ಸುಟ್ಟು ಕರಕಲಾಗ್ತಿದೆ ಸಹ್ಯಾದ್ರಿ ಪರಿಸರ

ಏರುತ್ತಿರುವ ಧಗೆಯ ಪರಿಣಾಮ ಸಹ್ಯಾದ್ರಿ ಪರಿಸರದಲ್ಲಿ ಇಡೀ ಕಾಡನ್ನೇ ನುಂಗುವ ಬೆಂಕಿ ಕೂಡ ವ್ಯಾಪಕವಾಗುತ್ತಿದ್ದು, ಅರಣ್ಯ ರಕ್ಷಕರಲ್ಲಿ, ಪರಿಸರ ಪ್ರಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪ್ರಾಣಿಗಳು, ಪಕ್ಷಿಗಳು, ಯಾರೂ ನೋಡಿರದ ಎಂತೆಂಥದೋ ಜೀವ ವೈವಿಧ್ಯಗಳು ಕಾಡ್ಗಿಚ್ಚಿಗೆ ಆಹುತಿಯಾಗುತ್ತಿವೆ. ಬೆಲೆ ಕಟ್ಟಲಾಗದಷ್ಟು ನಷ್ಟಗಳಿಗೆ ಕಾರಣವಾಗುತ್ತಿದೆ.
ಕಿಡಿಗೇಡಿಗಳು ಮಾಡುವ ಕೃತ್ಯಕ್ಕೆ ಕಾಡು, ಬೆಟ್ಟ ಬೆಂಕಿಗೆ ಬಲಿಯಾಗುತ್ತಿದೆ. ರಸ್ತೆ ಅಂಚಿನ ಬೆಟ್ಟ, ಕಾಡಿಗೆ ಬೆಂಕಿ ಕಾಟ ಜೋರಾಗಿದ್ದು, ಅರಣ್ಯಾಧಿಕಾರಿಗಳಿಗೆ ಬೆಂಕಿ ನಂದಿಸುವದೇ ದೊಡ್ಡ ತಲೆನೋವಾಗಿದೆ.
ಸಹ್ಯಾದ್ರಿ ಪರಿಸರದಲ್ಲಿ ಪೂರ್ಣ ಪ್ರಮಾಣದಲ್ಲಿ ಎಲೆ ಎದುರಿಸುವ ಕಾಡುಗಳು ಹೆಚ್ಚಿದ್ದು, ಇಲ್ಲಿನ ಸಾಗವಾನಿ ಮರಗಳು ಬೆಂಕಿಗಾಹುತಿಯಾಗುತ್ತಿವೆ. ಹಿಂದಿನಂತೆ ಮರಮರ ತಿಕ್ಕಿ ಬೆಂಕಿ ಹುಟ್ಟುವದಿಲ್ಲ. ಇಂದು ಅಷ್ಟು ದಟ್ಟವಾದ ಕಾಡೂ ಇಲ್ಲ. ಬೆಂಕಿ ಮಾನವ ನಿರ್ಮಿತವೇ ಎಂಬುದು ಉನ್ನತ ಅಧಿಕಾರಿಗಳ ಅಭಿಮತ. ಈಚೆಗಂತೂ ರೈತರು ಕರಡ ದೇಶಿ ಹುಲ್ಲು ಸರಿಯಾಗಿ ಬರಲೆಂದು ಹಾಕಿದ ಬೆಂಕಿಯ ಪ್ರಮಾಣ ತೀರಾ ಕಮ್ಮಿ. ಆದರೆ ಅತಿಕ್ರಮಣಕ್ಕಾಗಿ, ದಾರಿ ಹೋಕರು ಬಿಸಾಡಿದ ಸಿಗರೇಟು ಸಮಸ್ಯೆಯ ಮೂಲವಾಗುತ್ತಿವೆ ಎಂಬುದು ವನ್ಯ, ಪರಿಸರ ಪ್ರಿಯರ ಲೆಕ್ಕಾಚಾರವಾಗಿದೆ. ಕಾಡಿನ ಬೆಂಕಿಯಿಂದ ಅಂತರ್ಜಲ ಇಳಿಕೆಯಾಗುತ್ತಿದೆ. ವನ್ಯಜೀವಿ ಆವಾಸ ಸ್ಥಾನ ಛಿದ್ರವಾಗುತ್ತಿದೆ.
ಅಪರೂಪದ ಸಸ್ಯಗಳು, ಜೀವ ವೈವಿಧ್ಯಗಳು ಇವಕ್ಕೆ ಆಹುತಿಯಾಗುತ್ತವೆ. ಮಣ್ಣಿನ ಸವಕಳಿ ಹೆಚ್ಚಿ, ಕಾಡು ಬರಿದಾಗುತ್ತದೆ ಎಂಬುದು ಆತಂಕ ವಿಷಯ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಹಭಾಗಿತ್ವದಿಂದ ಬೆಂಕಿ ಬೀಳದಂತೆ, ಬಿದ್ದ ಬೆಂಕಿ ನಂದಿಸುವಲ್ಲಿ ತೊಡಗಿಕೊಳ್ಳಬೇಕು. ಕಾಯಂ ಬೆಂಕಿ ಬೀಳುವ ಪ್ರದೇಶವನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಾರೆ ಎಂಬ ದೂರುಗಳು ಇವೆ. ಒಂದೇ ಸಲ ಎರಡ್ಮೂರು ಪ್ರದೇಶದಲ್ಲಿ ಕಾಣಿಸಿಕೊಂಡರೆ ಕಷ್ಟವಾಗುತ್ತದೆ. ಇದಕ್ಕಾಗಿ ಬೆಂಕಿ ನಿಯಂತ್ರಣಕ್ಕೆ ಪ್ರತ್ಯೇಕ ಕಾವಲು ಪಡೆ ಅಗತ್ಯವಾಗಿದೆ. ವೀಕ್ಷಣಾ ಗೋಪುರ, ವಾಕಿಟಾಕಿಗಳನ್ನೂ ವ್ಯವಸ್ಥಿತವಾಗಿ ಕೊಡಬೇಕಾಗಿದೆ ಎಂಬ ಆಗ್ರಹ ಕೂಡ ಇದೆ.