ಸೋದೆ-ಸ್ವರ್ಣವಲ್ಲಿ ಇತಿಹಾಸಕ್ಕೆ ಹೊಸ ಬೆಳಕು

ಧಾರವಾಡದ ಹಿರಿಯ ಇತಿಹಾಸ ಸಂಶೋಧಕ ಡಾ ಶ್ರೀನಿವಾಸ ರಿತ್ತಿ ಅವರು ಉತ್ತರ ಕನ್ನಡ ಜಿಲ್ಲೆಯ ಸ್ವರ್ಣವಲ್ಲಿಗೆ ಸಂಬಂಧಿಸಿದ ತಾಮ್ರ ಶಾಸನವೊಂದನ್ನು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗೆ ಹಸ್ತಾಂತರಿಸಿದ್ದಾರೆ.
ವಿಜಯನಗರ ಅರಸ ಎರಡನೇ ಹರಿಹರನ ಕಾಲಕ್ಕೆ ಸೇರಿದ ತಾಮ್ರ ಶಾಸನ ಇದು. ಸ್ವರ್ಣವಲ್ಲಿ ಮಠಕ್ಕೆ ಸಂಬಂಧಿಸಿದೆ. ಹರಿಹರನ ದಂಡನಾಯಕ ಈಚಪ್ಪ ಒಡೆಯ ಎಂಬುವನು ಗುತ್ತಿ, ಇಡಗುಂದಿ ಪ್ರದೇಶ ಒಳಗೊಂಡ ಗೋವಾ ಪ್ರಾಂತ ಆಳುತ್ತಿದ್ದ. ಅವನು ಅರಸನ ಅಪ್ಪಣೆಯ ಮೇರೆಗೆ ಶಾಲಿವಾಹನ ಶಕೆ 1326 ಸ್ವಭಾನು ಸಂವತ್ಸರ ಾಲ್ಗುಣ ಶುದ್ಧ ಪ್ರತಿಪದೆ (ಜ.31, 1405)ಯಂದು ಗೋಕರ್ಣದ ಆದಿತ್ಯೇಶ್ವರ ದೇವಾಲಯದ ಭಿಕ್ಷಾ ಸ್ವಾಸ್ಥ್ಯಕ್ಕಾಗಿ ಸರ್ವಜ್ಞ ಸರಸ್ವತಿ ಶ್ರೀಗಳಿಗೆ ಇಡಗುಂದಿ, ನಾಡಿನೊಳಗೊಣ ತಟಗಾರ ಎಂಬ ಗ್ರಾಮವನ್ನು ಉಂಬಳಿಯಾಗಿ ನೀಡಿದ್ದನು ಎಂದು ಉಲ್ಲೇಖವಿದೆ. ಯತಿಗಳ ಮುಂದಿನ ಸರಸ್ವತಿ ಎಂಬ ಅಭಿದಾನ ಹಾಗೂ ಗೋಕರ್ಣದ ಉಲ್ಲೇಖ ನೋಡಿದರೆ ಇವರು ಸ್ವರ್ಣವಲ್ಲಿ ಪರಂಪರೆಗೆ ಸೇರಿದವರು ಎಂಬುದು ಸ್ಪಷ್ಟ.
ಮಠದ ಇತಿಹಾಸದಲ್ಲೂ ಸರ್ವಜ್ಞ ಸರಸ್ವತಿ ಅಥವಾ ಸರ್ವಜ್ಞೇಂದ್ರ ಸರಸ್ವತಿ ಹೆಸರಿನ ಯತಿಗಳು ಆಗಿ ಹೋಗಿದ್ದಾರೆ. ಅಂದಿನ ಇಡಗುಂದಿ ಇಂದಿನ ಇಡಗುಂಜಿ, ಉಂಬಳಿಯ ತಟಗಾರ ಗ್ರಾಮ ಇಂದಿನ ಯಲ್ಲಾಪುರ ತಾಲೂಕಿನಲ್ಲಿದೆ. ಆದರೆ, ಗೋಕರ್ಣದ ಆದಿತ್ಯೇಶ್ವರ ದೇವಾಲಯವು ಯಾವುದು ಎಂಬುದು ಮಾತ್ರ ಗೊತ್ತಿಲ್ಲ.
ಸೋದೆ ವಾದಿರಾಜ ಮಠದ ಸಮೀಪದ ತಪೋವನದ ನದಿಯ ಬಂಡೆಯ ಮೇಲೆ ಶಿಲಾಲೇಖ ಇದೆ. ಶ್ರೀವೇದನಿಧಿ ತೀರ್ಥರು ಶಾಲಿವಾಹನ ಶಕೆ 1555 ಶ್ರೀಮುಖ ಸಂವತ್ಸರ ವೈಶಾಖ ಶುದ್ಧ 15ರಂದು ಈ ಬಂಡೆಯ ಮೇಲೆ ಪ್ರತಿಮೆ ಮಾಡಿಸಿದರು ಎಂದು ಹೇಳಿದೆ. ಇದು ವಿಷ್ಣುವಿನ ಪ್ರತಿಮೆ. ಅದರ ಬದಿಗೆ ಎರಡು ಪಾದಗಳು. ಪಾದಗಳ ಕೆಳಗೆ ಶ್ರೀವಾದಿರಾಜ ಎಂದಿದೆ. ಇದು ವಾದಿರಾಜರ ಪಾದುಕೆಗಳನ್ನು ಪ್ರಧಿನಿಧಿಸುತ್ತದೆ ಎಂಬುದು ಸ್ಪಷ್ಟ. ಈ ಪಾದುಕೆ ಇನ್ನೊಂದು ಬದಿಗೆ ಆರು ಶಿವಲಿಂಗಗಳೂ ಇವೆ. ವಾದಿರಾಜರು ಶೈವ ಮತವನ್ನೂ ಗೌರವಿಸುತ್ತಿದ್ದರು.