ಸರಸರನೆ ಮರ ಏರುವ ಮಹಿಳೆಯರು

ಮಹಿಳೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾಳೆ. ಈಗ ಮರ ಏರಲೂ ಸಲೀಸಾಗಿ ಕಲಿತಿದ್ದಾಳೆ. ಆರಾಮವಾಗಿ ಮರ ಏರಿ ಸೀಯಾಳ, ತೆಂಗಿನ ಕಾಯಿ ಕೆಳಗಿಳಿಸಿ ಕೊಡುತ್ತಾಳೆ. ಬೆಂಗಳೂರಿನ ತೆಂಗು ಅಭಿವೃದ್ಧಿ ಮಂಡಳಿ ನೆರವಿನಲ್ಲಿ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಆವಾರದಲ್ಲಿ ಇತ್ತೀಚೆಗೆ ನಡೆದ ತೆಂಗಿನ ಮರ ಹತ್ತುವ ಹಾಗೂ ಸಸ್ಯ ಸಂರಕ್ಷಣೆ ತರಬೇತಿಯಲ್ಲಿ ಆರು ಮಹಿಳೆಯರಿಗೆ ಮರ ಏರುವ ಕಲೆ ಸಿದ್ಧಿಸಿದೆ. ತರಬೇತಿಯಲ್ಲಿ 14 ಜನರು ಆಸಕ್ತಿಯಿಂದ ಪಾಲ್ಗೊಂಡಿದ್ದರು.
ಮೊದಲ ದಿನವೇ ಅರ್ಧ ಮರ ಏರಿದ ಮಹಿಳೆಯರು ಎರಡನೇ ದಿನ ತೆಂಗಿನ ಮರವನ್ನು ಸರಾಗವಾಗಿ ಏರಿ ತೆಂಗಿನಕಾಯಿ ಕೊಯ್ದು ಬೆರಗು ಮೂಡಿಸಿದರು. ಇತ್ತೀಚಿನ ದಿನಗಳಲ್ಲಿ ಕೂಲಿಗಳ ಕೊರತೆಯಿಂದ ಸಕಾಲದಲ್ಲಿ ತೆಂಗಿನಕಾಯಿ ಕೊಯ್ಯಲು ಸಾಧ್ಯವಾಗದೆ ರೈತರು ಬೆಳೆ ಬೆಳೆಯಲು ಹಿಂಜರಿಯುವುದನ್ನು ಗಮನಿಸಿದ ಮಂಡಳಿ, ರೈತರಿಗೆ ತೆಂಗಿನ ಮರ ಹತ್ತುವ ಕಾರ್ಯಕ್ರಮ ನಡೆಸಿತು.
ಮಂಡ್ಯದ ಮಹಾದೇವ ಸ್ವಾಮಿ ತರಬೇತಿ ನೀಡಲು ಆಗಮಿಸಿದ್ದು, ಎಲ್ಲರಿಗೂ ಸಮರ್ಪಕವಾಗಿ ತೆಂಗಿನಮರ ಹತ್ತುವ ಚಾಕಚಕ್ಯತೆ ಕಲಿಸಿದರು. ತರಬೇತಿಯ ಕೊನೆಯ ದಿನ ತೆಂಗಿನ ಮರ ಹತ್ತುವ ಸ್ಪರ್ಧೆಯೂ ನಡೆಯಿತು. ಮರ ಏರುವ ಕಲೆಯ ಜೊತೆಗೆ ತೆಂಗಿನ ಉತ್ಪಾದನೆ, ತಾಂತ್ರಿಕತೆ, ರೋಗ ನಿಯಂತ್ರಣ ಕುರಿತೂ ತರಬೇತಿ ನೀಡಲಾಯಿತು. ಮಹಿಳೆಯರು ಸ್ವಯಂ ಆಸಕ್ತಿಯಿಂದ ಬಂದು ತರಬೇತಿಯಲ್ಲಿ ಭಾಗವಹಿಸಿದ್ದರು. ಪುರುಷರಿಗೆ ಕಡಿಮೆ ಇಲ್ಲದಂತೆ ಸರಾಗವಾಗಿ ಮರ ಏರಿ ಕಾಯಿ ಕೊಯ್ದರು. ಕುಸುಮಾ ಬಾಲಚಂದ್ರ ಹೆಗಡೆ, ನೇತ್ರಾವತಿ ಹೆಗಡೆ, ಮಂಗಲಾ ನಾಯ್ಕ, ಮಾಲತಿ ಹೆಗಡೆ, ಸೀಮಾ ಜೋಗಳೇಕರ, ಜಯಶ್ರೀ ಹೆಗಡೆ ಮರ ಹತ್ತಿ ಸಾಧನೆ ಮೆರೆದರು.
ಹಳೆ ಮಾದರಿಯಲ್ಲಿ ಮರ ಏರಿದರೆ ಒಂದು ತಾಸಿನಲ್ಲಿ 10 ಮರ ಏರಬಹುದು. ಯಂತ್ರದ ಮೂಲಕ ಇದೇ ಹೊತ್ತಿನಲ್ಲಿ 20 ಮರ ಏರಬಹುದು ಎನ್ನುವುದು ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ ಹೇಮಂತ ಹೆಗಡೆ ಅನಿಸಿಕೆ. ತರಬೇತಿ ಪಡೆದವರಿಗೆ 2500 ರೂ. ಮೌಲ್ಯದ ಯಂತ್ರವನ್ನು ಉಚಿತವಾಗಿ ನೀಡಲಾಯಿತು. ಜೊತೆಗೆ ಒಂದು ವರ್ಷದ ವಿಮೆ ಸಹ ನೀಡಲಾಯಿತು.