ಶಿರಸಿಯಲ್ಲಿ ರಾಮಕೃಷ್ಣ ಹೆಗಡೆ ಪುತ್ಥಳಿ ಅನಾವರಣ

ಕರ್ನಾಟಕ ಕಂಡ ಮುತ್ಸದ್ಧಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ನಿಲುವು ಭಂಗಿಯ ಆಕರ್ಷಕ ಕಂಚಿನ ಪುತ್ಥಳಿಯನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿಯ ಯಲ್ಲಾಪುರ ನಾಕಾದಲ್ಲಿ ಅನಾವರಣಗೊಳಿಸಲಾಗಿದೆ. ನಾಡಿನ ಪ್ರಸಿದ್ಧ ಶಿಲ್ಪಿ ವೆಂಕಟಾಚಲಪತಿ ಅವರು ಕೆತ್ತಿದ ಮೂರ್ತಿಯನ್ನು ಸಚಿವ ಆರ್.ವಿ.ದೇಶಪಾಂಡೆ, ಎಚ್ಕೆ ಪಾಟೀಲ ಹಾಗೂ ಇತರರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ದೇಶಪಾಂಡೆ, ಹೆಗಡೆ ಅವರ ಅಧ್ಯಯನ ಪೀಠ ಆರಂಭಕ್ಕೆ ಒತ್ತಾಯ ಇದೆ. ಮುತ್ಸದ್ಧಿ ರಾಜಕಾರಣಿ, ದೂರದೃಷ್ಟಿ ಉಳ್ಳ ಹೆಗಡೆ ಅವರ ಹೆಸರಿನ ಅಧ್ಯಯನ ಪೀಠವನ್ನು ಸರಕಾರ ಆರಂಭಿಸಲು ಚಿಂತನೆ ಮಾಡಿದೆ. ಪ್ರತಿ ವರ್ಷ ಹೆಗಡೆ ಅವರ ಜನ್ಮದಿನದಂದು ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಪುರಸ್ಕಾರ ನೀಡಲು ಹೆಗಡೆ ಅಭಿಮಾನಿ ಬಳಗ ಯೋಜಿಸಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಪಾಟೀಲ್ ಪುಟ್ಟಪ್ಪ ಮಾತನಾಡಿ, ರಾಜ್ಯದಲ್ಲಿ ಹೆಗಡೆಗೆ ಮಾತ್ರ ಪ್ರಧಾನಿಯಾಗುವ ಯೋಗ್ಯತೆ ಇತ್ತು. ಅವರು ಪ್ರಧಾನಿಯಾಗದಿದ್ದುದು ಕರ್ನಾಟಕದ ದುರಾದೃಷ್ಟ ಎಂದು ವಿಷಾದಿಸಿದರು. ಅಲ್ಲದೆ, ಸರಕಾರ ಆರಂಭಿಸಲು ಉದ್ದೇಶಿಸಿದ ಗ್ರಾಮೀಣ ವಿಶ್ವವಿದ್ಯಾಲಯಕ್ಕೆ ರಾಮಕೃಷ್ಣ ಹೆಗಡೆ ಅವರ ಹೆಸರು ಇಡಬೇಕು. ವಿಧಾನಸೌಧದಲ್ಲಿ ಹೆಗಡೆ ಅವರ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಪುತ್ಥಳಿ ನಿರ್ಮಾಣ ಮಾಡಿದ ಖ್ಯಾತ ಶಿಲ್ಪಿ ವೆಂಕಟಾಚಲಪತಿ ಅವರನ್ನು ಗೌರವಿಸಲಾಯಿತು.