ ಜ್ಞಾನ ಹಂಚಿಕೆ, ಕೃಷಿ ಪರಿಸರ ಮಾಧ್ಯಮ ತರಬೇತಿ, ಪರಿಸರ ಸಾಹಿತ್ಯ ಚಿಂತನೆ, ಪರಿಸರ ಚಲನಚಿತ್ರೋತ್ಸವ, ಗ್ರಾಮೀಣ ಅಭಿವೃದ್ಧಿ ಚಿಂತನೆ, ಮಾದರಿ ಪರಿಚಯ, ಮಕ್ಕಳಿಗಾಗಿ ಪರಿಸರ ಶಿಕ್ಷಣ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸಲಾಗುತ್ತದೆ. ಅಗತ್ಯ ಇದ್ದಲ್ಲಿ 40 ಜನ ವಾಸ್ತವ್ಯವಿರಬಹುದು. ಶೌಚಾಲಯ, ಸ್ನಾನದ ಮನೆಯಿದೆ. ಕಟ್ಟಡ ನಿರ್ಮಾಣಕ್ಕೆ ಈವರೆಗೆ 30 ಲಕ್ಷ ರೂ. ವೆಚ್ಚವಾಗಿದೆ. ಇಲ್ಲಿ ನಡೆಯುವ ಕಾರ್ಯಕ್ರಮ ಯಾವುದೇ ಇರಲಿ, ಎಲ್ಲರೂ 15 ನಿಮಿಷ ಪರಿಸರದ ಕತೆ ಕೇಳುವುದು, ಚಿತ್ರ ನೋಡುವುದು ಕಡ್ಡಾಯ. ಕಾನ್ಮನೆ ಪರಿಸರ ಪಾಠಗಳಿಗೆ ಅಗತ್ಯ ಪಠ್ಯ ರಚನೆಯಾಗಲಿದೆ. ಅದು ಪರಿಸರ ವಿಜ್ಞಾನದ ಜೊತೆಗೆ ದೇಸೀ ಜ್ಞಾನಕ್ಕೆ ಒತ್ತು ನೀಡಲಿದೆ.

ನೋಡ ಬನ್ನಿ ಬಣ್ಣಬಣ್ಣದ ಡೇರೆ ಹೂ

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಗಡಿಭಾಗದ ಚಿಪಗೇರಿ ಸನಿಹದ ಕಂಚಿಕೊಪ್ಪದ ಕೃಷಿಕರೊಬ್ಬರ ಮನೆಯಲ್ಲಿ ಬಣ್ಣಬಣ್ಣದ ಡೇರೆ ಹೂ ಬೆಳೆಯಲಾಗಿದೆ. ಸುಮಾರು ಐವತ್ತು ಬಗೆಯ ವೈವಿಧ್ಯಮಯ ಡೇರೆ ಹೂಗಳು ಅರಳಿ ನಿಂತು ಜನರನ್ನು ಸ್ವಾಗತಿಸುತ್ತಿವೆ. ಇಲ್ಲಿನ ಕೃಷಿಕ ರಾಮಚಂದ್ರ ಹೆಗಡೆಯವರ ಮಡದಿ ಇಂದಿರಾ ಹೆಗಡೆಯವರು ಕಳೆದ ಹತ್ತು ವರ್ಷಗಳಿಂದ ಹವ್ಯಾಸವಾಗಿ ವಿವಿಧ ಜಾತಿಯ ಡೇರೆ ಹೂಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ಮನಸ್ಸಿಗೆ ನೆಮ್ಮದಿ ಜೊತೆಗೆ ಆರ್ಥಿಕವಾಗಿಯೂ ಲಾಭದಾಯಕವಾಗಿದೆ ಎನ್ನುತ್ತಿದ್ದಾರೆ. ಹಬ್ಬದ ದಿನಗಳಲ್ಲಿ ಇನ್ನಿತರ ಹೂಗಳು ಕೊರತೆಯಾದರೂ, ಆಕರ್ಷಕ ಡೇರೆ ಹೂ ಗಳಿಗೆ ಮಾತ್ರ ಬರವಿಲ್ಲ ಎನ್ನುತ್ತಿದ್ದಾರೆ ಇಂದಿರಾ ಹೆಗಡೆ. ಆಸಕ್ತರಿಗೆ ‘ಡೇರೆ’ ನೋಡಲು ಈಗ ಸೂಕ್ತ ಕಾಲ.