ಬಿದಿರು ಅಕ್ಕಿಗೂ ಬಂತು ಕಾಲ

ಪ್ರತೀ 60 ವರ್ಷಕ್ಕೊಮ್ಮೆ ಬರುವ ಬಿದಿರಿನಿಂದ ಬರಗಾಲವಾಗಬಹುದು ಎಂಬ ಮಾತನ್ನು ಈಗಲೂ ಹಿರಿಯ ವ್ಯಕ್ತಿಗಳ ಬಾಯಲ್ಲಿ ಕೇಳುತ್ತೇವೆ. ಈ ಹಿಂದೆ ಸುಮಾರು 60 ವರ್ಷಗಳ ಹಿಂದೆ ಬಿದಿರು ಅಕ್ಕಿ ಬಂದಿದ್ದು ಆಗ ಮಳೆ ಇಲ್ಲದೆ ಬರಗಾಲವಾಗಿತ್ತು. ಈ ಬಿದಿರು ಅಕ್ಕಿಯನ್ನು ಉಪಯೋಗಿಸಿದ ನೆನಪು ಮತ್ತೆ ಬರಬಹುದೇನೋ ಎಂಬ ಸ್ಥಿತಿ ಮತ್ತೊಮ್ಮೆ ಕಂಡು ಬಂದಿದೆ. ಕಳೆದ 2 ವರ್ಷಗಳಿಂದ ಮಲೆನಾಡಿನ ಭಾಗದಲ್ಲಿ ಬಹುತೇಕವಾಗಿ ಬಿದಿರು ಅಕ್ಕಿಯಾಗಿದೆ. ಇದರಿಂದ ಬಿದಿರು ತನ್ನ ಸಂತತಿ ನಶಿಸುತ್ತಿದ್ದು ಒಂದೇ ವರ್ಷದಲ್ಲಿ ಸಂಪೂರ್ಣ ಬಿದಿರು ನಾಶವಾಗಲಿದೆ.
ಕಾರಣ:
ಪ್ರತಿ ಜೀವರಾಶಿಗೂ ಇಂತಿಷ್ಟು ಆಯುಷ್ಯ ನಿಗದಿಯಾಗಿರುತ್ತದೆ. ಹಾಗೆಯೇ ಬಿದಿರಿಗೂ 50-60 ವರ್ಷಗಳ ಕಾಲ ಬದುಕುತ್ತವೆ. ಈಗ ರಾಜ್ಯದ ಬಿದಿರು ಬದುಕಿನ ಅಂತಿಮಘಟ್ಟ ಮುಟ್ಟಿದೆ. ಗಮನಿಸಬೇಕಾದ ಅಂಶವೆಂದರೆ ಬಿದಿರು ಸಂತತಿ ಸಾಮೂಹಿಕವಾಗಿ ಕಣ್ಣು ಮುಚ್ಚುವ ಸಮಯ ಬಂದಿದೆ. ಈಗ ಸಾವಿನ ಸಮಯ ಬಿದಿರು ಮತ್ತೆ ಸ್ವತಂತ್ರವಾಗಿ ಚಿಗುರಿ ಎತ್ತರವಾಗಿ ಬೆಳೆಯಲು 4-5 ವರ್ಷಗಳೇ ಬೇಕಾಗಿದೆ. ಇದಕ್ಕೆ ಪರ್ಯಾಯವಾಗಿ ಬಿದಿರು ಬೆಳೆಗೆ ಅರಣ್ಯ ಇಲಾಖೆ ಯಾವುದೇ ರೀತಿಯಲ್ಲೂ ತಯಾರಾದಂತೆ ಕಾಣುತ್ತಿಲ್ಲ.
ಬಿದಿರು ರೈತರಿಗೆ ಜೀವಾಳವಾಗಿದೆ. ಹೊಲಗದ್ದೆಗಳ ಬೇಲಿಗೆ, ಕಾಗದ ತಯಾರಿಕೆಗೆ, ಹಾಗೆಯೇ ಮಳೆಗಾಲದಲ್ಲಿ ಬಿಡುವ ಕಳಲೆಗೂ ಅಪಾರ ಬೇಡಿಕೆಯಿದೆ. ಇದನ್ನು ಸಾಂಬಾರು ಹಾಗೂ ವಿವಿಧ ರೀತಿಯ ತಿನಿಸಿಗೂ ಬಳಸುತ್ತಾರೆ. ಮುಖ್ಯವಾಗಿ ಆನೆಗಳಿಗೆ ಬಿದಿರುಸೊಪ್ಪು ಆಹಾರವಾಗಿದೆ.
ಬಿದಿರು ಅಕ್ಕಿಗೆ ಈಗ ಕಾಲ ಬಂದಿದೆ:
ಮಲೆನಾಡಿನ ಬಹುತೇಕ ಭಾಗದಲ್ಲಿ ಬಿದಿರು ರಾಜನ್ ಬಂದಿದ್ದು ಬಿದಿರು ಅಕ್ಕಿ ಕಾಣುವ ಅವಕಾಶವಾಗಿದೆ. ಈ ಭಾಗದಲ್ಲಿ ಬಾರೀ ಪ್ರಮಾಣದಲ್ಲಿ ಬಿದಿರು ಅಕ್ಕಿ ಬಂದಿದ್ದರಿಂದ ಬಯಲು ಸೀಮೆಯ 2-3 ಲಂಬಾಣಿ ತಂಡದವರು ಈ ಬಿದಿರು ಅಕ್ಕಿಯನ್ನು ಸಂಗ್ರಹಿಸುವಲ್ಲಿ ಮುಂದಾಗಿದ್ದಾರೆ. ಬಿದಿರು ಮಟ್ಟಿಯ ಅಡಿಯಲ್ಲಿ ಬಿದ್ದಿರುವ ಅಕ್ಕಿಯನ್ನು ಸಂಗ್ರಹಿಸುವುದು ತುಂಬಾ ಕಷ್ಟವಾಗಿದೆ. ಸಂಗ್ರಹಿಸಿ ಸ್ವಚ್ಛ ಮಾಡಿ ಅಕ್ಕಿಯ ಮಿಲ್ಗೆ ಸಾಗಿಸಿ ನಂತರ ಉಪಯೋಗಿಸಲಾಗುತ್ತದೆ. ತುಂಬಾ ರುಚಿಕರವಾದ ಈ ಬಿದಿರು ಅಕ್ಕಿಯಿಂದ ಅನ್ನ, ಹಾಗು ತಿಂಡಿಗಳನ್ನು ಮಾಡಬಹುದು. ಆರೋಗ್ಯಕ್ಕೆ ಉತ್ತಮವಾಗಿದ್ದು ತುಂಬ ಉಷ್ಣವಿರುತ್ತದೆ ಮಳೆಗಾಲದಲ್ಲಿ ಈ ಅಕ್ಕಿಯನ್ನು ಉಪಯೋಗಿಸುತ್ತಾರೆ. ಆದರೆ ಬೇಸಿಗೆಯಲ್ಲಿ ಬಳಸಿದರೆ ಉಷ್ಣದ ಪ್ರಮಾಣ ಹೆಚ್ಚಾಗಿರುತ್ತದೆ. ಒಂದು ಬಿದಿರುಮಟ್ಟಿಯಲ್ಲಿ 40-50 ಕೆಜಿ ಬಿದಿರು ಅಕ್ಕಿ ಸಿಗಬಹುದು. ಇದಕ್ಕೆ ಬಯಲು ಸೀಮೆಯಲ್ಲಿ ಹೆಚ್ಚು ಬೇಡಿಕೆ ಇದೆ. ಸೋನಾ ಮಸೂರಿಯಂತಿರುವ ಈ ಬಿದಿರು ಅಕ್ಕಿ ತುಂಬಾ ರುಚಿಯಿಂದ ಕೂಡಿರುತ್ತದೆ.