ಅಡಕೆ ಸುಲಿಯುವ ಯಂತ್ರದ ಕಡೆ ಹೆಚ್ಚಿದ ರೈತರ ಒಲವು

ಶೃಂಗೇರಿ ತಾಲೂಕಿನಾದ್ಯಂತ ಅಡಕೆ ಕೊಯಿಲು ಆರಂಭಗೊಳ್ಳುತ್ತಿದ್ದು, ಯಾಂತ್ರಿಕರಣಕ್ಕೆ ಒಗ್ಗಿಕೊಳ್ಳುತ್ತಿರುವ ರೈತರು ಅಡಕೆ ಸುಲಿಯುವ ಯಂತ್ರಕ್ಕೆ ಹೆಚ್ಚಿನ ಒಲವು ತೋರುತ್ತಿದ್ದಾರೆ.ಾರ್ಮಿಕರ ಅಭಾವದಿಂದ ದೊಡ್ಡ ಹಿಡುವಳಿದಾರರು ಅಡಕೆ ಸುಲಿಯುವ ಯಂತ್ರವನ್ನು ಖರೀದಿ ಮಾಡುತ್ತಿದ್ದರೂ ಸಣ್ಣ ರೈತರು ಇನ್ನೂ ಯಂತ್ರವನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಡಕೆ ಸುಲಿಯುವ ಯಂತ್ರಕ್ಕೆ 60 ಸಾವಿರದಿಂದ 2.20 ಲಕ್ಷದವರೆಗೆ ಇದ್ದು, ಸರಕಾರವು ಪ್ರೋತ್ಸಾಹಧನವನ್ನು ಅಗತ್ಯಕ್ಕೆ ಅನುಗುಣವಾಗಿ ಬಿಡುಗಡೆ ಮಾಡದಿರುವುದರಿಂದ ಎಲ್ಲಾ ರೈತರು ಖರೀದಿಸಲು ಸಾಧ್ಯವಾಗುತ್ತಿಲ್ಲ. ತಾಲೂಕಿನ ಬಹುತೇಕ ಅಡಕೆ ತೋಟಗಳಿಗೆ ಹಳದಿ ಎಲೆ ರೋಗ ಬಂದಿದ್ದು, ರೋಗ ಪೀಡಿತ ಅಡಕೆ ಸಂಸ್ಕರಣೆಯೂ ಕಷ್ಟವಾಗಿದೆ. ಯಂತ್ರದಲ್ಲಿ ಸುಲಿಯಲು ಸುಲಭ ಸಾಧ್ಯವಾಗುವುದರಿಂದ ರೈತರು ಹೆಚ್ಚಿನ ಆಸಕ್ತಿ ಯಂತ್ರದತ್ತ ತೋರಿದ್ದಾರೆ.
ಸಾಂಪ್ರದಾಯಿಕ ಅಡಕೆ ಸುಲಿತದಿಂದ ಅಡಕೆಯ ಗುಣಮಟ್ಟ ಉತ್ತಮವಾಗಿರುವುದಲ್ಲದೆ ಅಡಕೆ ಸುಲಿತವೂ ಕ್ರಮಬದ್ದವಾಗಿರುತ್ತದೆ. ಆದರೆ ಅಡಕೆ ಗೊನೆ ಮರದಿಂದ ಇಳಿಸಿದ ಎರಡು ಮೂರು ದಿನಗಳಲ್ಲಿ ಅಡಕೆ ಸುಲಿಯಬೇಕು. ಆದರೆ ಅಡಕೆ ಸುಲಿಯುವ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿರುವ ಕಾರಣದಿಂದ ಮತ್ತು ಎಲ್ಲೆಡೆ ಒಂದೇ ಬಾರಿ ಕೊಯಿಲು ಆರಂಭಗೊಳ್ಳುವುದರಿಂದ ಅಡಕೆ ಸುಲಿಯುವುದು ಕಷ್ಟವಾಗುತ್ತಿದೆ. ಅಡಕೆ ಸುಲಿಯುವ ಯಂತ್ರದಿಂದ ಬಹುತೇಕ ಸುಲಿಯಬಹುದಾದರೂ ಉಳಿದ ಅಲ್ಪ ಭಾಗ ಕಾರ್ಮಿಕರಿಂದ ಸಂಸ್ಕರಣೆ ಮಾಡಿಸಬೇಕು.
ಸುಧಾರಿಸಿರುವ ಯಂತ್ರಗಳು:
ಕಳೆದ ಇಪ್ಪತ್ತು ವರ್ಷಗಳಿಂದ ಅಡಕೆ ಸುಲಿಯುವ ಯಂತ್ರಗಳ ಸಂಶೋಧನೆ ನಡೆಯುತ್ತಿದೆ. ಇತ್ತೀಚಿನ ಆರೇಳು ವರ್ಷಗಳಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಈಗ ಕುಂಟುವಳ್ಳಿ, ತುಮಕೂರು ಮತ್ತು ಉಡುಪಿಯ ಯಂತ್ರಗಳು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿವೆ. ಈ ವರ್ಷ ಬರುತ್ತಿರುವ ಕುಂಟುವಳ್ಳಿ ಯಂತ್ರಗಳು ಸಾಕಷ್ಟು ಸುಧಾರಣೆಯಾಗಿದೆ ಎಂದು ಕುಂಟುವಳ್ಳಿ ಅಡಕೆ ಸುಲಿಯುವ ಯಂತ್ರದ ಮಾರಾಟ ಪ್ರತಿನಿಧಿ ಎಚ್.ಸಿ.ಗಣೇಶ್ ಹೇಳುತ್ತಾರೆ.
ತಾಲೂಕಿನಲ್ಲಿ ಅಡಕೆ ಬೆಳೆಯು ಪ್ರಮುಖ ವಾಣಿಜ್ಯ ಬೆಳೆ. ಇದರ ಸಂಸ್ಕರಣೆ ಪ್ರಮುಖ ಘಟ್ಟ. ಮಲೆನಾಡಿನಲ್ಲಿ ಮಳೆ ಹೆಚ್ಚಿರುವುದರಿಂದ ರೈತರು ಸಾಂಪ್ರದಾಯಿಕ ಹಸಿ ಬೆಟ್ಟೆ, ಇಡಿ ಅಡಕೆಗಳನ್ನೇ ಹೆಚ್ಚು ಸಿದ್ದಪಡಿಸುತ್ತಾರೆ. ಸಣ್ಣ ರೈತರಿಗೆ ಅಡಕೆ ಸುಲಿಯುವ ಯಂತ್ರವನ್ನು ಕೊಳ್ಳಲಾಗುತ್ತಿಲ್ಲ. ಸರಕಾರ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಹಾಯಧನವನ್ನು ಬಿಡುಗಡೆ ಮಾಡಿದಲ್ಲಿ ಸಣ್ಣ ರೈತರಿಗೆ ಸಹಾಯಕವಾಗುತ್ತದೆ.