ದಾವಣಗೆರೆಯಲ್ಲಿ ಆರಂಭವಾಗಿದೆ ‘ತುಲಾಭವನ’

ದಾವಣಗೆರೆಯ ಚಾಮರಾಜ ಪೇಟೆಯ ಚನ್ನವೀರಪ್ಪ ಯಳಮಲ್ಲಿ ಮೆಮೋರಿಯಲ್ ಟ್ರಸ್ಟ್ನ ಕಚೇರಿಯಲ್ಲಿ ತೂಕ ಹಾಗೂ ಅಳತೆ ಸಾಧನಗಳ ಸಂಗ್ರಹಾಲಯ ಸ್ಥಾಪನೆಯಾಗಿದ್ದು, 1700ರಿಂದ 2000ರ ಅವಧಿಯಲ್ಲಿ ಬಳಕೆಯಾದ ತೂಕ, ಅಳತೆಯ ಸಾಧನಗಳನ್ನು ಒಂದೇ ಕಡೆ ಪ್ರದರ್ಶನಕ್ಕೆ ಇಡಲಾಗಿದೆ. ಟ್ರಸ್ಟ್ನ ಬಸವರಾಜ ಯಳಮಲ್ಲಿ ಎಂಬುವರು ಇದರ ರೂವಾರಿ. ‘ತುಲಾಭವನ’ ಎಂಬ ಹೆಸರಿನ ಈ ಸಂಗ್ರಹಾಲಯ ಆಗಸ್ಟ್ 10ರಂದು ಉದ್ಘಾಟನೆಯಾಗಿದೆ.ಸಂಗ್ರಹಾಲಯದಲ್ಲಿ 1400ಕ್ಕೂ ಹೆಚ್ಚು ನಮೂನೆಯ ತೂಕ ಮತ್ತು ಅಳತೆಯ ಸಾಧನಗಳನ್ನು ನೋಡಬಹುದಾಗಿದೆ. ರಾಜಸ್ಥಾನ, ಗುಜರಾತ, ತಮಿಳುನಾಡು, ಕೇರಳ, ಮಧ್ಯಪ್ರದೇಶ, ಗೋವಾ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಬಳಸಲಾಗುತ್ತಿದ್ದ ಅಳತೆ ಮತ್ತು ತೂಕದ ಸಾಧನಗಳು ಇಲ್ಲಿರಲಿವೆ. ನಮ್ಮ ಪೂರ್ವಿಕರ ಸಾಧನಗಳಲ್ಲಿ ತೂಕ, ಅಳತೆ ಜತೆ ಕಲೆಯೂ ಪ್ರಧಾನ ಸ್ಥಾನ ಪಡೆದಿತ್ತು ಎಂಬುದಕ್ಕೆ ಇವು ಸಾಕ್ಷಿಯಾಗಿವೆ. ವಿವಿಧ ಚಿನ್ಹೆ, ಭಿನ್ನ ಲಿಪಿಯ ಅಂಕಿ, ಅಕ್ಷರ, ಕಲಾತ್ಮಕ ಕೆತ್ತನೆಗಳನ್ನು ಈ ಮಾಪನಗಳು ಒಳಗೊಂಡಿವೆ. ಹಿತ್ತಾಳೆ, ಕಬ್ಬಿಣ, ಮರ, ತಾಮ್ರ ಹೀಗೆ ಹಲವು ವಸ್ತುಗಳನ್ನು ಬಳಸಿ, ನಿರ್ಮಿಸಲಾದ ಅಳತೆಯ ಸಾಧನಗಳ ಸಂಗ್ರಹ ಇಲ್ಲಿದೆ. ಒಂದೊಂದು ತೂಕದ ಸಾಧನವೂ ಆ ಕಾಲಘಟ್ಟದ ಕತೆ ಹೇಳುವಂತಿದೆ.ಂತರ್ಜಾಲದ ಮೂಲಕವೂ ಈ ಸಂಗ್ರಹ ನೋಡಲು ವ್ಯವಸ್ಥೆಯಿದೆ. www.tulabhavan.org <http://www.tulabhavan.org>ಗೆ ಭೇಟಿ ನೀಡಿದರೆ ಈ ಸಂಗ್ರಹಾಲಯದಲ್ಲಿರುವ ತೂಕದ ಸಾಧನಗಳನ್ನು ನೋಡಬಹುದು.
ನಾಣ್ಯ ಸಂಗ್ರಹದಲ್ಲಿ ಆಸಕ್ತಿ 
ನೋಟು, ಅಂಚೆಚೀಟಿ, ನಾಣ್ಯ ಸಂಗ್ರಹದಲ್ಲಿ ಚಿಕ್ಕಂದಿನಿಂದಲೂ ಹೆಚ್ಚು ಆಸಕ್ತಿ ಹೊಂದಿದ್ದ ಬಸವರಾಜ ಯಳಮಲ್ಲಿಯವರು 1997-98ರಲ್ಲಿ ತೂಕ, ಅಳತೆ ಸಾಧನಗಳ ಸಂಗ್ರಹಕ್ಕೆ ಮುಂದಾದರು. ಅಲ್ಲಿಂದ 2006-07ರವರೆಗೆ ತಮಗೆ ಸುಲಭವಾಗಿ ಸಿಕ್ಕ ಮಾಪನಗಳನ್ನು ಕಲೆ ಹಾಕುತ್ತಾ ಬಂದರು. ನಂತರ ಇತರೆ ರಾಜ್ಯ, ದೇಶಗಳ ಅಳತೆ ಮಾಪನಗಳನ್ನು ಸಂಗ್ರಹಿಸಲು ಹೆಚ್ಚಿನ ಆಸಕ್ತಿ ತೋರಿದರು. ಹೀಗೆ ಸಂಗ್ರಹಿಸಿದ್ದನ್ನು ಒಂದು ಕಡೆ ಇಟ್ಟು ಸಾರ್ವಜನಿಕರಿಗೆ, ಸಂಶೋಧನಾಸಕ್ತರಿಗೆ ಸುಲಭವಾಗಿ ಸಿಗುವಂತೆ ಮಾಡಲು ಕೊನೆಗೆ ಸಂಗ್ರಹಾಲಯ ಆರಂಭಿಸಲು ತೀರ್ಮಾನಿಸಿದರು. 2014ರ ಡಿಸೆಂಬರ್ನಲ್ಲಿ ಚನ್ನವೀರಪ್ಪ ಯಳಮಲ್ಲಿ ಮೆಮೋರಿಯಲ್ ಟ್ರಸ್ಟ್ ಸ್ಥಾಪನೆಯ ಮೂಲಕ ತುಲಾಭವನದ ಕನಸಿಗೆ ಅಡಿಯಿಟ್ಟರು. ಅದು ಇದೀಗ ಸಾಕಾರಗೊಂಡಿದೆ.