ಗರ್ದಿ ಗಮ್ಮತ್ತಿಗೆ ಈಗ ಕಿಮ್ಮತ್ತಿಲ್ಲ

ಗ್ರಾಮೀಣ ಮಕ್ಕಳ ಮನರಂಜನೆಯ ಪೆಟ್ಟಿಗೆ ಗರ್ದಿ ಗಮ್ಮತ್ತು ಪೆಟ್ಟಿಗೆ ಸಿನಿಮಾ, ಟಿವಿ, ಮೊಬೈಲ್, ಇಂಟರ್ನೆಟ್, ವಿಡಿಯೋ ಗೇಮ್ನ ಭರಾಟೆಯಲ್ಲಿ ಸದ್ದಿಲ್ಲದೇ ಮೂಲೆ ಸೇರುತ್ತಿದೆ. ಗರ್ದಿ ಗಮ್ಮತ್ತು ಹಿಂದೆ ಹಳ್ಳಿ ಮಕ್ಕಳಿಗೆ ಮನರಂಜನೆಯಾಗಿ ಸಂಚರಿಸುವ ಮಿನಿ ಥಿಯೇಟರ್ ಆಗಿತ್ತು. ಗರ್ದಿ ಗಮ್ಮತ್ತಿನವ ಬಂದರೆ ಮಕ್ಕಳು ಮುತ್ತಿಕ್ಕಿ ಪೆಟ್ಟಿಗೆಯ ಕಿಂಡಿ ಮೂಲಕ ಚಿತ್ರಗಳನ್ನು ನೋಡಿ ಆನಂದಿಸುವ ಕಾಲ ಆಗಿನದು. ಕಳೆದ ಮೂರ್ನಾಲ್ಕು ದಶಕಗಳ ಹಿಂದಿಂದ ಈ ಗರ್ದಿ ಗಮ್ಮತ್ತು ಪೆಟ್ಟಿಗೆ ನೇಪಥ್ಯದ ಪಟ್ಟಿಗೆ ಸೇರಿದೆ. ಜಾತ್ರೆ, ಸಂತೆ ಸಂದರ್ಭಗಳಲ್ಲಿ ಇಲ್ಲವೇ ಓಣಿ, ಓಣಿಗೆ ಈ ಪೆಟ್ಟಿಗೆ ಹೊತ್ತೊಯ್ದು, ಪೆಟ್ಟಿಗೆಯಲ್ಲಿರುವ ಚಿತ್ರಗಳನ್ನು ತೋರಿಸಿ, ಬಾಂಬೈ ನೋಡು, ಬೆಂಗಳೂರು ನೋಡು ಎಂಬ ಹಾಸ್ಯ ಮಿಶ್ರಿತ ಶೈಲಿಯಲ್ಲಿ ಸುಶ್ರಾವ್ಯದ ಹಾಡಿನ ಮೂಲಕ ಗಮ್ಮತ್ತು ಸೃಷ್ಟಿಸುವವರು ಇದೀಗ ಅಪರೂಪವಾಗಿದ್ದಾರೆ. ಈ ವೃತ್ತಿಯಲ್ಲಿರುವವರು ಇದೀಗ ಎಲ್ಲೋ ಒಬ್ಬರು ಸಿಗುತ್ತಿದ್ದು ಗ್ರಾಮೀಣ ಮಕ್ಕಳ ಮನರಂಜನೆ ಸಾಧನವನ್ನು ಜೋಪನವಾಗಿಟ್ಟಿದ್ದಾರೆ. ಕುಷ್ಟಗಿಯ ವೃದ್ಧ ರೋಣದ ಸುಂಕಪ್ಪ ಕೊರವರ ಅವರು ಗರ್ದಿ ಗಮ್ಮತ್ತಿನ ವೃತ್ತಿ ಮುಂದುವರಿಸಿರುವುದು ಗಮನಾರ್ಹ. ಇತ್ತೀಚೆಗೆ ಕುಷ್ಟಗಿಯ ಬಸವರಾಜ ಚಿತ್ರ ಮಂದಿರದ ಬಳಿ ಗರ್ದಿ ಗಮ್ಮತ್ತು ಪೆಟ್ಟಿಗೆ ಬಂದಾಗ ಅಲ್ಲಿಗೆ ಸಿನಿಮಾ ನೋಡಲು ಬಂದವರು, 5 ರೂ.ಗೆ ಈ ಗಮ್ಮತ್ತು ವೀಕ್ಷಿಸಿದರು. ಮೊದಲೆಲ್ಲ ಐದು ನೂರುವರೆಗೆ ಆದಾಯ ಆಗುತ್ತಿತ್ತು. ಈ 100 ಆಗುವುದು ತೊಂದರೆಯಾಗಿದೆ ಎಂದು ಸುಂಕಪ್ಪ ಕೊರವರ ಅಳಲು ತೋಡಿಕೊಂಡರು.