ಭದ್ರಾ ಅಭಯಾರಣ್ಯದಲ್ಲಿವೆ ಅತಿ ಹೆಚ್ಚು ಹುಲಿಬೆಕ್ಕು

ಭದ್ರಾ ಅಭಯಾರಣ್ಯ ಅತಿ ಹೆಚ್ಚು ಹುಲಿ ಬೆಕ್ಕು (ಲೆಪರ್ಡ್ ಕ್ಯಾಟ್)ಗಳನ್ನು ಹೊಂದಿದೆ. ಈ ಅಭಯಾರಣ್ಯದಲ್ಲಿ ಪ್ರತಿ 100 ಚದರ ಕಿ.ಮೀ.ಗೆ 10 ಹುಲಿ ಬೆಕ್ಕುಗಳಿವೆ.
ಪಶ್ಚಿಮಘಟ್ಟದಲ್ಲಿ ಕ್ಯಾಮರಾ ಸಮೀಕ್ಷೆ ಮೂಲಕ ಇವುಗಳ ಸಂಖ್ಯೆಯನ್ನು ಸ್ಪಷ್ಟ ಮಾಡಿಕೊಳ್ಳಲು ಮುಂದಾದ ವೈಲ್ಡ್ ಲ್ೈ ಕನ್ಸರ್ವೇಷನ್ ಸೊಸೈಟಿಯ ಅರ್ಜುನ್ ಶ್ರೀವತ್ಸ, ರವಿಶಂಕರ್ ಪರಮೇಶ್ವರನ್, ಸುಷ್ಮಾ ಶರ್ಮ ಮತ್ತು ಡಾ.ಉಲ್ಲಾಸ್ಕಾರಂತ್ ತಮ್ಮ ಕ್ಯಾಮರಾದಲ್ಲಿ ಸಿಕ್ಕ ಈ ಹುಲಿ ಬೆಕ್ಕಿನ ಸಂಖ್ಯೆಯನ್ನು ವಿಶ್ಲೇಷಿಸಿದ್ದಾರೆ. ಒಟ್ಟು 2,075 ಚದರ ಕಿ.ಮೀ. ಪ್ರದೇಶದಲ್ಲಿ ಈ ಸಮೀಕ್ಷೆ ನಡೆದಿದ್ದು, ಜಿಲ್ಲೆಯ ಭದ್ರಾ ಅಭಯಾರಣ್ಯ ಸೇರಿದಂತೆ ಬಿಳಿಗಿರಿರಂಗಸ್ವಾಮಿ ದೇವಸ್ಥಾನದ ಅರಣ್ಯ ಪ್ರದೇಶ, ಬಂಡಿಪುರ, ನಾಗರಹೊಳೆ ಹುಲಿ ಸಂರಕ್ಷಣಾ ತಾಣಗಳಲ್ಲೂ ಸಮೀಕ್ಷೆ ಮಾಡಲಾಗಿದೆ.
ಅವುಗಳ ಅಧ್ಯಯನ ನಡೆದಿಲ್ಲ:
ಹುಲಿ ಬೆಕ್ಕುಗಳು ಏಷ್ಯಾ ಖಂಡದ ಕಾಡುಗಳಲ್ಲಿ ಕಾಣಸಿಗುವ ಅತ್ಯಂತ ಸಾಮಾನ್ಯವಾದ ಪ್ರಭೇದ. ಆದರೆ, ಇವುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆದಿಲ್ಲ. ಇವುಗಳ ಆವಾಸ ಸ್ಥಾನಗಳನ್ನು ವಾಣಿಜ್ಯ ಉಪಯೋಗಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ಇನ್ನಿತರ ಕಾರಣಗಳಿಂದ ಇವುಗಳ ಆವಾಸ ಸ್ಥಾನಗಳು ಕಿರಿದಾಗುತ್ತಿವೆ. ಅಲ್ಲದೆ, ಈ ಬೆಕ್ಕುಗಳ ಜೀವಕ್ಕೆ ವಿವಿಧ ಮೂಲಗಳಿಂದ ಅಪಾಯ ಕೂಡ ಬರುತ್ತಿದೆ. ಈ ಸುಂದರವಾದ ಸಣ್ಣ ಬೆಕ್ಕುಗಳ ಚರ್ಮ ಮತ್ತು ಅವುಗಳ ಮಾರಾಟ ಕೂಡ ಎಗ್ಗಿಲ್ಲದೆ ಸಾಗಿದೆ. ಇದರಿಂದಾಗಿ ಈ ಬೆಕ್ಕುಗಳ ಸಂಖ್ಯೆ ಕ್ಷೀಣಿಸುತ್ತಿದೆ.
ವೈಲ್ಡ್ ಲ್ೈ ಕನ್ಸರ್ವೇಷನ್ ಸೊಸೈಟಿಯ ಸಂಶೋಧನಾ ವಿಜ್ಞಾನಿಗಳು ಮೊದಲ ಬಾರಿಗೆ ಇವುಗಳ ಸಂಖ್ಯೆಯನ್ನು ಗುರುತಿಸಿದ್ದು, ಪಶ್ಚಿಮಘಟ್ಟದಲ್ಲಿ ಇವುಗಳ ಬಗ್ಗೆ ಇನ್ನಷ್ಟು ಆಳವಾದ ಸಂಶೋಧನೆ ನಡೆಸಲು ಮಾರ್ಗ ನಿರ್ಮಿಸಿದ್ದಾರೆ. ಮನೆಯ ಸಾಕುವ ಬೆಕ್ಕುಗಳ ಗಾತ್ರದಲ್ಲೇ ಇರುವ ಹುಲಿ ಬೆಕ್ಕುಗಳನ್ನು ಅವುಗಳ ಗಾಢವಾದ ಬಣ್ಣದ ಪಟ್ಟೆಗಳಿಂದ ಗುರುತಿಸಬಹುದಾಗಿದೆ. ದೇಹದ ಮೇಲೆ ಚುಕ್ಕೆಗಳಿದ್ದು, ಪ್ರತಿ ಹುಲಿ ಬೆಕ್ಕನ್ನು ಪ್ರತ್ಯೇಕವಾಗಿ ಗುರುತಿಸಲು ಸಹಾಯಕವಾಗಿದೆ.
ಎರಡನೇ ಸ್ಥಾನದಲ್ಲಿ ಬಿಳಿಗಿರಿರಂಗನ ಬೆಟ್ಟ
ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಈ ಹುಲಿ ಬೆಕ್ಕುಗಳ ಚಿತ್ರಗಳನ್ನು ವಿಶ್ಲೇಷಿಸುವುದರ ಮೂಲಕ ಅವುಗಳ ಬದುಕಿನ ಸಹಜಗತಿಯನ್ನು ಗುರುತಿಸಲಾಗಿದೆ. ಅತ್ಯಂತ ಮುಂದುವರೆದ ಕ್ಯಾಮರಾ ಟ್ರ್ಯಾಪ್ಗಳ ಮೂಲಕ ಈ ಹುಲಿ ಬೆಕ್ಕುಗಳ ಸಂಖ್ಯೆಯನ್ನು ನಿರ್ಧರಿಸಲಾಗಿದ್ದು, ಭದ್ರಾ ಅಭಯಾರಣ್ಯದಲ್ಲಿ ಹೆಚ್ಚು ಹುಲಿ ಬೆಕ್ಕುಗಳಿರುವುದು ಕಂಡು ಬಂದಿದೆ. ನಂತರದ ಸ್ಥಾನ ಬಿಳಿಗಿರಿರಂಗ ದೇವಸ್ಥಾನದ ಸುತ್ತಮುತ್ತಲಿನ ಅರಣ್ಯದಲ್ಲಿ ಕಂಡು ಬಂದಿದ್ದು, ಅಲ್ಲಿ 100 ಚ.ಕಿ.ಮೀ.ಗೆ 4 ಹುಲಿ ಬೆಕ್ಕುಗಳು ಕಾಣಸಿಕ್ಕಿವೆ. ಹುಲಿ ಸಂರಕ್ಷಣಾ ತಾಣಗಳಾದ ಬಂಡಿಪುರ ಮತ್ತು ನಾಗರಹೊಳೆಯಲ್ಲಿ ಇವುಗಳ ಸಂಖ್ಯೆ ಅಷ್ಟೊಂದಿಲ್ಲ. ಹೆಚ್ಚಾಗಿ ಈ ಕಾಡುಗಳಲ್ಲಿ ಹುಲಿ ಮತ್ತು ಚಿರತೆಗಳ ಸಂಖ್ಯೆ ಇರುವುದರಿಂದ ಹುಲಿ ಬೆಕ್ಕುಗಳ ಸಂಖ್ಯೆ ಕಡಿಮೆ ಇರಬಹುದೆಂದು ಭಾವಿಸಲಾಗಿದೆ. ಸಾಮಾನ್ಯವಾಗಿ ಹುಲಿ ಬೆಕ್ಕುಗಳು ತೇವಭರಿತ ಪ್ರದೇಶವನ್ನು ಇಷ್ಟಪಡುವುದರಿಂದ ಹೆಚ್ಚು ಮಳೆ ಬೀಳುವ ಭದ್ರ ಮತ್ತು ಬಿಳಿಗಿರಿರಂಗನಬೆಟ್ಟದ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಕ್ಕಿರಬಹುದು.
ಭದ್ರಾ ಅಭಯಾರಣ್ಯದಲ್ಲಿ ಹುಲಿ ಬೆಕ್ಕುಗಳ ಸಂಖ್ಯೆ ಜಾಸ್ತಿ ಕಂಡು ಬಂದಿರುವುದು ದಟ್ಟ ಅರಣ್ಯಗಳಿಗಿಂತ ಹೆಚ್ಚಾಗಿ ಸ್ವಲ್ಪ ತೆಳುವಾದ ಅರಣ್ಯ ಪ್ರದೇಶ ಹಾಗೂ ಕಾಫಿ ತೋಟಗಳಲ್ಲಿ. ಅಂದರೆ ಅಭಯಾರಣ್ಯದ ಗಡಿಯಿಂದ ಹೊರಭಾಗದಲ್ಲಿ. ಈ ಭಾಗಗಳಲ್ಲಿ ಅವುಗಳಿಗೆ ಆಹಾರವಾಗಿ ಸಿಗುವ ಪ್ರಾಣಿಗಳ ಸಂಖ್ಯೆಯೂ ಜಾಸ್ತಿಯಿದೆ. ಇಲ್ಲಿ ಆಹಾರ ಸುಲಭವಾಗಿ ಸಿಗುವುದರಿಂದ ಅವುಗಳ ಸಂಖ್ಯೆ ಅಲ್ಲಿ ಹೆಚ್ಚಾಗಿದೆ ಎಂದು ಭಾವಿಸಲಾಗಿದೆ. ಈ ಹುಲಿಬೆಕ್ಕುಗಳು ಒಂದು ರೀತಿಯಲ್ಲಿ ಕಾಫಿ ತೋಟಗಳಲ್ಲಿ ಸಮಸ್ಯೆಯುಂಟುಮಾಡುವ ಮೂಷಿಕ ಸಂತತಿಯ ನಿಯಂತ್ರಣಕ್ಕೂ ಸಹಾಯಕವಾಗಿವೆ. ಒಟ್ಟಿನಲ್ಲಿ ಪಶ್ಚಿಮಘಟ್ಟ ಹುಲಿ ಬೆಕ್ಕಿನ ಸಂತತಿಗೆ ಅತ್ಯಂತ ಪೂರಕವಾದ ಪ್ರದೇಶವಾಗಿದ್ದು, ಇನ್ನಷ್ಟು ಹೆಚ್ಚಿನ ಸಮೀಕ್ಷೆಯ ಅವಶ್ಯಕತೆ ಇದೆ.