ಭತ್ತ ಸೆಳೆಯುತ್ತೆ, ಒಕ್ಕಲೂ ಬರುತ್ತೆ; ಬಂತು ಸಹಕಾರಿ ಯಂತ್ರ.

ಭತ್ತದ ಕೃಷಿಕರಿಗೆ ದೊಡ್ಡ ತಲೆನೋವು ಅದರ ಕೋಯ್ಲು, ಕೋಯ್ಲೋತ್ತರ ಕಾರ್ಯಗಳು. ಅಡಿಕೆ ಬೆಳೆಗಾರರಿಗೆ ಇದೇ ವೇಳೆಗೆ ಅಡಿಕೆ ಕೊಯ್ಲು ಹಾಗೂ ಭತ್ತದ ಕೊಯ್ಲು ಬರುತ್ತದೆ. ಮೊದಲೇ ಕೃಷಿ ಕಾರ್ಮಿಕರ ಬವಣೆ ಎದುರಿಸುತ್ತಿರುವ ರೈತರು ಇನ್ನಷ್ಟು ಕಂಗಾಲಾಗುತ್ತಾರೆ. ಶಿರಸಿ- ಸಿದ್ದಾಪುರ ಸೀಮೆಗಳಲ್ಲಿ ಭತ್ತದ ಕೃಷಿ ಮಾಡುವ ರೈತರು ಇಂದಿಗೂ ಇದ್ದಾರೆ. ಮನೆಯ ಊಟಕ್ಕಾದರೂ ಭತ್ತ ಬೆಳೆದುಕೊಳ್ಳಬೇಕು, ಸಾವಯವ ಕೃಷಿ ಮಾಡಬೇಕು, ರಾಸಾಯನಿಕ ಬಳಸದೇ ಕೃಷಿ ಮಾಡಬೇಕು ಎಂದು ನಂಬಿದ ನೇಗಿಲ ಯೋಗಿಗಳಿಗೂ ಕೊರತೆ ಇಲ್ಲ. ಆದರೆ, ಈ ಕೆಲಸದ ಸಮಸ್ಯೆಗಳು ಮಾತ್ರ ತಪ್ಪಿದ್ದಲ್ಲ.
ಅಂತೂ ಇಂತೂ ಭತ್ತದ ಗದ್ದೆಯಲ್ಲಿ ಕೊಯ್ಲು ಮಾಡಿದರೂ ಅದನ್ನು ಅರ್ಧ ಕಿಮಿ ದೂರದ ಕಣಕ್ಕೆ ತಂದು ರಾತ್ರಿ ವೇಳೆ ದೀಪದ ಬೆಳಕಿನಲ್ಲಿ ಭತ್ತ ಸೆಳೆದು, ಮರುದಿನ ಧೂಳು, ಕಸ ತೆಗೆದು ಭತ್ತ ಉಳಿಸಿಕೊಳ್ಳುವುದು, ಮತ್ತೆ ಅವಕಾಶ ಆದಾಗ ಹುಲ್ಲುಗಳನ್ನು ಒಕ್ಕುವ ಮೂಲಕ ಜಾನುವಾರುಗಳಿಗೆ ಬಳಸಲು ನೆರವು ಮಾಡಿಸಿಕೊಡುವುದು ನಡೆದೇ ಇದೆ. ಇದನ್ನು ಕಷ್ಟದ ಕೆಲಸ ಎಂದೇ ಶಿರಸಿ ಸೀಮೆಗಳಲ್ಲಿ ಬಣ್ಣಿಸುವುದು ಉಂಟು.
ಇಂತಹ ಕಾರಣಕ್ಕೇ ಅನೇಕ ರೈತರು ಆಹಾರ ಬೆಳೆಯುವ ಭತ್ತದ ಕ್ಷೇತ್ರದಲ್ಲಿ ಅಡಿಕೆ, ಬಾಳೆ, ಅನಾನಸ್, ಶುಂಠಿ ಕೃಷಿ ಮಾಡುವವರೂ ಇದ್ದಾರೆ. ಅನ್ನ ಕೊಡುವ ಭೂಮಿ ಹಣ ಕೊಡುವ ಬೆಳೆಗಳನ್ನು ನಂಬಿಕೊಳ್ಳುವಂತೆ ಆಗಿದೆ. ಇದರಿಂದ ಭತ್ತದ ಭೂಮಿಗಳ ಪ್ರಮಾಣ ಬತ್ತುತ್ತಿದೆ.
ಸುಲಭಕ್ಕೆ ಬಂತು ಯಂತ್ರ:
ಭತ್ತದ ಸಸಿಗಳ ನಾಟಿಗೆ ಪ್ರೋತ್ಸಾಹಿಸಬೇಕು ಎಂದು ಕೃಷಿ ಇಲಾಖೆ ನಾಟಿಗೆ ಯಂತ್ರವನ್ನೂ ಜೋಡಿಸಿಕೊಟ್ಟು ಉತ್ತೇಜಿಸಿತು. ಇಂದು ಭತ್ತದ ಉಳುಮೆಗೆ, ನಾಟಿಗೆ, ಕೊಯ್ಲಿಗೆ ಯಂತ್ರಗಳು ಬಂದಿವೆ. ಕೊಯ್ಲಿನ ನಂತರ ಸಂಸ್ಕರಣೆಗೂ ಯಂತ್ರ ಬಂದಿರುವುದು ಹಲವರ ಬದುಕಿಗೆ ನೆಮ್ಮದಿ ಕೊಟ್ಟಿದೆ.
ಭತ್ತದ ಕೊಯ್ಲಿನ ಬಳಿಕ ಯಂತ್ರಕ್ಕೆ ಒಮ್ಮುಖವಾಗಿ ತೆನೆ ಹುಲ್ಲುಗಳನ್ನು ನೀಡಿದರೆ, ಅದರ ಮುಂಭಾಗದಲ್ಲಿ ಒಕ್ಕಿದ ಹುಲ್ಲು, ಎಡ ಪಾರ್ಶ್ವದಲ್ಲಿ ಚೊಕ್ಕಟವಾದ ಭತ್ತ ಬೀಳುತ್ತದೆ. ಭತ್ತದ ಹುಲ್ಲಿನಲ್ಲಿ ಒಂದೇ ಒಂದು ಕಾಳು ಉಳಿಯದಂತೆ ಚೊಕ್ಕಟವಾಗಿ ಬೇರ್ಪಡಿಸಲಾಗುತ್ತದೆ. ಒಂದು ಯಂತ್ರಕ್ಕೆ ಒಂದು, ಒಂದುವರೆ ತಾಸಿಗೆ ಒಂದು ಎಕರೆ ಭತ್ತದ ಗದ್ದೆಯ ಒಕ್ಕಲು ಸಾಧ್ಯವಿದೆ. ಹತ್ತು ಜನರು ಮೂರು ದಿನ ಮಾಡಿದರೂ ಮುಗಿಯದ ಕೆಲಸವನ್ನು ಹತ್ತು ಜನರಿದ್ದರೆ ಒಂದು ದಿನಕ್ಕೆ ಮುಗಿಸುವ ತಾಕತ್ತು ಯಂತ್ರಕ್ಕಿದೆ. ಯಂತ್ರ ಹೋಗಲು ದಾರಿ ಇದ್ದರೆ ಸಾಕು, ಕಣ ಕೂಡ ಮಾಡಿಕೊಳ್ಳುವ ತಲೆಬಿಸಿ ಇಲ್ಲ.
ಸಹಕಾರಿ ಯಂತ್ರ:
ಇಂತಹ ದುಬಾರಿ ಯಂತ್ರವನ್ನು ಒಂದು, ಎರಡು ಎಕರೆ ಕೃಷಿ ಭತ್ತದ ಬೇಸಾಯ ಮಾಡುವ ರೈತರು ಖರೀದಿಸುವುದು ಸುಲಭದ ಮಾತಲ್ಲ. ಈ ಕಾರಣದಿಂದಲೇ ಸಂಘದ ಸದಸ್ಯರಿಗೆ ನೆರವಾಗಲೆಂದೇ ಶಿರಸಿ ತಾಲೂಕಿನ ಯಡಳ್ಳಿ ಸೇವಾ ಸಹಕಾರಿ ಸಂಘವು ಶಿರಸಿಯ ಯಾಂತ್ರೀಕರಣ ವಿತರಕ ಆರ್.ಎಚ್.ಭಟ್ಟ ಅವರಿಂದ ಕೃಷಿ ಇಲಾಖೆ ಸಹಾಯಧನ ಸಹಿತ ಒಂದು ಲಕ್ಷ ರೂ. ಮೊತ್ತದಲ್ಲಿ ಭತ್ತ ಒಕ್ಕುವ ಯಂತ್ರ ಖರೀದಿಸಿದೆ.

ಳೆದ ವರ್ಷದಿಂದ ರೈತರ ಭತ್ತದ ಗದ್ದೆಗೇ ಈ ಯಂತ್ರವನ್ನು ಕಳಿಸಿಕೊಡಲಾಗುತ್ತಿದೆ. ಟ್ರಾಕ್ಟರ್ ಬಳಸಿಕೊಂಡು ಯಂತ್ರವನ್ನು ತಾಸಿನ ಲೆಕ್ಕಾಚಾರದಲ್ಲಿ ಕಳಿಸಲಾಗುತ್ತದೆ. ಯಂತ್ರಕ್ಕೆ ನಾಲ್ಕು ನೂರು ರೂ.ತಾಸಿಗೆ ಬಾಡಿಗೆ ನಿಗದಿ ಮಾಡಲಾಗಿದೆ. ಸಾಗಾಟಕ್ಕೆ ಟ್ರಾಕ್ಟರ್ ಬಾಡಿಗೆ ಬೇರೆ ಆಗಿದ್ದು, ನಾಲ್ಕೈದು ಬೆಳೆಗಾರರು ಸೇರಿ ಯಂತ್ರ ತರಿಸಿಕೊಂಡಲ್ಲಿ ಸಾಗಾಟದ ಬಾಡಿಗೆ ಉಳಿತಾಯ ಆಗಲಿದೆ.
ವಿವರಗಳಿಗೆ 08384-272133, 272285ಗೆ ಸಂಪರ್ಕ ಮಾಡಬಹುದು.