ಅಡಿಕೆಗೆ ಹನಿ ನೀರಾವರಿ ಸಬ್ಸಿಡಿ ರದ್ದು ಮಾಡಬೇಡಿ

ಕೇಂದ್ರ ಸರಕಾರ ಅಡಿಕೆ ಬೆಳೆಯನ್ನು ಹನಿ ನೀರಾವರಿ ಸಬ್ಸಿಡಿ ಸೌಲಭ್ಯದಿಂದ ಹೊರಗಿಡುವ ಮೂಲಕ ಬೆಳೆಗಾರರಿಗೆ ಅನ್ಯಾಯ ಎಸಗಿದೆ. ಕೂಡಲೇ ಈ ಕುರಿತು ರಾಜ್ಯಗಳಿಗೆ ಕಳುಹಿಸಿದ ಸುತ್ತೋಲೆಯನ್ನು ಕೇಂದ್ರ ಸರಕಾರ ಹಿಂದೆ ಪಡೆಯಬೇಕು. ಕಾಫಿ, ಚಹ, ರಬ್ಬರ್ ಕೃಷಿಗೆ ಹನಿ ನೀರಾವರಿ ಸಬ್ಸಿಡಿ ಯೋಜನೆ ಒದಗಿಸಿರುವಂತೆ ಅಡಿಕೆ ಕೃಷಿಗೂ ಈ ಯೋಜನೆ ಮುಂದುವರಿಸಬೇಕು.
ದೇಶದ 13 ರಾಜ್ಯಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಈ ಪೈಕಿ ಕರ್ನಾಟಕ, ಕೇರಳ, ಅಸ್ಸಾಂ ರಾಜ್ಯಗಳು ಮುಂಚೂಣಿಯಲ್ಲಿವೆ. ಕರ್ನಾಟಕದ 24 ಜಿಲ್ಲೆಗಳಲ್ಲಿ ಅಡಿಕೆ ಕೃಷಿ ಇದ್ದು, 2,51,185 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 40,977 ಹೆಕ್ಟೇರ್, ಶಿವಮೊಗ್ಗ ಜಿಲ್ಲೆಯಲ್ಲಿ 48,187 ಹೆಕ್ಟೇರ್, ಚಿಕ್ಕಮಗಳೂರು ಜಿಲ್ಲೆಯಲ್ಲಿ 36,980 ಹೆಕ್ಟೇರ್, ದಾವಣಗೆರೆ ಜಿಲ್ಲೆಯಲ್ಲಿ 35,741 ಹೆಕ್ಟೇರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 34,977 ಹೆಕ್ಟೇರ್ ಅಡಿಕೆ ಕೃಷಿ ಇದೆ. ಒಟ್ಟು ಬೆಳೆಗಾರರಲ್ಲಿ ಶೇ.85ರಷ್ಟು ಮಂದಿ ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರಾಗಿದ್ದು, ಹನಿ ನೀರಾವರಿ ಯೋಜನೆ ಅವರಿಗೆ ಸೂಕ್ತವಾಗಿದೆ. ಈಗಾಗಲೇ ಅವರಲ್ಲಿ ಹಲವು ಮಂದಿ ಹನಿ ನೀರಾವರಿ ಯೋಜನೆ ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ, ಇದೀಗ ಹನಿ ನೀರಾವರಿ ಯೋಜನೆಯಿಂದ ಅಡಿಕೆ ಕೃಷಿಯನ್ನು ಹೊರಗಿಡುವ ಕೇಂದ್ರ ಸರ್ಕಾರದ ನಿರ್ಧಾರ ಬೆಳೆಗಾರರಿಗೆ ಆಘಾತ ಉಂಟು ಮಾಡಿದೆ. ರಾಜ್ಯದ ಆರ್ಥಿಕ ವ್ಯವಸ್ಥೆ ಮೇಲೆ ಇದು ಪರಿಣಾಮ ಬೀರಲಿದೆ.

ಅಡಿಕೆಗೆ ಕೊಳೆ ಅಥವಾ ಹಳದಿ ರೋಗ ಬಂದಾಗ ಮತ್ತು ಬೆಲೆ ಕುಸಿದಾಗ ರಾಜ್ಯ ಸರಕಾರ ಬೆಂಬಲ ಬೆಲೆ ನೀಡಿ ನೆರವಾಗುತ್ತಿದೆ. ಆದರೆ, ಕೇಂದ್ರ ಸರಕಾರ ಅಡಿಕೆ ಕೃಷಿಕರಿಗೆ ನಿರ್ದಿಷ್ಟ ಯೋಜನೆ ಜಾರಿಗೊಳಿಸುತ್ತಿಲ್ಲ. ಅಡಿಕೆ ಆಮದು ತಡೆಯಲು ಕ್ರಮ ಜರುಗಿಸುತ್ತಿಲ್ಲ. ಜೊತೆಗೆ ರೈತರ ಮೇಲೆ ಈಗ ಮತ್ತೊಂದು ಬರೆ. ಕೇಂದ್ರದ ಈ ನಿರ್ಧಾರದ ಹಿಂದೆ ತಂಬಾಕು ಲಾಬಿ ಇರಬಹುದೇ ಎಂಬ ಅನುಮಾನವೂ ಕಾಡುತ್ತಿದೆ.
ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಕಾಫಿ, ಚಹ, ರಬ್ಬರ್ ಕೃಷಿಗೆ ಹನಿ ನೀರಾವರಿ ಸಬ್ಸಿಡಿ ಯೋಜನೆ ಒದಗಿಸಿರುವಂತೆ ಅಡಿಕೆ ಕೃಷಿಗೂ ಈ ಯೋಜನೆ ಮುಂದುವರಿಸಬೇಕು. ರಬ್ಬರ್ ಮತ್ತು ಕಾಫಿ ಮಂಡಳಿ ರೀತಿಯಲ್ಲಿ ಅಡಿಕೆಗೂ ಮಂಡಳಿ ರಚಿಸಬೇಕು. ಮಂಡಳಿ ಸ್ಥಾಪನೆಯಾದರೆ ಆವರ್ತನ ನಿಧಿ ರಚಿಸಿ ಬೆಂಬಲ ಬೆಲೆ, ಉಪ ಉತ್ಪನ್ನ ತಯಾರಿ, ಆಮದು ನಿರ್ಬಂಧ ಇತ್ಯಾದಿ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.


ಟೀ ಕಂಪನಿಯಿಂದ ಅಡಿಕೆ ಖರೀದಿ ಆರಂಭ

ಗುಟ್ಕಾ ಹೊರತಾದ ಅಡಿಕೆ ಮಾರುಕಟ್ಟೆ ಕುರಿತು ನಡೆಯುತ್ತಿದ್ದ ಸಂಶೋಧನೆಗೆ ಬಲವಾದ ತಿರುವು ನೀಡಿದ ಅಡಿಕೆ ಟೀ ತಂಡ ಇದೀಗ ಅಡಿಕೆ ಟೀ ತಯಾರಿಕೆಗಾಗಿ ಅಡಿಕೆ ಖರೀದಿ ಆರಂಭಿಸಿದೆ. ಈ ಮೂಲಕ ಅಡಿಕೆ ಬೆಳೆಗಾರರಲ್ಲಿ ಸಂತಸ ಮೂಡಿದೆ. 

ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯ ನೆಂಪೆ ನಿವೇದನ್, ಅಡಿಕೆಯಿಂದ ಟೀ ತಯಾರಿಕೆಯನ್ನು ಸಂಶೋಧಿಸಿದ್ದಲ್ಲದೆ, ಪ್ರಧಾನಿಯವರ ಮೇಕ್ ಇಂಡಿಯಾ ಪ್ರದರ್ಶನದಲ್ಲಿ ಹೊಸ ಸಂಶೋಧನೆಗೆ ನೀಡಲಾಗುವ ಅಖಿಲ ಭಾರತ ಮಟ್ಟದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ ಪಡೆದಿದ್ದರು. ಆ ಮೂಲಕ ಅಡಿಕೆಯಿಂದ ಟೀ ತಯಾರಿಸಹುದು ಎಂದು ಸಾಧಿಸಿ ತೋರಿಸಿದ್ದಲ್ಲದೆ, ಇದನ್ನೊಂದು ಉದ್ಯಮವಾಗಿ ಪರಿಚಯಿಸಲು ಮುಂದಾಗಿದ್ದರು. ಈ ಕುರಿತು ವ್ಯಾಪಕ ಪ್ರಚಾರ ಕೂಡ ಸಿಕ್ಕಿತ್ತು. ಈ ಮೊದಲು ಅಡಿಕೆ ವೈನ್, ಡಯಾ ಅರೆಕಾ ಇತ್ಯಾದಿ ತಯಾರಿಕೆಯ ಸುದ್ದಿ ಕೇಳಿ ಬರುತ್ತಿದ್ದರೂ, ಇದರಿಂದ ಅಡಿಕೆ ಬೆಲೆಯ ಮೇಲೆ ಪರಿಣಾಮ ಬೀರುವ ಮಟ್ಟಿಗೆ ಯಾವುದೇ ಸಾಧನೆ ನಡೆದಿರಲಿಲ್ಲ. ಇದೀಗ ಅಡಿಕೆ ಟೀ ತಯಾರಿಕೆ ಉದ್ಯಮವನ್ನು ತಾವೇ ಸ್ಥಾಪಿಸಲು ಮುಂದಾಗಿರುವ ನೆಂಪೆ ನಿವೇದನ್ ಇದಕ್ಕಾಗಿ ಶಿವಮೊಗ್ಗ ಮಾರುಕಟ್ಟೆಯಿಂದ ನೇರವಾಗಿ ಅಡಿಕೆ ಖರೀದಿಗೆ ಮುಂದಾಗಿದ್ದಾರೆ.

ಅಡಿಕೆಯಿಂದ ಟೀ ತಯಾರಿಸುವ ಸಂಶೋಧನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ವಿದೇಶಿ ಕಂಪನಿಗಳು ಕೂಡ ಪ್ರಸ್ತಾವನೆ ಸಲ್ಲಿಸುತ್ತಿವೆ. ಇದೀಗ ತಾವೇ ಇದನ್ನು ತಯಾರಿಸಲು ಸಿದ್ಧವಾಗಿದ್ದು, ಜರ್ಮನಿಯಿಂದ ಯಂತ್ರಗಳ ಖರೀದಿಗೆ ಆದೇಶ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಇದು ಇಲ್ಲಿಗೆ ಬರಲಿದ್ದು, ಬಳಿಕ ಟೀ ಸ್ಯಾಚೆಟ್‌ಗಳು ಸಿದ್ಧವಾಗಲಿವೆ. ಆರಂಭದಲ್ಲಿ ತಿಂಗಳಿಗೆ 150-200 ಕ್ವಿಂಟಲ್ ಅಡಿಕೆ ಖರೀದಿಸಲಾಗುವುದು. ನಿಧಾನವಾಗಿ ಮಾರುಕಟ್ಟೆ ವಿಸ್ತಾರವಾದಂತೆ ಖರೀದಿ ಪ್ರಮಾಣವೂ ಹೆಚ್ಚಲಿದೆ. ಸದ್ಯ ಪ್ರತಿ ತಿಂಗಳೂ 60-70 ಲಕ್ಷ ಸ್ಯಾಚೆಟ್‌ಗಳನ್ನು ಉತ್ಪಾದಿಸಲಾಗುವುದು ಎನ್ನುತ್ತಾರೆ ಅವರು.
ತಾವು ಸಿಂಗಾಪುರದಿಂದ ಭಾರತಕ್ಕೆ ಹಿಂತಿರುಗಿದ ಬಳಿಕ ಅಡಿಕೆಯ ಪರ್ಯಾಯ ಉತ್ಪನ್ನಗಳ ಕುರಿತು ಸಂಶೋಧನೆ ಆರಂಭಿಸಿದ್ದು, ಟೀ ಸಿದ್ಧಗೊಂಡಿದೆ. ಈ ತಯಾರಿಕೆ ಇದುವರೆಗೆ ಅಡಿಕೆಗೆ ಗುಟ್ಕಾದಿಂದ ಹೋಗಿದ್ದ ಮಾನವನ್ನು ಮತ್ತೆ ತಂದುಕೊಡುವಂತಾಗಿದೆ. ವಾಸ್ತವವಾಗಿ ಗುಟ್ಕಾ ದಕ್ಷಿಣ ಏಷ್ಯಾದಲ್ಲಿ ಮಾತ್ರ ಬಳಕೆಯಾಗುತ್ತಿದೆ. ಆದರೆ ಟೀ ಎಂಬುದು ವಿಶ್ವವ್ಯಾಪಿ. ವಿಶ್ವದ ಒಟ್ಟು ಟೀ ಬಳಕೆಯ ಶೇ.3 ರಷ್ಟು ಪಾಲು ನಮಗೆ ದೊರೆತರೂ ನಾವು ಬೆಳೆಯುವ ಅಡಿಕೆ
ಸಾಕಾಗುವುದಿಲ್ಲ. ಸದ್ಯ ಬೆಟ್ಟೆ ಮಾದರಿಯ ಅಡಿಕೆ ಖರೀದಿಸಲಾಗುವುದು. ಚಾಲಿ ಅಡಿಕೆಯ ಪರ್ಯಾಯ ಉತ್ಪನ್ನದ ಸಂಶೋಧನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅಡಿಕೆ ಟೀಅನ್ನು ಬ್ರ್ಯಾಂಡ್ ಆಗಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕು ಎನ್ನುತ್ತಾರೆ.


ಪರಿಸರ ಸ್ನೇಹಿ ಜೇನುಪೆಟ್ಟಿಗೆಯಿದು

ಕುಕ್ಕೆ ಸುಬ್ರಹ್ಮಣ್ಯ ಬಳಿಯ ಮಲೆಯಾಳ ಗೋವಿಂದಕುಮಾರ್ ಭಟ್ ಚಿಕ್ಕ ವಯಸ್ಸಿನಲ್ಲೇ ಜೇನುಗಳ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡವರು. ಅದಕ್ಕಾಗಿಯೇ ತರಬೇತಿ ಪಡೆದು ಜೇನು ಕೃಷಿಯಲ್ಲಿ ನಿರತರಾಗಿದ್ದರು. ಅವರಿಗೆ ಜೇನು ಪೆಟ್ಟಿಗೆ ವಿಚಾರವಾಗಿ ಆವಿಷ್ಕಾರ ಮಾಡಬೇಕೆಂಬ ತುಡಿತವಿತ್ತು. ಈ ದಾರಿಯಲ್ಲಿ ವಿವಿಧ ಪ್ರಯತ್ನ ಮಾಡುತ್ತಲೆ ಇದ್ದರು. ಇದೀಗ ಅಗ್ಗ ಮತ್ತು ಪರಿಸರ ಸ್ನೇಹಿ ಜೇನುಪೆಟ್ಟಿಗೆ ಸಿದ್ಧಪಡಿಸಿದ್ದಾರೆ.
ಆರಂಭದಲ್ಲಿ ಸಿಮೆಂಟ್ ಪೆಟ್ಟಿಗೆಯನ್ನು ಪ್ರಾಯೋಗಿಕವಾಗಿ ತಯಾರು ಮಾಡಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ. ಛಲ ಬಿಡದೆ ಕಳೆದ 3 ವರ್ಷಗಳಿಂದ ನಿರಂತರ ಪ್ರಯತ್ನದಲ್ಲಿದ್ದರು. ಕಳೆದ ವರ್ಷ ಪಿವಿಸಿ ಮಾದರಿಯ ಶೀಟ್ ಬಳಸಿ ಪೆಟ್ಟಿಗೆ ತಯಾರು ಮಾಡಿದರು. ಈ ಪೆಟ್ಟಿಗೆಗೆ ಜೇನು ಸಹಕಾರ ಸಂಘವೂ ಒಪ್ಪಿಗೆ ನೀಡಿದೆ. ಅಷ್ಟಕ್ಕೆ ಸುಮ್ಮನಿರದ ಅವರು, ಅಕ್ವೇರಿಯಂ ಮೇಲಿನ ಅಲಂಕಾರಿಕ ಹಾಳೆ ಕಡೆಗೆ ಗಮನ ಹರಿಸಿದರು. ಅದೇ ಮಾದರಿಯ ಹಾಳೆಗಳನ್ನು ರಾಜಸ್ಥಾನದಿಂದ ತರಿಸಿಕೊಂಡರು.

ಪರಿಸರ ಸ್ನೇಹಿಯಾದ ಈ ಶೀಟ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುವ ಅವರು, ಪೆಟ್ಟಿಗೆ ಮಾರಾಟದ ವೇಳೆ ಒಳಗಿನ ಫ್ರೇಮ್‌ಗಳನ್ನು ಮಾತ್ರ ಅಗತ್ಯ ಇದ್ದವರಿಗೆ ಮರದಿಂದ ತಯಾರು ಮಾಡುತ್ತಾರೆ. ಅದರ ಜೊತೆಗೆ ಫೈಬರ್ ಫ್ರೇಂ ಕೂಡಾ ತಯಾರಿಸುತ್ತಾರೆ. ಆದರೆ ಕೆಲವು ಕೃಷಿಕರು ಮರದ ಫ್ರೆಂ ಆಯ್ಕೆ ಮಾಡುವುದರಿಂದ ಅದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಪರ್ಯಾಯ ಪೆಟ್ಟಿಗೆ ಯಾಕೆ?:
ಮರದ ಪೆಟ್ಟಿಗೆಯೊಂದನ್ನು ತಯಾರು ಮಾಡಲು ಕನಿಷ್ಟ 8.9 ಚದರ ಅಡಿ ಮರದ ಅವಶ್ಯಕತೆ ಇದೆ. ಇದಕ್ಕೆ ಸಾಗುವಾನಿ, ಅಕೇಶಿಯಾ ಸೇರಿದಂತೆ ಪ್ರಮುಖ ಮರಗಳನ್ನು ಮಾತ್ರ ಬಳಕೆ ಮಾಡಬಹುದು. ಈಗ ಅಕೇಶಿಯಾ ಮರ ಬೆಳೆಯುವುದೂ ನಿಷೇಧವಾಗಿರುವುದರಿಂದ ಸಾಗುವಾನಿ ಮರವೇ ಅಗತ್ಯವಾಗಿದೆ. ಇಂದು ಪರಿಸರ ಉಳಿವಿನ ದೃಷ್ಟಿಯಿಂದ ಮರಗಳ ರಕ್ಷಣೆ ಆಗಬೇಕಾಗಿದೆ. ಇದಕ್ಕಾಗಿ ಪರಿಸರ ಸ್ನೇಹಿ ಪೆಟ್ಟಿಗೆ ಅಗತ್ಯವಾಗಿದೆ. ಪರಿಸರ ಸ್ನೇಹಿ ಪೆಟ್ಟಿಗೆಯು ದೀರ್ಘ ಕಾಲ ಬಾಳಿಕೆ ಬರುವುದರ ಜೊತೆಗೆ ಖರ್ಚು ಕೂಡಾ ಕಡಿಮೆಯಾಗುತ್ತದೆ. ಗೆದ್ದಲು ಹಿಡಿಯುವ ಸಮಸ್ಯೆ, ಶುಚಿತ್ವ, ಜೇನು ಪೆಟ್ಟಿಗೆಗೆ ಕಾಡುವ ಮೇಣದ ಚಿಟ್ಟೆ ಕಾಟ ಮೊದಲಾದ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತಿದೆ.
ಜೇನು ತಯಾರಿ ಮಾದರಿ ಹೀಗಿದೆ:
ಪರಿಸರ ಸ್ನೇಹಿ ಪೆಟ್ಟಿಗೆಯ ಮೂಲಕ ಜೇನು ಇಳುವರಿಯಲ್ಲಿ ಯಾವುದೇ ವ್ಯತ್ಯಯವಿಲ್ಲ. ಜೇನು ಕುಟುಂಬಗಳು ಬಹುಬೇಗನೆ ವೃದ್ಧಿಯಾಗುತ್ತವೆ. ಮಳೆಗಾಲದಲ್ಲಿ ಕೂಡಾ ಪೆಟ್ಟಿಗೆ ಬಿಸಿಯಾಗಿರುವುದರಿಂದ ಜೇನು ಕುಟುಂಬಗಳು ಸದಾ ಚಟುವಟಿಕೆಯಲ್ಲಿರುತ್ತವೆ. ಹೀಗಾಗಿ ಕುಟುಂಬ ವೃದ್ಧಿ ಜೊತೆಗೆ ಜೇನು ಕೂಡಾ ತಯಾರು ಮಾಡುತ್ತಲೇ ಇರುತ್ತವೆ. ಬೇಸಗೆಯಲ್ಲೂ ಹೆಚ್ಚಾಗಿ ಬಿಸಿಯಾಗುವುದಿಲ್ಲ. ಏಕೆಂದರೆ ಪೆಟ್ಟಿಗೆಯಲ್ಲಿ ಹೆಚ್ಚಿನ ವೆಂಟಿಲೇಟರ್ ಇರಿಸಲಾಗಿದೆ. ಹೀಗಾಗಿ ಜೇನುಹುಳಗಳಿಗೆ ಸದಾ ಅನುಕೂಲಕರ ವಾತಾವರಣವಿರುತ್ತದೆ.

ಕಳೆದ ವರ್ಷ ಪುತ್ತೂರು ಜೇನು ವ್ಯವಸಾಯ ಸಹಕಾರಿ ಸಂಘದ ಮೂಲಕ ಪ್ರಾಯೋಗಿಕವಾಗಿ ಪೆಟ್ಟಿಗೆ ಮಾರಾಟ ಮಾಡಿದ್ದಾರೆ. ಜೊತೆಗೆ ಇತರ ಕೃಷಿಕರಿಗೂ ವಿತರಣೆ ಮಾಡಿದ್ದಾರೆ. ಈ ಬಾರಿ ಉತ್ತಮ ಬೇಡಿಕೆ ಬಂದಿದೆ. ಇದೀಗ ವಿವಿಧ ರಾಜ್ಯಗಳಿಗೂ ಈ ಪೆಟ್ಟಿಗೆ ಬಗ್ಗೆ ಮಾಹಿತಿ ನೀಡಲಾಗಿದ್ದು, ಪ್ರತಿಕ್ರಿಯೆ ಚೆನ್ನಾಗಿದೆ. ಕೇರಳ, ಗುಜರಾತ್‌ಗಳಿಂದ ಬೇಡಿಕೆ ಬಂದಿದೆ. ಮುಂದೆ ಜೇನುಕೃಷಿಕರಿಗೆ ಮಾಹಿತಿ, ತರಬೇತಿ ಹಾಗೂ ಆಸಕ್ತ ಕೃಷಿಕರಿಗೆ ಜೇನು ಹುಳದ ಸಹಿತ ಪೆಟ್ಟಿಗೆಯನ್ನು ನೀಡಬೇಕು ಎಂಬ ಆಸೆ ಇದೆ ಎನ್ನುತ್ತಾರೆ ಅವರು.
ಹೊನ್ನಾವರ ಸಮೀಪದ ಮಾವಿನಕುರ್ವೆಯ ಶ್ರೀ ನವದುರ್ಗಾ ದೇವಸ್ಥಾನದಲ್ಲಿ ಕುದಿಯುವ ತೈಲದಿಂದ ವಡೆ ತೆಗೆಯುವ ಕಾರ್ಯಕ್ರಮ ನಡೆಯಿತು. ಪರ್ತಗಾಳಿ ಶ್ರೀ ಜೀವೋತ್ತಮ ಮಠಾಧೀಶರಾದ ಶ್ರೀ ವಿದ್ಯಾರಾಜತೀರ್ಥ ಶ್ರೀಪಾದ  ವಡೇರ ಸ್ವಾಮಿಗಳು ಇದರ ಸಾನ್ನಿಧ್ಯ ವಹಿಸಿದ್ದರು.

ಹಿಮಾಲಯ ಸೃಷ್ಟಿಯ ಗುಟ್ಟು ರಟ್ಟಾಗಿಸಲು ಹೊರಟ ತೀರ್ಥಹಳ್ಳಿ ವಿಜ್ಞಾನಿ

ಹಿಮಾಲಯ ಪರ್ವತ ಸೃಷ್ಟಿಯನ್ನು ಸಮುದ್ರದ ಆಳದ ಸಂಶೋಧನೆ ಮೂಲಕ ರಟ್ಟು ಮಾಡುವ ವಿಶ್ವದ 2 ದೇಶಗಳ 3 ವಿಜ್ಞಾನಿಗಳ ತಂಡದಲ್ಲಿ ಮಣಿಪಾಲದ ವಿಜ್ಞಾನಿ ಡಾ.ಗುರುಮೂರ್ತಿ ಜಿ.ಪಿ.ಅವಕಾಶ ಪಡೆದಿದ್ದಾರೆ. ಸುಮಾರು 2ತಿಂಗಳಿಂದ ಮುಂಬೈ ತೀರದಿಂದ ಸುಮಾರು 40 ಕಿ.ಮೀ.ದೂರ ಸಮುದ್ರದಲ್ಲಿದ್ದು ಅಧ್ಯಯನ ನಡೆಸುತ್ತಿರುವ 2 ದೇಶದ 3 ವಿಜ್ಞಾನಿಗಳಲ್ಲಿ ಇವರು ಒಬ್ಬರು. ಇವರು ಮಣಿಪಾಲ ವಿ.ವಿ.ಯ ನೈಸರ್ಗಿಕ ವಿಜ್ಞಾನ ಕೇಂದ್ರದ ಸ್ನಾತಕೋತ್ತರ ಸಂಶೋಧನ ಫೆಲೋ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದವರು. ಹಿಮಾಲಯ ಸೃಷ್ಟಿಯಾಗಿ 1 ಲಕ್ಷವರ್ಷ ಸಂದಿವೆ ಎಂಬ ವಾದಕ್ಕೆ ಸಂಶೋಧನೆ ಮೂಲಕ ಉತ್ತರ ನೀಡಲು ಹೊರಟಿರುವ ಈ ತಂಡ ಸಮುದ್ರದ ತಳದಿಂದ ಸುಮಾರು 110 ಮೀ.ಆಳದಲ್ಲಿ ಕೊರೆದು ಮಣ್ಣು ಸಂಗ್ರಹಿಸಿದೆ. ಒಂದರಲ್ಲಿ 4 ದಿನ,ಇನ್ನೊಂದರಲ್ಲಿ 1 ದಿನ ಒಟ್ಟು ಎರಡು ಜಾಗಗಳಲ್ಲಿ ಸಂಶೋಧನೆ ನಡೆಸಲಾಗಿದೆ. ಸಂಶೋಧನೆ ಮುಂದುವರಿದಿದೆ.ವಾಲಿಬಾಲ್ನಲ್ಲಿ ಕುಂಬಾರಕುಳಿ ತಂಡ ಚಾಂಪಿಯನ್

ಯಲ್ಲಾಪುರ ತಾಲೂಕಿನ ತುಡಗುಣಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಸ್ಥಳೀಯ ಗೆಳೆಯರ ಬಳಗ ಸಂಘಟಿಸಿದ್ದ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಂಬಾರಕುಳಿ ತಂಡ ಪ್ರಥಮ ಹಾಗೂ ಗುಂಡಿಗದ್ದೆ ತಂಡ ದ್ವಿತೀಯ ಸ್ಥಾನ ಪಡೆದಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಕುಮಟಾ ತಾಲೂಕುಗಳ 2 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಕುಂಬಾರಕುಳಿ ತಂಡದ ಪ್ರಕಾಶ ನಾಯ್ಕ ಉತ್ತಮ ಹೊಡೆತಗಾರ ಹಾಗೂ ಗುಂಡಿಗದ್ದೆ ತಂಡದ ವಿಷ್ಣು ಭಂಡಾರಿ ಉತ್ತಮ ಎತ್ತುಗಾರ ಬಹುಮಾನ ಪಡೆದರು.
ಶಾಸಕ ಶಿವರಾಮ ಹೆಬ್ಬಾರ ವಿಜೇತರಿಗೆ ಬಹುಮಾನ ವಿತರಿಸಿದರು. ಎಂ.ಆರ್. ಹೆಗಡೆ ತಾರೇಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷಎಂ.ಜಿ.ಭಟ್ಟ ಸಂಕದಗುಂಡಿ, ತಾಪಂ ಸದಸ್ಯ ನಟರಾಜ ಗೌಡರ್, ಶಿಕ್ಷಕ ಪ್ರವೀಣ ಕುರಬರ, ತಾಪಂ ಸದಸ್ಯ ನರಸಿಂಹ ನಾಯ್ಕ, ಉಮ್ಮಚಗಿ ಗ್ರಾಪಂ ಅಧ್ಯಕ್ಷಗ.ರಾ.ಭಟ್ಟ, ಸದಸ್ಯರಾದ ಖೈತಾನ್ ಡಿಸೋಜಾ, ರೇಣುಕಾ ನಾಯ್ಕ, ರಾಮಚಂದ್ರ ಭಟ್ಟ, ನಾಗೇಂದ್ರ ಭಟ್ಟ, ಶಿವರಾಯ ಪೂಜಾರಿ, ಮಂಜುನಾಥ ಮೊಗೇರ, ಸಾಮಾಜಿಕ ಕಾರ್ಯಕರ್ತರಾದ ಸುಧೀರ ಬಲಸೆ, ಕುಪ್ಪಯ್ಯ ಪೂಜಾರಿ, ಗೋಪಾಲ ಹೆಗಡೆ, ರತ್ನಾಕರ ಬಲಸೆ, ಅಶೋಕ ಹೆಗಡೆ, ಮಹಾಬಲೇಶ್ವರ ಹೆಗಡೆ, ಸಂದೀಪ ಇದ್ದರು.