ಸಾರಾಯಿಗೆ ಹಣ ಕೊಡಲೊಪ್ಪದ ಅಜ್ಜಿ ಕೊಂದ ಮೊಮ್ಮಗ

ಬೆಳಗಾವಿ ಟಿಳಕವಾಡಿಯ ಖಾನಾಪುರ ರಸ್ತೆಯ ಲೆಂಗಡೆ ಹಾಸ್ಟೆಲ್ ಬಳಿ ಹೊಸ ವರ್ಷದ ಸಂಭ್ರಮಾಚರಣೆಗೆ ಸಾರಾಯಿ ಕುಡಿಯಲು ಹಣ ನೀಡದ ಅಜ್ಜಿಯನ್ನು 35 ವರ್ಷದ ಮೊಮ್ಮಗ ಸ್ಕ್ರೂ ಡ್ರೈವರ್ ಹಾಗೂ ಕೊಡಲಿಯ ಹಿಡಿಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ವತ್ಸಲಾ ಮಾರುತಿ ದಡವಿ(72) ಕೊಲೆಗೀಡಾದ ಅಜ್ಜಿ. ಈಕೆಯ ಪುತ್ರಿಯ ಮಗನಾದ ಅಭಿಷೇಕ ಧನೋಡೆ ಕುಡಿತದ ಚಟ ಅಂಟಿಸಿಕೊಂಡಿದ್ದ. ಸಾರಾಯಿ ಕುಡಿಯಲು ಹಣ ಕೊಡುವಂತೆ ಪ್ರತಿದಿನ ಅಜ್ಜಿಯನ್ನು ಪೀಡಿಸುತ್ತಿದ್ದ. ನಿರುದ್ಯೋಗಿಯಾಗಿದ್ದ ಈತನನ್ನು ಅಜ್ಜಿ ಮನೆಗೆಲಸ ಮಾಡಿ ಸಾಕುತ್ತಿದ್ದಳು. ಪ್ರತಿದಿನವೂ ಹಣ ಕೊಡುತ್ತಿದ್ದಳು. ಆದರೆ, ಹೊಸ ವರ್ಷದ ಆಚರಣೆಗೆ ಹಣ ನೀಡಲು ನಿರಾಕರಿಸಿದಳು. ಆಗ ಇಬ್ಬರ ನಡುವೆ ಜಗಳ ನಡೆಯಿತು.ಳವಾಡಿ ಮನೆಯಿಂದ ಹೊರಹೋದ ಅಭಿಷೇಕ, ಸಾರಾಯಿ ಕುಡಿದು ಬಂದು ಮತ್ತೆ ಅಜ್ಜಿಯನ್ನು ಪೀಡಿಸಿದ. ಆಗ ಮಧ್ಯ ಪ್ರವೇಶಿಸಿದ ಅಜ್ಜಿಯ ಪಾರ್ಶ್ವವಾಯು ಪೀಡಿತ ಇನ್ನೊಬ್ಬ ಪುತ್ರ ಮದನ, ಇಬ್ಬರನ್ನೂ ಸಮಾಧಾನ ಪಡಿಸಿದ. ಆದರೆ, ಅಭಿಷೇಕ ಈತನ ಮೇಲೂ ಹಲ್ಲೆ ನಡೆಸಿದ. ನಂತರ ಅಜ್ಜಿಯನ್ನು ಕೊಂದೇ ಬಿಟ್ಟ. ಮರುದಿನ ಬೆಳಗ್ಗೆ ಮದನ ಎದ್ದು ನೋಡಿದಾಗ, ಅಜ್ಜಿ ಮೃತಪಟ್ಟಿರುವುದು ಗೊತ್ತಾಯಿತು. ಅಜ್ಜಿಯನ್ನು ಹೊಡೆದು ಕೊಲೆ ಮಾಡಿರುವುದಾಗಿ ಅಭಿಷೇಕ ತಪ್ಪೊಪ್ಪಿಕೊಂಡಿದ್ದಾನೆ.