ರೈತರ ನಿದ್ದೆಗೆಡಿಸುತ್ತಿರುವ ಎಲೆ ಸುರುಳಿ ರೋಗ

ಎಲೆ ಸುರುಳಿ ರೋಗ ಇದೀಗ ಬಾಳೆ ಬೆಳೆ ರೈತರ ನಿದ್ದೆಗೆಡಿಸಿದೆ. ಎಲೆ ಸುರುಳಿಗಳನ್ನು ದಿನ ಬೆಳೆಗಾಗುತ್ತಿದಂತೆ ತಿಂದು ಮುಗಿಸುವ ಎರಿಯೇ ನೋಟ್ ಥ್ರಾಕ್ರ್ ಎಂಬ ಬಕಾಸುರ ಕೀಟದ ಹಾವಳಿಯಿಂದ ಹಾಸನ ಜಿಲ್ಲೆ ರಾಮನಾಥಪುರ ಹೋಬಳಿಯ ಶಿರದನಹಳ್ಳಿ, ರಾಮನಕೊಪ್ಪಲು ರುದ್ರಪಟ್ಟಣ ಗಂಗೂರು ಮುಂತಾದ ಕಡೆಗಳಲ್ಲಿ ಈ ರೋಗ ವ್ಯಾಪ್ತಿಸಿದೆ.
ರಾಮನಾಥಪುರ ಹೋಬಳಿಯ ಹಲವೆಡೆ ಬಾಳೆ ಎಲೆ ಸಿಗುವುದೇ ದುಸ್ತರವಾಗುತ್ತಿದೆ. ಇಳುವರಿಗೂ ಹೊಡೆತ ನೀಡುತ್ತಿದೆ. ಕೆಲವೆಡೆ ಗಿಡಗಳು ಸಾಯುತ್ತಿವೆ. ಸುಮಾರು ಒಂದೂವರೆ ಇಂಚು ಉದ್ದವಿರುವ ರೇಷ್ಮೆಹುಳು ಹೋಲುವ ಹಸಿರು ಬಣ್ಣದ ಈ ಕೀಟ ಬೂದಿ ಮೆತ್ತಿಕೊಂಡಂತಿರುತ್ತದೆ. ರಾತ್ರಿಯಿಡಿ ಬಾಲೆ ಎಲೆಗಳನ್ನು ತಿನ್ನುವ ಈ ಕೀಟ ಹಗಲು ಎಲೆಯನ್ನೇ ಸುರುಳಿ ಮಾಡಿಕೊಂಡು ಬಚ್ಚಿಟ್ಟುಕೊಳ್ಳುತ್ತದೆ. ಇವುಗಳ ವಂಶಾಭಿವೃದ್ದಿ ವಿಪರೀತ ವೇಗವಾಗಿ ಅಗುತ್ತಿರುವುದು, ಸಾಮಾನ್ಯ ಕೀಟನಾಶಕಗಳಿಗೆ ಬಗ್ಗದಿರುವುದು ಕೃಷಿಕರಲ್ಲಿ ಆತಂಕ ಹುಟ್ಟಿಸಿದೆ.
ಹವಾಮಾನ ವೈಪರೀತ್ಯ ಹಾಗೂ ಹುಳುಗಳ ಸಂತಾನೋತ್ಪತ್ತಿ ಸಮಯ ಇದಾಗಿರುವುದರಿಂದ ಹೆಚ್ಚಿನ ಎಲೆ ತಿನ್ನುತ್ತವೆ. ಅವುಗಳನ್ನು ಹತೋಟಿ ಮಾಡಲು ಹಾಗೂ ಎಲೆ ಸುರಳಿ ಕೀಟ ಬಾಧೆ ತಪ್ಪಿಸಲು ಕೀಟ ನಿಯಂತ್ರಣಕ್ಕೆ ಲೀಟರ್ ನೀರಿಗೆ 2 ಮಿ.ಲೀ. ಕ್ಲೋರೋಫೈರಿಫಾಸ್ ಅಥವಾ 0.3 ಮಿ.ಲೀ ಕಾನ್ಘೀಡಾರ್ ಸಿಂಪಡಿಸಬಹುದು ಈ ಕೀಟ ಹಗಲು ಹೊತ್ತಿನಲ್ಲಿ ಎಲೆಯಲ್ಲೇ ಸುರುಳಿ ಸುತ್ತಿಕೊಂಡು ರಕ್ಷಣೆ ಪಡೆಯುವುದರಿಂದ ಕತ್ತಲು ಆವರಿಸಿದ ಬಳಿಕ, ಮುಂಜಾನೆ ಔಷಧ ಸಿಂಪಡಿಸುವಲ್ಲಿ ಪರಿಣಾಮ ಬೀರುತ್ತದೆ. ಅದಕ್ಕೂ ಮಿಗಿಲಾಗಿ ಸುರುಳಿಯಿಂದ ಕೀಟ ಬೇರ್ಪಡಿಸಿ ನಾಶಪಡಿಸುವುದು ಅತ್ಯುತ್ತಮ ಕ್ರಮ ಎಂಬುದು ಕೃಷಿ ಅಧಿಕಾರಿಗಳ ಸಲಹೆ.