ಶಿರಸಿಯ ಜೈನಮಠದ ಕೂಷ್ಮಾಂಡು ದೇವಿಗೆ ಬಂಗಾರದ ಮುಖ ಕವಚ

ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸ್ವಾದಿ ದಿಗಂಬರ ಜೈನ ಮಠದಲ್ಲಿ ಅಭಿನವ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶರನ್ನವರಾತ್ರಿ ಉತ್ಸವ ಆರಂಭಗೊಂಡಿದೆ. ಈ ಬಾರಿ ತಮಿಳುನಾಡಿನಿಂದ ತರಿಸಲಾದ ಅಂಬಾರಿ ಮಂಟಪ ಹಾಗೂ ರಾಜಸ್ಥಾನದ ಜೈಪುರದಿಂದ ತರಿಸಲಾದ ಆಕರ್ಷಕ ಕಮಲ ಮಂಟಪ ವಿಶೇಷವಾಗಿ ಕಂಗೊಳಿಸುತ್ತಿದೆ.
ವರ್ಷಗಳ ಹಿಂದಿನ ದಸರಾ ವೈಭವ ಮರಳಿಸಲು ಸಕಲ ತಯಾರಿ ನಡೆದಿದೆ. ಗುರುವಾರ ಬೆಳಗ್ಗೆ 1008 ಆದಿನಾಥ ತೀರ್ಥಂಕರ, 1008 ನೇಮಿನಾಥ ತೀರ್ಥಂಕರ, 1008 ಪಾರ್ಶ್ವನಾಥ ತೀರ್ಥಂಕರಿಗೆ ಹಾಗೂ ಕೂಷ್ಮಾಂಡಿನಿ ಅಮ್ಮನಿಗೆ ವಿಶೇಷ ಪೂಜೆ, ಅಭಿಷೇಕ, ಲಘುಸಿದ್ಧ ಚಕ್ರಾರಾಧನೆ, ಅಲಂಕಾರ ಕಾರ್ಯಕ್ರಮಗಳು ನಡೆದವು. ಗುರುವಾರ ತಮಿಳುನಾಡಿನ ಪಂಡಿತ ಜಯಪಾಲ್ ಹಾಗೂ ಅಜಿತಪಾಲ್ ಅವರು ಕೂಷ್ಮಾಂಡು ದೇವಿಗೆ ಬಂಗಾರ ಮುಖ ಕವಚ ಅರ್ಪಿಸಿದರು. ಶುಕ್ರವಾರ ಭಕ್ತಾಮರ ವಿಧಾನ ಹಾಗೂ ಇತರ ಕಾರ್ಯಕ್ರಮಗಳು ನಡೆದವು. ದಶಮಿಯಂದು 2 ಆನೆಗಳು, 5 ಕುದುರೆಗಳು ಬರಲಿವೆ. ಆನೆಯ ಮೇಲೆ ಅಂಬಾರಿ-ಮಂಟಪ ವಿಶೇಷವಾಗಿರಲಿದೆ. ಕಮಲ ಮಂಟಪದಲ್ಲಿ ತೀರ್ಥಂಕರರ ಪ್ರತಿಮೆ ಇಟ್ಟು ಪೂಜಿಸಿ ದಶಮಿಯಂದು ಮೆರವಣಿಗೆ ಮಾಡಲಾಗುತ್ತದೆ.