ನಿಸರ್ಗ ಜ್ಞಾನ ಹಂಚಲು ಕಾನ್ಮನೆ ಅಣಿ

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಕಳವೆಯಲ್ಲಿ ಗ್ರಾಮ ಅರಣ್ಯ ಸಮಿತಿ ನೇತೃತ್ವದಲ್ಲಿ ನಿರ್ಮಾಣ ಮಾಡಲಾದ ಕಾನ್ಮನೆ ನಿಸರ್ಗ ಅಧ್ಯಯನ ಕೇಂದ್ರ ಈಗ ಜ್ಞಾನ ದಾಸೋಹ ನಡೆಸಲು ಅಣಿಯಾಗುತ್ತಿದೆ.ಜನ ಕೂಡ್ರಬಹುದಾದ ಸಭಾಂಗಣ, ಮೂರು ಅತಿಥಿ ಕೋಣೆಗಳು, ಅಡುಗೆ ಮನೆ, ಊಟದ ಮನೆ, ಆರಾಮಾಗಿ ಕುಳಿತು ಕತೆ ಹೇಳಬಹುದಾದ ಪೌಳಿಮನೆ ಎಲ್ಲ ಕಾರ್ಯಗಳೂ ಪೂರ್ಣಗೊಂಡಿವೆ. ಉದ್ಘಾಟನೆ ಬಳಿಕ ನವ ಕಳೆ ಪಡೆದುಕೊಂಡಿದೆ.ಲ್ಲವನ್ನೂ ಪರಿಸರ ಸ್ನೇಹಿಯಾಗಿ ರೂಪಿಸುವ ಪ್ರಯತ್ನ ನಡೆಯಿತಾದರೂ ನಿರ್ವಹಣೆ ಕಾರಣದಿಂದ ಕೆಲವು ಬದಲಾವಣೆ ಮಾಡಲಾಗಿದೆ ಎನ್ನುತ್ತಾರೆ ಕಾನ್ಮನೆ ಕಾರ್ಯಾಧ್ಯಕ್ಷ ಶಿವಾನಂದ ಕಳವೆ. ಕಾನ್ಮನೆಯಲ್ಲಿ ಮೂಲಿಕಾ ಶಿಬಿರ, ನೆಲ ಜಲ ಸಂರಕ್ಷಣೆ, ದೇಸಿ ಜ್ಞಾನ ಹಂಚಿಕೆ, ಕೃಷಿ ಪರಿಸರ ಮಾಧ್ಯಮ ತರಬೇತಿ, ಪರಿಸರ ಸಾಹಿತ್ಯ ಚಿಂತನೆ, ಪರಿಸರ ಚಲನಚಿತ್ರೋತ್ಸವ, ಗ್ರಾಮೀಣ ಅಭಿವೃದ್ಧಿ ಚಿಂತನೆ, ಮಾದರಿ ಪರಿಚಯ, ಮಕ್ಕಳಿಗಾಗಿ ಪರಿಸರ ಶಿಕ್ಷಣ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸಲಾಗುತ್ತದೆ. ಅಗತ್ಯ ಇದ್ದಲ್ಲಿ 40 ಜನ ವಾಸ್ತವ್ಯವಿರಬಹುದು. ಶೌಚಾಲಯ, ಸ್ನಾನದ ಮನೆಯಿದೆ. ಕಟ್ಟಡ ನಿರ್ಮಾಣಕ್ಕೆ ಈವರೆಗೆ 30 ಲಕ್ಷ ರೂ. ವೆಚ್ಚವಾಗಿದೆ. ಇಲ್ಲಿ ನಡೆಯುವ ಕಾರ್ಯಕ್ರಮ ಯಾವುದೇ ಇರಲಿ, ಎಲ್ಲರೂ 15 ನಿಮಿಷ ಪರಿಸರದ ಕತೆ ಕೇಳುವುದು, ಚಿತ್ರ ನೋಡುವುದು ಕಡ್ಡಾಯ. ಕಾನ್ಮನೆ ಪರಿಸರ ಪಾಠಗಳಿಗೆ ಅಗತ್ಯ ಪಠ್ಯ ರಚನೆಯಾಗಲಿದೆ. ಅದು ಪರಿಸರ ವಿಜ್ಞಾನದ ಜೊತೆಗೆ ದೇಸೀ ಜ್ಞಾನಕ್ಕೆ ಒತ್ತು ನೀಡಲಿದೆ.