ನುಡಿಹಬ್ಬಕ್ಕೆ ಕಾರವಾರ ಸಜ್ಜು

ಉತ್ತರ ಕನ್ನಡ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಾರವಾರ ಸಜ್ಜಾಗಿದೆ. ಡಿ.20ರ ಬೆಳಗ್ಗೆ ಜಿಲ್ಲಾ ರಂಗಮಂದಿರದ ದಿ ಯಶವಂತ ಚಿತ್ತಾಲ ಹೆಸರಿನ ವೇದಿಕೆಯಲ್ಲಿ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಕವಯಿತ್ರಿ ಭಾಗೀರಥಿ ಹೆಗಡೆ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಅವರಿಗೆ ಸಾಹಿತಿ ಜಯಂತ ಕಾಯ್ಕಿಣಿ ಧ್ವಜ ಹಸ್ತಾಂತರ ಮಾಡಲಿದ್ದಾರೆ. ಸಮ್ಮೇಳನವನ್ನು ದಿನೇಶ ಅಮಿನಮಟ್ಟು ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ ಸೇರಿದಂತೆ ಅನೇಕ ಗಣ್ಯರು ಸಾಹಿತ್ಯ ಜಾತ್ರೆಗೆ ಸಾಕ್ಷಿಯಾಗಲಿದ್ದಾರೆ.
ಶುಕ್ರವಾರ ಇಡೀ ದಿನ ಜಿಲ್ಲಾ ರಂಗಮಂದಿರದಲ್ಲಿ ಸಮ್ಮೇಳನಕ್ಕೆ ಅಲಂಕಾರ ಮತ್ತು ವೇದಿಕೆ ಸಜ್ಜುಗೊಳಿಸುವಿಕೆ ಕಾರ್ಯ ಭರದಿಂದ ನಡೆಯಿತು. ಕರಾವಳಿ ಮತ್ತು ಘಟ್ಟದ ಮೇಲಿನ ಭಾಗದ ಸಾಹಿತಿಗಳಲ್ಲಿ ಕಳೆದ ಸಮ್ಮೇಳನದ ವೇಳೆ ಕಂಡು ಬಂದಿದ್ದ ಭಿನ್ನಮತ ಮತ್ತು ಪರ್ಯಾಯ ಸಾಹಿತ್ಯ ಸಮ್ಮೇಳನದ ಕೂಗು ಈ ಸಲ ಕೇಳಿ ಬಂದಿಲ್ಲ. ಘಟ್ಟದ ಮೇಲಿನ ಅದರಲ್ಲೂ ಮಹಿಳಾ ಸಾಹಿತಿ ಭಾಗೀರಥಿ ಹೆಗಡೆ ಅವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡುವ ಮೂಲಕ ಜಿಲ್ಲಾ ಸಾಹಿತ್ಯ ಪರಿಷತ್ ಬೆಸುಗೆ ಬಲಪಡಿಸುವ ಕಾರ್ಯ ನಡೆಸಿದೆ.ಕ್ಷರ ಲೋಕ ಸಮಾಜವನ್ನು ಮತ್ತು ಸಮುದಾಯವನ್ನು ಹತ್ತಿರ ತರುವ ಮತ್ತು ಬೆಸೆಯುವ ಕ್ರಿಯೆ ಮಾಡಬೇಕು. ಮನಸ್ಸುಗಳನ್ನು ಬೆಸೆಯುವುದು ಅಕ್ಷರದ ಕೆಲಸ. ನುಡಿ ಹಬ್ಬದ ಉದ್ದೇಶ ಸಹ ಅದೇ. ನಾಡು ನುಡಿಯ ಹೆಸರಲ್ಲಿ ಬೇರೆ ಬೇರೆಯಾಗದೇ ಒಂದಾಗುವ ಪ್ರಕ್ರಿಯೆಯನ್ನೇ ಸಾಹಿತ್ಯ ಮಾಡಬೇಕಾಗಿರುವ ಕಾರಣಕ್ಕೆ ಸಾಹಿತ್ಯ ಸಮ್ಮೇಳನಕ್ಕೆ ಈ ಸಲ ಹೆಚ್ಚು ಒತ್ತು ಬಂದಿದೆ.
ರೋಹಿದಾಸ ನಾಯಕ ಅಧ್ಯಕ್ಷರಾದ ಮೇಲೆ 6 ಜಿಲ್ಲಾ ಸಮ್ಮೇಳನಗಳು ನಡೆದಿದ್ದು, ಇದು 7ನೇ ಸಮ್ಮೇಳನವಾಗಿದೆ. ಕಸಾಪ ಉತ್ತರ ಕನ್ನಡ ಘಟಕ ನಡೆಸುತ್ತಿರುವ 19ನೇ ಸಮ್ಮೇಳನ ಇದಾಗಿದೆ. ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ಅನುದಾನ ನೀಡದಿದ್ದ ಸಮಯದಲ್ಲಿ ಸಹ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿಕೊಂಡು ಬಂದ ಪರಂಪರೆ ಜಿಲ್ಲೆಯ ಸಾಹಿತ್ಯ ಪರಿಷತ್ಗಿದೆ.
ರೋಹಿದಾಸ ನಾಯಕರ ಅವಧಿಯಲ್ಲಿ ನಡೆದ ಸಮ್ಮೇಳನಗಳ ಪೈಕಿ ಜೋಯಿಡಾ ಸಮ್ಮೇಳನದಲ್ಲಿ ಆರ್.ವಿ.ಭಂಡಾರಿ, ಭಟ್ಕಳದಲ್ಲಿ ವಿಷ್ಣು ನಾಯ್ಕ, ಸಿದ್ದಾಪುರದಲ್ಲಿ ನಾ.ಸು.ಭರತನಳ್ಳಿ, ಮುಂಡಗೋಡಲ್ಲಿ ವಿಡಂಬಾರಿ, ಅಂಕೋಲಾ ಸಮ್ಮೇಳನದಲ್ಲಿ ಜಯಂತ ಕಾಯ್ಕಿಣಿ ಸರ್ವಾಧ್ಯಕ್ಷತೆ ವಹಿಸಿದ್ದರು. ಪ್ರಸ್ತುತ ಭಾಗೀರಥಿ ಹೆಗಡೆ ಅಧ್ಯಕ್ಷತೆ ವಹಿಸುತ್ತಿದ್ದು, ದಿಕ್ಸೂಚಿ ಭಾಷಣ ಕೇಳಲು ಸಾಹಿತ್ಯಾಸಕ್ತರು ಕಾತರರಾಗಿದ್ದಾರೆ. ಜಿಲ್ಲಾ ರಂಗಮಂದಿರದ ಹೊರ ಭಾಗದಲ್ಲಿ ಪುಸ್ತಕ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಮೊದಲ ದಿನ ಏನೇನು:
ಸಮ್ಮೇಳನ ಉದ್ಘಾಟನೆ ನಂತರ ಜಿಲ್ಲಾ ಭಾಷಾ ಸಾಮರಸ್ಯ ಮತ್ತು ಸಂಸ್ಕೃತಿ ಕುರಿತು ವಿಚಾರಗೋಷ್ಠಿ ನಡೆಯಲಿದೆ. ನಂತರ ಕವಿ ಬಸವರಾಜ ಹೂಗಾರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಏರ್ಪಟ್ಟಿದೆ. ಸಂಜೆ 4:45ಕ್ಕೆ ಉತ್ತರ ಕನ್ನಡ 21ನೇ ಶತಮಾನದ ಸಾಹಿತ್ಯ ಕುರಿತು ಡಾ ಸೈಯ್ಯದ್ ಜಮೀರುಲ್ಲಾ ಷರ್ೀ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ಇದೆ. ಸಂಜೆ 6: 15 ಕ್ಕೆ ಕವಿ ಸನದಿ ಅಧ್ಯಕ್ಷತೆಯಲ್ಲಿ ಕವಿ ಕಾವ್ಯ ಕುಂಚ ಕಾರ್ಯಕ್ರಮವಿದೆ. 7:45 ಕ್ಕೆ ನಗೆಹಬ್ಬ ನಡೆಯಲಿದೆ.