ಪರಿಸರ ಸ್ನೇಹಿ ಜೇನುಪೆಟ್ಟಿಗೆಯಿದು

ಕುಕ್ಕೆ ಸುಬ್ರಹ್ಮಣ್ಯ ಬಳಿಯ ಮಲೆಯಾಳ ಗೋವಿಂದಕುಮಾರ್ ಭಟ್ ಚಿಕ್ಕ ವಯಸ್ಸಿನಲ್ಲೇ ಜೇನುಗಳ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡವರು. ಅದಕ್ಕಾಗಿಯೇ ತರಬೇತಿ ಪಡೆದು ಜೇನು ಕೃಷಿಯಲ್ಲಿ ನಿರತರಾಗಿದ್ದರು. ಅವರಿಗೆ ಜೇನು ಪೆಟ್ಟಿಗೆ ವಿಚಾರವಾಗಿ ಆವಿಷ್ಕಾರ ಮಾಡಬೇಕೆಂಬ ತುಡಿತವಿತ್ತು. ಈ ದಾರಿಯಲ್ಲಿ ವಿವಿಧ ಪ್ರಯತ್ನ ಮಾಡುತ್ತಲೆ ಇದ್ದರು. ಇದೀಗ ಅಗ್ಗ ಮತ್ತು ಪರಿಸರ ಸ್ನೇಹಿ ಜೇನುಪೆಟ್ಟಿಗೆ ಸಿದ್ಧಪಡಿಸಿದ್ದಾರೆ.
ಆರಂಭದಲ್ಲಿ ಸಿಮೆಂಟ್ ಪೆಟ್ಟಿಗೆಯನ್ನು ಪ್ರಾಯೋಗಿಕವಾಗಿ ತಯಾರು ಮಾಡಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ. ಛಲ ಬಿಡದೆ ಕಳೆದ 3 ವರ್ಷಗಳಿಂದ ನಿರಂತರ ಪ್ರಯತ್ನದಲ್ಲಿದ್ದರು. ಕಳೆದ ವರ್ಷ ಪಿವಿಸಿ ಮಾದರಿಯ ಶೀಟ್ ಬಳಸಿ ಪೆಟ್ಟಿಗೆ ತಯಾರು ಮಾಡಿದರು. ಈ ಪೆಟ್ಟಿಗೆಗೆ ಜೇನು ಸಹಕಾರ ಸಂಘವೂ ಒಪ್ಪಿಗೆ ನೀಡಿದೆ. ಅಷ್ಟಕ್ಕೆ ಸುಮ್ಮನಿರದ ಅವರು, ಅಕ್ವೇರಿಯಂ ಮೇಲಿನ ಅಲಂಕಾರಿಕ ಹಾಳೆ ಕಡೆಗೆ ಗಮನ ಹರಿಸಿದರು. ಅದೇ ಮಾದರಿಯ ಹಾಳೆಗಳನ್ನು ರಾಜಸ್ಥಾನದಿಂದ ತರಿಸಿಕೊಂಡರು.

ಪರಿಸರ ಸ್ನೇಹಿಯಾದ ಈ ಶೀಟ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುವ ಅವರು, ಪೆಟ್ಟಿಗೆ ಮಾರಾಟದ ವೇಳೆ ಒಳಗಿನ ಫ್ರೇಮ್‌ಗಳನ್ನು ಮಾತ್ರ ಅಗತ್ಯ ಇದ್ದವರಿಗೆ ಮರದಿಂದ ತಯಾರು ಮಾಡುತ್ತಾರೆ. ಅದರ ಜೊತೆಗೆ ಫೈಬರ್ ಫ್ರೇಂ ಕೂಡಾ ತಯಾರಿಸುತ್ತಾರೆ. ಆದರೆ ಕೆಲವು ಕೃಷಿಕರು ಮರದ ಫ್ರೆಂ ಆಯ್ಕೆ ಮಾಡುವುದರಿಂದ ಅದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಪರ್ಯಾಯ ಪೆಟ್ಟಿಗೆ ಯಾಕೆ?:
ಮರದ ಪೆಟ್ಟಿಗೆಯೊಂದನ್ನು ತಯಾರು ಮಾಡಲು ಕನಿಷ್ಟ 8.9 ಚದರ ಅಡಿ ಮರದ ಅವಶ್ಯಕತೆ ಇದೆ. ಇದಕ್ಕೆ ಸಾಗುವಾನಿ, ಅಕೇಶಿಯಾ ಸೇರಿದಂತೆ ಪ್ರಮುಖ ಮರಗಳನ್ನು ಮಾತ್ರ ಬಳಕೆ ಮಾಡಬಹುದು. ಈಗ ಅಕೇಶಿಯಾ ಮರ ಬೆಳೆಯುವುದೂ ನಿಷೇಧವಾಗಿರುವುದರಿಂದ ಸಾಗುವಾನಿ ಮರವೇ ಅಗತ್ಯವಾಗಿದೆ. ಇಂದು ಪರಿಸರ ಉಳಿವಿನ ದೃಷ್ಟಿಯಿಂದ ಮರಗಳ ರಕ್ಷಣೆ ಆಗಬೇಕಾಗಿದೆ. ಇದಕ್ಕಾಗಿ ಪರಿಸರ ಸ್ನೇಹಿ ಪೆಟ್ಟಿಗೆ ಅಗತ್ಯವಾಗಿದೆ. ಪರಿಸರ ಸ್ನೇಹಿ ಪೆಟ್ಟಿಗೆಯು ದೀರ್ಘ ಕಾಲ ಬಾಳಿಕೆ ಬರುವುದರ ಜೊತೆಗೆ ಖರ್ಚು ಕೂಡಾ ಕಡಿಮೆಯಾಗುತ್ತದೆ. ಗೆದ್ದಲು ಹಿಡಿಯುವ ಸಮಸ್ಯೆ, ಶುಚಿತ್ವ, ಜೇನು ಪೆಟ್ಟಿಗೆಗೆ ಕಾಡುವ ಮೇಣದ ಚಿಟ್ಟೆ ಕಾಟ ಮೊದಲಾದ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತಿದೆ.
ಜೇನು ತಯಾರಿ ಮಾದರಿ ಹೀಗಿದೆ:
ಪರಿಸರ ಸ್ನೇಹಿ ಪೆಟ್ಟಿಗೆಯ ಮೂಲಕ ಜೇನು ಇಳುವರಿಯಲ್ಲಿ ಯಾವುದೇ ವ್ಯತ್ಯಯವಿಲ್ಲ. ಜೇನು ಕುಟುಂಬಗಳು ಬಹುಬೇಗನೆ ವೃದ್ಧಿಯಾಗುತ್ತವೆ. ಮಳೆಗಾಲದಲ್ಲಿ ಕೂಡಾ ಪೆಟ್ಟಿಗೆ ಬಿಸಿಯಾಗಿರುವುದರಿಂದ ಜೇನು ಕುಟುಂಬಗಳು ಸದಾ ಚಟುವಟಿಕೆಯಲ್ಲಿರುತ್ತವೆ. ಹೀಗಾಗಿ ಕುಟುಂಬ ವೃದ್ಧಿ ಜೊತೆಗೆ ಜೇನು ಕೂಡಾ ತಯಾರು ಮಾಡುತ್ತಲೇ ಇರುತ್ತವೆ. ಬೇಸಗೆಯಲ್ಲೂ ಹೆಚ್ಚಾಗಿ ಬಿಸಿಯಾಗುವುದಿಲ್ಲ. ಏಕೆಂದರೆ ಪೆಟ್ಟಿಗೆಯಲ್ಲಿ ಹೆಚ್ಚಿನ ವೆಂಟಿಲೇಟರ್ ಇರಿಸಲಾಗಿದೆ. ಹೀಗಾಗಿ ಜೇನುಹುಳಗಳಿಗೆ ಸದಾ ಅನುಕೂಲಕರ ವಾತಾವರಣವಿರುತ್ತದೆ.

ಕಳೆದ ವರ್ಷ ಪುತ್ತೂರು ಜೇನು ವ್ಯವಸಾಯ ಸಹಕಾರಿ ಸಂಘದ ಮೂಲಕ ಪ್ರಾಯೋಗಿಕವಾಗಿ ಪೆಟ್ಟಿಗೆ ಮಾರಾಟ ಮಾಡಿದ್ದಾರೆ. ಜೊತೆಗೆ ಇತರ ಕೃಷಿಕರಿಗೂ ವಿತರಣೆ ಮಾಡಿದ್ದಾರೆ. ಈ ಬಾರಿ ಉತ್ತಮ ಬೇಡಿಕೆ ಬಂದಿದೆ. ಇದೀಗ ವಿವಿಧ ರಾಜ್ಯಗಳಿಗೂ ಈ ಪೆಟ್ಟಿಗೆ ಬಗ್ಗೆ ಮಾಹಿತಿ ನೀಡಲಾಗಿದ್ದು, ಪ್ರತಿಕ್ರಿಯೆ ಚೆನ್ನಾಗಿದೆ. ಕೇರಳ, ಗುಜರಾತ್‌ಗಳಿಂದ ಬೇಡಿಕೆ ಬಂದಿದೆ. ಮುಂದೆ ಜೇನುಕೃಷಿಕರಿಗೆ ಮಾಹಿತಿ, ತರಬೇತಿ ಹಾಗೂ ಆಸಕ್ತ ಕೃಷಿಕರಿಗೆ ಜೇನು ಹುಳದ ಸಹಿತ ಪೆಟ್ಟಿಗೆಯನ್ನು ನೀಡಬೇಕು ಎಂಬ ಆಸೆ ಇದೆ ಎನ್ನುತ್ತಾರೆ ಅವರು.