ತಂಬಾಕು ನಿಷೇಧದ ಗುಮ್ಮ 409 ವರ್ಷಗಳಷ್ಟು ಹಳೆಯದು

ತಂಬಾಕು ನಿಷೇಧ ಕುರಿತು ವದಂತಿ ಮತ್ತು ಸುದ್ದಿ ಜೋರಾಗಿ ಹಬ್ಬಿದೆ. ಭಾರತದ ಕೆಲವೊಂದು ರಾಜ್ಯಗಳಲ್ಲಿ ತಂಬಾಕು ಆಂಶಿಕ ನಿಷೇಧ ಹೊಂದಿದೆ. ಬಿಹಾರ ರಾಜ್ಯ ಈ ಕುರಿತು ಹೊಸ ಕಾನೂನು ತಂದರೂ ಈ ಕಾನೂನು ಈಗ ಬಳಕೆಯಲ್ಲಿರುವ ಪರಿಮಳಯುಕ್ತ ತಂಬಾಕಿಗೆ ಮಾತ್ರ ಅನ್ವಯವಾಗುತ್ತದೆ. ಬಿಹಾರದಲ್ಲಿ ಒಣ ರೂಪದ ಅಥವಾ ಮೂಲ ರೂಪದ ತಂಬಾಕಿಗೆ ನಿಷೇಧ ಹೇರಲಾಗಿಲ್ಲ. ಬಿಹಾರದ ಮಾದರಿಯಲ್ಲಿ ತಂಬಾಕು ನಿಷೇಧ ಆಂಶಿಕವಾಗಿ ತರಲು 9 ರಾಜ್ಯಗಳು ಚಿಂತನೆ ನಡೆಸಿವೆ. ಇಲ್ಲಿ ನಿಷೇಧ ಕಾನೂನು ಬಂದರೂ ಅದು ಮೌಲ್ಯವರ್ಧಿತ ಪರಿಮಳಯುಕ್ತ ತಂಬಾಕಿಗೆ ಮಾತ್ರ ಅನ್ವಯವಾಗುತ್ತದೆ.
ಮೂಲ ರೂಪದ ತಂಬಾಕು ಔಷಧಗಳ ತಯಾರಿಕೆಗೆ ಬಳಕೆಯಾಗುತ್ತಿದೆ. ಪಾನ್ ತಿನ್ನುವ ಜನರ ಸಮೀಕ್ಷೆ ನಡೆಸಿದಾಗ ಬಹುಪಾಲು ಜನರು ಮೂಲ ರೂಪದ ತಂಬಾಕನ್ನು ಬಳಕೆ ಮಾಡುತ್ತಾರೆಯೇ ಹೊರತು ಮೌಲ್ಯವರ್ಧಿತ ತಂಬಾಕಿನ ಬಳಕೆ ಮಾಡುವುದಿಲ್ಲ ಎಂಬ ಅಂಶ ಕೂಡ ಆರೋಗ್ಯ ಇಲಾಖೆಗೆ ವರದಿ ರೂಪದಲ್ಲಿ ಸಲ್ಲಿಸಲಾಗಿದೆ. ಹೊಗೆ ರಹಿತ ತಂಬಾಕು ಅಥವಾ ಮೌಲ್ಯವರ್ಧಿತ ತಂಬಾಕಿಗೆ ಭಾರತದಲ್ಲಿ ಮಹತ್ವ ಬಂದದ್ದು, 1970ರ ಬಳಿಕ. ಅನಂತರ ಅದೊಂದು ಉದ್ದಿಮೆಯಾಗಿ ಹೊರಹೊಮ್ಮಿತು. ತಂಬಾಕಿನ ಮೇಲೆ ನಿಷೇಧ ಹೇರಲು ಆ ಸಂದರ್ಭದಲ್ಲಿಯೇ ಪ್ರಯತ್ನಗಳಾಗಿವೆ.
ಭಾರತದಲ್ಲಿ ತಂಬಾಕು ಕೃಷಿಗೆ 8,000 ವರ್ಷಗಳ ಇತಿಹಾಸವಿದೆ. ಆದರೆ ವೀಳ್ಯದೆಲೆ ಮತ್ತು ಅಡಿಕೆಯೊಂದಿಗೆ ತಂಬಾಕಿನ ಸೇವನೆ ಆರಂಭವಾದುದು 1708ರಲ್ಲಿ. ಅದಕ್ಕೂ ಮೊದಲು ಅಡಿಕೆಯನ್ನು ತಂಬಾಕು ರಹಿತವಾಗಿ ಕೇವಲ ಸುಣ್ಣ ಮತ್ತು ವೀಳ್ಯದೆಲೆಯೊಂದಿಗೆ ಸೇವಿಸಲಾಗುತ್ತಿತ್ತು. ತಂಬಾಕು ರಹಿತ ಪಾನ್ ಸೇವನೆ ಆಗಲೂ ಅಸ್ತಿತ್ವದಲ್ಲಿ ಇತ್ತು.
ಕಾನೂನುಗಳು:

ತಂಬಾಕು ನಿಷೇಧಕ್ಕೆ ಸಂಬಂಧಿಸಿ ಈತನಕ ಭಾರತದಲ್ಲಿ ವಿವಿಧ ರಾಜ್ಯಗಳು 1989ರ ಬಳಿಕ 15 ಕಾನೂನುಗಳನ್ನು ಬೇರೆ ಬೇರೆ ರೂಪದಲ್ಲಿ ಜಾರಿಗೆ ತಂದಿವೆ. ಈ ಕಾನೂನುಗಳಿಗೆ ಸಂಬಂಧಿಸಿ 15 ಪ್ರಕರಣಗಳು 2001ರಿಂದ ಸುಪ್ರೀಂಕೋರ್ಟ್ ಮತ್ತು ವಿವಿಧ ರಾಜ್ಯಗಳ ಹೈಕೋರ್ಟ್ಗಳಲ್ಲಿದ್ದು, ಇವುಗಳು ಇಲ್ಲಿಯ ತನಕ ಇತ್ಯರ್ಥವಾಗಿಲ್ಲ. ವಾದ ಮತ್ತು ಪ್ರತಿವಾದಗಳು ಮುಂದುವರಿಯುತ್ತಲೇ ಇವೆ. ಯಾವ ನ್ಯಾಯಾಲಯ ಕೂಡ ಈ ಕಾನೂನುಗಳಿಗೆ ತಾರ್ಕಿಕ ಅಂತ್ಯ ಅಥವಾ ಕಾನೂನಿನ ಬದ್ಧತೆ ನೀಡಿಲ್ಲ. ಸ್ವಾತಂತ್ರಪೂರ್ವ ಭಾರತದಲ್ಲಿ ಜಹಾಂಗೀರ್, ಶಿವಾಜಿ ಮಹಾರಾಜ, ಭೂವಿಂದರ್ ಸಿಂಗ್ ಮಾನ್ ಮೊದಲಾದ ರಾಜರು ತಂಬಾಕು ನಿಷೇಧಕ್ಕೆ ಮುಂದಾಗಿದ್ದರು. ಆದರೆ ಜನರ ವಿರೋಧ ಮತ್ತು ಅವರ ಮಂತ್ರಿಮಂಡಲದ ಆಕ್ಷೇಪ ಬಂದ ಕಾರಣ ಈ ಪ್ರಸ್ತಾವ ಕೈ ಬಿಡಲಾಯಿತು ಎಂಬ ಅಂಶ ಇತಿಹಾಸದ ಪುಟದಲ್ಲಿ ದಾಖಲಾಗಿದೆ.
ಹಲವು ಪ್ರಯತ್ನ:
1950ರಲ್ಲಿ ಭಾರತದ ಸಂವಿಧಾನದ 47ನೇ ವಿಧಿಯನ್ವಯ ಜನರು ಬಳಸುವ ಯಾವುದೇ ಉತ್ಪನ್ನ ಆರೋಗ್ಯಕ್ಕೆ ಹಾನಿಯಾಗುವುದಿದ್ದರೆ ಔಷಧಕ್ಕಾಗಿ ಅಂತಹ ಉತ್ಪನ್ನಗಳನ್ನು ಬಳಸುವುದನ್ನು ಹೊರತು ಪಡಿಸಿ ಇತರ ಬಳಕೆ ನಿಷೇಧಿಸಬಹುದು ಎಂದು ತಿಳಿಸಲಾಗಿದೆ. 1950ರ ಬಳಿಕ 1989ರಿಂದ ಒಂದಲ್ಲೊಂದು ರೀತಿಯಲ್ಲಿ ತಂಬಾಕು ನಿಷೇಧದ ಕಾನೂನುಗಳು ಜಾರಿ ಮಾಡಲು ಪ್ರಯತ್ನಗಳಾಗಿವೆ.ೆಲವೊಂದು ರಾಜ್ಯಗಳು ಆಂಶಿಕ ರೀತಿಯಲ್ಲಿ ಅವುಗಳ ಅನುಷ್ಠಾನ ಮತ್ತು ತಂಬಾಕು ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸಿವೆ. ಆದರೆ ಸ್ವಾತಂತ್ರ ಪೂರ್ವದಿಂದ ಇಲ್ಲಿಯ ತನಕದ ಇತಿಹಾಸ ಅವಲೋಕಿಸಿದರೆ ಅದು ಸುಲಭವಲ್ಲ ಎಂಬುದು ಗಮನಕ್ಕೆ ಬರುತ್ತದೆ. ತಂಬಾಕು ನಿಷೇಧ ಮತ್ತು ಅಡಿಕೆ ಬಳಕೆಗೆ ಯಾವುದೇ ನೇರ ಸಂಬಂಧವಿಲ್ಲ. ತಂಬಾಕು ರಹಿತ ಅಡಿಕೆ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಲೇ ಇರುವುದರಿಂದ ಅಡಿಕೆ ಬೆಳೆಗಾರರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.