ನಿಮ್ಮನೆ ತೆಂಗಿನ ಮರಕ್ಕೆ ವಿಮೆ ಮಾಡಿಸಿ

ರಾಜ್ಯ ಸರಕಾರದ ತೋಟಗಾರಿಕೆ ಇಲಾಖೆ, ಕೇಂದ್ರ ಸರಕಾರದ ಭಾರತೀಯ ಕೃಷಿ ವಿಮಾ ಸಂಸ್ಥೆ ಮತ್ತು ತೆಂಗು ಅಭಿವೃದ್ಧಿ ಮಂಡಳಿ ಆಶ್ರಯದಲ್ಲಿ ತೆಂಗು ವಿಮಾ ಯೋಜನೆ ಜಾರಿಗೊಂಡಿದೆ. ನೈಸರ್ಗಿಕ ಹಾಗೂ ಇತರ ವಿಕೋಪಗಳಿಂದ ಮರಗಳಿಗೆ ಉಂಟಾಗುವ ಹಾನಿಗೆ ವಿಮಾ ಸೌಲಭ್ಯ, ಮರಗಳ ಅಕಾಲಿಕ ಸಾಯುವಿಕೆಯಿಂದ ಉಂಟಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವುದು, ಸಂಭವನೀಯ ನಷ್ಟ ತಪ್ಪಿಸಿ ಮರುನಾಟಿ ಹಾಗೂ ಪುನಶ್ಚೇತನಕ್ಕೆ ಉತ್ತೇಜಿಸುವುದು ಇದರ ಮುಖ್ಯ ಉದ್ದೇಶ.
ತೋಟದ ಎಲ್ಲ ಆರೋಗ್ಯವಂತ ಮರಗಳಿಗೆ ವಿಮೆ ಮಾಡಿಸಬೇಕು. ಜಮೀನಿನಲ್ಲಿ 5ಕ್ಕಿಂತ ಹೆಚ್ಚು ಮರಗಳಿರಬೇಕು. ಮರ ವರ್ಷಕ್ಕೆ ಕನಿಷ್ಠ 30 ಕಾಯಿ ನೀಡುತ್ತಿರಬೇಕು. ಗಿಡ್ಡ ತಳಿಗೆ 4 ವರ್ಷದ ನಂತರ ಹಾಗೂ ಎತ್ತರದ ತಳಿಗೆ 7 ವರ್ಷದ ನಂತರ ವಿಮೆ ಮಾಡಿಸಬೇಕು. ತಿವೃಷ್ಟಿ, ಬಿರುಗಾಳಿ, ಆಲಿಕಲ್ಲು ಕೂಡಿದ ಬಿರುಗಾಳಿ, ಚಂಡಮಾರುತ, ಪ್ರವಾಹ ಮತ್ತು ಜಲಾವೃತ, ವ್ಯಾಪಕ ಹಾನಿಯುಂಟು ಮಾಡುವ ಕೀಟ/ರೋಗ ಬಾಧೆ, ಆಕಸ್ಮಿಕ ಬೆಂಕಿ, ಕಾಡ್ಗಿಚ್ಚು, ಸಿಡಿಲು, ಭೂಕಂಪ, ಭೂಕುಸಿತ, ಸುನಾಮಿ, ತೀವ್ರ ಅನಾವೃಷ್ಟಿಯಿಂದ ಉಂಟಾದ ಸಂಪೂರ್ಣ ಹಾನಿಗಳು ಸಂಭವನೀಯ ನಷ್ಟಗಳು. ಮೇಲ್ಕಂಡ ಹಾನಿಯಿಂದ ಮರ ಸತ್ತಾಗ ಅಥವಾ ಅನುತ್ಪಾದಕವಾದಾಗ ಮಾತ್ರ ವಿಮೆ ಪರಿಹಾರ ದೊರೆಯುತ್ತದೆ. ಮರ ಕಡಿಯದಿದ್ದರೆ ವಿಮೆಯ ಶೇ.50ರಷ್ಟು ಭಾಗವನ್ನು ಮಾತ್ರ ನೀಡಲಾಗುವುದು. ಒಟ್ಟು ವಿಮಾ ಕಂತು ಮತ್ತು ರೈತರು ಪಾವತಿಸಬೇಕಾದ ವಿಮಾ ಕಂತಿನ ಹಣದ ವ್ಯತ್ಯಾಸದ ಶೇ.25ರಷ್ಟು ತೋಟಗಾರಿಕೆ ಇಲಾಖೆ ಹಾಗೂ ಶೇ.50ರಷ್ಟನ್ನು ತೆಂಗು ಅಭಿವೃದ್ಧಿ ಮಂಡಳಿ ಭರಿಸುತ್ತದೆ.
ವಿಮೆ ಅವಧಿ:
ಇದೊಂದು ವಾರ್ಷಿಕ ಪಾಲಿಸಿ. ಪ್ರತಿವರ್ಷ ನವೀಕರಿಸಬೇಕು. ಗರಿಷ್ಠ 3 ವರ್ಷಗಳಿಗೆ ಒಂದೇ ಬಾರಿ ಕಂತು ಪಾವತಿಸಿ ವಿಮೆ ಮಾಡಿಸಬಹುದು. ಕಂತು ಕಟ್ಟಿದ ತಿಂಗಳನ್ನು ಹೊರತುಪಡಿಸಿ, ನಂತರದ ತಿಂಗಳ ಮೊದಲ ದಿನದಿಂದ ವಿಮೆ ಅವಧಿ ಜಾರಿಗೆ ಬರುತ್ತದೆ. ವಿಮೆ ಅವಧಿ ಪ್ರಾರಂಭದ 30 ದಿನಗಳವರೆಗೆ ಆದ ನಷ್ಟಕ್ಕೆ ವಿಮೆ ದೊರೆಯುವುದಿಲ್ಲ. ಈ ಷರತ್ತು ನವೀಕರಣ ಮಾಡಿಸಿದ ವಿಮೆಗೆ ಅನ್ವಯವಲ್ಲ. ತೋಟಗಾರಿಕೆ ಇಲಾಖೆಯ ತಾಲೂಕು/ ಹೋಬಳಿ ಕಚೇರಿಯಿಂದ ಅರ್ಜಿ ಪಡೆಯಬಹುದು.