ನಾನು ಅನಕ್ಷರಸ್ಥರಾದರೂ ನಿತ್ಯ ಕಲಿಯತ್ತೇನೆ

ನಾನು ಅನಕ್ಷರಸ್ಥ. ಆದ್ದರಿಂದಲೇ ಪ್ರತಿದಿನ ಕಲಿಯುತ್ತೇನೆ. ಪದವಿ ನಂತರ ಅಧ್ಯಯನಕ್ಕೆ ವಿದಾಯ ಹೇಳುವ ರೀತಿಯ ವ್ಯಕ್ತಿ ನಾನಲ್ಲ. ಕೊಡುವಾಗ ಹೃದಯದ ಮಾತು ಕೇಳುತ್ತೇನೆ. ನನ್ನ ಸಂಸ್ಥೆಯ ಕೆಲಸಗಾರರನ್ನು ಕುಟುಂಬದ ಸದಸ್ಯರು ಎಂದು ಪರಿಗಣಿಸಿದ್ದರಿಂದಲೇ ನಾನು ಯಶಸ್ವಿ ಉದ್ಯಮಿಯಾಗಿದ್ದೇನೆ. ಇದು ವಜ್ರಾಭರಣ ವ್ಯಾಪಾರಿ, ಹರಿಕೃಷ್ಣ ಎಕ್ಸ್ಪೋರ್ಟ್ಸ್ ಮುಖ್ಯಸ್ಥ ಸಾವಜಿಭಾಯಿ ಢೋಲಕಿಯಾ ಮಾತು.
ಕೊಟ್ಟ ಮಾತಿನಂತೆ ಗುರಿ ತಲುಪಿದ ಸಂಸ್ಥೆಯ 600 ನೌಕರರಿಗೆ ಕಾರು, ಫ್ಲಾಟ್ ಹಾಗೂ ವಜ್ರಾಭರಣ ನೀಡಿ ದೇಶಾದ್ಯಂತ ಪ್ರಚಾರ ಪಡೆದಿದ್ದ ಉದ್ಯಮಿ ಇವರು. ಟೈಕಾನ್ ಹುಬ್ಬಳ್ಳಿ-2015 ಸಮ್ಮೇಳನದಲ್ಲಿ ಢೋಲಕಿಯಾ ತಮ್ಮ ಅನುಭವ ಹಂಚಿಕೊಂಡರು. ಅವರ ಮಾತುಗಳನ್ನು ಅವರ ಬಾಯಿಯಿಂದಲೇ ಕೇಳಿ. ನನ್ನಂತೆ ನನ್ನ 9,000 ನೌಕರರು ಕೂಡ ಅನಕ್ಷರಸ್ಥರು. ಆದ್ದರಿಂದ ಅವರ ಕಲಿಕೆ ನಿರಂತರ. ಇದೇ ಕಾರಣಕ್ಕೆ ಅವರು ನನ್ನೊಂದಿಗೆ ಹಲವಾರು ವರ್ಷಗಳಿಂದ ಇದ್ದಾರೆ. ನಾನು ಹೇಳಿದಂತೆ ಕೇಳುವುದಷ್ಟೇ ಅವರಿಗೆ ಗೊತ್ತು. ನನಗೆ ತಾಂತ್ರಿಕ ವಿಷಯಗಳು ಗೊತ್ತಿಲ್ಲ. ಆದರೆ ಯಾರಿಂದ ಯಾವ ಕೆಲಸ ಹೇಗೆ ಕೆಲಸ ತೆಗೆಯಬೇಕೆಂಬುದು ಗೊತ್ತು. ಕೆಲಸಗಾರರಿಗೆ ಪ್ರತಿ ದಿನ ಭೋಜನ ನೀಡಲಾಗುತ್ತದೆ. ಭೋಜನ ನೀಡಿದ ಧಣಿಗೆ ಯಾರೂ ಕೂಡ ದ್ರೋಹ ಬಗೆಯುವುದಿಲ್ಲ ಎಂಬುದು ನನ್ನ ಸರಳ ನಂಬಿಕೆ. ಕಾರ್ಮಿಕರ ಮಕ್ಕಳಿಗೆ ಶಾಲೆ ಕಲಿಯಲು, ಕುಟುಂಬದ ಸದಸ್ಯರಿಗೆ ಆಸ್ಪತ್ರೆ, ವಿಮೆ ಸೌಲಭ್ಯ ಕಲ್ಪಿಸಿದ್ದೇನೆ. ಕಾರ್ಮಿಕರಿಗೆ ಶೇ.100ರಷ್ಟು ತೃಪ್ತಿ ಸಿಕ್ಕರೆ ಅವರು ಶೇ.100ರಷ್ಟು ತನ್ಮಯತೆಯಿಂದ ಕೆಲಸ ಮಾಡುತ್ತಾರೆ.
ನಿಷ್ಟೆಯ ನೌಕರರಿಂದಾಗಿಯೇ ನಮ್ಮ ಸಂಸ್ಥೆ ಪ್ರಸಕ್ತ 5,000 ಕೋಟಿ ರೂ. ವ್ಯವಹಾರ ಮಾಡಲು ಸಾಧ್ಯವಾಯಿತು. ನಾನು ಅನಕ್ಷರಸ್ಥನಾಗಿರುವುದೇ ಸವಾಲುಗಳಿಗೆ ಎದೆಗುಂದದೇ ಎದುರಿಸಲು ಕಾರಣ ಇರಬಹುದು. ಪ್ರತಿದಿನ ‘ನಾನು ಸರ್ವಶ್ರೇಷ್ಠ, ನನ್ನಿಂದ ಇದು ಸಾಧ್ಯವಿದೆ. ದೇವರು ಸದಾ ನನ್ನೊಂದಿಗಿದ್ದಾನೆ. ನಾನು ಜಯಶಾಲಿ, ಈ ದಿನ ಹೊಸದಿನ’ ಎಂದುಕೊಂಡು ದಿನದ ವ್ಯವಹಾರ ಆರಂಭಿಸಿದರೆ ಮನಸಿನಲ್ಲಿ ಧನಾತ್ಮಕ ಚಿಂತನೆ ಬರುತ್ತದೆ. ಇತಿಹಾಸ ಓದುವುದಲ್ಲ, ಇತಿಹಾಸ ನಿರ್ಮಾಣ ಮಾಡುವುದು ನನ್ನ ಬಯಕೆ .