ಹತ್ತರ ಜೊತೆ ಹನ್ನೊಂದಾಗದಿರಲಿ ಈ ವಿವಿ

ಕೇಂದ್ರ ಸರಕಾರ ಉನ್ನತ ಶಿಕ್ಷಣದ ವಿಸ್ತರಣೆಗಾಗಿ ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಲು ತೀರ್ಮಾನಿಸಿದೆ. ಜಿಲ್ಲೆಗೊಂದು ಅಥವಾ 2 ಜಿಲ್ಲೆಗೊಂದು ವಿವಿಗಳು ದೇಶಾದ್ಯಂತ ತಲೆಯೆತ್ತಲಿವೆ. ಉತ್ತರ ಕನ್ನಡ ಜಿಲ್ಲೆಗೆ ವಿವಿ ಬೇಕೆ? ಎಂಬ ಬಗ್ಗೆ ಸಮಾಲೋಚಿಸಲು ವಿವಿ ಸ್ಥಾಪನೆಗಾಗಿ ಸಲಹೆ ನೀಡಲು ರಚಿಸಿರುವ ಪ್ರೊ ಸೈದಾಪುರ ಸಮಿತಿಯ ಸಭೆ ಡಿ. 23ರಂದು 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಗೃಹದಲ್ಲಿ ನಡೆಯಲಿದೆ. ಉನ್ನತ ಶಿಕ್ಷಣ ಸಚಿವ ದೇಶಪಾಂಡೆ, ಮಾಜಿ ಶಿಕ್ಷಣ ಸಚಿವ ಕಾಗೇರಿ, ಜಿಲ್ಲೆಯ ಎಲ್ಲ ಶಾಸಕರು, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಡಾ ಎಂ.ಪಿ.ಕರ್ಕಿ, ಎಸ್.ಪಿ.ಕಾಮತ್, ದೀಪಕ ಹೆಗಡೆ, ಮುರಲೀಧರ ಪ್ರಭು, ವಿ.ಎಚ್.ಬೆಣ್ಣೆ, ವಿನಾಯಕ ರಾವ್ ಹೆಗಡೆ, ವಿ.ಜೆ.ನಾಯ್ಕ, ಪ್ರಮೋದ ಹೆಗಡೆ, ಕೈಗಾ ಮತ್ತು ನೌಕಾನೆಲೆಯ ಮುಖ್ಯಸ್ಥರು, ಸಂಶೋಧನಾ ಕೇಂದ್ರದ ಪ್ರಮುಖರು, ಪತ್ರಕರ್ತ ಗಂಗಾಧರ ಹಿರೇಗುತ್ತಿ ಮೊದಲಾದವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿ ವ್ಯಾಪ್ತಿಗೊಳಪಟ್ಟ ಉ.ಕ ಜಿಲ್ಲೆಗೆ ಒಂದು ಪ್ರತ್ಯೇಕ ಅಥವಾ ಹಾವೇರಿ ಜಿಲ್ಲೆ ಜೊತೆಗೂಡಿ ಇನ್ನೊಂದು ಕೇಂದ್ರ ಅಥವಾ ರಾಜ್ಯ ವಿವಿ ಸಿಗುವ ಸಾಧ್ಯತೆ ಇದೆ. ರಾಜ್ಯದ ವಿವಿಗಳು 50ಕ್ಕೂ ಹೆಚ್ಚು ವಿಷಯ ಕಲಿಸುತ್ತ ಸಂಶೋಧನೆಗೆ ಅವಕಾಶ ಮಾಡಿಕೊಟ್ಟಿವೆ. ಸಂಗೀತ, ಸಂಸ್ಕೃತ, ಜಾನಪದಕ್ಕೂ ಬೇರೆ ವಿವಿಗಳಾಗಿವೆ. ಜಿಲ್ಲೆಯಲ್ಲಿ ಈಗಾಗಲೇ ಸಾಂಪ್ರದಾಯಿಕ ಶಿಕ್ಷಣ ನೀಡುವ ಸ್ನಾತಕೋತ್ತರ ಕೇಂದ್ರಗಳು ಇರುವಾಗ ಅಂತಹ ವಿಷಯಗಳನ್ನು ಕಲಿಸುವ ಇನ್ನೊಂದು ವಿವಿ ಅಗತ್ಯವಿಲ್ಲ. ಹೊಸ ದಿಕ್ಕಿನಲ್ಲಿ ಯೋಚಿಸುವವರು ಧ್ವನಿಗೂಡಿಸಲಿ.
ಜಿಲ್ಲೆಯಲ್ಲಿ ಆರಂಭವಾಗಬಹುದಾದ ವಿವಿ ಹತ್ತರ ಜೊತೆ ಹನ್ನೊಂದಾಗದೇ ಇರಬೇಕು ಅನ್ನುವುದಾದರೆ ಜಿಲ್ಲೆಯ ಪ್ರಜ್ಞಾವಂತರು, ಜಿಲ್ಲೆಯ ಹೊರಗಿರುವ ವಿದ್ಯಾವಂತರು ತಮ್ಮ ಸಲಹೆಗಳನ್ನು ನೀಡಬೇಕು. ಂದಿನ ಶಿಕ್ಷಣ ವ್ಯವಸ್ಥೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಸರಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳಿಗೆ ಸಮಾನವಾಗಿ ಆರಂಭವಾಗಿರುವುದರಿಂದ ಖಾಸಗಿ ಕಾಲೇಜುಗಳು ಸಂಕಷ್ಟದಲ್ಲಿವೆ. ಆರ್ಟ್ಸ್ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದಾಯ ಗಮನದಲ್ಲಿಟ್ಟುಕೊಂದು ವೈದ್ಯಕೀಯ, ಎಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳು ದೇಶಕ್ಕೆ ದೊಡ್ಡ ಕೊಡುಗೆಯೇನು ಆಗುವುದಿಲ್ಲ. ವಿವಿ ಮತ್ತು ಕಾಲೇಜುಗಳಲ್ಲಿ ಹಲವು ವಿಷಯಗಳನ್ನು ಕಲಿಸುತ್ತಿದ್ದರೂ ಕೆಲವು ವಿಭಾಗಗಳಿಗೆ ವಿದ್ಯಾರ್ಥಿಗಳಿಲ್ಲ. ಇನ್ನೂ ಕೆಲವು ವಿಭಾಗಗಳಿಗೆ ಶಿಕ್ಷಕರಿಲ್ಲ. ಉಳಿದೆಲ್ಲ ವಿವಿಗಳಿಗಿಂತ ಭಿನ್ನವಾಗಿ, ದೇಶಕ್ಕೆ ಕೊಡುಗೆಯಾಗಬಲ್ಲ ವಿದ್ಯಾವಂತರನ್ನು ತರಬೇತಿಗೊಳಿಸುವ ಕೇಂದ್ರೀಯ ವಿವಿ ಜಿಲ್ಲೆಗೆ ಬೇಕು.
ವಿವಿ ಮುಂದೆ ಹೊಸ ಅವಕಾಶ: 
ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತ ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತೆ ವಿಷಯಪಟ್ಟಿಯನ್ನು ಹೊಸ ವಿದ್ಯಾಲಯ ಸಿದ್ಧಪಡಿಸಬೇಕು. ಇತರ ವಿವಿ ಗಳಲ್ಲಿ ವಿರಳವಾಗಿರುವ ವಿಷಯಗಳನ್ನು ಇಲ್ಲಿ ಕಲಿಸುವಂತಾಗಬೇಕು. ಅಧ್ಯಯನ, ಸಂಶೋಧನೆ ಜೊತೆಗೆ ಪ್ರಯೋಗಕ್ಕೂ ಅವಕಾಶವಿರುವ ವಿಷಯಗಳನ್ನು ಒಳಗೊಳ್ಳುವುದು ಸೂಕ್ತ. ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ದೇಶ ಹಿಂದಿದೆ. ಬಹುಪಾಲು ರಕ್ಷಣಾ ಸಾಮಗ್ರಿಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಸೂಕ್ಷ್ಮ ಉಪಕರಣಗಳ ಗುಟ್ಟನ್ನು ಬೇರೆ ದೇಶಗಳು ಬಿಟ್ಟುಕೊಡುವುದಿಲ್ಲ. ಅಲ್ಲಿ ಹಳತಾದ ತಂತ್ರಜ್ಞಾನವನ್ನಷ್ಟೇ ಇಲ್ಲಿಗೆ ಕೊಡುತ್ತಾರೆ. ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಉತ್ಪಾದನೆಗೆ ಅಗತ್ಯವುಳ್ಳ ತಂತ್ರಜ್ಞರನ್ನು ದೇಶದಲ್ಲಿ ತರಬೇತಿಗೊಳಿಸಬೇಕು. ಉಪಕರಣವನ್ನು ದೇಶದಲ್ಲಿಯೇ ತಯಾರಿಸಬೇಕು ಅನ್ನುತ್ತಾರೆ ಪ್ರಧಾನಿ ಮೋದಿ. 25 ಸಾವಿರ ಕೋಟಿ ರೂ. ವೆಚ್ಚದ ಸೀಬರ್ಡ್ ಕಾರವಾರದಲ್ಲಿದೆ. ಭಾರತ ಮುಕ್ಕಾಲು ಪಾಲು ಸಮುದ್ರದಿಂದ ಸುತ್ತುವರಿದಿದೆ. ಆದ್ದರಿಂದ ನೌಕಾಪಡೆಗೆ ಬೇಕಾದ ತಂತ್ರಜ್ಞರನ್ನು, ಉಪಕರಣಗಳ ಕುರಿತು ಸಂಶೋಧನೆಯ ವಿಷಯವನ್ನು ವಿವಿ ಯಲ್ಲಿ ಅಳವಡಿಸಿಕೊಳ್ಳಬೇಕು.ುಸ್ಥಾವರ ಕಾರವಾರದ ಬಳಿ ಕೈಗಾದಲ್ಲಿರುವುದರಿಂದ ಅಣುಶಕ್ತಿ ಬಳಕೆಯ ಸಾಧ್ಯತೆ ಮತ್ತು ರಕ್ಷಣೆ ಮತ್ತು ರಕ್ಷಣೇತರ ಕ್ಷೇತ್ರದಲ್ಲಿ ಇದರ ಬಳಕೆಯ ಕುರಿತು ವಿುಲ ಅವಕಾಶಗಳಿವೆ. ಅಣುಶಕ್ತಿಯ ಕುರಿತಾದ ಸಂಶೋಧನೆ ಮತ್ತು ಜನೋಪಯೋಗಿ ಮತ್ತು ರಕ್ಷಣಾ ವಿಷಯದ ಕುರಿತು ಅಧ್ಯಯನಕ್ಕೆ ಮತ್ತು ಸಂಶೋಧನೆಗೆ ಕೈಗಾದಲ್ಲಿ ಅವಕಾಶ ಇರುವುದರಿಂದ ಈ ವಿಷಯವನ್ನು ವಿವಿ ಒಳಗೊಳ್ಳಬೇಕು. ಬೇಸಿಗೆಯಲ್ಲೂ 5 ನದಿಗಳು ತುಂಬಿ ಹರಿಯುತ್ತವೆ. 140 ಕಿಮೀ ಕರಾವಳಿ ಇದೆ. ಕಡಲು ಮತ್ತು ನದಿ ಜೀವಶಾಸದ ಅಧ್ಯಯನ, ಸಂಶೋಧನೆ ಮತ್ತು ಪ್ರಯೋಗಕ್ಕೆ ವಿವಿ ಯಲ್ಲಿ ಅವಕಾಶ ನೀಡಬಹುದು.ಾಗತಿಕ ಹವಾಮಾನದ ಮೇಲೆ ಪಶ್ಚಿಮ ಘಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಬ್ರಿಟಿಷರು ಕಂಡುಹಿಡಿದಿದ್ದರು. ಉ.ಕ ಜಿಲ್ಲೆ ಸಹಿತ ಪಶ್ಚಿಮ ಘಟ್ಟ ಮುಂಗಾರನ್ನು ಆಕರ್ಷಿಸಿದರೆ ಭಾರತದಲ್ಲಿ ಮಾತ್ರವಲ್ಲ ಲಂಡನ್ನಲ್ಲಿ ಮಳೆಯಾಗುತ್ತದೆ. ಆದ್ದರಿಂದಲೇ ಇಂಗ್ಲೆಂಡ್ ಸರಕಾರ ಪಶ್ಚಿಮ ಘಟ್ಟದಲ್ಲಿ ಅರಣ್ಯ ಬೆಳೆಸಲು ಬಹುಕೋಟಿ ರೂ.ನ್ನು ದಾನವಾಗಿ ನೀಡಿತ್ತು. ಜಿಲ್ಲೆಯ ಪರಿಸರ ಸಂಶೋಧನೆಗೆ ವಿುಲ ಅವಕಾಶವಿದೆ. ಜೊತೆಯಲ್ಲಿ ಹತ್ತಾರು ಜಾತಿಗಳ ಜಾನಪದ ಬದುಕಿನ ಕುರಿತು ಸಂಶೋಧನೆ ಹಾಗೂ ಒಳ್ಳೆಯ ಅಂಶಗಳನ್ನು ಉಳಿಸಿಕೊಳ್ಳುವ ಕುರಿತು ಮಾರ್ಗಶೋಧನೆಗೂ ಅವಕಾಶವಿದೆ.
ಮಲೆನಾಡನ್ನು, ಜಿಲ್ಲೆಯನ್ನು ಮುಖ್ಯವಾಗಿಟ್ಟುಕೊಂಡು ಸಂಶೋಧನೆ ಆಗಬೇಕಾಗಿದೆ. ಪುಣ್ಯಕ್ಷೇತ್ರ ದರ್ಶನದ ಪರಿಣಾಮಗಳು, ಕಡಲು, ಕಾಡುಮೇಡಿನ ಸುತ್ತಾಟದ ಲಾಭಗಳ ಕುರಿತು ವೈಜ್ಞಾನಿಕ ಅಧ್ಯಯನ ಮತ್ತು ವೈಜ್ಞಾನಿಕ ಶಿಕ್ಷಣ ವಿವಿ ಯಲ್ಲಿ ಅವಕಾಶ ಇರಬೇಕು.
ಈಗಿರುವ ವಿವಿ ಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುವವರೆಗೆ ಅಧ್ಯಯನ, ಡಾಕ್ಟರೇಟ್ ಪಡೆಯುವವರೆಗೆ ಸಂಶೋಧನೆ ಎಂಬಂತಾಗಿದೆ. ಅಧ್ಯಯನದ ಜೊತೆ ಸಂಶೋಧನೆ, ಜೊತೆಯಲ್ಲಿ ಪ್ರಯೋಗಗಳು ಯಶಸ್ವಿಯಾಗಿ ನಡೆಯುವಂತಹ ರೀತಿಯಲ್ಲಿ ವಿಶ್ವವಿದ್ಯಾನಿಲಯದ ಕಾನೂನು ರೂಪಿತವಾಗಬೇಕು. 5-10 ವರ್ಷದ ಅಧ್ಯಯನ ಮುಗಿಸಿ ಬರುವಾಗ ಆತ ತನ್ನ ವಿಷಯಕ್ಕೆ ಸಂಪೂರ್ಣ ಸಿದ್ಧನಾಗಿ, ಬದ್ಧನಾಗಿ ಕೆಲಸಕ್ಕಿಳಿದು ವಿವಿ ಯಿಂದ ಹೊರಬರುವಷ್ಟರಲ್ಲಿ ದೇಶಕ್ಕೆ ಹೊಸದನ್ನು ಕೊಟ್ಟರೆ ಮಾತ್ರ ವಿವಿ ಸ್ಥಾಪನೆ ಸಾರ್ಥಕವಾಗುತ್ತದೆ.