ವಿಭೂತಿ ಬೇಕೆ ಕಡೂರಿಗೆ ಬನ್ನಿ

ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆ ಹಾಗೂ ಆಚರಣೆಗಳಿಗೆ ಹೂ, ಹಣ್ಣು, ಕಾಯಿ ಎಷ್ಟು ಮುಖ್ಯವೋ ವಿಭೂತಿಯೂ ಅಷ್ಟೇ ಮುಖ್ಯ. ವಿಭೂತಿ ನಮ್ಮ ರಾಜ್ಯದಲ್ಲಿ ತಯಾರಾಗುವುದು ಬಹಳ ವಿರಳ. ಇಂತಹ ವಿಭೂತಿಯನ್ನು ಹಲವಾರು ವರ್ಷಗಳಿಂದ ತಯಾರಿಸುವ ಕುಟುಂಬವೊಂದು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಕಡೂರಿನಲ್ಲಿರುವ ವಿಭೂತಿ ಮನೆ ಎಂದೇ ಹೆಸರು ಪಡೆದಿರುವ ಇಲ್ಲಿನ ಶಿವರಾಜ್ ಕುಟುಂಬ. ಸುತ್ತಮುತ್ತಲಿನ ಜನ ಇದನ್ನು ವಿಭೂತಿ ಕುಟುಂಬ ಎಂದೇ ಕರೆಯುತ್ತಾರೆ. ಕಳೆದ 20 ವರ್ಷಗಳಿಂದ ರಾಜ್ಯ-ಹೊರರಾಜ್ಯಗಳಿಗೂ ವಿಭೂತಿಯನ್ನು ತಯಾರಿಸಿ, ರವಾನಿಸುತ್ತಿರುವ ಈ ಕುಟುಂಬ, ಈ ಕಸುಬನ್ನೇ ಜೀವನಾಧಾರವಾಗಿಸಿಕೊಂಡಿದೆ.ಮನೆಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಬಿಳಿ ಬಣ್ಣದ ವಿಧ ವಿಧದ ಉಂಡೆಗಳು. ನೆಲದ ಮೇಲೂ ಬಿಳಿ ಬಣ್ಣ. ಗೋಡೆಯ ಮೇಲೂ ಬಿಳಿ ಬಣ್ಣ. ಈ ಕುಟುಂಬಕ್ಕೆ ಐವತ್ತು ವರ್ಷಗಳ ಇತಿಹಾಸವಿದೆ. ರಾಜ್ಯ, ಹೊರರಾಜ್ಯಗಳಿಗೂ ವಿಭೂತಿ ತಯಾರಿಸಿ ಕಳುಹಿಸುತ್ತಾರೆ. ಇಲ್ಲಿನ ಘಟಕ ಸುಮಾರು 40ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದೆ. ಇಲ್ಲಿ ಮಹಿಳಾ ಉದ್ಯೋಗಿಗಳೇ ಹೆಚ್ಚು. ಈ ಕುಟುಂಬ ತಯಾರಿಸುವ ವಿಭೂತಿ ರಾಜ್ಯದ ಮೂಲೆ ಮೂಲೆಯ ಚಿಲ್ಲರೆ ಅಂಗಡಿಗೂ ಹೋಗುತ್ತದೆ.
ಕಾಶಿ ಮಠ, ತಮಿಳುನಾಡಿನ ತಿರುಪತಿ ದೇವಾಲಯ, ಬಾಳೆಹೊನ್ನೂರು ಮಠ, ಸಿರಿಗೆರೆ ಮಠ, ಸುತ್ತೂರು ಮಠ ಸೇರಿದಂತೆ ರಾಜ್ಯದ ಬಹುತೇಕ ದೇವಾಲಯಗಳು ಹಾಗೂ ಮಠಗಳಿಗೆ ಇಲ್ಲಿಂದಲೇ ವಿಭೂತಿಯನ್ನು ಸರಬರಾಜು ಮಾಡಲಾಗುತ್ತದೆ. ಜತೆಗೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶದ ಅಂಗಡಿಗಳಿಗೂ ಕಳುಹಿಸಿಕೊಡಲಾಗುತ್ತದೆ. ವಿಭೂತಿಗೆ ಕೆಮಿಕಲ್ ಮಿಕ್ಸ್ ಮಾಡ್ತಾರೆ, ಕೈ, ಚರ್ಮಕ್ಕೆ ತೊಂದರೆ ಅನ್ನುವವರ ಬಾಯಿಗೆ ಇಲ್ಲಿ ಕೆಲಸ ಮಾಡುತ್ತಿರುವವರು ಬೀಗ ಹಾಕಿದ್ದಾರೆ. ಕಳೆದ 20 ವರ್ಷದಿಂದ ವಿಭೂತಿ ಮಾಡುತ್ತಿದ್ದರೂ ಇಂದಿನವರೆಗೂ ಯಾವುದೇ ತೊಂದರೆಯಿಲ್ಲದಂತೆ ದುಡಿಯುತ್ತಿದ್ದಾರೆ. ನಾಡಿನ ಅದೆಷ್ಟೋ ಭಕ್ತರ ಹಣೆಯಲ್ಲಿ ವಿಭೂತಿ ಹೊಳೆಯುವಂತೆ ಮಾಡಿದ್ದಾರೆ.