ಇಡಗುಂಜಿ ಪುಷ್ಪರಥ ಭೂ ಸ್ಪರ್ಶ

ಇಡಗುಂಜಿ ವಿನಾಯಕ ದೇವ ಟ್ರಸ್ಟ್ ಈಗ ಶ್ರೀದೇವರಿಗೆ ನೂತನ ಪುಷ್ಪರಥ ಅರ್ಪಿಸಿದೆ. 2003ರಲ್ಲಿ ಇಡಗುಂಜಿ ದೇವರಿಗೆ ನೂತನ ಮಹಾಸ್ಯಂಧನ ರಥ ನಿರ್ಮಿಸಿಕೊಟ್ಟ ಗಂಗಾಧರ ಆಚಾರ್ಯ ನಂತರದ ದಿನಗಳಲ್ಲಿ ಪ್ರಸಿದ್ಧಿ ಪಡೆದು 22 ರಥಗಳನ್ನು ನಿರ್ಮಿಸಿದರು. 23ನೇಯದಾಗಿ ಅವರ ಹಸ್ತದಿಂದಲೇ ಪುಷ್ಪರಥ ನಿರ್ಮಾಣವಾಗಿದೆ. ಈ ರಥ ಆಗಮಶಾಸದಂತೆ ನಿರ್ಮಾಣವಾಗಿದ್ದು, ಇಡಗುಂಜಿ ಸ್ಥಳ ಪುರಾಣ ಕೆತ್ತನೆಯಲ್ಲಿ ಮೂಡಿಬಂದಿದೆ.
26 ಅಡಿ ಎತ್ತರದ ಈ ರಥ ಜ.26ರಂದು ನಡೆದ ಇಡಗುಂಜಿ ಮಹಾಗಣಪತಿ ರಥೋತ್ಸವದ ಸಂದರ್ಭದಲ್ಲಿ, ದೇವರು ರಥಾರೋಹಣ ಮಾಡುವ ಪುಷ್ಪರಥದ ಭೂ ಸ್ಪರ್ಶವಾಯಿತು. ಇದೇ ವೇಳೆ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಕ್ಷೇತ್ರದ ವತಿಯಿಂದ ಗೌರವ ಸಲ್ಲಿಸುವ ಸಮಾರಂಭ ಮತ್ತು ಶರಾವತಿ ಸೀಮೆಯ ಭಕ್ತರಿಂದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳಿಗಾಗಿ 108 ತೆಂಗಿನಕಾಯಿ ಗಣಹವನ ಇಡಗುಂಜಿಯಲ್ಲಿ ನಡೆಯಿತು. ಶ್ರೀಗಳು ಇಡಗುಂಜಿ ಗಣಪತಿಗೆ ಪೂಜೆ ಸಲ್ಲಿಸಿ, ಗಣಹವನದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.
ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳು ಆಶೀರ್ವಚನ ನೀಡಿ, ಭೂಸ್ಪರ್ಶವೆಂದರೆ ಜೀವ ಕಾರುಣ್ಯ. ಎಲ್ಲರಿಗೂ ದೇವಲೋಕಕ್ಕೆ ಹೋಗಿ ದೇವರನ್ನು ನೋಡುವುದು ಸಾಧ್ಯವಿಲ್ಲ. ಅದಕ್ಕಾಗಿ ದೇವರು ಮೂರ್ತಿ ರೂಪದಲ್ಲಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಾನೆ. ಗರ್ಭಗುಡಿಗೆ ಹೋಗಿ ದೇವರನ್ನು ನೋಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದ್ದರಿಂದ ದೇವರು ರಥಾರೂಢನಾಗಿ ಪಲ್ಲಕ್ಕಿ ಏರಿ ಎಲ್ಲ ಭಕ್ತರಿದ್ದಲ್ಲಿ ಹೋಗಿ ದರ್ಶನ ನೀಡುತ್ತಾನೆ. ವಿಘ್ನವನ್ನು ಕೊಡುವವನು, ನಿವಾರಿಸುವವನು ವಿನಾಯಕ. ಗುರುಗಳಿಗಾಗಿ ಭಕ್ತರು, ಭಕ್ತರಿಗಾಗಿ ಗುರುಗಳು ಇಲ್ಲಿ ಗಣಹವನ ನಡೆಸಿದಿರಿ. ರಥದ ಭೂಸ್ಪರ್ಷವಾಗಿದೆ. ಹೃದಯದಲ್ಲಿ ಗಣೇಶನ ಪ್ರತಿಷ್ಠೆಯಾಗಲಿ ಎಂದರು.

ವಿಶಿಷ್ಟ ಪುಷ್ಪರಥ:
ಸಂಪ್ರದಾಯ ಉಳಿಸಿಕೊಂಡು ಆಧುನಿಕವಾಗಿ ಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಸಮೀಪದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಗಣಪನ ನೆಲೆವೀಡು ಇಡಗುಂಜಿಯ ಪುಷ್ಪರಥ ವಿಶಿಷ್ಟವಾಗಿದೆ. ಮಕರ ನಕ್ಷೆ, ಆನೆ ಸಾಲು, ಪವಿತ್ರ ಸಾಲು, ಸಮುದ್ರ ಮಂಥನದಲ್ಲಿ ದೊರೆತ ವಸ್ತುಗಳು, ಪದ್ಮ, ಅಷ್ಠಗಣಪತಿಯ ಅವತಾರದ ಸಾಲು, ಗಜಕೇಸರಿ, ಅಷ್ಟದಿಕ್ಪಾಲಕರು, ಗಂಟೆ ಸಾಲು, ನವರಂಗ ಇಡಗುಂಜಿಯ ಸ್ಥಳಪುರಾಣ, ಗಣೇಶಾನಿ(ಸೀಗಣೇಶ)ಮೂರ್ತಿಗಳನ್ನು ಸುಂರವಾಗಿ ಕೆತ್ತಲಾಗಿದೆ.
ರಥದ ಗೋಪುರದ ಒಳಾವರಣದಲ್ಲಿ ನವರಂಗವನ್ನು ಕೆತ್ತಲಾಗಿದೆ. ನಾಗಮಂಡಲ ಮತ್ತು ಇಡಗುಂಜಿಯ ಸ್ಥಳಪುರಾಣದಲ್ಲಿ ಹೇಳಿದಂತೆ ವಾಲಖಿಲ್ಯ ಮುನಿಗಳು ತಪಸ್ಸು ಮಾಡುತ್ತಿರುವುದು, ತಪಸ್ಸನ್ನು ಕೆಡಿಸಲು ರಾಕ್ಷಸರು ಪ್ರಯತ್ನಿಸುವುದು, ನಾರದರು ಬಾಲಗಣಪತಿಯನ್ನು ತಂದು ಇಡಗುಂಜಿಯಲ್ಲಿ ಪ್ರತಿಷ್ಠಾಪಿಸುವ ಘಟನೆಗಳನ್ನೊಳಗೊಂಡ ಉಬ್ಬು ಶಿಲ್ಪವನ್ನು ಇಲ್ಲಿ ಕೆತ್ತಲಾಗಿದೆ. ಇಡೀ ರಥದಲ್ಲಿ ಉಬ್ಬುಶಿಲ್ಪಗಳ ಸಂಖ್ಯೆ ಹೆಚ್ಚಿದ್ದು ಮೂರ್ತಿಗಳನ್ನು ಜೋಡಿಸಿದ್ದರೂ ಪ್ರತ್ಯೇಕವಾಗಿದ್ದಂತೆ ಕಾಣುತ್ತಿದೆ.

ಶಿಲ್ಪಿಯ ಕುರಿತು:
ಇಡಗುಂಜಿಯ ಮಹಾಸ್ಯಂದನ ರಥವನ್ನು 2003ರಲ್ಲಿ ಪ್ರಥಮವಾಗಿ ಗಂಗಾಧರ ಆಚಾರ್ಯ ನಿರ್ಮಿಸಿದರು. ಈವರೆಗೆ ಅವರು 22 ರಥಗಳನ್ನು ನಿರ್ಮಿಸಿದ್ದಾರೆ. ಹಳೆ, ಹೊಸ ಕಲ್ಪನೆಗಳಿಗೆ ಮೂರ್ತಿರೂಪ ಕೊಟ್ಟಿದ್ದಾರೆ. ಸ್ಟೇರಿಂಗ್, ಬೇರಿಂಗ್ಗಳನ್ನೊಳಗೊಂಡು ಎಳೆಯಲು ಸುಲಭವಾಗುವಂತೆ ರಥ ನಿರ್ಮಿಸಿದ್ದಾರೆ. ನಾಡಿನ ವಿವಿಧ ಭಾಗಗಳಿಗೆ ರಥ ನಿರ್ಮಿಸಿಕೊಟ್ಟಿದ್ದಾರೆ. ಸಾಂಪ್ರದಾಯಿಕ ಕಾಷ್ಠಶಿಲ್ಪಕ್ಕೆ ಹೊಸ ಸ್ಪರ್ಶ ನೀಡಿದ ಅವರು ನಿರ್ಮಿಸಿದ ಇಡಗುಂಜಿ ಪುಷ್ಪರಥ 23ನೇಯದು. ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಶ್ರೀಗಳು ರಥ ಭೂಸ್ಪರ್ಶ ದಿನದಂದು ಗಂಗಾಧರ ಆಚಾರ್ಯ ದಂಪತಿಯನ್ನು ಗೌರವಿಸಿದರು.

ನಾರದ ಪ್ರತಿಷ್ಠಾಪಿತ ಕ್ಷೇತ್ರ:
ಇಡಗುಂಜಿ ನಾರದ ಪ್ರತಿಷ್ಠಾಪಿತ ಕ್ಷೇತ್ರ ಎಂದು ಸ್ಥಳ ಪುರಾಣದಲ್ಲಿ ಹೇಳಲಾಗಿದೆ. ದೇಶದ ಅತಿ ಪುರಾತನ, 2ನೇ ಶತಮಾನದ ಗಣೇಶಶಿಲ್ಪ ಎಂದು ಇತಿಹಾಸಕಾರ ಡಾ ಸುಂದರ್ ಅಭಿಪ್ರಾಯಪಟ್ಟಿದ್ದಾರೆ. ಸೀಮೆಯ ದೇವರಾಗಿ ಸೀಮಿತ ಪ್ರದೇಶದಲ್ಲಿ ಇಡಗುಂಜಿ ಪ್ರಸಿದ್ಧವಾಗಿತ್ತು. ಕಳೆದ 6 ದಶಕಗಳಲ್ಲಿ ಕ್ಷೇತ್ರ ಅಂತಾರಾಷ್ಟ್ರೀಯವಾಗಿ ಸನಾತನಿಗಳ ಗಮನ ಸೆಳೆದಿದೆ. ಗಣೇಶ ಚೌತಿ ಮತ್ತು ರಥೋತ್ಸವ ಸಂದರ್ಭದಲ್ಲಿ ಲಕ್ಷಕ್ಕೂ ಹೆಚ್ಚು ಜನ ದೇವರ ದರ್ಶನ ಪಡೆಯುತ್ತಾರೆ. ವಿವಿಧ ಸೇವೆ ಮತ್ತು ಕಾಣಿಕೆ ಹಣದಿಂದ ಭೂಮಿ ಖರೀದಿಸಿ ಭೋಜನ ಶಾಲೆ, ಅತಿಥಿಗೃಹ, ಕಲ್ಯಾಣಮಂಟಪ, ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಶರಾವತಿಯಿಂದ ಕುಡಿಯುವ ನೀರನ್ನು ತರಲಾಗಿದೆ. ಪ್ರತಿ ಸಂಕಷ್ಟ ಚತುರ್ಥಿ ದಿನ 15-25 ಸಾವಿರ ಜನ ಕ್ಷೇತ್ರಕ್ಕೆ ಬರುತ್ತಿದ್ದು, ಅಂಗಾರಕ ಸಂಕಷ್ಟಿಯಂದು ಲಕ್ಷ ಜನ ಬಂದ ಮತ್ತು 25 ಕ್ವಿಂಟಾಲ್ ಪಂಚಕಜ್ಜಾಯ ಸೇವೆ ನಡೆದ ದಾಖಲೆಯಿದೆ. ಸರಾಸರಿ ನೂರಕ್ಕೂ ಹೆಚ್ಚು ಗಣಹವನ, ಸತ್ಯಗಣಪತಿ ವ್ರತಕಥೆಗಳು ನಿತ್ಯ ಜರುಗುತ್ತವೆ. ಭಕ್ತರು ನೀಡಿದ ಬಂಗಾರ ಕಾಣಿಕೆಯಿಂದ ದೇವರಿಗೆ ಚಿನ್ನದ ಮುಖ ಕವಚ ರಚಿಸಲಾಗಿದೆ.
ನಿತ್ಯ ಸಾವಿರಕ್ಕೂ ಹೆಚ್ಚು ಜನ ಪ್ರಸಾದ ಭೋಜನ ಸ್ವೀಕರಿಸುತ್ತಾರೆ. ಉಚಿತ ಪ್ರಸಾದ ಭೋಜನ ನಿಲಯವನ್ನು ಕಾಣಿಕೆ ಹಣದಿಂದ ನಿರ್ಮಿಸಿದ್ದು, ಭಕ್ತರು ಈವರೆಗೆ ನೀಡಿದ 2.3 ಕೋಟಿ ರೂ.ಹಣವನ್ನು ಠೇವಣಿ ಇಟ್ಟು ಬಡ್ಡಿ ಹಣದಿಂದ ಅನ್ನದಾನ ನಡೆದಿದೆ. ರಥ ನಿರ್ಮಾಣದಂತಹ ಶಾಶ್ವತ ಕಾರ್ಯಗಳಿಗೆ ಮೀಸಲಿಟ್ಟ ನಿಧಿ 2.1 ಕೋಟಿ ರೂ.ಗಳಷ್ಟಾಗಿದೆ. ಶಾಶ್ವತ ಪೂಜಾ ನಿಧಿ 1 ಕೋಟಿ ರೂ. ಇದೆ. 15 ಕೋಟಿ ರೂ.ಗಳಷ್ಟು ಕಟ್ಟಡ ಮೊದಲಾದ ಶಾಶ್ವತ ಆಸ್ತಿ ದೇವರ ಹೆಸರಿನಲ್ಲಿದೆ. 50 ಕ್ಕೂ ಹೆಚ್ಚು ಅಂಗಡಿ, ಮಳಿಗೆಗಳಿದ್ದು ನೂರಾರು ಜನಕ್ಕೆ ಜೀವನೋಪಾಯ ಮಾರ್ಗವಾಗಿದೆ.
ಸಾರ್ವಜನಿಕ ಕಾರ್ಯಗಳಿಗೆ ಪ್ರತಿವರ್ಷ ದೇವಸ್ಥಾನದ ನಿಧಿಯಿಂದ 10 ಲಕ್ಷ ರೂ. ನೀಡಲಾಗುತ್ತಿದೆ. 6 ದಶಕಗಳ ಹಿಂದೆ ಸಾಮಾನ್ಯ ಹಂಚಿನ ಕಟ್ಟಡದಲ್ಲಿದ್ದ ಇಡಗುಂಜಿ ಕ್ಷೇತ್ರ, ಆಡಳಿತ ಧರ್ಮದರ್ಶಿಗಳಾಗಿದ್ದ ದಿ ಡಾ ಜಿ.ಎನ್.ಸಭಾಹಿತ ಅವರ ನಿರಂತರ ಶ್ರಮದಿಂದಾಗಿ ಪ್ರಗತಿ ಸಾಧಿಸಿದೆ. ಈಗ ಅವರ ಪುತ್ರ ಡಾ ಜಿ.ಜಿ.ಸಭಾಹಿತ ಕ್ಷೇತ್ರ ಅಭಿವೃದ್ಧಿ ಕಾರ್ಯ ಮುನ್ನಡೆಸಿದ್ದಾರೆ. ಪ್ರತ್ಯೇಕವಾಗಿ ದೇಣಿಗೆ ಸಂಗ್ರಹಿಸುವ ಪದ್ಧತಿ ಇಲ್ಲಿಲ್ಲ. ಜಾತಿ, ಧರ್ಮ ಬೇಧವಿಲ್ಲದೇ 401 ರೂ.ಗೆ ಗಣಹವನ ಸೇವೆ ಮಾಡುವ ಅವಕಾಶವಿದೆ. ಸಹಪಂಕ್ತಿ ಭೋಜನ ವ್ಯವಸ್ಥೆ ಇದೆ.
ಪ್ರತಿವರ್ಷ ರಥಸಪ್ತಮಿಯಂದು ವಾರ್ಷಿಕ ಮಹಾರಥೋತ್ಸವ ಜರುಗುತ್ತದೆ.ಗುಂಜಿ ಕ್ಷೇತ್ರದ ವಿಶೇಷತೆಯಂತೆ ರಥೋತ್ಸವಕ್ಕೆ ದೇವರೇ ಸ್ವತ: ಭಕ್ತರಿಗೆ ಆಮಂತ್ರಣ ನೀಡುವ ಪದ್ಧತಿ ಇದ್ದು, 10 ಸಾವಿರ ಆಮಂತ್ರಣಗಳು ‘ನಮಗೆ ಅತ್ಯಂತ ಪ್ರಿಯಭಕ್ತನಾದ .....ಗೆ ಕಾರುಣ್ಯದಿಂ ಬರಿಸಿ ಕಳುಹಿಸಿ ಚಿತ್ತೈಸಿದ ನಿರೂಪು’ ಎಂಬ ಮಾತುಗಳೊಂದಿಗೆ ಭಜಕರ ವಿಳಾಸಕ್ಕೆ ಕಳಿಸಲ್ಪಟ್ಟಿದ್ದವು.