ಕ್ಷೌರಿಕ ಕೋಟ್ಯಾಧಿಪತಿಯಾದ ಕಥೆ ಬಿಚ್ಚಿಟ್ಟ ರಮೇಶ ಬಾಬು

ಪರಿಶ್ರಮಪಟ್ಟರೆ ಯಾರಾದರೂ ಉದ್ಯಮಿಯಾಗಬಹುದು ಎಂಬುದನ್ನು ನಿರೂಪಿಸುವ ಉದ್ದೇಶದಿಂದ ಉದ್ಯಮ ಆರಂಭಿಸಿ, ವೈಭವೋಪೇರಿತ ಕಾರುಗಳು ಸೇರಿದಂತೆ 216 ಕಾರುಗಳ ಮಾಲಿಕನಾಗಿದ್ದೇನೆ. ಕಾರ್ ರೆಂಟಲ್ ಉದ್ಯಮ ನಡೆಸುತ್ತಿರುವ ‘ಕೋಟ್ಯಾಧಿಪತಿ ಕ್ಷೌರಿಕ’ ಎಂದೇ ಹೆಸರು ಪಡೆದ ರಮೇಶ ಬಾಬು ಅವರ ಮಾತಿದು.
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಟೈಕಾನ್ ಹುಬ್ಬಳ್ಳಿ-2015 ಸಮ್ಮೇಳನ ನಡೆಯಿತು. ಈ ವೇಳೆ, ಅವರಾಡಿದ ಮಾತುಗಳನ್ನು ಅವರೇ ಬಾಯಲ್ಲೇ ಕೇಳಿ.
ಬಾಲ್ಯಾವಸ್ಥೆಯಲ್ಲಿದ್ದಾಗಲೇ ಕ್ಷೌರಿಕ ವೃತ್ತಿ ಮಾಡುತ್ತಿದ್ದ ತಂದೆ ತೀರಿಕೊಂಡಿದ್ದರಿಂದ ಚಿಕ್ಕಪ್ಪನನ್ನೇ ಆಶ್ರಯಿಸಬೇಕಾಯಿತು. ಆದರೆ ನಾವು ಬೆಳೆಯಬಾರದು ಎಂಬ ದುರುದ್ದೇಶ ಹೊಂದಿದ್ದ ನನ್ನ ಚಿಕ್ಕಪ್ಪ ನಡೆದುಕೊಂಡ ರೀತಿ, ಆತನ ವರ್ತನೆ ನನ್ನಲ್ಲಿ ಸಾಧನೆ ಮಾಡಬೇಕೆಂಬ ತುಡಿತ ಹೆಚ್ಚಿಸಿತು. ನನ್ನನ್ನೇ ಅವಲಂಬಿಸಿದ ಸೋದರರು ಹಾಗೂ ಸೋದರಿಯರು, ಅವರಿವರ ಮನೆಗಳಲ್ಲಿ ಅಡುಗೆ ಮಾಡುತ್ತಿದ್ದ ಅಮ್ಮ ನನಗೆ ಸಾಧನೆ ಮಾಡಲು ಸ್ಫೂರ್ತಿ.ಚಿಕ್ಕಪ್ಪನೇ ನನ್ನ ವೈರಿ ಎಂದು ತಿಳಿದುಕೊಂಡು ಆತ ಕಾರು ಖರೀದಿಸಿದಾಗ ನಾನೂ ಕೂಡ 1993ರಲ್ಲಿ ಮಾರುತಿ ವ್ಯಾನ್ ಖರೀದಿಸಿದೆ. ಆದರೆ, ತಿಂಗಳ ಕಂತು ತುಂಬಲಾಗದೇ ಪರಿತಪಿಸುತ್ತಿರುವಾಗ ಕಾರ್ ಬಾಡಿಗೆ ನೀಡಿದೆ. ಉತ್ತಮ ಸೇವೆ ನೀಡುತ್ತಿದ್ದರಿಂದ ಮುಂದೆ ಕಾರುಗಳ ಸಂಖ್ಯೆ ಬೆಳೆಯುತ್ತ ಹೋಯಿತು. ಸದ್ಯ ಭಾರತದಲ್ಲಿ ಕೇವಲ 3 ರೋಲ್ಸ್ ರಾಯ್ಸ್ ಕಾರುಗಳಿದ್ದು, ಅವುಗಳಲ್ಲಿ ನನ್ನದೂ ಒಂದು ಎಂಬುದು ಹೆಮ್ಮೆಯ ಸಂಗತಿ.
ಸದ್ಯ ಮಾರುಕಟ್ಟೆಯಲ್ಲಿ 5.5 ಕೋಟಿ ರೂ. ಬೆಲೆ ಬಾಳುವ ಕಾರನ್ನು ದಿನಕ್ಕೆ 50,000 ರೂ.ಗಳಂತೆ ಬಾಡಿಗೆ ನೀಡುತ್ತೇನೆ. ನಾನು ಒಮ್ಮೆ ಖರೀದಿಸಿದರೆ 3, 5 ಅಥವಾ 10 ಕಾರುಗಳನ್ನು ಖರೀದಿಸುತ್ತೇನೆ. ಏಕೆಂದರೆ ಹೆಚ್ಚೆಚ್ಚು ಕಾರುಗಳನ್ನು ಖರೀದಿಸಿದರೆ ನನಗೆ ಹೆಚ್ಚು ರಿಯಾಯಿತಿ ಸಿಗುತ್ತದೆ. ಎಲ್ಲ ವರ್ಗದ ಜನರೂ ಕಾರುಗಳಲ್ಲಿ ಸಂಚರಿಸಬೇಕು. ಖರೀದಿಸಲಾಗದಿದ್ದರೆ, ಬಾಡಿಗೆ ಪಡೆದಾದರೂ ಸಂದರ್ಭ ಒದಗಿದಾಗ ಕಾರು ಸಂಚಾರದ ಆನಂದವನ್ನು ಪಡೆಯಬೇಕು. ತಾಳ್ಮೆಯನ್ನು ಕಳೆದುಕೊಳ್ಳದಿರುವುದು ನನ್ನ ಸಾಮರ್ಥ್ಯ. ಎಂಥ ಸ್ಥಿತಿ ಬಂದರೂ ನಾನು ಧೃತಿಗೆಡುವುದಿಲ್ಲ.
ಜಾಗತಿಕ ಬಿಕ್ಕಟ್ಟು ಸಂಭವಿಸಿದಾಗ ಹಲವು ಕಾರ್ ರೆಂಟಲ್ ಉದ್ಯಮಗಳು ನೆಲಕಚ್ಚಿದವು. ಆದರೆ ನಾನು ಕಾರುಗಳನ್ನು ಮಾರದೇ ಉತ್ತಮ ದಿನಗಳಿಗಾಗಿ ಕಾದೆ. ನಂತರ ಸ್ಥಿತಿ ಸುಧಾರಿಸಿತು. ನಾನು ಯಾವುದೇ ಮಾರಾಟ ಪ್ರತಿನಿಧಿಯನ್ನು ನೇಮಕ ಮಾಡಿಕೊಂಡಿಲ್ಲ. ನನ್ನ ಬಳಿ ಸೇವೆ ಪಡೆದವರೇ ಗುಣಮಟ್ಟದ ಸೇವೆಯ ಪ್ರಚಾರ ಮಾಡುತ್ತಾರೆ.
ನಾನು ಕೋಟ್ಯಾಧಿಪತಿಯಾಗಿರಬಹುದು, ಬೆಂಗಳೂರಿನಲ್ಲಿದ್ದರೆ ಈಗಲೂ ಪ್ರತಿದಿನ ಕ್ಷೌರಿಕ ಕೆಲಸ ಮಾಡುತ್ತೇನೆ. ನನ್ನ ಮೂಲ ವೃತ್ತಿ ಬಿಡುವುದಿಲ್ಲ. ನನ್ನ ಸಂಸ್ಥೆಯಲ್ಲಿ 190 ಜನರಿಗೆ ಕೆಲಸ ನೀಡಿದ್ದೇನೆ. 600 ಕಾರುಗಳನ್ನು ಖರೀದಿಸಬೇಕೆಂಬುದು ನನ್ನ ಅಭಿಲಾಷೆ. ಆದರೆ ಅದಕ್ಕೆ ಯಾವುದೇ ಸಮಯ ನಿಗದಿಪಡಿಸಿಕೊಂಡಿಲ್ಲ. ನಿಧಾನ ಗತಿಯಲ್ಲಿ ಉದ್ಯಮ ಬೆಳೆಸಲು ನಿರ್ಧರಿಸಿದ್ದೇನೆ.