ಅಥಣಿಯಲ್ಲಿದೆ ಸಿಹಿ ಬೇವಿನ ಮರ

ಬೇವು ಎಂದರೆ ಕಹಿ. ಆದರೆ ಇಲ್ಲೊಂದು ಬೇವಿನಮರವಿದೆ. ಅದರ ವಿಶೇಷವೆಂದರೆ ಅದು ಸಿಹಿಯಾದ ಬೇವಿನಮರ.
ನೀವು ನಂಬುತ್ತಿರೋ ಬಿಡುತ್ತಿರೋ ಗೊತ್ತಿಲ್ಲ, ಅಥಣಿ-ಬಿಜಾಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಕ್ರಾಸ್ನ ಮಾಣಿಕ ನಗರದಲ್ಲಿ ಲಿಂಗೈಕ್ಯ ರಾಚೋಟೇಶ್ವರ ಶಿವಯೋಗಿಗಳ ದೇವಾಲಯದ ಆವರಣದಲ್ಲಿರುವ ಬೇವಿನಗಿಡದ ಎಲೆ ಮತ್ತು ಹೂಗಳು ವಿಜ್ಞಾನಕ್ಕೆ ಸವಾಲು ಹಾಕುವಂತೆ ತನ್ನ ಕಹಿಯನ್ನು ಕಳೆದುಕೊಂಡು ಸಿಹಿಯಾಗಿವೆ. ಅಷ್ಟೇ ಅಲ್ಲ, ಈ ಗಿಡ ವಿವಿಧ ರೋಗಗಳಿಗೆ ರಾಮಬಾಣವಾಗಿ ಜನೋಪಯೋಗಿಯಾಗಿದೆ.
ಶ್ರೀ ರಾಚೋಟೇಶ್ವರ ಶಿವಯೋಗಿಗಳು ಜಮಖಂಡಿ ತಾಲೂಕಿನ ಕಡಪಟ್ಟಿ ಜಗದೀಶ್ವರ ಮಠದಿಂದ ಐಗಳಿ ಗ್ರಾಮಕ್ಕೆ ಆಗಮಿಸಿದಾಗ ಇಲ್ಲಿಯ ಅರಣ್ಯದಲ್ಲಿ ಕುಳಿತು ತಪಸ್ಸು ಪ್ರಾರಂಭಿಸಿದ್ದರಂತೆ. ಯುಗಾದಿ ಹಬ್ಬದಂದು ಅವರು ನೆಟ್ಟ ಬೇವಿನ ಸಸಿ ಹೆಮ್ಮರವಾಗಿ ಬೆಳೆಯಿತು. ಆದರೆ ಕಹಿಯಾಗಲಿಲ್ಲ. ಬೇವಿನ ಮರದ ಹೂವು, ಕಾಯಿ, ತಪ್ಪಲು ಕಹಿಯನ್ನು ಕಳೆದುಕೊಂಡಿತು.