ಹೊಳೆ ತಟದಲ್ಲಿ ಆಂಜನೇಯ ಪ್ರತ್ಯಕ್ಷ

ಭಕ್ತಾಗ್ರೇಸರ ಎಂದೇ ಬಿರುದು ಹೊತ್ತ ಮಾರುತಿ ದೇವರು ರಾತ್ರಿ ಬೆಳಗಾಗುವುದರೊಳಗೆ ನದಿ ತಟದಲ್ಲಿ ಶಿಲಾಮೂರ್ತಿ ರೂಪದಲ್ಲಿ ಪ್ರತ್ಯಕ್ಷ... ಅಂದಮೇಲೆ ಆಸ್ತಿಕರ ಕುತೂಹಲಕ್ಕೆ, ಭಕ್ತಿ ಪರಾಕಾಷ್ಟೆಗೆ ಪರಿಮಿತಿಯೇ ಸಾಲದು.
ಈ ವಿದ್ಯಮಾನ ನಡೆದಿದ್ದು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಚಂದಾವರ ಹೊಳೆಯ ದಡದಲ್ಲಿ. ಚಂದಾವರ ಸೀಮೆಗೆ ಇಲ್ಲಿನ ಹೊಳೆ ದಡದಲ್ಲಿರುವ ಮಾರುತಿ ಆರಾಧ್ಯ ದೈವ. ಇದೇ ಹೊಳೆಯ ದಡದ ಮಾರ್ಗದಂಚಿನ ಸೇತುವೆ ಪಕ್ಕದಲ್ಲಿ ಇತ್ತೀಚೆಗೆ ಬೆಳಕು ಮೂಡುವುದರೊಳಗೆ ಕೈಮುಗಿದು ಕುಳಿತ ಮಾರುತಿಯ ಶಿಲಾ ಮೂರ್ತಿ ಪ್ರತ್ಯಕ್ಷವಾಗಿದ್ದು, ಮಾರ್ಗದಲ್ಲಿ ಸಾಗುವವರ, ಸಮೀಪದ ನಿವಾಸಿಗಳನ್ನು ಸೆಳೆಯುವಲ್ಲಿ ಕಾರಣವಾಯಿತು.ಂದಾವರ ಹೊಳೆಯಲ್ಲಿ ಮಾರುತಿ ಮೂರ್ತಿ ಪ್ರತ್ಯಕ್ಷವಾಗಿದೆ ಎಂಬ ಸುದ್ದಿ ನಾಲಿಗೆಯಿಂದ, ನಾಲಿಗೆಗೆ ಹರಿದಾಡಿ, ನೋಡ ನೋಡುತ್ತಿದ್ದಂತೆ ಬೆಳಗ್ಗೆ 9ಗಂಟೆಯ ಒಳಗೇ 2ಸಾವಿರಕ್ಕೂ ಹೆಚ್ಚು ಜನ ಸೇರಿದರು. ನೋಡಲು ಆಕರ್ಷಣೀಯವಾಗಿದ್ದ ಮಾರುತಿ ಮೂರ್ತಿ ಹೊಳೆಯಲ್ಲಿ ರೇತಿ ತೆಗೆಯುವ ಸಂದರ್ಭದಲ್ಲಿ ದೊರೆತಿದೆ ಎಂಬ ಮಾತುಗಳ ಜೊತೆ ಹತ್ತು ಹಲವು ವದಂತಿಗಳು ರೆಕ್ಕೆಪುಕ್ಕ ಸೇರಿಸಿಕೊಂಡು ಕಥೆ ಕಟ್ಟಲಾರಂಭಿಸಿದವು. ಜನ ಪೂಜಾ ಕೈಂಕರ್ಯಗಳಿಗೂ ಸಿದ್ಧತೆ ನಡೆಸತೊಡಗಿದರು. ಇನ್ನೇನು ಮತ್ತೆ ಪ್ರತಿಷ್ಟೆ ಮಾಡಿ ಮಂದಿರ ನಿರ್ಮಿಸುವವರೆಗೆ ಯೋಜನೆಗಳು ರೂಪುಗೊಳ್ಳಲಾರಂಭಿಸುವ ವೇಳೆ ತಹಶೀಲ್ದಾರ ಜಿ.ಎಂ.ಬೋರಕರ್ ಸ್ಥಳಕ್ಕೆ ತೆರಳಿ ಸೇರಿದ್ದ ಸಹಸ್ರಾರು ಜನರ ಕುತೂಹಲಕ್ಕೆ ಉತ್ತರ ದೊರಕಿಸಿಕೊಟ್ಟರು.
ದೊರಕಿತು ಉತ್ತರ:
ಇತ್ತೀಚೆಗೆ ಕೆಕ್ಕಾರಿನ ಮಠದಲ್ಲಿ ನೂತನವಾಗಿ ಮಾರುತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅಲ್ಲಿರುವ ಹಳೆಯ ಮೂರ್ತಿ ಬದಲಾಯಿಸಲಾಗಿದೆ. ಚಂದಾವರದಲ್ಲಿ ಸಿಕ್ಕ ಮಾರುತಿ ಮೂರ್ತಿ ಕೆಕ್ಕಾರ ಮಠದ ಆವರಣದಲ್ಲಿರುವುದಾಗಿತ್ತು. ಹೊಸ ಮೂರ್ತಿ ಪ್ರತಿಷ್ಠಾಪನೆ ನಂತರ ಈ ಮೂರ್ತಿಯನ್ನು ಚಂದಾವರ ಹೊಳೆಯಲ್ಲೇ ವಿಸರ್ಜಿಸಿದ್ದರು. ಇದೀಗ ಹೊಳೆಯಲ್ಲಿ ನೀರು ಆರಿದ ಕಾರಣ ಮೂರ್ತಿ ಕಂಡು ಬಂದಿದೆ. ಯಾರೋ ಅದನ್ನು ಮೇಲೆತ್ತಿ ಇಟ್ಟಿದ್ದರು. ಸಿಕ್ಕ ಈ ಮೂರ್ತಿಯನ್ನು ಪಂಚನಾಮೆ ಮಾಡಿ, ಮೂರ್ತಿಯನ್ನು ಶಾಸೋಕ್ತವಾಗಿ ಅಘನಾಶಿನಿ ಹೊಳೆಯಲ್ಲಿ ವಿಸರ್ಜಿಸುವಂತೆ ಮಠದ ಪ್ರಮುಖರು ಮತ್ತು ಅರ್ಚಕರಿಗೆ ತಹಶೀಲ್ದಾರರು ಸೂಚಿಸಿದರು.