ಕುಮಟಾ ತಾಲೂಕಿನ ಹೆಗಡೆಯಲ್ಲಿ ಉದಕಶಾಂತಿ ಅಭಿಯಾನ

ಪುರುಷೋತ್ತಮ ಮಾಸವೆಂದು ವಿಶೇಷವಾಗಿ ಕರೆಯಲಾಗುವ ಆಷಾಢ ಅಧಿಕ ಮಾಸದ ಪ್ರಯುಕ್ತ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ವಿಪ್ರ ಒಕ್ಕೂಟದ ವತಿಯಿಂದ ಸಮಾನ ಮನಸ್ಕ ವೈದಿಕರು ಸೇರಿ ಉದಕಶಾಂತಿ ಅಭಿಯಾನ ಹಮ್ಮಿಕೊಂಡಿದ್ದಾರೆ.ವರ್ಷ ಆಷಾಢ ಮಾಸ ಅಧಿಕ ಮಾಸವಾಗಿದ್ದು ಜೂ.16 ರಿಂದ ಜು. 16 ರ ವರೆಗೆ 1 ತಿಂಗಳು (31 ದಿನ) ಅಧಿಕ ಆಷಾಢ ಮಾಸವಾಗಿರುತ್ತದೆ. ಅಧಿಕ ಮಾಸದಲ್ಲಿ ಸಂಸ್ಕಾರ ಕರ್ಮಗಳನ್ನಾಗಲಿ, ದೇವಪ್ರತಿಷ್ಠಾದಿ ಕಾಮ್ಯಕರ್ಮಗಳನ್ನಾಗಲಿ ಮಾಡಬಾರದು ಎಂಬ ಶಾಸ ವಿಧಿ ಇದೆ. ಆದರೆ, ದೇವತಾ ಪ್ರೀತಿಗೋಸ್ಕರ ನಿಷ್ಕಾಮ ಕರ್ಮಗಳನ್ನು ಮಾಡಬಹುದು ಎಂಬ ಶಿಷ್ಟ ಅಭಿಪ್ರಾಯದಂತೆ ಗ್ರಾಮದಲ್ಲಿ ಉದಕಶಾಂತಿ ಅಭಿಯಾನ ನಡೆಸುತ್ತಿದ್ದಾರೆ.
ಮನುಷ್ಯನು ಜೀವಿಸಲು ಅತ್ಯವಶ್ಯವಾದ ನೀರಿಗೆ ಅಸಂಖ್ಯ ಕಲ್ಯಾಣ ಗುಣಗಳಿವೆ. ಉದಕಶಾಂತಿ ಮಂತ್ರಗಳನ್ನು ಪಠಿಸಿ, ಅವುಗಳಿಂದ ಅಭಿಮಂತ್ರಿತವಾದ ನೀರನ್ನು ಪ್ರೋಕ್ಷಿಸುವುದರಿಂದ ಸಕಲ ಆಪತ್ತು ನಿವಾರಣೆಯಾಗಿ ಆಯುರಾರೋಗ್ಯದ ಅಭಿವೃದ್ಧಿ ಮತ್ತು ಎಲ್ಲ ರೀತಿಯಿಂದ ರಕ್ಷಣೆ ಆಗುತ್ತದೆ ಎನ್ನುವುದು ಶಾಸ ವಾಕ್ಯ. ಆದ್ದರಿಂದ ವೈದಿಕರು ಅಧಿಕಮಾಸ ಪೂರ್ತಿ ಪ್ರತಿನಿತ್ಯ ಸಂಜೆ ಪ್ರದೋಷ ಕಾಲದಲ್ಲಿ ಉದಕಶಾಂತಿ ಮಂತ್ರ ಪಠಿಸಬೇಕೆಂದು ಸಂಕಲ್ಪಿಸಿದ್ದಾರೆ. ವಿಪ್ರ ಸಮಾಜದ ಸದಸ್ಯರಿಗೂ ಇದರ ಲ ಸಿಗಲಿ ಎಂಬ ದೃಷ್ಟಿಯಿಂದ ದೇವಸ್ಥಾನದಲ್ಲಿ, ಸಮಾಜ ಬಾಂಧವರ ಮನೆಯಲ್ಲಿ ಉದಕಶಾಂತಿ ಮಂತ್ರ ಪಠಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸಂಭಾವನೆ, ಭೋಜನ ರಹಿತರಾಗಿ ಮಾಡುವ ಈ ಪುಣ್ಯ ಅಭಿಯಾನದ ಸಮಾಪ್ತಿರೂಪದಲ್ಲಿ ಅಧಿಕ ಆಷಾಢ ಅಮಾವಾಸ್ಯೆ ಜು.16 ರಂದು ಹೆಗಡೆ ಗ್ರಾಮದ ಗೋಪಾಲಕೃಷ್ಣ ಸನ್ನಿಧಾನದಲ್ಲಿ ಪುರುಷಸೂಕ್ತ ಹವನ, ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಈ ಕಾರ್ಯದಲ್ಲಿ ಭಕ್ತಾದಿಗಳು ತನು-ಮನ-ಧನದಿಂದ ಪಾಲ್ಗೊಳ್ಳಬಹುದು.