ಸಾಗರ ತಾಲೂಕಲ್ಲಿ ಕಾಡುಕೋಣನ ಕಾಟ

ಸಾಗರ ತಾಲೂಕಿನ ಕೆಲವೆಡೆ ಈಗ ಕಾಡುಕೋಣಗಳ ಹಾವಳಿ ವಿಪರೀತವಾಗಿದೆ. ಕೆಲ ದಿನದ ಹಿಂದೆ ರಸ್ತೆ ಬದಿಯಲ್ಲಿ ಎರಡು ಕಾಡುಕೊಣಗಳು ಕಾಣಿಸಿಕೊಂಡಿದ್ದವು. ತಾಲೂಕಿನ ಕುಗ್ವೆ, ಸೆಟ್ಟಿಸರ ಮೊದಲಾದೆಡೆ ಕಾಡುಕೋಣಗಳ ಹಿಂಡು ರೈತರ ಗದ್ದೆ, ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಇತ್ತೀಚೆಗೆ ತಾಳಗುಪ್ಪ ಸಮೀಪದ ಹಿರೇಮನೆ ಗೋಣೂರು ಸಮೀಪದ ಗದ್ದೆಯಲ್ಲಿ ಕಾಡುಕೋಣವೊಂದು ಕಾಣಿಸಿಕೊಂಡಿದೆ. ಗದ್ದೆಯಲ್ಲಿ ಬೆಳೆದು ನಿಂತ ಪೈರು ಹಾಳು ಮಾಡುತ್ತಿದ್ದ ಈ ಕೋಣ ಜಪ್ಪಯ್ಯ ಎಂದರೂ ಅಲ್ಲಿಂದ ಕಾಲು ಕೀಳಲಿಲ್ಲ. ಕೋಣ ನಿತ್ಯ ಉಪಟಳ ನೀಡುತ್ತಿದ್ದು ರೈತರು ತೊಂದರೆಗೀಡಾಗಿದ್ದಾರೆ. ಒಂಟಿಯಾಗಿರುವ ಈ ಕಾಡುಕೋಣ ಊರು ಕೇರಿಯ ಒಳಗೇ ಓಡಾಡಲು ಪ್ರಾರಂಭಿಸಿದೆ. ಕಿವಿ ಮಂದ ಹಾಗೂ ದೃಷ್ಟಿ ಕಡಿಮೆಯಾದ ಕಾರಣ ಜನರ ಬೆದರಿಕೆಗೂ ಇದು ಮಣಿಯುತ್ತಿಲ್ಲ. ರಸ್ತೆಯ ಪಕ್ಕದಲ್ಲಿ ಓಡಾಡಿ ಗದ್ದೆಗಳಿಗೆ ಇಳಿದು ದಾಂಧಲೆ ಮಾಡುತ್ತಿದೆ.
ಸಾಮಾನ್ಯವಾಗಿ ಕಾಡುಕೋಣಗಳು ಮನುಷ್ಯರನ್ನು ಕಂಡಕೂಡಲೆ ಮಾಯವಾಗಿ ಬಿಡುತ್ತವೆ. ಆದರೆ, ಈ ಕಾಡುಕೋಣ ಹಾಡಹಗಲೇ ರಸ್ತೆಯಲ್ಲಿ ಸಾಮಾನ್ಯ ಜಾನುವಾರಿನಂತೆ ಓಡಾಡುತ್ತಿರುವುದರಿಂದ ಶಾಲೆಗೆ ತೆರಳುವ ಮಕ್ಕಳು ಭೀತಿಯಿಂದ ಸಂಚರಿಸುವಂತಾಗಿದೆ.