ಬಾಳೆಗೆ ಎಲೆಗೆ ಕೀಟ ಬಾಧೆ

ಇತ್ತೀಚಿನ ದಿನಗಳಲ್ಲಿ ಬಾಳೆಗೆ ಭಾರಿ ಬೇಡಿಕೆ ಬಂದಿದೆ. ಕೆಲ ವರ್ಷಗಳ ಹಿಂದೆ ಬಾಳೆಗೆ ಕಟ್ಟೆರೋಗವಿತ್ತು. ಇಂದು ಅದು ಅಷ್ಟೊಂದು ಕಂಡು ಬರುತ್ತಿಲ್ಲ. ಆದರೆ, ಭವಿಷ್ಯದಲ್ಲಿ ಬಾಳೆಗೆ ಬೇಡಿಕೆಯಿದೆಯೆಂಬ ಹಿನ್ನೆಲೆಯಲ್ಲಿ ಗದ್ದೆಗಳೆಲ್ಲಾ ಬಾಳೆ ತೋಟಗಳಾಗುತ್ತಿವೆ. ಆದರೆ ಬಾಳೆಗೆ ಎಲೆ ಕೀಟ ಬಾಧೆ ಕಾಣಿಸಿಕೊಂಡಿದ್ದು ತಾಲೂಕಿನ ಬೆಳೆಗಾರರಲ್ಲಿ ತಲ್ಲಣ ಮೂಡಿಸಿದೆ.
ಮಲೆನಾಡಿನಲ್ಲಿ ಬಾಳೆಗೆ ವಿಚಿತ್ರ ಎಲೆ ಕೀಟ ರೋಗ ಬಾಧೆ ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ಬರುತ್ತಿಲ್ಲ. ಮೊದಲು ಕೇರಳ ರಾಜ್ಯದಲ್ಲಿ ಕಾಣಿಸಿಕೊಂಡಿದ್ದ ಈ ಬಾಧೆ ಅಲ್ಲಿನ ಬಾಳೆತೋಟಗಳನ್ನು ಸಂಪೂರ್ಣ ನಾಶ ಮಾಡಿದೆ. ಈಗ ಈ ರೋಗ ಮಲೆನಾಡಿನ ಪ್ರದೇಶದಲ್ಲಿ ವ್ಯಾಪಿಸಿದೆ. ಇದೊಂದು ಸಾಂಕ್ರಾಮಿಕ ರೋಗ. ಕೀಟದಿಂದ ಬರುವಂತದ್ದು. ಈ ಎಲೆ ಕೀಟ ಬಾಳೆ ಎಲೆಯನ್ನು ಸಂಪೂರ್ಣವಾಗಿ ತಿಂದು ಬಿಡುತ್ತದೆ. ಅಲ್ಲದೇ ಬಾಳೆ ಎಲೆಯನ್ನು ಸುರುಳಿ ಮಾಡಿ ಸುತ್ತಿ ಬಿಡುತ್ತದೆ. ಈ ಕೀಟ ಒಂದು ಬಾಳೆ ಗಿಡವನ್ನು ಪ್ರವೇಶಿಸಿದ ಬಳಿಕ ಆ ಬಾಳೆಗಿಡದಲ್ಲಿ ಉಳಿಯುವುದು ಎಲೆಯ ಕಾಂಡ ಮತ್ತು ಮರದ ಕಾಂಡ ಮಾತ್ರ.
ಮಳೆಗಾಲದಲ್ಲಿ ಈ ಕೀಟಬಾಧೆ ಜಾಸ್ತಿಯಾಗಿದ್ದು, ರೈತರಿಗೆ ಈ ನಾಲ್ಕು ತಿಂಗಳು ಬಾಳೆ ಕಾಪಾಡಿಕೊಳ್ಳುವುದು ದುಸ್ಸಾಧ್ಯವಾಗಿ ಪರಿಣಮಿಸುತ್ತಿದೆ. ಮಳೆಗಾಲದಲ್ಲಿ ಬಾಳೆಗಿಡದ ಎಲೆಗಳನ್ನು ಬೆಳೆಗಾರರು ಕಟಿಂಗ್ ಮಾಡುತ್ತಾರೆ. ಆದರೂ ಹೊಸದಾಗಿ ಎಳೆ ಎಲೆ ಹೊರಬೀಳುತ್ತಿದ್ದಂತೆ ಕೀಟಗಳು ಸ್ವಾಹಾ ಮಾಡುತ್ತವೆ. ತಾಲೂಕಿನ ಚಂದಗುಳಿ ಪಂಚಾಯತ ವ್ಯಾಪ್ತಿಯ ಹುತ್ಕಂಡ ಭಾಗದಲ್ಲಿ ರೈತರೊಬ್ಬರು ಈ ಕೀಟಬಾಧೆ ತಡೆಯಲಾರದೇ ತೋಟದಲ್ಲಿದ್ದ ಸಂಪೂರ್ಣ ಬಾಳೆಗಿಡಗಳನ್ನು ನೆಲಕ್ಕುರುಳಿಸಿದ್ದಾರೆ. ಬಾಳೆತೋಟದ ಸಹವಾಸವೇ ಸಾಕು ಎಂದಿದ್ದಾರೆ. ಒಂದು ತೋಟದಲ್ಲಿ ಈ ಕೀಟಭಾದೆ ಕಾಣಿಸಿಕೊಂಡರೆ ಸಾಕು, ಪಕ್ಕದ ತೋಟಕ್ಕೂ ಬರುತ್ತದೆ. ಈ ರೋಗ ಹೇಗೆ ಮಲೆನಾಡಿಗೂ ಬಂತೆಂಬುದಕ್ಕೆ ಕಥೆಯೇ ಇದೆ.ೆಲ ವರ್ಷದ ಹಿಂದೆ ಕೇರಳದಿಂದ ಗೋವಾ ರಾಜ್ಯಕ್ಕೆ ವಾಹನದಲ್ಲಿ ಸಾಗಿಸುವಾಗ ಅದರೊಟ್ಟಿಗಿದ್ದ ಬಾಳೆ ಹೆಡದಲ್ಲಿ ಈ ಎಲೆಕೀಟ ಬಂದಿದ್ದು, ಘಟ್ಟದ ಕೆಳಗಿನ ತಾಲೂಕುಗಳಲ್ಲಿ ಪಸರಿಸಿ ಈಗ ಎಲ್ಲೆಡೆ ವ್ಯಾಪಿಸಿದೆ ಎಂಬುದು ತೋಟಗಾರಿಕಾ ಹಿರಿಯ ಅಧಿಕಾರಿಗಳ ಅಂಬೋಣ. ಈ ಎಲೆಕೀಟ ಬಾಧೆಗೆ ಕೀಟನಾಶಕಗಳು ಇವೆ. ಆದರೆ, ಬಾಳೆಯೆಲೆಗೆ ಸರಿಯಾಗಿ ಸಿಂಪಡಿಸುವುದು ಕಷ್ಟದ ಕೆಲಸ ಎನ್ನುತ್ತಾರೆ ಅವರು. ಈ ಹಿಂದೆ ಕಟ್ಟೆರೋಗ ಬಾಳೆ ಬೆಳೆಗಾರರನ್ನು ಹೈರಾಣಾಗಿಸಿದ್ದರೆ, ಪ್ರಸ್ತುತ ಎಲೆಕೀಟ ಬಾಧೆ ರೈತರ ಕೈ ಸುಡುವಂತೆ ಮಾಡುತ್ತಿದೆ.