ಉಡುಪಿ ನೆನಪಿಸುತ್ತಿದೆ ಸೋಂದಾದ ಮಹಾದ್ವಾರ

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಶ್ರೀಕ್ಷೇತ್ರ ಸೋಂದಾ ವಾದಿರಾಜಮಠದ ತಿರುವಿನ ಕಮಾಟಗೇರಿಯಲ್ಲಿ ಭವ್ಯ ಮಹಾದ್ವಾರ ತಲೆ ಎತ್ತಿ ನಿಂತಿದೆ. ಶ್ರೀ ರಮಾತ್ರಿವಿಕ್ರಮ ದೇವರ ಮತ್ತು ಶ್ರೀವಾದಿರಾಜ ಮಠಕ್ಕೆ ಸಮರ್ಪಣೆಗೊಳ್ಳಲು ಸಜ್ಜಾಗಿ ನಿಂತಿದೆ.
ಸೋಂದಾ ಶ್ರೀ ವಾದಿರಾಜ ಮಠದ ಶಿಷ್ಯವೃಂದದ ದೈವಜ್ಞ ಬ್ರಾಹ್ಮಣರಿಂದ ಈ ಮಹಾದ್ವಾರ ಅತ್ಯಾಕರ್ಷಕವಾಗಿ ನಿರ್ಮಾಣಗೊಂಡಿದೆ. ಎರಡು ರಸ್ತೆಯನ್ನು ಒಳಗೊಂಡಿರುವ ಮಹಾದ್ವಾರದ ಅಗಲ ಸುಮಾರು 35 ಅಡಿ. ಎರಡೂವರೆ ಅಡಿ ಚಚ್ಚೌಕದ ಆರು ಕಂಬಗಳು ಆಕರ್ಷಕವಾಗಿದ್ದು, ಎತ್ತರ ಅರವತ್ತು ಅಡಿ ಇದೆ. ತುದಿಯಲ್ಲಿ ಐದು ಕಳಸಗಳು ಗೋಚರಿಸುತ್ತಿವೆ. ಮಹಾದ್ವಾರದ ಮೇಲ್ಭಾಗದ ಎರಡು ಪಾರ್ಶ್ವದಲ್ಲಿ ಹಂಸಾರೂಢ ಶ್ರೀ ವಾದಿರಾಜರ ಲಾಂಛನಗಳನ್ನು ಹೊಂದಿದೆ. ಉಡುಪಿ ಅಷ್ಟಮಠಗಳ ಕೇಂದ್ರಬಿಂದುವಿನಲ್ಲಿರುವ ಕಡಗೋಲ ಶ್ರೀಕೃಷ್ಣನ ಮೂರ್ತಿ ಸಹ ಆಕರ್ಷಕವಾಗಿ ಮೂಡಿ ಬಂದಿದ್ದು, ಭಕ್ತರಿಗೆ ಉಡುಪಿಯನ್ನು ನೆನಪಿಸುತ್ತದೆ. ನಲವತ್ತು ಲಕ್ಷ ರೂ.ಗಳ ವೆಚ್ಚದಲ್ಲಿ ಶಿವಮೊಗ್ಗದ ಹೆಸರುವಾಸಿ ಶಿಲ್ಪಿ ಕಾಶೀನಾಥ ನಿರ್ಮಿಸಿದ್ದಾರೆ.